Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಜನತೆಗೆ ಬೇಕಿರುವುದು ಶಾಂತಿ ಸೌಹಾರ್ದತೆ- ಯಾವುದೇ ಮಾದರಿಗಳಲ್ಲ

ನಾ ದಿವಾಕರ

ನಾ ದಿವಾಕರ

July 30, 2022
Share on FacebookShare on Twitter

ಕರ್ನಾಟಕ ಮತ್ತೊಮ್ಮೆ ದ್ವೇಷ ಬೀಜಗಳ ಫಸಲನ್ನು ಕಟಾವು ಮಾಡುವ ಹಂತಕ್ಕೆ ಬಂದು ತಲುಪಿದೆ. ರಾಜಕೀಯ ಪ್ರೇರಿತ, ಕೋಮು ಪ್ರಚೋದಿತ ಮತ್ತು ಮತದ್ವೇಷದ ಕಗ್ಗೊಲೆಗಳು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ಎರಡು ದಿನದ ಹಿಂದೆ ಸುಳ್ಯ ಬಳಿಯ ಬೆಳ್ಳಾಲೆಯಲ್ಲಿ ಬಿಜೆಪಿಯ ಕಾರ್ಯಕರ್ತ ಪ್ರವೀಣ್‌ ನೆಟ್ಟಾರೆ ಭೀಕರ ಹತ್ಯೆಗೊಳಗಾದ ಒಂದೇ ದಿನದ ಅಂತರದಲ್ಲಿ ಸೂರತ್ಕಲ್‌ನಲ್ಲಿ ಫಾಜಿಲ್‌ ಎಂಬ ಮುಸ್ಲಿಂ ಯುವಕನ ಹತ್ಯೆಯಾಗಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಹತ್ಯೆಗೀಡಾಗುತ್ತಿರುವುದು ಸಹಜವಾಗಿಯೇ ಇಡೀ ಪ್ರಕರಣಗಳಿಗೆ ಕೋಮು ದ್ವೇಷದ ಆಯಾಮ ನೀಡಲಾಗುತ್ತಿದೆ. ಮತ್ತೊಂದೆಡೆ ಕಳೆದ ವಾರವಷ್ಟೇ ಸುಳ್ಯದಲ್ಲೇ ಮಸೂದ್‌ ಎಂಬ ಮುಸ್ಲಿಂ ಯುವಕನನ್ನು ಹತ್ಯೆ ಮಾಡಲಾಗಿದೆ. ಈ ಹತ್ಯೆಗಳ ಹಿಂದೆ ಇರುವ ಅಗೋಚರ ಶಕ್ತಿಗಳನ್ನು ಶೋಧಿಸುವ ಮತ್ತು ತಪ್ಪಿತಸ್ಥರನ್ನು ಕಂಡುಹಿಡಿದು ಶಿಕ್ಷಿಸುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ.

ಹೆಚ್ಚು ಓದಿದ ಸ್ಟೋರಿಗಳು

ನೆಹರೂ ಇಲ್ಲದ ಆಧುನಿಕ ಭಾರತದ ಕಲ್ಪನೆ ಅಸಾಧ್ಯ

75 ಹೆಜ್ಜೆಗಳ ನಂತರ ನವ ಭಾರತ ಎತ್ತ ಸಾಗಲಿದೆ ?

ಅಗ್ನಿಪಥ್ ಯೋಜನೆಯು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆ? ಭಾಗ-೨

ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದೆಂದರೆ ಕೇವಲ ಮೇಲ್ನೋಟದ ಶಾಂತಿಯುತ ವಾತಾವರಣವನ್ನು ಕಾಪಾಡುವುದು ಮಾತ್ರ ಅಲ್ಲ. ನಿತ್ಯ ಜೀವನದಲ್ಲಿ ಸಮಾಜ ಸದಾ ಶಾಂತಿಯುತವಾಗಿಯೇ ಕಾಣುತ್ತದೆ. ಜನರ ನಿತ್ಯ ಬದುಕಿನ ಜಂಜಾಟಗಳ ನಡುವೆ ಏರ್ಪಡುವ ಜಗಳ, ಕದನ, ವ್ಯಾಜ್ಯ, ಕಚ್ಚಾಟಗಳು ಸಾಮಾಜಿಕ ಜೀವನದ ಒಂದು ಭಾಗವಾಗಿ ನಡೆಯುತ್ತಲೇ ಇರುತ್ತವೆ. ವ್ಯಕ್ತಿಗತ ನೆಲೆಯಲ್ಲಿ, ಕೌಟುಂಬಿಕ ನೆಲೆಯಲ್ಲಿ ನಡೆಯುವ ಈ ವ್ಯಾಜ್ಯಗಳು ಸಮಾಜದ ಶಾಂತಿಯನ್ನು ಕದಡುವುದೂ ಇಲ್ಲ. ಈ ದೃಷ್ಟಿಯಿಂದ ನೋಡಿದಾಗ ನಮ್ಮ ಸಮಾಜ ಎಷ್ಟು ಶಾಂತಿಯುತವಾಗಿದೆ ಎಂದು ಭಾಸವಾದರೂ ಅಚ್ಚರಿಯೇನಿಲ್ಲ. 1989-92ರ ಸಂದರ್ಭದಲ್ಲಿ ದೇಶಾದ್ಯಂತ ಕೋಮು ಗಲಭೆಗಳು ಸಂಭವಿಸಿದಾಗಲೂ ಸಹ ಕರ್ನಾಟಕದಲ್ಲಿ ಉತ್ತರ ಭಾರತದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಗಿರಲಿಲ್ಲ. ಆದರೆ ಕರ್ನಾಟಕದಲ್ಲಿ ಕೋಮುವಾದ ಮತ್ತು ಮತಾಂಧತೆಯ ಬೇರುಗಳು ಗಟ್ಟಿಯಾಗಲು ಆರಂಭವಾಗಿದ್ದೇ ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎನ್ನುವುದನ್ನೂ ಅಲ್ಲಗಳೆಯಲಾಗುವುದಿಲ್ಲ.

ಟೈಂಸ್‌ನೌ ಪತ್ರಿಕೆಯ ಏಪ್ರಿಲ್‌ 8ರ ವರದಿಯೊಂದರ ಪ್ರಕಾರ   ರಾಜ್ಯದಲ್ಲಿ  ಕಳೆದ 14 ತಿಂಗಳ ಅವಧಿಯಲ್ಲಿ ತಕ್ಷಣದ ಪ್ರಚೋದನೆಯಿಂದಲೇ 441 ಜನರು ಹತ್ಯೆಗೊಳಗಾಗಿದ್ದಾರೆ . 2021ರಲ್ಲೇ 1328 ಕೊಲೆಗಳು ನಡೆದಿವೆ. 2022ರ ಮೊದಲ ಎರಡು ತಿಂಗಳಲ್ಲಿ 216 ಕೊಲೆ ಪ್ರಕರಣಗಳು ದಾಖಲಾಗಿವೆ. ಕಳೆದ ಹತ್ತು ದಿನಗಳಲ್ಲೇ ದಕ್ಷಿಣ ಕನ್ನಡದಲ್ಲಿ ಮೂರು ಹತ್ಯೆಗಳು ನಡೆದಿವೆ.  ಮಸೂದ್‌, ಫಾಜಿಲ್‌, ಹರ್ಷ, ಚಂದ್ರು, ಪ್ರವೀಣ್‌ ನೆಟ್ಟಾರೆ ಈ ಯುವಕರು ಯಾವ ಪುರುಷಾರ್ಥಕ್ಕಾಗಿ ತಮ್ಮ ಜೀವ ತೆರುತ್ತಿದ್ದಾರೆ ? ಯಾವ ಉದ್ದೇಶಕ್ಕಾಗಿ ಈ ಹತ್ಯೆಗಳು ನಡೆಯುತ್ತಿವೆ ? ಕ್ರಿಯೆ ಮತ್ತು ಪ್ರತಿಕ್ರಿಯೆ ಎನ್ನುವುದು ವೈಜ್ಞಾನಿಕ ಪ್ರಮೇಯವೇ ಆದರೂ, ಸಮಾಜದಲ್ಲಿ ಪ್ರತಿಯೊಂದು ಕ್ರಿಯೆಗೂ ಸಮಾನ ಪ್ರಕ್ರಿಯೆಯೇ ಉತ್ತರವಾದರೆ ಅದು ನಮ್ಮನ್ನು ಅನಾಗರಿಕತೆಯತ್ತ ಕೊಂಡೊಯ್ಯುತ್ತದೆ. ಪ್ರವೀಣ್‌ ಮುಂತಾದವರ ಹತ್ಯೆಗಳ ಹಿಂದಿನ ಶಕ್ತಿಗಳು ಯಾರೇ ಇರಲಿ, ಉದ್ದೇಶಗಳು ಏನೇ ಇರಲಿ, ಒಂದು ಮನುಷ್ಯ ಸಮಾಜದಲ್ಲಿ ಭಿನ್ನ ನಿಲುವು ತಳೆಯುವ ಕಾರಣಕ್ಕಾಗಿಯೇ, ಭಿನ್ನ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುವುದಕ್ಕಾಗಿಯೇ, ಪರಸ್ಪರ ಕೊಲೆ ಮಾಡುವಂತಹ ಒಂದು ವಾತಾವರಣ ಸೃಷ್ಟಿಯಾಗುತ್ತಿದೆ ಎಂದರೆ ಈ ವ್ಯಾಧಿಯ ಲಕ್ಷಣವನ್ನು ಸಮಾಜದ ಆಂತರ್ಯದಲ್ಲೇ ಗುರುತಿಸಬೇಕಾಗುತ್ತದೆ.

