ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಜಾಬ್ ನಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರರಿವೆ. ಈ ಮಧ್ಯೆ ಎಎಪಿ ಪಂಜಾಬ್ ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಬಹುದೆಂದು ಹೇಳಲಾಗುತ್ತಿದೆ. ಈ ಮಧ್ಯೆ ಪಕ್ಷದ ಮುಖ್ಯಸ್ಥ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂದಿನ ವಾರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು ಚರಣಜಿತ್ ಸಿಂಗ್ ಚನ್ನಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಈ ಹಿಂದೆ ನಡೆದ ಅಹಿತಕರ ಘಟನೆಗಳಿಗೆ ಸಂಪೂರ್ಣವಾಗಿ ನ್ಯಾಯವನ್ನ ಒದಗಿಸಲಾಗುವುದು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.
ಪಂಜಾಬಿನ ಜನರಿಗೆ ಭದ್ರತೆ ಖಾತ್ರಿ ನೀಡಲಾಗುವುದು. ಒಂದು ವೇಳೆ ಪ್ರಧಾನಿಯಾಗಲಿ ಅಥವಾ ಸಾಮಾನ್ಯ ಜನರಾಗಲಿ ಎಲ್ಲರಿಗೂ ಸಮಾನ ನ್ಯಾಯವನ್ನ ಒದಗಿಸಲಾಗುವುದು. ಕಳೆದ ವರ್ಷ ಎಎಪಿಯ ರಾಷ್ಟ್ರೀಯ ನಾಯಕರು ಪಂಜಾಬ್ ವಿಧಾನಸಭೆ ಚುನಾವಣೆಗೆ ಸಿಖ್ ಸಮುದಾಯದ ಅಭ್ಯರ್ಥಿಯನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಲಾಗುವುದು ಎಂದು ಈ ಹಿಂದೆಯೇ ತಿಳಿಸಿದ್ದನ್ನು ಇಲ್ಲಿ ಗಮನಿಸಬಹುದು. ಮುಖ್ಯಮಂತ್ರಿ ರೇಸಿನಲ್ಲಿ ಸದ್ಯ ವಿರೋಧ ಪಕ್ಷದ ನಾಯಕ ಹರಪಾಲ್ ಸಿಂಗ್ ಚೀಮಾ, ರಾಜ್ಯ ಘಟಕದ ಅಧ್ಯಕ್ಷ ಹಾಗೂ ಸಂಸದ ಭಗವಂತ್ ಮಾನ್ ಹೆಸರು ಸದ್ಯ ಚಾಲ್ತಿಯಲ್ಲಿವೆ.