ರಾಜಕೀಯ ಪಕ್ಷಗಳ ನಾಯಕರು ಆಗಾಗ ಒಬ್ಬರ ಮೇಲೊಬ್ಬರು ಆರೋಪ ಮಾಡೋದು ಸಹಜ. ಈಗ ಅಂಥದ್ದೇ ಮತ್ತೊಂದು ಆರೋಪ ಮಾಡಿರೋದು ವಿರೋಧ ಪಕ್ಷದ ನಾಯಕ ಆರ್.ಅಶೋಕ್. ಹೌದು, ವಾಲ್ಮೀಕಿ ನಿಗಮದ ಬಳಿಕ ಇದೀಗ ರಾಜ್ಯದ ಮತ್ತೊಂದು ನಿಗಮದ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ದೇವರಾಜ ಅರಸು ನಿಗಮದಲ್ಲಿ ಭಾರೀ ಗೋಲ್ ಮಾಲ್ ನಡೆದಿರುವ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

ಹೊಲಿಗೆ ಯಂತ್ರ ಖರೀದಿ ಟೆಂಡರ್‌ನಲ್ಲಿ ಕಿಕ್‌ಬ್ಯಾಕ್ ಪಡೆದಿರುವ ಆರೋಪ ಕೇಳಿಬಂದಿದೆ. ರಾಜ್ಯದ ವ್ಯಕ್ತಿಯೊಬ್ಬರಿಗೆ ನೀಡಿದ ಟೆಂಡರ್‌ನಲ್ಲಿ ಅಕ್ರಮ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ.

ಹತ್ತು ಸಾವಿರ ಮೌಲ್ಯದ ಹೊಲಿಗೆ ಯಂತ್ರಕ್ಕೆ ಹದಿನೇಳು ಸಾವಿರ ರೂ.ನಿಗದಿಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ. ಹೀಗಾಗಿ ಇದರಿಂದ ಸುಮಾರು ಐದಾರು ಕೋಟಿ ರೂ. ಹಗರಣ ಆಗಿದೆ ಎಂದು ಪರಮೇಶ್ ಎಂಬುವವರು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದಾರೆ. ಜೊತೆಗೆ ಈ ಕೂಡಲೇ ತನಿಖೆ ನಡೆಸಬೇಕು ಎಂದ ಆಗ್ರಹಿಸಿದ್ದಾರೆ.

ಈ ಕುರಿತಂತೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಪಕ್ಷ ನಾಯಕ ಆರ್. ಅಶೋಕ್, ವಾಲ್ಮೀಕಿ ನಿಗಮದ ಬಳಿಕ ಇದೀಗ ದೇವರಾಜ ಅರಸು ನಿಗಮದಲ್ಲೂ ಕೇಳಿಬರುತ್ತಿರುವ ಅಕ್ರಮದ ಆರೋಪಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಮತ್ತೊಂದು ನಿದರ್ಶನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕಾಗಿ ಬಡ ಮಹಿಳೆಯರಿಗೆ ತಲುಪಬೇಕಿದ್ದ ಹೊಲಿಗೆ ಯಂತ್ರ ಖರೀದಿಯ ಮೇಲೆಯೂ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವುದು ಅತ್ಯಂತ ಖಂಡನೀಯ. ಜನರ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆಗಳಲ್ಲೇ ಗೋಲ್ ಮಾಲ್ ನಡೆದಿರುವ ಆರೋಪಗಳಿಗೆ ರಾಜ್ಯ ಸರ್ಕಾರ ಉತ್ತರಿಸಲೇಬೇಕು. ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿ, ತಪ್ಪಿತಸ್ಥರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.






