ಭಾರತದಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜರ್’ಗಳು ಇಲ್ಲವೇ ಇಲ್ಲ ಎಂದು ಸರ್ಕಾರ ಹಿಂದಿನಿಂದಲೂ ಹೇಳುತ್ತಲೇ ಬಂದಿದೆ. ಆದರೆ, ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ 2017ರಿಂದ 2021ರವರೆಗೆ ಒಳಚರಂಡಿ ಮತ್ತು ಮಲಗುಂಡಿ ಸ್ವಚ್ಛತೆ ವೇಳೆ 330 ಜನರು ಸಾವನ್ನಪ್ಪಿದ್ದಾರೆ.
ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಎಂದರೆ, ಮಲಗುಂಡಿಗಳಲ್ಲಿ ತುಂಬಿಕೊಂಡಿರುವ ಮಲವನ್ನು ಕೈಗಳಿಂದ ಬಾಚುವ ಕೆಲಸ. ಮ್ಯಾನ್ಯುವಲ್ ಸ್ಕ್ಯಾವೆಂಜರ್ ಕಾಯ್ದೆ 2013ರ ಅನ್ವಯ ಭಾರತದಲ್ಲಿ ಇದು ನಿಷಿದ್ಧ. ಆದರೆ, ಆಭರತದ ಹಲವು ಭಾಗಗಳಲ್ಲಿ ಇದು ಇನ್ನೂ ಜ್ವಲಂತವಾಗಿರುವ ಸಮಸ್ಯೆ.
ಮ್ಯಾನ್ಯುವಲ್ ಸ್ಕ್ಯಾವೆಂಜರ್’ಗಳ ಕುರಿತಾದ ಮಾಹಿತಿಯನ್ನು ಲೋಕಸಭೆಗೆ ನೀಡಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ರಾಮದಾಸ್ ಅಠಾವಳೆ, ಮ್ಯಾನ್ಯುವಲ್ ಸ್ಕ್ಯಾವೆಂಜರ್’ಗಳಾಗಿ ಯಾರನ್ನೂ ನೇಮಿಸಿಕೊಳ್ಳುತ್ತಿಲ್ಲ. ಡಿಸೆಂಬರ್ 6, 2013ರಿಂದ ಈ ಪದ್ಧತಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಮ್ಯಾನ್ಯುವಲ್ ಸ್ಕ್ಯಾವೆಂಜರ್’ಗಳನ್ನು ನಿಯುಕ್ತಿಗೊಳಿಸಲು ಅವಕಾಶವಿಲ್ಲ ಎಂಧು ಹೇಳಿದ್ದಾರೆ.
ಆದರೆ, ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 58,098 ಮ್ಯಾನ್ಯುವಲ್ ಸ್ಕ್ಯಾವೆಂಜರ್’ಗಳನ್ನು ಗುರುತಿಸಲಾಗಿದೆ. ಜುಲೈ 19ರಂದು ಲೋಕಸಭೆಗೆ ನೀಡಿದ ಮಾಹಿತಿಯಲ್ಲಿ 2017ರಿಂದ 347 ಸಫಾಯಿ ಕರ್ಮಚಾರಿಗಳು ಸಾವನಪ್ಪಿರುವುದಾಗಿ ಹೇಳಿದ್ದಾರೆ.
ಸಾವನ್ನಪ್ಪಿರುವ ಮ್ಯಾನ್ಯುವಲ್ ಸ್ಕ್ಯಾವೆಂಜರ್’ಗಳಲ್ಲಿ ಬಹುತೇಕರು ದಿನಗೂಲಿ ನೌಕರರು.
ಈ ಕುರಿತಾಗಿ ಈ ಹಿಂದೆ ಮಾತನಾಡಿದ್ದ ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗದ ಹಿಂದಿನ ಅಧ್ಯಕ್ಷ ಕೆ ಶಿವಣ್ಣ ಕೋಟೆ, ಸಾವನ್ನಪ್ಪಿರುವವರನ್ನು ತಾಂತ್ರಿಕವಾಗಿ ಮ್ಯಾನ್ಯುವಲ್ ಸ್ಕ್ಯಾವೆಂಜರ್’ಗಳೆಂದು ಕರೆಯಲಾಗುವುದಿಲ್ಲ. ಮ್ಯಾನ್ಯುವಲ್ ಸ್ಕ್ಯಾವೆಂಜರ್, ಸಫಾಯಿ ಕರ್ಮಚಾರಿ ಅಥವಾ ಪೌರ ಕಾರ್ಮಿಕರನ್ನು ಸ್ಥಳೀಯಾಡಳಿತ ಸಂಸ್ಥೆಗಳು ನೇಮಿಸುತ್ತವೆ. ಅವರನ್ನು ಮ್ಯಾನ್ಯುವಲ್ ಸ್ಕ್ಯಾವೆಂಜರ್’ಗಳೆಂದು ನೇರವಾಗಿ ನೇಮಕ ಮಾಡಿಕೊಳ್ಳುವುದಿಲ್ಲ, ಎಂದು ಹೇಳಿದ್ದರು.
ಇದೇ ಮಾತನ್ನು ಗುರುವಾರ ಲೋಕಸಭೆಯಲ್ಲಿ ಹೇಳಿರುವ ಸಚಿವ ರಾಮದಾಸ್ ಅಠಾವಳೆ, ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್’ನಿಂದ ಯಾರೂ ಸಾವನ್ನಪ್ಪಿಲ್ಲ. ಆದರೆ, ಮಲಗುಂಡಿ ಮತ್ತು ಒಳಚರಂಡಿಗೆ ಇಳಿದು ಸ್ವಚ್ಛತಾ ಕಾರ್ಯ ಕೈಗೊಳ್ಳುವಾಗ 330 ಜನರು ಸತ್ತಿದ್ದಾರೆ ಎಂದು ಉತ್ತರ ನೀಡಿದ್ದಾರೆ.
ಈ 330 ಪ್ರಕರಣಗಳಲ್ಲಿ 47 ಉತ್ತರ ಪ್ರದೇಶ, 43 ತಮಿಳುನಾಡು, 42 ದೆಹಲಿ, 36 ಹರಿಯಾಣ ಮತ್ತು 30 ಮಹಾರಾಷ್ಟ್ರದಲ್ಲಿ ದಾಖಲಾಗಿವೆ.