ಬೆಂಗಳೂರು: ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಧ್ಯರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ತಮ್ಮ ಚೊಚ್ಚಲ ಚಿತ್ರ **‘ಬುಲ್‌ಬುಲ್’**ನ ನಾಯಕ ನಟ ದರ್ಶನ್ ಅವರನ್ನು ನೆನೆದು ರಚಿತಾ ರಾಮ್ ಭಾವುಕರಾದರು.
ಕನ್ನಡ ಚಿತ್ರರಂಗದಲ್ಲಿ ಸುಮಾರು 14 ವರ್ಷಗಳಿಂದ ಗುರುತಿಸಿಕೊಂಡಿರುವ ರಚಿತಾ ರಾಮ್, ತಮ್ಮ ವೃತ್ತಿಜೀವನದ ಆರಂಭದಲ್ಲಿ ಬೆಂಬಲ ನೀಡಿದ ನಟ ದರ್ಶನ್ ಅವರನ್ನು ಹುಟ್ಟುಹಬ್ಬದ ಮುನ್ನಾದಿನ ಭೇಟಿಯಾಗಿ ಆಶೀರ್ವಾದ ಪಡೆಯಲು ಜೈಲಿಗೆ ತೆರಳಿದ್ದಾಗಿ ಹೇಳಿದರು.ಆದರೆ ಜೈಲಿನ ನಿಯಮಗಳ ಕಾರಣ ದರ್ಶನ್ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ರಚಿತಾ ರಾಮ್ ಬೇಸರ ವ್ಯಕ್ತಪಡಿಸಿದರು. ವಾರದಲ್ಲಿ ಸೀಮಿತ ಸಂಖ್ಯೆಯ ಭೇಟಿಗೆ ಮಾತ್ರ ಅವಕಾಶವಿದ್ದು, ಅಂದು ದರ್ಶನ್ ಅವರ ಕುಟುಂಬಸ್ಥರು ಭೇಟಿಗೆ ಬಂದಿದ್ದ ಹಿನ್ನೆಲೆಯಲ್ಲಿ ತನಗೆ ಭೇಟಿಯ ಅವಕಾಶ ಸಿಗಲಿಲ್ಲ. ಸುಮಾರು ಎರಡೂವರೆ ಗಂಟೆಗಳ ಕಾಲ ಕಾದರೂ ಅವರನ್ನು ಭೇಟಿಯಾಗದೆ ವಾಪಸ್ ಬರಬೇಕಾಯಿತು ಎಂದು ತಿಳಿಸಿದರು.

ಭೇಟಿಯಾಗಲು ಸಾಧ್ಯವಾಗದಿದ್ದರೂ ದರ್ಶನ್ ಅವರ ಆಶೀರ್ವಾದ ಮತ್ತು ಪ್ರೀತಿ ಸದಾ ತಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವುದಾಗಿ ರಚಿತಾ ರಾಮ್ ಹೇಳಿದರು. ಮಧ್ಯರಾತ್ರಿಯಿಂದಲೇ ನಿವಾಸದ ಮುಂದೆ ಜಮಾಯಿಸಿದ್ದ ನೂರಾರು ಅಭಿಮಾನಿಗಳ ಪ್ರೀತಿಗೆ ರಚಿತಾ ರಾಮ್ ಕೃತಜ್ಞತೆ ಸಲ್ಲಿಸಿದರು. ತಮ್ಮ ಮೇಲಿನ ಪ್ರೀತಿ ಹಾಗೂ ಅಭಿಮಾನಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅವರು, ತಮ್ಮ ಕುಟುಂಬದ ಪರವಾಗಿ ಅಭಿಮಾನಿಗಳು ಹೇಗೆ ಧ್ವನಿ ಎತ್ತುತ್ತಾರೋ, ಅದೇ ರೀತಿ ತಾವೂ ಅಭಿಮಾನಿಗಳಿಗಾಗಿ ಸದಾ ಧ್ವನಿಯಾಗಿರುವುದಾಗಿ ಹೇಳಿದರು.

ಯುವಕರು ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವಂತೆ ರಚಿತಾ ರಾಮ್ ಸಲಹೆ ನೀಡಿದರು. ಯಾರಿಗೂ ಕೆಟ್ಟದ್ದನ್ನು ಬಯಸಬೇಡಿ, ದೇವರು ನೀಡಿರುವ ಜೀವನವನ್ನು ಪ್ರೀತಿಯಿಂದ ಮತ್ತು ಸಂತೋಷದಿಂದ ಕಳೆಯಿರಿ. ಸನ್ಮಾರ್ಗದಲ್ಲಿ ನಡೆದು ದುಡಿದು ಸಂಪಾದಿಸಿ, ಸಾಧ್ಯವಾದಷ್ಟು ಕಷ್ಟದಲ್ಲಿರುವವರು ಹಾಗೂ ಅಸಹಾಯಕರಿಗೆ ನೆರವಾಗಬೇಕು ಎಂದು ಕರೆ ನೀಡಿದರು.






