“ಜಮ್ಮು ಕಾಶ್ಮೀರಕ್ಕೆ ಮೊದಲು ರಾಜ್ಯದ ಸ್ಥಾನಮಾನ ನೀಡಿ, ಆ ನಂತರ ಚುನಾವಣೆ ಪ್ರಕ್ರಿಯೆಗಳನ್ನು ಆರಂಭಿಸಿ” ಎಂದು ಪ್ರಧಾನಿ ನಡೆಸಿದ ಜಮ್ಮು- ಕಾಶ್ಮೀರ ನಾಯಕರ ಸಮಾಲೋಚನೆಯಲ್ಲಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಝಾದ್ ಅಭಿಪ್ರಾಯಪಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಹಾಗೂ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಎರಡು ವರ್ಷಗಳ ನಂತರ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಜಮ್ಮು ಮತ್ತು ಕಾಶ್ಮೀರದ ಸರ್ವಪಕ್ಷ ನಾಯಕರೊಂದಿಗೆ ಸಮಾಲೋಚನೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ “ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪುನರ್ಜೀವನ ಗೊಳಿಸಲು ಹಾಗೂ ಗಡಿ ವಿವಾದದ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರಕಾರ ಬದ್ಧವಾಗಿದೆ” ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

ಸಮಾಲೋಚನೆಯಲ್ಲಿ ಉಪಸ್ಥಿತರಿದ್ದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ “ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿಕ್ಕಿರುವ ಚುನಾವಣೆ ಮತ್ತು ರಾಜ್ಯತ್ವದ ಬಗ್ಗೆ ನೀಡಿದ ಭರವಸೆಗಳಿಗೆ ಸರಕಾರವು ಬದ್ಧವಾಗಿದೆ. ರಾಜಕೀಯ ಕೈದಿಗಳ ಬಂಧನದ ಕುರಿತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದಲ್ಲಿ ವಿಶೇಷ ಪರಿಶೀಲನೆ ನಡೆಸಲಾಗುವುದು” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ ವಿವಿಧ ಪಕ್ಷದ ನಾಯಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಮೂಲಕ ಚರ್ಚೆಯಲ್ಲಿ ಮುಕ್ತವಾಗಿ ಪಾಲ್ಗೊಂಡರು. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಮಾತನಾಡಿ “ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಸತ್ತಾತ್ಮಕ ವಿಧಾನದ ಮೂಲಕ ಚುನಾಯಿತ ಸರಕಾರವನ್ನು ಶೀಘ್ರವಾಗಿ ಪುನಸ್ಥಾಪಿಸಲು ಕೇಂದ್ರ ಸರಕಾರವು ಉತ್ಸುಕವಾಗಿದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ “ 370 ವಿಧಿಯನ್ನು ಕಾಶ್ಮೀರದಲ್ಲಿ ಪುನಃ ಸ್ಥಾಪಿಸುವ ಮೂಲಕ ಕಾಶ್ಮೀರ ಜನರ ಸಮಸ್ಯೆಗೆ ಕೇಂದ್ರ ಸರಕಾರವು ನೆರವಾಗಬೇಕು” ಎಂದು ಇನ್ನೋರ್ವ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ ಸರಕಾರವನ್ನು ಆಗ್ರಹಿಸಿದ್ದಾರೆ.
ಅತೀ ಶೀಘ್ರದಲ್ಲಿ ವಿಧಾನಸಭಾ ಚುನಾವಣೆ, ಅಧಿಕೃತ ರಾಜ್ಯತ್ವ, ಸ್ಥಳೀಯರಿಗೆ ಸರಕಾರಿ ಉದ್ಯೋಗ, ಆಸ್ತಿ ಮತ್ತು ನಿವಾಸಗಳ ಬಗ್ಗೆ ಖಾತರಿ, ಕಾಶ್ಮೀರಿ ಪಂಡಿತರ ಪುನರ್ವಸತಿ, ರಾಜಕೀಯ ಕೈದಿಗಳ ಬಿಡುಗಡೆ ಎಂಬ ಐದು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ನಮ್ಮ ಪಕ್ಷ ಸರಕಾರದೊಂದಿಗೆ ಆಶಿಸುತ್ತಿದೆ” ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಗುಲಾಂ ನಬಿ ಆಝಾದ್ ಅಭಿಪ್ರಾಯಪಟ್ಟಿದ್ದಾರೆ.

ಮೂರೂವರೆ ಗಂಟೆಗಳ ಕಾಲ ಪ್ರಧಾನ ಮಂತ್ರಿಯವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ , ಒಮರ್ ಅಬ್ದುಲ್ಲಾ (ನ್ಯಾಶನಲ್ ಕಾನ್ಫರೆನ್ಸ್ ) ಗುಲಾಂ ನಬಿ ಆಝಾದ್ (ಕಾಂಗ್ರೆಸ್) ಮೆಹಬೂಬ ಮುಪ್ತಿ ( ಪಿಡಿಪಿ) ಹಾಗೂ ಮಾಜಿ ಉಪಮುಖ್ಯಮಂತ್ರಿಗಳನ್ನೊಳಗೊಂಡ 14 ನಾಯಕರು ಭಾಗವಹಿಸಿದ್ದಾರೆ.
ಈ ಮೊದಲು ಪ್ರಧಾನಿಯವರು ಇಂತಹ ಸಮಾಲೋಚನೆ ನಡೆಸಬೇಕೆಂದಿದ್ದರು . ಆದರೆ ಏಕಾಏಕಿ ಕೋವಿಡ್ 19 ನ ತ್ವರಿತಗತಿಯ ಕಾರಣದಿಂದ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಕಾಶ್ಮೀರವನ್ನು ʼದಿಲ್ ಕಿ ದೂರಿʼ ಮತ್ತು ʼದಿಲ್ಲೀ ಕಿ ದೂರಿʼ ಈ ಎರಡರಿಂದಲೂ ನಿರ್ಮೂಲನೆ ಮಾಡಲು ಪ್ರಧಾನಿ ಬಯಸಿದ್ದಾರೆ ಎಂದು ಪ್ರಧಾನ ಮಂತ್ರಿ ಮೂಲಗಳು ತಿಳಿಸಿವೆ