ಹಾಸನದ (Hassan) ಪೆನ್ಡ್ರೈವ್ (Pendrive) ಹಂಚಿಕೆ ಪ್ರಕರಣ ಹಂತ-ಹಂತವಾಗಿ ಮಾಜಿ ಶಾಸಕ ಪ್ರೀತಂ ಗೌಡ (Preetham gowda) ಕಡೆಗೆ ತಿರುಗುವಂತೆ ಭಾಸವಾಗುತ್ತಿದೆ. ಪ್ರಜ್ವಲ್ ರೇವಣ್ಣ (Prajwal revanna) ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರಂಭಿಕವಾಗಿ ಯಾವೊಂದು ಪ್ರತಿಕ್ರಿಯೆ ನೀಡದೇ ತೆರೆ ಮರೆಯಲ್ಲಿದ್ದ ಮಾಜಿ ಶಾಸಕ ಪ್ರೀತಂ ಗೌಡ, ನಿಧಾನವಾಗಿ ಇದೀಗ ಈ ಕೇಸ್ನ ಸುಳಿಗೆ ಸುಲುಕುತ್ತಿರುವಂತಿದೆ.
ಇದಕ್ಕೆ ಕಾರಣ ಹಾಸನದಲ್ಲಿ ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್ ಹಾಗೂ ಬಾರ್ ಮೇಲೆ ಎಸ್ ಐಟಿ (SIT) ದಾಳಿ ಮಾಡಿದೆ. ಈಗಾಗಲೆ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದಲ್ಲಿ ಪ್ರೀತಂಗೌಡ ಆಪ್ತರಾದ ಲಿಖಿತ್ (Likith) ಹಾಗೂ ಚೇತನ್ರನ್ನು (Chethan) ಎಸ್ಐಟಿ ವಶಕ್ಕೆ ಪಡೆದಿದೆ.. ಇದೀಗ ಹಾಸನದ ಬಿ.ಎಂ. ರಸ್ತೆಯಲ್ಲಿರುವ (BM Road) ಪ್ರೀತಂಗೌಡ ಆಪ್ತ ಶರತ್ ಒಡೆತನದ ಕ್ವಾಲಿಟಿ ಬಾರ್, ಕಿರಣ್ ಒಡೆತನದ ಶ್ರೀಕೃಷ್ಣ ಹೋಟೆಲ್ ಮೇಲೆ ಎಸ್ಐಟಿ ರೇಡ್ ಮಾಡಿದೆ.
ಅಲ್ಲದೆ, ಪ್ರೀತಂಗೌಡ ಮತ್ತೋರ್ವ ಆಪ್ತ ಪುನೀತ್ (Puneeth) ನಿವಾಸದ ಮೇಲೂ ಎಸ್ಐಟಿ ತಂಡ ದಾಳಿ ನಡೆಸಿದೆ. ರವೀಂದ್ರನಗರದಲ್ಲಿರುವ ವಕೀಲ ದೇವರಾಜೇಗೌಡ ಮನೆಯಲ್ಲೂ ಎಸ್ಐಟಿ ಪರಿಶೀಲನೆ ನಡೆಸಿದ್ದು, ಆರೋಪಿ ಚೇತನ್ ಮನೆ ಮೇಲೂ ಎಸ್ಐಟಿ ರೇಡ್ (SIT Raid) ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೀತಂ ಗೌಡ ನನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ.