ಪಿಎಸ್ ಐ ಅಕ್ರಮ ನೇಮಕಾತಿ ಕುರಿತ ಚರ್ಚೆಯ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಕ್ಸಮರದಿಂದ ವಿಧಾನಸಭೆ ಕಲಾಪ ರಂಗೇರಿದ ಘಟನೆ ಮಂಗಳವಾರ ನಡೆಯಿತು.
ಪಿಎಸ್ ಐ ಅಕ್ರಮ ನೇಮಕಾತಿ ಕುರಿತು ವಿಧಾನಸಭೆಯಲ್ಲಿ ನಿಯಮ ೬೯ರ ಅಡಿಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪಗಳಿಂದ ಅಸಮಾಧಾನಗೊಂಡ ಸಿಎಂ ಬೊಮ್ಮಾಯಿ ನಿಮ್ಮ ಸರಕಾರದದಲ್ಲಿ ಯಾರನ್ನೆಲ್ಲಾ ರಕ್ಷಿಸಿದ್ದೀರಿ ಎಂಬುದು ಗೊತ್ತಿದೆ ಎಂದು ತಿರುಗೇಟು ನೀಡಿದರು.
ಇದರಿಂದ ಸಿದ್ದರಾಮಯ್ಯ ಮತ್ತು ಬೊಮ್ಮಾಯಿ ನಡುವೆ ಮಾತಿನ ಸಮರ ನಡೆಯಿತು. ಈ ವೇಳೆ ಬೊಮ್ಮಾಯಿ ಅವರ ಮಾತಿಗೆ ಬಿಜೆಪಿ ಸದಸ್ಯರು ಬೆಂಬಲ ನೀಡಿ ಘೋಷಣೆ ಕೂಗಲು ಆರಂಭಿಸಿದರು. ಇದಕ್ಕೆ ಪ್ರತಿಕ್ರಿಯಿಯಾಗಿ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ಬಿಜೆಪಿ ಘೋಷಣೆ ಕೂಗಿದರು. ಇದರಿಂದ ಸದನ ಗೊಂದಲದ ಗೂಡಾಯಿತು.
ಬೊಮ್ಮಾಯಿ ಅವರ ಮಾತಿನಿಂದ ಕೆರಳಿದ ಸಿದ್ದರಾಮಯ್ಯ, ಹಿಂದಿನ ಸರಕಾರಗಳ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದಾದರೆ ನ್ಯಾಯಾಂಗ ತನಿಖೆಗೆ ಆದೇಶಿಸಿ ಎಲ್ಲಾ ಸರಕಾರಗಳ ಭ್ರಷ್ಟಾಚಾರದ ತನಿಖೆ ನಡೆಸಿ ಎಂದು ಆಗ್ರಹಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಕಾಗೇರಿ, ಏನು ರಾಹುಕಾಲದಲ್ಲಿ ಚರ್ಚೆ ಆರಂಭವಾಗಿದೆ ಅನ್ನಿಸುತ್ತದೆ. ಸಭಾಧ್ಯಕ್ಷರು ಹಾಗೂ ವಿಪಕ್ಷ ನಾಯಕರೇ ಹೀಗೆ ಮಾಡಿದರೆ ನಾನು ಸದನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಭಾಧ್ಯಕ್ಷರು ಉತ್ತರದಲ್ಲಿ ಏನು ಬೇಕಾದರೂ ಹೇಳಲಿ. ಆದರೆ ವಿಪಕ್ಷ ನಾಯಕರು ಮಾತನಾಡುವಾಗ ಪದೇಪದೆ ಮಧ್ಯಪ್ರವೇಶಿಸಿ ಅಡ್ಡಿಪಡಿಸುವುದು ಯಾಕೆ? ಕಿಡಿಕಾರಿದರು.