ರಾಜಕೀಯ ವಿರೋಧ ಅಥವಾ ತಾತ್ವಿಕ ವಿರೋಧಗಳ ನಡುವೆಯೇ ಕರ್ನಾಟಕ ಒಂದು ಸೌಹಾರ್ದಯುತ ಸಮಾಜವಾಗಿ ದೇಶದಲ್ಲಿ ಒಂದು ಮಾದರಿಯಾಗಿ ನಡೆದುಬಂದಿದೆ. ಸ್ವತಂತ್ರ ಭಾರತ ಕಂಡ ಪ್ರಬಲ ಸೈದ್ಧಾಂತಿಕ ಸಂಘರ್ಷಗಳು, ಹೋರಾಟಗಳು , ಪ್ರತಿರೋಧದ ಧ್ವನಿಗಳು ಈ ನೆಲದಲ್ಲಿ ದಾಖಲಾಗಿವೆ. ರೈತರು ತಮ್ಮ ಬದುಕಿಗಾಗಿ, ದಲಿತರು ತಮ್ಮ ಘನತೆಗಾಗಿ, ಆದಿವಾಸಿಗಳು ತಮ್ಮ ಅಸ್ತಿತ್ವಕ್ಕಾಗಿ, ಮಹಿಳೆಯರು ತಮ್ಮ ಗೌರವಕ್ಕಾಗಿ ಹೋರಾಡುತ್ತಲೇ ಕರ್ನಾಟಕವನ್ನು ಮನುಜಪಥದಲ್ಲಿ ಸಾಗುವ ಒಂದು ರಾಜ್ಯವಾಗಿ ರೂಪಿಸಲು ಶ್ರಮಿಸಿದ್ದಾರೆ. ಇಂದಿಗೂ ಈ ಜೀವನೋಪಾಯ ಮತ್ತು ಮಾನವ ಘನತೆಯ ಹೋರಾಟಗಳು ಉಸಿರಾಡುತ್ತಲೇ ಇವೆ. ಆದರೆ ಯಾವುದೇ ಸಂದರ್ಭದಲ್ಲೂ ಈ ಹೋರಾಟಗಳಲ್ಲಿ ಕ್ರಿಯೆ-ಪ್ರತಿಕ್ರಿಯೆಯ ಪ್ರಮೇಯ ಬಳಕೆಯಾಗಿಲ್ಲ. ನರಗುಂದದ ರೈತರು, ಕಂಬಾಲಪಲ್ಲಿಯ ದಲಿತರು, ಪಶ್ಚಿಮ ಘಟ್ಟದ ಆದಿವಾಸಿಗಳು ಪ್ರಜಾಸತ್ತಾತ್ಮಕ ಮಾರ್ಗದಲ್ಲೇ ತಮ್ಮ ಹೋರಾಟದ ಕ್ರಿಯೆಯನ್ನು ನಿರ್ವಹಿಸಿ, ಆಳುವ ವರ್ಗಗಳಿಂದ ಮಾನವೀಯ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ನಡೆದುಬಂದಿದ್ದಾರೆ.

ಇಂದು ನಮ್ಮ ನಾಡಿಗೆ ಏನಾಗಿದೆ ? ಯಾವ ಲತ್ತೆ ಬಡಿದಿದೆ ? ಯಾವ ವ್ಯಾಧಿ ವ್ಯಾಪಿಸಿದೆ ? ದೇಶಕ್ಕೇ ಮಾದರಿಯಾದ ಸಮಾಜವಾದಿ ಚಳುವಳಿ, ದಲಿತ ಚಳುವಳಿ ಮತ್ತು ಕಾರ್ಮಿಕ ಚಳುವಳಿಗಳನ್ನು ನೀಡಿರುವ ಕರ್ನಾಟಕ ಇಂದು ಪರಸ್ಪರ ದ್ವೇಷ ಕಾರುವ ಹಂತಕ ಸಂಸ್ಕೃತಿಗೆ ಮಾದರಿಯಾಗುತ್ತಿರುವುದು ತಲೆತಗ್ಗಿಸಬೇಕಾದ ವಿಚಾರವಲ್ಲವೇ ? ನಮ್ಮ ಸಾರ್ವಜನಿಕ ಪ್ರಜ್ಞೆ ಎಷ್ಟು ಕಲುಷಿತವಾಗಿದೆ ಎಂದರೆ ರಾಜಕೀಯ ಸಿದ್ಧಾಂತ, ಮತಧಾರ್ಮಿಕ ಅಸ್ಮಿತೆ ಅಥವಾ ಜಾತಿ ಅಸ್ಮಿತೆಗಳನ್ನು ಹೊತ್ತ ಹತ್ಯೆಗಳು ಮಾತ್ರವೇ ನಮ್ಮನ್ನು ಚಿಂತೆಗೀಡುಮಾಡುತ್ತವೆ. ಪ್ರವೀಣ್‌ ಹತ್ಯೆಯ ಹಿಂದೆಯೇ ಫಾಜಿಲ್‌ ಮತ್ತು ಅದಕ್ಕೂ ಮುನ್ನ ಮಸೂದ್‌ ಹತ್ಯೆ, ಈ ಮೂರೂ ಘಟನೆಗಳ ಹಿಂದೆ ಕೋಮು ದ್ವೇಷ ಅಥವಾ ಮತದ್ವೇಷ ಇರಬಹುದು. ತುಮಕೂರು, ಹುಣಸೂರು ಬಳಿ ನಡೆದ ಹತ್ಯೆಗಳ ಹಿಂದೆ ಜಾತಿ ದ್ವೇಷವೂ ಇರಬಹುದು.  ಅಂತಿಮ ಸತ್ಯವನ್ನು ತನಿಖೆಯ ನಂತರವಷ್ಟೇ ತಿಳಿಯಲು ಸಾಧ್ಯ. (ಆದರೆ ಅಲ್ಲಿಯವರೆಗೂ ಕನ್ನಡದ ಕೂಗುಮಾರಿ ಸುದ್ದಿಮನೆಗಳು ತಮ್ಮ ಕೋರ್ಟ್‌ ರೂಮ್‌ಗಳನ್ನು ಬಂದ್‌ ಮಾಡಿದರೆ ಎಲ್ಲರಿಗೂ ಕ್ಷೇಮ).

