ಹಿಂದೂ ಯುವಕರ ಸಾವುಗಳನ್ನು ಬಳಸಿ ರಾಜಕೀಯ ಗಳ ಹಿಡಿಯುತ್ತಾ ಬಂದಿರುವ ಬಿಜೆಪಿಗೆ ಈಗ ಅದುವೇ ಮುಳುವಾಗುವ ಲಕ್ಷಣ ಕಾಣಿಸುತ್ತಿದೆ. ಐದು ವರ್ಷಗಳ ಹಿಂದೆ ಸಾವನ್ನಪ್ಪಿದ್ದ ಹೊನ್ನಾವರದ ಪರೇಶ್ ಮೇಸ್ತಾ ಪ್ರಕರಣದಲ್ಲಿ ಬಿ ರಿಪೋರ್ಟ್ ಬಂದಿದ್ದರೂ ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ಬಿಜೆಪಿ ಕಾರ್ಯಕರ್ತರು ಇನ್ನೂ ಅಲೆದಾಡುತ್ತಲೇ ಇದ್ದಾರೆ. ಪ್ರಕರಣದ ರಾಜಕೀಯ ಲಾಭ ಪಡೆದವರು ಮಾತ್ರ ಮಗುಮ್ಮಾಗಿ ಇದ್ದಾರೆ ಎಂದು ಅವರು ಆರೋಪಿಸಿದದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಹೊನ್ನಾವರದಲ್ಲಿ ಕುಮಟಾ ಶಾಸಕ ದಿನಕರ್ ಶೆಟ್ಟಿವರ ವಿರುದ್ಧ ಘೋಷಣೆ ಕೂಗಿದ ಘಟನೆ ನಡೆದಿದೆ.
ಕಳೆದ ಐದು ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದ್ದ ಪರೇಶ್ ಮೇಸ್ತ ಸಾವು ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಬಿಜೆಪಿ ಇದನ್ನು ಕೋಮು ರಾಜಕಾರಣಕ್ಕೆ ಬಳಸಿ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಿತ್ತು. ಇದರ ಪರಿಣಾಮವಾಗಿ ಹಿಂದೂ ಕಾರ್ಯಕರ್ತರು ಕೆಸೂಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗಿತ್ತು. ಹೀಗೆ ಕೇಸ್ ಮೈಮೇಲೆ ಎಳೆದುಕೊಂಡ ಕಾರ್ಯಕರ್ತರೆಲ್ಲರೂ ಹಿಂದುಳಿದ, ಬಡ ಕುಟುಂಬಗಳಿಂದ ಬಂದವರಾಗಿದ್ದು, ಹಲವರು ಅವರ ಕುಟುಂಬದ ಏಕೈಕ ಆಧಾರವಾಗಿದ್ದಾರೆ. ಕೋರ್ಟು-ಕೇಸು ಎಂದು ಅಲೆದಾಡಿ ಬೇಸತ್ತಿರುವ ಬಿಜೆಪಿ ಕಾರ್ಯಕರ್ತರು ಬಿಜೆಪಿ ವಿರುದ್ಧ ಬಹಿರಂಗವಾಗಿಯೇ ಅಖಾಡಕ್ಕೆ ಇಳಿದಿದ್ದಾರೆ.

