ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು ಮತ್ತು ಅದನ್ನು ಖಂಡಿಸುತ್ತೇನೆ. ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರು, ಎಲ್ಲಿ ಬೇಕಾದರು ಅವರು ಹೋಗಿ ಪರಿಶೀಲನೆ ಮಾಡುವ ಹಕ್ಕು ಅವರಿಗಿದೆ. ಆದ್ರೆ, ಸಾವರ್ಕರ್ ಬಗ್ಗೆ ಮಾತನಾಡುವ ವೇಳೆ ಯಾರ ಮನಸ್ಸಿಗೂ ನೋವು ಆಗದಂತೆ ಮಾತನಾಡಬೇಕು ಎಂದು ಹೇಳಿದ್ದಾರೆ.
ಸಾವರ್ಕರ್ ಬಗ್ಗೆ ಮಹಾತ್ಮಾ ಗಾಂಧಿಯವರೇ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಬ್ರಿಟೀಷರಿಗೆ ಪತ್ರ ಬರೆದಿದ್ರು. ಇಂದಿರಾಗಾಂಧಿ ಸಹ ಸಾವರ್ಕರ ಒಬ್ಬ ಭಾರತ ದೇಶ ಗುರುತಿಸಲ್ಪಡುವ ವ್ಯಕ್ತಿ ಎಂದು ಹೇಳಿದ್ದಾರೆ. ಅವರೆಲ್ಲಾ, ಒರಿಜಿನಲ್ ಕಾಂಗ್ರೆಸ್ ನವರು, ಸಾವರ್ಕರ್ ಬಗ್ಗೆ ತಿಳಿದುಕೊಂಡಿದ್ದರು.

ಈಗಿರುವ ಕಾಂಗ್ರೆಸ್ ನಕಲಿ ಕಾಂಗ್ರೆಸ್. ಸೋನಿಯಾ ಹಾಗೂ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಸಾವರ್ಕರ್ ಬಗ್ಗೆ ಟೀಕಿಸುತ್ತಿದ್ದಾರೆ.
ಸಿದ್ದರಾಮಯ್ಯ, ನಕಲಿ ಕಾಂಗ್ರೆಸ್ಸಿನ ನಕಲಿ ಕಾಂಗ್ರೆಸ್ಸಿಗ. ಸಿದ್ದರಾಮಯ್ಯನವರು, ಜನತಾ ಪರಿವಾರದಲ್ಲಿದ್ದಾಗ ಇದೆ ಸೋನಿಯಾ ಗಾಂಧಿಯನ್ನು ಟೀಕಿಸುತ್ತಿದ್ದರು. ವೀರಾವೇಷದ ಭಾಷಣ ಮಾಡುವಾಗ ಸಿದ್ದರಾಮಯ್ಯ, ಒಮ್ಮೊಮ್ಮೆ ಕಾಂಗ್ರೆಸ್ಸನ್ನು ಕಿತ್ತೊಗೆಯಬೇಕು ಎಂದು ಹೇಳುತ್ತಾರೆ. ಅವರ ಮನಸ್ಥಿತಿ ಇನ್ನು ಬದಲಾಗಿಲ್ಲ.
ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು, ಅದು ಸಮರ್ಥನಿಯವಲ್ಲ. ಯಾರ ಮೇಲೂ ಮೊಟ್ಟೆ ಎಸೆಯುವದಾಗಲಿ, ಕಪ್ಪು ಪಟ್ಟಿ ಪ್ರದರ್ಶಿಸುವದಾಗಲಿ ಮಾಡಬಾರದು ಎಂದಿದ್ದಾರೆ.