ಹಂತಕ ಮತ್ತು ಹತ್ಯೆಗೀಡಾದ ವ್ಯಕ್ತಿ ಇಬ್ಬರನ್ನೂ ನಾವು ಯಾವುದೋ ಒಂದು ಅಸ್ಮಿತೆಯ ಚೌಕಟ್ಟಿನಲ್ಲಿ ಬಂಧಿಸಿಟ್ಟು, ಘಟನೆಯ ಹಿಂದಿನ ಸತ್ಯಾಸತ್ಯತೆಗಳನ್ನು ಸಾಮುದಾಯಿಕ ಅಥವಾ ಮತೀಯ ಅಸ್ಮಿತೆಗಳ ನೆಲೆಯಲ್ಲೇ ಪರಾಮರ್ಶಿಸಲು ಮುಂದಾಗುತ್ತೇವೆ. ಇತ್ತೀಚಿನ ಬೆಳವಣಿಗೆ ಎಂದರೆ ಹತ್ಯೆಗೊಳಗಾದ ಯುವಕರ ಕುಟುಂಬಗಳಿಗೆ ಸಾಂತ್ವನ ಹೇಳುವುದು, ಹಣಕಾಸಿನ ಪರಿಹಾರ ನೀಡುವುದು ಸಹ ಅಸ್ಮಿತೆಗಳ ನೆಲೆಯಲ್ಲೇ  ನಡೆಯುತ್ತದೆ. ಕರ್ನಾಟಕದ ಬೌದ್ಧಿಕ ಪರಂಪರೆಯಲ್ಲಿ ಹೀಗಿರಲಿಲ್ಲ. ಈ ವಿಕೃತ ಮನಸ್ಥಿತಿಯೂ ಇರಲಿಲ್ಲ. ಕಂಬಾಲಪಲ್ಲಿಯ ಘಟನೆಯಲ್ಲಿ ಯಾರೂ ಶಿಕ್ಷೆಗೊಳಗಾಗಲಿಲ್ಲ. ಇಲ್ಲಿ ಅಪರಾಧಿಗಳು ಯಾರು ಎಂದು ಇಡೀ ಜಗತ್ತಿಗೇ ತಿಳಿಯುತ್ತದೆ ಆದರೆ ನ್ಯಾಯ ವ್ಯವಸ್ಥೆ ಸಾಕ್ಷ್ಯಾಧಾರಗಳನ್ನು ಬಯಸುತ್ತದೆ. ಒಂದು ಸಾಮಾಜಿಕ ವ್ಯವಸ್ಥೆಯೇ ಅಪರಾಧಿ ಸ್ಥಾನದಲ್ಲಿದ್ದಾಗ ನಿರ್ದಿಷ್ಟ ಅಪರಾಧಿಯನ್ನು ಗುರುತಿಸುವುದಾದರೂ ಹೇಗೆ ? ಇಲ್ಲಿ ಕ್ರಿಯೆ ಪ್ರತಿಕ್ರಿಯೆಯ ಪ್ರಮೇಯವನ್ನು ಅನುಸರಿಸಿದರೆ ದಲಿತರು ಯಾರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಬೇಕು ? ಈ ಪ್ರಶ್ನೆಗೆ ಬಹುಶಃ ತಲೆ ತಗ್ಗಿಸಿ ನಿಲ್ಲುವುದೊಂದೇ ಉತ್ತರವಾಗಲು ಸಾಧ್ಯ.