ಚುನಾವಣೆಗೆ ಇನ್ನು ಮೂರ್ನಾಲ್ಕು ತಿಂಗಳು ಇರುವ ವೇಳೆಯಲ್ಲಿ ಕೋಮು ಗಲಭೆ ವೇಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪರೇಶ್ ಮೇಸ್ತ ಪ್ರಕರಣ ಇಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿದ್ದರು. ಪ್ರತಿಭಟನೆ ವೇಳೆ ಗಲಭೆಗಳಾಗಿ ಹಲವು ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ಸಹ ಅಂದು ದಾಖಲಾಗಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಬಿಜೆಪಿಗೆ ಒಳ್ಳೆಯ ಫಲಿತಾಂಶ ತಂದು ಒಡ್ಡಿದ್ದು, ಕಮಲ ಅರಳಲು ಸಹಾಯ ಮಾಡಿತ್ತು. ಇದೀಗ ಸಿಬಿಐ ಮೇಸ್ತಾ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದ್ದು, ಕೊಲೆಯಲ್ಲ ಅಪಘಾತ ಎಂದು ಹೇಳಿದೆ. ಆದರೆ, ಮೇಸ್ತಾನ ಕೊಲೆ ಆಗಿದೆ ಎಂದು ನಂಬಿ ಗಲಭೆಗಿಳಿದವರು ಅತಂತ್ರರಾಗಿದ್ದಾರೆ.
ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಅಧಿಕಾರ ಮುಗಿಸುವ ಕೊನೆಯ ಹಂತದಲ್ಲಿದ್ದರೂ, ದಾಖಲಾದ ಪ್ರಕರಣಗಳು ಇತ್ಯರ್ಥ ಆಗದೆ ಇರುವುದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮನ್ನ ರಾಜಕೀಯವಾಗಿ ಬಳಸಿಕೊಂಡು ಬೀದಿಗೆ ದಬ್ಬಿದ್ದಾರೆ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. .

2017ರಲ್ಲಿ ಸುಮಾರು 95 ಜನರ ಮೇಲೆ ಗಲಭೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಶಾಸಕ ದಿನಕರ ಶೆಟ್ಟಿ ಸಹ ಇದ್ದಿದ್ದರಿಂದ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸರ್ಕಾರ ಪ್ರಕರಣ ಕೈ ಬಿಟ್ಟಿದ್ದೇವೆ ಎಂದರೂ ಸಹ 95 ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣ ಕೈ ಬಿಡದ ಹಿನ್ನಲೆಯಲ್ಲಿ ಇಂದಿಗೂ ಬೆಂಗಳೂರಿಗೆ ನ್ಯಾಯಾಲಯಕ್ಕೆ ಅಲೆದಾಡುವ ಅನಿವಾರ್ಯತೆ ಹಿಂದೂ ಕಾರ್ಯಕರ್ತರಿಗೆ ಇದೆ.
ಶಾಸಕರ ಮೇಲೆ ಅಸಮಾಧಾನ ಹೊಂದಿರುವ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಪಾತ್ರವೂ ಇದರಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ದಿನಕರ್ ಶೆಟ್ಟಿ ವಿರುದ್ಧವಾಗಿ ಟಿಕೆಟ್ ಆಕಾಂಕ್ಷಿ ಹೊಂದಿರುವ ಸ್ಥಳೀಯ ಬಿಜೆಪಿ ಫುಢಾರಿಯೊಬ್ಬರು ಚುನಾವಣೆಗೆ ಕೆಲವು ಸಮಯ ಬಾಕಿ ಇರುವಾಗಲೇ ಸಂತ್ರಸ್ತ ಕಾರ್ಯಕರ್ತರನ್ನು ಮುಂದೆ ಬಿಟ್ಟಿದ್ದಾರೆ. ಆ ಮೂಲಕ ದಿನಕರ್ ಶೆಟ್ಟಿಯ ಪ್ರಭಾವ ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಸಂತ್ರಸ್ತರಾಗಿರುವ ಕಾರ್ಯಕರ್ತರು ಮತ್ತೊಮ್ಮೆ ರಾಜಕೀಯದಾಟಕ್ಕೆ ಬಳಕೆ ಆಗುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಅದಾಗ್ಯೂ, ದಿನಕರ್ ಶೆಟ್ಟಿ ವಿರುದ್ಧ ಹಿಂಬದಿಯಿಂದ ಕತ್ತಿ ಮಸೆಯುವ ಬಿಜೆಪಿ ಮುಖಂಡರು ಯಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ.