ಇಂದು ಗುರುವಾರ ಬೆಳಿಗ್ಗೆಯಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರ ವಿರುದ್ಧ ನಟಿ ರಮ್ಯಾ ಸಿಡಿದೆದ್ದಿದ್ದಾರೆ. ಮಾಜಿ ಸಚಿವ ಎಂಬಿ ಪಾಟೀಲ್ ಅವರ ಬಗ್ಗೆ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದ ರಮ್ಯಾ, ಈಗ ಮತ್ತೆ ಡಿ ಕೆ ಶಿವಕುಮಾರ್ ಬೆಂಬಲಿಗರು ಎಂದು ಹೇಳಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಕಮೆಂಟ್ ಗಳನ್ನು ಹಾಕುವವರಿಗೆ ಖಾರವಾಗಿ ಉತ್ತರಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ 8 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ರಮ್ಯಾ, ಕಾಂಗ್ರೆಸ್ ನಲ್ಲಿ ನನಗೆ ಅವಕಾಶ ನೀಡಿದವರು ರಾಹುಲ್ ಗಾಂಧಿ, ನನ್ನ ಪರವಾಗಿ ನಿಂತುಕೊಂಡವರು ಕೂಡ ಅವರೇ, ನನಗೆ ಅವಕಾಶ ನೀಡಿರುವುದಾಗಿ ಹೇಳಿಕೊಳ್ಳುವ ಬೇರೆಯವರೆಲ್ಲ ಅವಕಾಶವಾದಿಗಳು. ಈ ಅವಕಾಶವಾದಿಗಳು ಬೆನ್ನಿಗೆ ಚೂರಿ ಹಾಕಿದ್ದಾರೆ, ನನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ ಎಂದಿದ್ದಾರೆ .
ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಜವಾಬ್ದಾರಿ ಹುದ್ದೆಯನ್ನು ಬಿಟ್ಟ ಬಳಿಕ ನನ್ನ ವಿರುದ್ಧ 8 ಕೋಟಿ ರೂಪಾಯಿ ವಂಚಿಸಿದ ಆರೋಪಗಳು ಕೇಳಿಬಂದವು. ನನ್ನ ದಕ್ಷತೆ, ನಿಖರತೆ ಮತ್ತು ಪ್ರಾಮಾಣಿಕತೆಯನ್ನು ಹಾಳುಮಾಡಲು ಕೆಲವು ಸುದ್ದಿ ಚಾನೆಲ್ ಗಳಲ್ಲಿ ಈ ಬಗ್ಗೆ ಸುಳ್ಳು ಸುದ್ದಿ ಸೃಷ್ಟಿಸಿದರು. ನಾನು ಎಲ್ಲಿಗೂ ಓಡಿಹೋಗಿಲ್ಲ. ನನ್ನ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದೆ. ನಾನು ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷಕ್ಕೆ 8 ಕೋಟಿ ರೂಪಾಯಿ ವಂಚಿಸಿಲ್ಲ, ನಾನು ಸುಮ್ಮನೆ ಕುಳಿತಿದ್ದು ನನ್ನ ತಪ್ಪು ಎಂದು ಹೇಳಿದ್ದಾರೆ.