ಹೀಗಿದ್ದರೂ ಕರ್ನಾಟಕ ತನ್ನ ಶಾಂತಿಯ ತೋಟವನ್ನು ಕಾಪಾಡಿಕೊಂಡು ಬಂದಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ತೋಟದ ಹೂಗಳು ಮುರುಟಿಹೋಗುತ್ತಿವೆ. ಹಸಿರು ಬಳ್ಳಿಗಳು ಸುರುಟಿಹೋಗುತ್ತಿವೆ. ವಿಶಾಲ ವೃಕ್ಷಗಳು ಆಶ್ರಯಿಸುವವರಿಗೆ ನೆರಳು ನೀಡುವ ಬದಲು, ವಿಷಗಾಳಿಯನ್ನು ಹೊರಸೂಸುತ್ತಿವೆ. ಏಕೆ ಹೀಗಾಗುತ್ತಿದೆ ಎಂದು ಯೋಚಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆಲೋಚನೆಗೆ ತತ್ವ ಸಿದ್ಧಾಂತದ ಗೊಡವೆ ಬೇಕಿಲ್ಲ. ಮತಧರ್ಮ ಜಾತಿಗಳ ಹಂಗು ಸಹ ಬೇಕಿಲ್ಲ. ಇಡೀ ಸಮಾಜವನ್ನೇ ವಿಷವರ್ತುಲದಲ್ಲಿ ಸಿಲುಕಿಸಿರುವ ಮತಾಂಧ ಶಕ್ತಿಗಳು ಜನಸಾಮಾನ್ಯರ ಆಲೋಚನೆಯ ತಂತುಗಳನ್ನೇ ಭ್ರಷ್ಟಗೊಳಿಸಿಬಿಟ್ಟಿವೆ. ಹಾಗಾಗಿಯೇ . ಹತ್ಯೆಯ ಹಿಂದಿನ ಕಾರಣ, ಹಂತಕನ ಹಿನ್ನೆಲೆ, ಹತ್ಯೆಗೀಡಾದವರ ಹಿನ್ನೆಲೆ ಎಲ್ಲವೂ ಯಾವುದೋ ಒಂದು ಅಸ್ಮಿತೆಗಳ ಚೌಕಟ್ಟಿನಲ್ಲೇ ನಿಷ್ಕರ್ಷೆಗೊಳಗಾಗುತ್ತದೆ. ಮತ ದ್ವೇಷ, ಜಾತಿ ದ್ವೇಷ, ಜಾತಿ ಶ್ರೇಷ್ಠತೆ, ಮತಾಂಧತೆ ಈ ಎಲ್ಲ ಅವಗುಣಗಳು ಯುವ ಜನತೆಯ ಮನಸುಗಳಲ್ಲಿ ಉದ್ಧೀಪನಗೊಳಿಸುವ ಉನ್ಮಾದ ಮತ್ತು ಇದನ್ನು ಪ್ರಚೋದಿಸುವಂತಹ ವಿದ್ಯಮಾನಗಳು ಯುವ ಪೀಳಿಗೆಯ ಮನಸುಗಳನ್ನು ವ್ಯವಸ್ಥಿತವಾಗಿ ಆವರಿಸುತ್ತಿದ್ದು, ಯಾರದೋ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ, ಅವ್ಯಕ್ತ ಗುರಿಯನ್ನು ತಲುಪುವ ಸಲುವಾಗಿ ಯುವ ಪೀಳಿಗೆ ಹಿಂಸಾತ್ಮಕ ಮಾರ್ಗಗಳಿಗೆ ಬಲಿಯಾಗುತ್ತಿದೆ. ಬೆಳ್ಳಾರೆಯ ಪ್ರವೀಣ್‌ ನೆಟ್ಟಾರೆ, ಸುಳ್ಯದ ಮಸೂದ್‌, ಸೂರತ್ಕಲ್‌ನ ಫಾಜಿಲ್‌ ಮೂವರೂ ಇಂತಹುದೇ ಉನ್ಮಾದದ ವಾತಾವರಣಕ್ಕೆ ಬಲಿಯಾದ ಅಮಾಯಕರಾಗಿದ್ದಾರೆ. ಇವರಂತೆಯೇ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಹಲವು ಯುವಕರು ಪ್ರಾಣ ತೆತ್ತಿದ್ದಾರೆ.

ಪ್ರತಿಯೊಂದು ಹತ್ಯೆ ಸಂಭವಿಸಿದಾಗಲೂ, ಸರ್ಕಾರದ ವಕ್ತಾರರು “ ಉಗ್ರ ಕ್ರಮ ಕೈಗೊಳ್ಳುತ್ತೇವೆ, ಆರೋಪಿಗಳನ್ನು ಎಲ್ಲೇ ಇದ್ದರೂ ಬಂಧಿಸುತ್ತೇವೆ, ಶಿಕ್ಷೆಗೊಳಪಡಿಸುತ್ತೇವೆ ” ಎಂಬ ಮಾತುಗಳನ್ನು ಹೇಳುತ್ತಲೇ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾಡಹಗಲಿನಲ್ಲೇ ಹತ್ಯೆಗಳು ನಡೆಯುತ್ತಿವೆ. ಹಂತಕರೂ ಯುವಕರೇ ಆಗಿದ್ದಾರೆ, ಹತ್ಯೆಗೊಳಗಾದವರೂ ಯುವಕರೇ ಆಗಿದ್ದಾರೆ. ಆಡಳಿತಾರೂಢ ಪಕ್ಷದ ರಾಜಕೀಯ ನಾಯಕರ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಹತ್ಯೆಗೊಳಗಾದವರ ಅಸ್ಮಿತೆಗಳನ್ನಾಧರಿಸಿ ವ್ಯಕ್ತವಾಗುತ್ತವೆ. ವಿರೋಧ ಪಕ್ಷಗಳು ಪ್ರತಿಯೊಂದು ಘಟನೆ ನಡೆದಾಗಲೂ ಸರ್ಕಾರದ ವೈಫಲ್ಯದತ್ತ ಬೆಟ್ಟು ಮಾಡುತ್ತವೆ. ಸರ್ಕಾರವು ಈ ಹತ್ಯೆಗಳನ್ನು ನಿಗ್ರಹಿಸಲು ಅವಶ್ಯವಾದ ಕಠಿಣ ಶಾಸನಗಳ ಬಗ್ಗೆ ಚಿಂತೆ ಮಾಡುತ್ತದೆ. ಕಠಿಣ ಶಾಸನಗಳು ಅಪರಾಧಿಗಳನ್ನು ಶಿಕ್ಷಿಸಲು ಬಳಸುವ ಪ್ರಭಾವಶಾಲಿ ಸಾಧನಗಳಾದೀತೇ ಹೊರತು, ಹತ್ಯೆಗಳನ್ನು, ದಾಳಿಗಳನ್ನು ಆಕ್ರಮಣಗಳನ್ನು ನಿಯಂತ್ರಿಸಲು ನೆರವಾಗುವುದಿಲ್ಲ. ವರದಕ್ಷಿಣೆಯ ಕೊಲೆಗಳು, ಜಾತಿ ವೈಷಮ್ಯದ ಹತ್ಯೆಗಳು, ಮರ್ಯಾದಾ ಹತ್ಯೆಗಳು, ಮತದ್ವೇಷದ ಕೊಲೆಗಳು, ಮಹಿಳೆಯರ ಅತ್ಯಾಚಾರ ಮತ್ತು ಹತ್ಯೆಗಳು ಇವೆಲ್ಲವನ್ನೂ ನಿಯಂತ್ರಿಸುವ ಕಾನೂನು ನಮ್ಮ  ನಡುವೆ ಇದ್ದುಕೊಂಡೇ, ಸರಾಸರಿ ದಿನಕ್ಕೆ ಮೂರು ಕೊಲೆಗಳನ್ನು ನಮ್ಮ ಸಮಾಜ ಕಾಣುತ್ತಿದೆ. ಸಂದರ್ಭಾನುಸಾರ ವ್ಯಕ್ತವಾಗುವ ಭಾವನಾತ್ಮಕ ಸನ್ನಿವೇಶಗಳನ್ನು ಬದಿಗಿಟ್ಟು ನೋಡಿದಾಗ, ಇದೊಂದು ಸಾಮಾಜಿಕ ಸಮಸ್ಯೆ ಎಂದೇ ಗುರುತಿಸಬಹುದು. ಈ ಸಾಮಾಜಿಕ ಕ್ಷೋಭೆಯನ್ನು ನಿವಾರಿಸುವ ಬಗೆ ಹೇಗೆ ?

ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಹತ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಲು ಕಠಿಣ ಕ್ರಮ ಕೈಗೊಳ್ಳುವುದರೊಂದಿಗೇ, ಪ್ರಸಂಗ ಎದುರಾದರೆ ಯೋಗಿ ಮಾದರಿಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ಆರ್ಥಿಕ ಬೆಳವಣಿಗೆಗೆ ಗುಜರಾತ್‌ ಮಾದರಿ, ಅಧಿಕಾರ ಗ್ರಹಣಕ್ಕೆ ಗೋವಾ ಮಾದರಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಯೋಗಿ ಮಾದರಿ, ಅರಣ್ಯ ರಕ್ಷಣೆಗೆ ಜಾರ್ಖಂಡ್-ಛತ್ತಿಸ್‌ಘಡ್‌ ಮಾದರಿ ಹೀಗೆ ಅನ್ಯ ರಾಜ್ಯಗಳ ಆಡಳಿತ ಮಾದರಿಗಳನ್ನೇ ಅನುಕರಿಸುವಷ್ಟು ಬೌದ್ಧಿಕ ದಾರಿದ್ರ್ಯ ನಮ್ಮ ರಾಜ್ಯದಲ್ಲಿದೆಯೇ ? ಕೇವಲ ಮೂರು ನಾಲ್ಕು ದಶಕಗಳ ಹಿಂದೆ ಕರ್ನಾಟಕ ಪ್ರಾಮಾಣಿಕ ರಾಜಕಾರಣಕ್ಕೆ ಮಾದರಿಯಾಗಿತ್ತು. ಮೌಲ್ಯಾಧಾರಿತ ರಾಜಕಾರಣ ಎಂದರೆ ಇಡೀ ದೇಶವೇ ಕರ್ನಾಟಕದತ್ತ ನೋಡುತ್ತಿತ್ತು. 1970ರ ದಶಕದ ತುರ್ತುಪರಿಸ್ಥಿತಿಯಂತಹ ಸಂಕೀರ್ಣ ಸನ್ನಿವೇಶದಲ್ಲೂ ಭೂ ಸುಧಾರಣೆಗಳಿಗಾಗಿ, ಉಳುವವನಿಗೇ ಭೂಮಿ ನೀಡುವ ಉನ್ನತ ಆದರ್ಶಗಳಿಗಾಗಿ ಕರ್ನಾಟಕ ಮಾದರಿಯಾಗಿತ್ತು. ರಾಜಕೀಯ ತತ್ವ, ಸಿದ್ಧಾಂತ ಮತ್ತು ಆಕಾಂಕ್ಷೆಗಳಿಂದ ಹೊರತಾಗಿಯೂ ಕರ್ನಾಟಕವು ಆಡಳಿತ ವ್ಯವಸ್ಥೆಗೆ, ಸಾಮಾಜಿಕ ಸಮನ್ವಯ ಮತ್ತು ಸೌಹಾರ್ದತೆಗೆ ಒಂದು ಮಾದರಿ ರಾಜ್ಯವಾಗಿತ್ತು. ಇಂದಿಗೂ ಈ ಬೌದ್ಧಿಕ ಸಂಪತ್ತು ನಮ್ಮಲ್ಲಿ ನಶಿಸಿಲ್ಲ. ಗುರುತಿಸುವ ವ್ಯವಧಾನ ಇರಬೇಕಷ್ಟೇ.

