ಹಿಜಾಬ್ ವಿವಾದ, ಜಟ್ಕಾ ಹಲಾಲ್, ಮೈಕ್ ವಿವಾದ ಸೇರಿದಂತೆ ರಾಜ್ಯದಲ್ಲಿ ಇತ್ತೀಚಿನ ಕೆಲವು ತಿಂಗಳುಗಳಿಂದ ಕೋಮು ಸಂಬಂಧಿತ ವಿವಾದಗಳು ತೀವ್ರಾವಾಗಿದ್ದು, ಇದರ ಬೆನ್ನಲ್ಲೇ ಸರ್ಕಾರದ ಬಗ್ಗೆ ಸ್ವತಃ ಹಿಂದೂ ಕಾರ್ಯಕರ್ತರಿಗೆ ಅಸಮಾಧಾನ ಭುಗಿಲೆದ್ದಿದೆ. ಇನ್ನಷ್ಟು ತೀವ್ರವಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿರುವ ಹಿಂದೂ ಸಂಘಟನೆಯ ಕೆಲವು ಕಾರ್ಯಕರ್ತರು ಉತ್ತರ ಪ್ರದೇಶ ಮಾದರಿಯ ಅತಿರೇಕದ ಕ್ರಮಗಳಿಗೆ ಆಗ್ರಹಿಸುತ್ತಿದ್ದಾರೆ.
ಅದರಲ್ಲೂ ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆ ಆರೋಪಿಗಳು ಜೈಲಿನಲ್ಲಿ ಬಿಂದಾಸ್ ಆಗಿದ್ದಾರೆ ಎನ್ನುವಂತಹ ಸುದ್ದಿಗಳು ಹೊರ ಬಂದು ಸಂಘಟನೆಯ ಕಾರ್ಯಕರ್ತರು ಹಾಗೂ ಹರ್ಷ ಕುಟುಂಬಸ್ಥರ ಆಕ್ರೋಶ ಹೆಚ್ಚಿದ್ದವು. ಅದರ ಬೆನ್ನಲ್ಲೇ ಪ್ರವೀಣ್ ನೆಟ್ಟಾರು ಮಬ ಬಿಜಪಿ ಸ್ಥಳೀಯ ಮುಖಂಡನ ಹತ್ಯೆಯು ಕಾರ್ಯಕರ್ತರಲ್ಲಿ ವಿಪರೀತ ಆಕ್ರೋಶ ಹೆಚ್ಚಿಸಿದ್ದವು. ನಳಿನ್ ಕುಮಾರ್ ಕಟೀಲ್ ಕಾರ್ ಅನ್ನೇ ತಡೆದು , ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಸಿಎಂ ಸೇರಿದಂತೆ ಉನ್ನತ ಬಿಜೆಪಿ ನಾಯಕರು ಬುಲ್ಡೋಝರ್ ನ್ಯಾಯಕ್ಕೆ ಕುಖ್ಯಾತವಾಗಿರುವ ಯುಪಿ ಮಾಡೆಲ್ ಅನ್ನು ರಾಜ್ಯಕ್ಕೆ ತರುವುದಾಗಿ ಹೇಳಿಕೊಂಡಿದ್ದರು. ಆದರೂ ಕಾರ್ಯಕರ್ತರ ಅಸಮಾಧಾನ ಶಮನಗೊಂಡಿರಲಿಲ್ಲ. ಈ ಎಲ್ಲಾ ಬೆಳವಣಿಗೆಯ ಕೇಳಿ ಅಮಿತ್ ಶಾ ರಾಜ್ಯಕ್ಕೆ ತರಾತುರಿಯಲ್ಲಿ ದೌಡಾಯಿಸಿ ರಾಜ್ಯ ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದು ಹೋಗಿದ್ದಾರೆ.
ಸದ್ಯ, ಹೊರ ಬಂದ ಮಾಹಿತಿ ಪ್ರಕಾರ ಈ ಎಲ್ಲಾ ಗೊಂದಲಗಳಿಂದ ತಾತ್ಕಾಲಿಕವಾಗಿ ಮುಕ್ತಿ ಹೊಂದಲು ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಬಲೀ ಕಾ ಬಕ್ರ ಆಗಲಿದ್ದಾರೆಂದು ಹೇಳಲಾಗಿದೆ. ಹಾಲಿ ಗೃಹ ಸಚಿವರ ತಲೆದಂಡ ಪಕ್ಕಾ ಆಗಿದ್ದು ಕಂದಾಯ ಸಚಿವ ಆರ್ ಅಶೋಕ್ ಗೆ ಗೃಹಮಂತ್ರಿ ಸ್ಥಾನ ಸಿಗಲಿದೆ ಎಂಬ ಮಾಹಿತಿ ಸದ್ಯ ವಿಧಾನಸೌಧದ ಸುತ್ತಾ ಮುತ್ತಾ ಹರಿದಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇದು ಅಧಿಕೃತವಾಗಿ ಹೊರಬೀಳಲಿದೆ.
ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಹೋದ ನಂತರ ಈ ಚರ್ಚೆ ಶುರುವಾಗಿದ್ದು, ರಾಜ್ಯದಲ್ಲಿ ಗೃಹ ಸಚಿವ ಬದಲಾಗುವುದು ನಿಶ್ಚಿತ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತವಾಗಿದೆ. ಇದಕ್ಕೆ ಇನ್ನೊಂದು ವಾರದಲ್ಲಿ ಉತ್ತರ ಸಿಗಲಿದ್ದು ಕೇಂದ್ರ ಹೈಕಮಾಂಡ್ ನಿಂದ ಏನು ಸೂಚನೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.