ಪಿಎಸ್ ಐ ಸೇರಿದಂತೆ ಮೂವರು ಪೊಲೀಸರು ಆಂಧ್ರಪ್ರದೇದ ಚಿತ್ತೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.
ಮೃತರನ್ನು ಶಿವಾಜಿನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಅನಿಲ್, ಅವಿನಾಶ್ ಹಾಗೂ ದೀಕ್ಷಿತ್ ಎಂದು ಹೇಳಲಾಗಿದೆ.
ತನಿಖೆ ಪ್ರಯುಕ್ತ ಹೊರಟ್ಟಿದ್ದ ಜೀಪ್ ಕೊತ್ತಕೋಟ ಗ್ರಾಮದ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಸಚಿವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಬೆಂಗಳೂರಿನ ಶಿವಾಜಿ ನಗರದ ಸಬ್ ಇನ್ ಸ್ಪೆಕ್ಟರ್ ಅವಿನಾಶ್, ಪೊಲೀಸ್ ಠಾಣೆಯ ಸಿಬ್ಬಂದಿ ಅನಿಲ್ ಮತ್ತು ದೀಕ್ಷಿತ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಾಯಗೊಂಡ 5 ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ಸಿಬ್ಬಂದಿ ನೆರವಿಗೆ ಧಾವಿಸಿ, ಅತ್ಯುತ್ತಮ ಚಿಕಿತ್ಸೆ ದೊರಕಿಸಲು ಎಲ್ಲಾ ಅಗತ್ಯ ಕ್ರಮ ಜರುಗಿಸಬೇಕು. ಸಾರ್ವಜನಿಕರ ಪ್ರಾಣ ಹಾಗೂ ಆಸ್ತಪಾಸ್ತಿಗಳ ರಕ್ಷಿಸುವ ಕಾರ್ಯದಲ್ಲಿ ಪೊಲೀಸ್ ಸಿಬ್ಬಂದಿ ಮೃತಪಟ್ಟಿರುವುದು ಅತ್ಯಂತ ನೋವು ತಂದಿದೆ ಎಂದು ಸಚಿವರು ಹೇಳಿದ್ದಾರೆ.
ಶಿವಾಜಿ ನಗರ ಪೊಲೀಸ್ ಠಾಣೆಗೆ ಆಗಮಿಸಿದ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರು ಶಿವಾಜಿ ನಗರ ಇನ್ಸ್ಪೆಕ್ಟರ್ ರವಿ ಕುಮಾರ್ ರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.