ಸರ್ವಜನಾಂಗದ ಶಾಂತಿಯ ತೋಟ ಕೇವಲ ಕವಿವಾಣಿ ಮಾತ್ರವಲ್ಲ, ಅದನ್ನು ಅಕ್ಷರಶಃ ಪಾಲಿಸಿಕೊಂಡು ಬಂದಿದ್ದ ರಾಜ್ಯ ಕರ್ನಾಟಕ. ಆಂತರಿಕ ಕ್ಷೋಭೆ ಎಷ್ಟೇ ಇದ್ದರೂ ಜನಸಮುದಾಯಗಳ ನಡುವೆ ಸಮನ್ವಯ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಕರ್ನಾಟಕದ ಜನತೆ ಸದಾ ಮುಂಚೂಣಿಯಲ್ಲೇ ಇದ್ದಾರೆ. ಇಂದು ನಾವು ಬುಲ್ಡೋಜರ್‌ ಮಾದರಿಯನ್ನು ಅನುಸರಿಸುವ ಹಂತಕ್ಕೆ ಬಂದು ತಲುಪಿದ್ದೇವೆ. ಸಾಮಾಜಿಕ ಕ್ಷೋಭೆ ಉಂಟುಮಾಡುವ ಅಥವಾ ಅಮಾಯಕರ ಸಾವುಗಳಿಗೆ ಕಾರಣವಾಗುವ ಅಪರಾಧಿಗಳೆಲ್ಲರೂ ಬುಲ್ಡೋಜರ್‌ಗೆ ಬಲಿಯಾಗಬೇಕೆಂದರೆ, ಮತ್ತದೇ ನೆನಪು, ಕಂಬಾಲಪಲ್ಲಿಯ ಸಂತ್ರಸ್ತರು ಯಾರ ವಿರುದ್ಧ ಬುಲ್ಡೋಜರ್‌ ಬಳಸಬೇಕು ? ಅತ್ಯಾಚಾರ ಹತ್ಯೆಗೊಳಗಾದ ದಾನಮ್ಮನ ಕುಟುಂಬದವರು ಯಾರನ್ನು ಗುರಿಯಾಗಿಸಬೇಕು ? ಅಧಿಕಾರದಲ್ಲಿರುವವರನ್ನು ಮತ್ತು ಇಡೀ ರಾಜಕೀಯ ವ್ಯವಸ್ಥೆಯನ್ನು, ಪ್ರಜ್ಞಾವಂತ ಸಮಾಜವನ್ನು ಕಾಡಬೇಕಿರುವ ಪ್ರಶ್ನೆ ಇದು.

ಯುವ ಪೀಳಿಗೆಯಲ್ಲಿ ಹಿಂಸಾತ್ಮಕ ಮನೋಭಾವ ಏಕೆ ಹೆಚ್ಚಾಗುತ್ತಿದೆ ? ಕೆಲವು ಸಂಘಟನೆಗಳು ಏಕೆ ತಮ್ಮ ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಯನ್ನು ಮರೆತಿವೆ ? ಪೊಲೀಸ್‌ ವ್ಯವಸ್ಥೆಯನ್ನು ದೂಷಿಸುವುದರಿಂದ ಆ ಕ್ಷಣಕ್ಕೆ ಸಮಾಧಾನ ಉಂಟಾಗಬಹುದು. ಅದರೆ ಸಮಾಜದ ಆಂತರ್ಯದಲ್ಲೇ ಕ್ರಿಯೆ ಪ್ರತಿಕ್ರಿಯೆಗಳ ಹಿಂಸೆಯ ವಿಷಬೀಜಗಳು ಬೇರೂರುತ್ತಿರುವಾಗ ನಮ್ಮ ಗಮನ ಸಮಾಜದತ್ತಲೇ ಇರಬೇಕಾಗುತ್ತದೆ. ಹತ್ಯೆ ಮತ್ತು ಹಂತಕರ ಹಿಂದಿನ ಉದ್ದಿಶ್ಯಗಳನ್ನೇ ಪ್ರಧಾನವಾಗಿ ಪರಿಗಣಿಸುವುದರಿಂದ ಸಮಾಜದಲ್ಲಿ ಬೇರೂರುತ್ತಿರುವ ಪಾತಕೀಕರಣ ಮನೋಭಾವವನ್ನು ಹೋಗಲಾಡಿಸಲಾಗುವುದಿಲ್ಲ. ಪಾತಕ ಸಾಮ್ರಾಜ್ಯವನ್ನು ವಿಸ್ತರಿಸಲು ನೆರವಾಗುತ್ತಿರುವ ಎಲ್ಲ ರೀತಿಯ ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾಗರಿಕರ ನಡುವೆಯೇ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಸಮಾಜ ಸಾಗಬೇಕಿದೆ. ಆಗಲೇ ಈ ಹಂತಕ ಪರಂಪರೆಗೆ ತಾರ್ಕಿಕ ಅಂತ್ಯ ಹಾಡಲು ಸಾಧ್ಯ.

