19ನೇ ಶತಮಾನದಲ್ಲಿ ಸ್ತನ ತೆರಿಗೆ ವಿರುದ್ಧ ಸಿಡಿದೆದ್ದು ತನ್ನ ಸ್ತನವನ್ನೇ ಕತ್ತರಿಸಿ ತೆಗೆದು ನೀಡಿದ ಕ್ರಾಂತಿಕಾರಿ ಮಹಿಳೆ ನಂಗೇಲಿ. ನಂತರದಲ್ಲಿ ಅತಿಯಾದ ರಕ್ತಸ್ತ್ರಾವವಾದ ಹಿನ್ನೆಲೆ ನಂಗೇಲಿ ಕೆಲವೇ ಹೊತ್ತಲ್ಲಿ ಸಾವನ್ನೂ ಅಪ್ಪಿದ್ದರು. ಈ ವೇಳೆ ನಂಗೇಲಿಯ ಪತಿ ಚಿರುಕಂಡನ್ ನೋವು ತಾಳಲಾರದೇ ನಂಗೇಲಿಯ ಚಿತೆಗೆ ಹಾರಿ ಪ್ರಾಣ ಬಿಡುತ್ತಾರೆ ಎನ್ನುತ್ತದೆ ಇತಿಹಾಸ. 19ನೇ ಶತಮಾನದ ಆದಿ ಭಾಗದಲ್ಲಿ ಟ್ರಾವಂಕರ್ನ ಭಾಗವಾಗಿದ್ದ ಚೇರ್ತಲದಲ್ಲಿ ನಂಗೇಲಿಯ ಈ ಸಾಹಸಗಾತೆ ಮನೆಮಾತು. ಈಗ ನಂಗೇಲಿ ಆರಾಧಿಸಲ್ಪಡುವ ಕ್ರಾಂತಿಕಾರಿ ಮಹಿಳೆ. ನಂಗೇಲಿಯದ್ದು ಕೇವಲ ಮಹಿಳಾ ವಿಮೋಚನೆಯೆಡೆಗೆ ನಡೆದ ಹೋರಾಟ ಮಾತ್ರವಲ್ಲದೆ ಸವರ್ಣೀಯರ ಜಾತಿ ದಬ್ಬಾಳಿಕೆಯ ವಿರುದ್ಧವೂ ಹೌದು. ಸದ್ಯ ಇಷ್ಟು ಹೇಳುವಂತೆ ಮಾಡಿದ್ದು ದೇಶದ ಅತ್ಯಂತ ದಿಗ್ಗಜ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಬಲ್ಲ ನಟ ಮಮ್ಮೂಟಿಯವರ ʻಪುಝುʼ ಎಂಬ ಸಿನಿಮಾ ಕಾರಣಕ್ಕೆ.
ಸೋನಿ ಲೈವ್ ಓಟಿಟಿಯಲ್ಲಿ ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಯಲ್ಲಿ ಬಿಡುಗಡೆಗೊಂಡಿರುವ ಪುಝು ತಣ್ಣಗೆ ಜಾತಿ ತಾರತಮ್ಯದ ಬಗ್ಗೆ ಮಾತನಾಡುವ ಸಿನಿಮಾ. ಚೊಚ್ಚಲವಾಗಿ ರಥೀನ ಎಂಬ ನಿರ್ದೇಶಕಿಗೆ ತನ್ನ ಆದಿ ಸಿನಿಮಾಗೆ ಆಯ್ದುಕೊಂಡ ಕಥೆಯ ಕಾರಣಕ್ಕೆ ಅಭಿನಂದನೆಗೆ ಅರ್ಹರು. ಹಲವು ಸಿನಿಮಾಗಳಲ್ಲಿ ಸಹ ನಿರ್ದೇಶಕಿ ಹಾಗೂ ಇತ್ಯಾದಿ ಪಾತ್ರವಹಿಸಿದ್ದ ರಥೀನ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕಿಯಾಗಿ ಪುಝು ಮೂಲಕ ಹೊರ ಹೊಮ್ಮಿದ್ದಾರೆ. ಮಮ್ಮೂಟಿ ಜೊತೆಗೆ ಪಾರ್ವತಿ ತಿರುವೊಟ್ಟು, ಅಪ್ಪುಣ್ಣಿ ಶಶಿ, ನಡುಮುಡಿ ವೇಣು, ಇಂದ್ರಸ್ ಮುಂತಾದ ತಾರಂಗಣ ಚಿತ್ರದಲ್ಲಿದೆ.
ಕಥೆಯ ಕೇಂದ್ರವಾಗಿರುವ ಕುಟ್ಟನ್ (ಮಮ್ಮೂಟಿ) ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು. ತನ್ನ ತಂಗಿ ಭಾರತಿ (ಪಾರ್ವತಿ ತಿರುವೊಟ್ಟು) ಒಬ್ಬ ಸಾಹಿತ್ಯ ಪ್ರೇಮಿ, ರಂಗಭೂಮಿ ಕಲಾವಿದ, ದಲಿತನಾದ ಕುಟ್ಟಪ್ಪನ್ (ಅಪ್ಪುಣ್ಣಿ ಶಶಿ) ಜೊತೆ ಪ್ರೀತಿಗೆ ಬಿದ್ದು ಮದುವೆಯಾಗಿ ಮನೆಯಿಂದ ಹೊರಡುತ್ತಾಳೆ. ಇದು ಕುಟ್ಟನ್ ಹಾಗೂ ಕುಟುಂಬಕ್ಕೆ ಭಾರೀ ಮುಜುಗರಕ್ಕೆ ಕಾರಣವಾಗುತ್ತದೆ. ಅದಾಗಿ ನಂತರ ನಡೆಯುವ ಘಟನೆಗಳು ವಾಸ್ತವದಲ್ಲಿ ನಮ್ಮ ಸುತ್ತಮುತ್ತ ನಡೆದ ಘಟನೆಯಂತೆ ಭಾಸವಾಗುತ್ತದೆ. ಮಲಯಾಳಂನ ಪ್ರಖ್ಯಾತ ದಲಿತ ಕಥನಗಳ ಬಳಕೆ ಸಿನಿಮಾಗಳ ಉದ್ದಗಲಕ್ಕೂ ಕಾಣಲು ಸಿಗಲಿದೆ.

ಒಬ್ಬ ರಾಜ ತನ್ನ ಪ್ರಜೆಗಳ ನಡುವೆ ನಡೆಸುವ ಸಂಭಾಷಣೆಯ ಮೂಲಕ ಆರಂಭವಾಗುವ ಪುಝು, ವರ್ಗ ತಾರತಮ್ಯದ ಬಗ್ಗೆ ಪ್ರೇಕ್ಷಕರೊಡನೆ ಮಾತನಾಡುತ್ತದೆ. ಆಗಾಗ್ಗೆ ಬಂದು ಹೋಗುವ ನಾಟಕದ ರಂಗಗಳು ಹೊಸ ಹೊಸ ಯೋಚೆನೆಗೆ ನೋಡುಗರನ್ನು ಹಚ್ಚುತ್ತದೆ. ಇಲ್ಲಿ ಎಲ್ಲವೂ ಒಂದು ದಿನ ಬದಲಾಗಲಿದೆ. ಆದರೆ ಅಸ್ಪ್ರಶ್ಯತೆ ಆರಚರಣೆ ಬದಲಾವಣೆ ಸಾಧ್ಯವೇ ಇಲ್ಲ ಎಂಬ ಕುಟ್ಟಪ್ಪನ್ ಮಾತು ಮೂಲತಃ ಬ್ರಾಹ್ಮಣ ಸಮುದಾಯದಿಂದ ಬಂದ ಪತ್ನಿ ಭಾರತಿಗೆ ಮಾತು ನಿಲ್ಲುವಂತೆ ಮಾಡುತ್ತದೆ. ಬದುಕಿನ ಅನಿರ್ವಾಯತೆಗೆ ಸಿಲುಕಿ ಒಂದೇ ಅಪಾರ್ಟ್ಮೆಂಟ್ನಲ್ಲಿ ಉಳಿದುಕೊಳ್ಳುವ ಅಣ್ಣ ಮತ್ತು ತಂಗಿ ಆಗಾಗ್ಗೆ ಮುಖಾಮುಖಿಗೊಳ್ಳುವ ಸನ್ನಿವೇಶ ಸ್ವಜಾತಿ ಪ್ರೇಮವೊಂದು ಚೂರುಚೂರಾದ ಭಾವನೆಗೆ ಸಾಕ್ಷಿಯಾಗುತ್ತದೆ. ಇದನ್ನು ತಮ್ಮ ಅಭಿನಯದಲ್ಲಿ ತರುವಲ್ಲಿ ಮಮ್ಮೂಟಿ ಗೆದ್ದಿದ್ದಾರೆ.
ಕೆಲವೇ ಕೆಲವು ಪಾತ್ರಧಾರಿಗಳ ಸುತ್ತಲೇ ಸಾಗುವ ಪುಝು ಚಿತ್ರದಲ್ಲಿ ಒಂದು ಹಾಡಿಲ್ಲ, ಸ್ಟಂಟ್ ಸೀನ್ಗಳಿಗೆ ಸಾಕ್ಷಿಯಾಗುವುದಿಲ್ಲ. ವರ್ಣ ಪದ್ದತಿಯ ಚರ್ಚಿಸುತ್ತಾ ಸಾಗುವ ಹೊತ್ತಲ್ಲೇ ಒಂದು ಮರ್ಡರ್ ಪ್ರಕಣವನ್ನೂ ಚಿತ್ರಕಥೆಯಲ್ಲಿ ಪೋಣಿಸಿ, ನಾಯಕನಿಂದ ಪ್ರಕರಣವನ್ನು ಬೇಧಿಸುವಲ್ಲಿ ನಿರ್ದೇಶಕಿ ರಥೀನ ತನ್ನ ಬುದ್ಧಿವಂತಿಕೆಯನ್ನು ತೋರಿದ್ದಾರೆ. ಮತ್ತು ಬಹಿರಂಗವಾಗಿ ಇದೊಂದು ಕ್ರೈಂ ಥ್ರಿಲ್ಲರ್ ಎಂದು ಹೇಳುವುದರ ಮೂಲಕ ತನ್ನ ಸಿನಿಮಾದ ಅಸಲಿ ಉದ್ದೇಶವನ್ನು ಗೌಪ್ಯವಾಗಿಡುವ ಪ್ರಯತ್ನ ಮಾಡಿದ್ದಾರೆ. ಆದರೆ ನೋಡುಗರಿಗೆ ಇದೊಂದು ಅಸ್ಪ್ರಶ್ಯ ವಿರೋಧಿ ನೆಲೆಗಟ್ಟಿನಲ್ಲಿ ಕಟ್ಟಲಾದ ಚಿತ್ರ ಎಂದು ಸಲೀಸಾಗಿ ಅರ್ಥವಾಗಲಿದೆ.
ಇಂಥದ್ದೊಂದು ಫ್ಯಾಸಿಸ್ಟ್ ವಿರೋಧಿ ಕಥೆ ಆಯ್ದುಕೊಂಡಿದ್ದಲ್ಲದೇ ಕ್ರಾಂತಿಕಾರಿ ಮಹಿಳೆ ನಂಗೇಲಿಯನ್ನು ಚಿತ್ರದ ಹಾಗೂ ಚಿತ್ರಕಥೆಯ ಭಾಗವನ್ನಾಗಿಸಿದ್ದಾರೆ. ಹೇಗೆ ಎಂಬುವುದು ಸಿನಿಮಾ ನೋಡಲು ಇಚ್ಚಿಸುವವರ ಪಾಲಿಕೆ ಕುತೂಹಲವಾಗಿ ಉಳಿಯಬೇಕಾದ ಸಂಗತಿ. ʻಎದೆ ಹಾಲುಣಿಸುವ ತಾಯೇ.. ನಿನ್ನದೆ ಕತ್ತರಿಸಿ ನೀಡಿದ್ದಕ್ಕೆ ನಾನು ಹೊಣೆʼ ಎಂಬ ಪಾಪಪ್ರಜ್ಞೆ ನೋಡುಗರೆ ಕಾಡಿದರೆ ಸಿನಿಮಾ ಗೆದ್ದಿತು ಎಂದೇ ಅರ್ಥ.