ಬೆಳಗಾವಿ: ರಾಜ್ಯ, ದೇಶದಲ್ಲಿ ಆಗುತ್ತಿರುವ ಅನಾಹುತಗಳಿಗೆ ನ್ಯಾಯ ಓದಗಿಸಲು ಪಂಚರತ್ನ ಯೋಜನೆ ಜಾರಿಗೆ ತರಲು ಹೊರಟಿದ್ದೇನೆ. ನನಗೆ ಅಧಿವೇಶನಕ್ಕಿಂತ ಪಂಚರತ್ನ ಯಾತ್ರೆಯೆ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಮೂರು ದಿನಗಳಿಂದ ಏನಾಗುತ್ತಿದೆ ಎಂಬುದು ಗೊತ್ತಿದೆ. ಅಧಿವೇಶನದಲ್ಲಿ ನಾಡಿನ ಸಮಸ್ಯೆ ಬಗ್ಗೆ ಸಕಾರಾತ್ಮಕ ಚರ್ಚೆಯಾಗಿಲ್ಲ. ಹೀಗಾಗಿ ನನಗೆ ಅಧಿವೇಶನಕ್ಕಿಂತ ಪಂಚರತ್ನ ಯಾತ್ರೆಯೇ ಮುಖ್ಯವಾಗಿದ್ದು, ನಾಡಿನಲ್ಲಿ ಪಂಚರತ್ನ ಯೋಜನೆ ಜಾರಿಗೆ ತರಲು ಯಾತ್ರೆ ಮಾಡುತ್ತಿದ್ದೇನೆ. ವಿಧಾನಸಭೆಯಲ್ಲಿ ಕೂತು ಅರ್ಧಗಂಟೆ ಮಾತಾಡಿದರೆ ಸರ್ಕಾರ ಸಮಸ್ಯೆ ಬಗೆಹರಿಸುತ್ತಾ? ಎಂದು ಪ್ರಶ್ನಿಸಿದ ಅವರು, ಅಲ್ಲದೇ ಸರ್ಕಾರ ಮಾಧ್ಯಮಗಳ ಮುಂದೆ ಮಾತನಾಡುವುದು ಬೇರೆ, ಇರುವುದೇ ಬೇರೆ. ಇಷ್ಟು ವರ್ಷ ಮಾತನಾಡಿರುವುದನ್ನ ಸರ್ಕಾರ ಎಷ್ಟು ಜಾರಿಗೆ ತಂದಿದೆ ಎಂದು ಪ್ರಶ್ನಸಿದರು.
ಕೊರೊನಾ ರೂಪಾಂತರ ತಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಮುಂಜಾಗೃತ ಕ್ರಮ ತೆಗೆದುಕೊಳ್ಳುವುದು ಸೂಕ್ತ. ನಾನು ಈ ಬಗ್ಗೆ ಸರ್ಕಾರಕ್ಕೆ ಸಹಕಾರ ಕೊಡಲು ತಯಾರಿದ್ದೇನೆ. ಈಗ ಚೀನಾದಲ್ಲಿ ಕೊರೊನಾ ಹರಡುತ್ತಿರುವ ವಿಚಾರವನ್ನ ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುವುದನ್ನ ಒಪ್ಪಿಕೊಳ್ಳುತ್ತೇನೆ. ಆದರೆ ನನಗಿರುವ ಮಾಹಿತಿ ಪ್ರಕಾರ, ಪಂಚರತ್ನ ರಥಯಾತ್ರೆಯಲ್ಲಿ ಜನತೆಯ ಅಲೆಯನ್ನ ನೋಡಿ ಕೇಶವ ಕೃಪದಲ್ಲಿ ಚರ್ಚೆಯಾಗುತ್ತಿದೆ. ಹೀಗಾಗಿಯೇ ಕೊರೊನಾ ಎಂಬ ಭೂತ ಬಿಡುತ್ತಿರುದ್ದಾರೆ ಎನ್ನಲಾಗಿದೆ.
ಅಲ್ಲದೇ ಪ್ರಧಾನ ಮಂತ್ರಿಗಳ ಗಮನಕ್ಕೆ ತಂದು ಮತ್ತೆ ಇದಕ್ಕೆ ನಿರ್ಬಂಧ ಏರಲು ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಆದರೆ ಕೊರೊನಾ ವಿಚಾರವಾಗಿ ನಾನು ಲಘುವಾಗಿ ಮಾತನಾಡುವುದಿಲ್ಲ. ಯಾವುದೇ ಸಾಂಕ್ರಾಮಿಕ ರೋಗ ಬಂದಾಗ ಸರ್ಕಾರ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕು. ಅದಕ್ಕೆ ನನ್ನ ಸಹಕಾರ ಇದೆ. ಆದರೆ ಪಂಚರತ್ನ ಯಾತ್ರೆಯನ್ನ ಹೇಗೆ ನಿಲ್ಲಿಸಬಹುದು ಎಂಬ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ನನಗಿದೆ ಎಂದರು.