RS 500
RS 1500

SCAN HERE

[elfsight_youtube_gallery id="4"]

don't miss it !

‘ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಮಳೆಗಿಂತ ಮನೆ ಬೀಳುವುದೇ ಹೆಚ್ಚು’; ಬಿಬಿಎಂಪಿಯಿಂದ ಸರ್ವೇ
ಕರ್ನಾಟಕ

‘ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಮಳೆಗಿಂತ ಮನೆ ಬೀಳುವುದೇ ಹೆಚ್ಚು’; ಬಿಬಿಎಂಪಿಯಿಂದ ಸರ್ವೇ

by ಕರ್ಣ
August 13, 2022
ಲಾಲ್ ಬಾಗ್ ಫ್ಲವರ್ ಶೋ : ಭರ್ಜರಿ ಆಫರ್ ಕೊಟ್ಟ ನಮ್ಮ ಮೆಟ್ರೋ!
ಕರ್ನಾಟಕ

ಲಾಲ್ ಬಾಗ್ ಫ್ಲವರ್ ಶೋ : ಭರ್ಜರಿ ಆಫರ್ ಕೊಟ್ಟ ನಮ್ಮ ಮೆಟ್ರೋ!

by ಪ್ರತಿಧ್ವನಿ
August 12, 2022
ಅಮೃತ ಮಹೋತ್ಸವದ ನಂತರ ರಾಷ್ಟ್ರ ಧ್ವಜಗಳ ವಿಲೇವಾರಿ ಹೇಗೆ? : ಇಲ್ಲಿದೆ ದೆಹಲಿಗರ ಪರಿಹಾರ
ದೇಶ

ಅಮೃತ ಮಹೋತ್ಸವದ ನಂತರ ರಾಷ್ಟ್ರ ಧ್ವಜಗಳ ವಿಲೇವಾರಿ ಹೇಗೆ? : ಇಲ್ಲಿದೆ ದೆಹಲಿಗರ ಪರಿಹಾರ

by ಫಾತಿಮಾ
August 16, 2022
ಬಿಬಿಎಂಪಿ ಚುನಾವಣೆಗೆ ಮೀಸಲಾತಿ ಪಟ್ಟಿ ಅಂತಿಮಗೊಳಿಸಿ ಸರ್ಕಾರ ಆದೇಶ : ಕೈ ನಾಯಕರು ಕೊತಕೊತ
ಕರ್ನಾಟಕ

ಬಿಬಿಎಂಪಿ ಚುನಾವಣೆಗೆ ಮೀಸಲಾತಿ ಪಟ್ಟಿ ಅಂತಿಮಗೊಳಿಸಿ ಸರ್ಕಾರ ಆದೇಶ : ಕೈ ನಾಯಕರು ಕೊತಕೊತ

by ಕರ್ಣ
August 17, 2022
ಖ್ಯಾತ ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ
ಕಲೆ – ಸಾಹಿತ್ಯ

ಖ್ಯಾತ ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

by ಪ್ರತಿಧ್ವನಿ
August 12, 2022
Next Post
ವಿಶೇಷ ಅಗತ್ಯಗಳನ್ನು ಹೊಂದಿರುವ ಮಕ್ಕಳು ಭಾರತದಲ್ಲಿ ಮುಖ್ಯವಾಹಿನಿಯ ಶಿಕ್ಷಣದಿಂದ ಏಕೆ ಹೊರಗುಳಿಯುತ್ತಿದ್ದಾರೆ?

ವಿಶೇಷ ಅಗತ್ಯಗಳನ್ನು ಹೊಂದಿರುವ ಮಕ್ಕಳು ಭಾರತದಲ್ಲಿ ಮುಖ್ಯವಾಹಿನಿಯ ಶಿಕ್ಷಣದಿಂದ ಏಕೆ ಹೊರಗುಳಿಯುತ್ತಿದ್ದಾರೆ?

10 ವರ್ಷಗಳಲ್ಲಿ 1,059 ಹುಲಿಗಳ ಸಾವು: NTCA ಡಾಟಾ

10 ವರ್ಷಗಳಲ್ಲಿ 1,059 ಹುಲಿಗಳ ಸಾವು: NTCA ಡಾಟಾ

ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಲಾಲ್ ಬಾಗ್, ಕಬ್ಬನ್ ಪಾರ್ಕ್‌ಗಿಂತಲೂ ದೊಡ್ಡದಾದ ಗಾರ್ಡನ್.!!

ಲಾಲ್ ಬಾಗ್ ಫ್ಲವರ್ ಶೋಗೆ ಸಕಲ ಸಿದ್ದತೆ : ಈ ಬಾರಿ ಪವರ್ ಸ್ಟಾರ್ ಸೆಂಟರ್ ಆಫ್ ಅಟ್ರ್ಯಾಕ್ಷನ್!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist