ಏಪ್ರಿಲ್ 14 ರಂದು, 131 ನೇ ಅಂಬೇಡ್ಕರ್ ಜಯಂತಿಯ ಅಂಗವಾಗಿ, ಒಡಿಶಾದ ಬರ್ಗರ್ ಪ್ರದೇಶದಾದ್ಯಂತ ಅಂಬೇಡ್ಕರ್ ವಾದಿಗಳು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಭೀಮ್ ಆರ್ಮಿ ಆಯೋಜಿಸಿದ್ದ ಈ ರ್ಯಾಲಿಯಲ್ಲಿ ಬಹುತೇಕ ಸಣ್ಣ ಪ್ರಮಾಣದ ಕಾರ್ಮಿಕರು ಮತ್ತು ರೈತರು ಸೇರಿದ್ದರು. ಆದರೆ, ಅಂಬೇಡ್ಕರ್ ಜಯಂತಿ ಆಚರಣೆಯನ್ನು ಸಹಿಸದ ಬಜರಂಗದಳದ ಕಾರ್ಯಕರ್ತರು ಮೆರವಣಿಗೆಯ ಮೇಲೆ ದಾಳಿ ಮಾಡಿದ್ದು, ಇದು ಹಿಂಸಾಚಾರ ಮತ್ತು ಗಾಯಗಳಿಗೆ ಕಾರಣವಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ನಾಲ್ವರು ಗಾಯಗೊಂಡಿದ್ದು, 25 ವಾಹನಗಳಿಗೆ ಹಾನಿಯಾಗಿದೆ.
ಈ ದಾಳಿಯಲ್ಲಿ ಭಾಗವಹಿಸಿದ ಬಜರಂಗದಳದ ಕಾರ್ಯಕರ್ತರನ್ನು ಗುರುತಿಸಲಾಗಿದ್ದರೂ ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ದಿ.ವೈರ್ ವರದಿ ಮಾಡಿದೆ. ಅಖಿಲ ಭಾರತ ವಕೀಲರ ಸಂಘದ ಪರವಾಗಿ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿರುವ ವಕೀಲ ಮಧುಸೂದನ್, “ರ್ಯಾಲಿಗೆ ಅಡ್ಡಿಪಡಿಸಿದ ಕಾರ್ಯಕರ್ತರನ್ನು ಸ್ಪಷ್ಟವಾಗಿ ಗುರುತಿಸಿದ ಹೊರತಾಗಿಯೂ ಪ್ರಕರಣದಲ್ಲಿ ಇದುವರೆಗೆ ಯಾವುದೇ ಬಂಧನವಾಗಿಲ್ಲ. ಇದಲ್ಲದೆ, ಅಂಬೇಡ್ಕರ್ ವಾದಿಗಳು ರಾಜಿ ಮಾಡಿಕೊಳ್ಳಬೇಕು ಮತ್ತು ಪರಿಹಾರವನ್ನು ಸ್ವೀಕರಿಸಬೇಕು ಎಂದು ಪೊಲೀಸರು ಹೇಳುತ್ತಿದ್ದಾರೆ; ಆದಾಗ್ಯೂ, ನಾವು ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮುಂದುವರಿಸುತ್ತಿದ್ದೇವೆ” ಎಂದು ದಿ ವೈರ್ ಗೆ ತಿಳಿಸಿದ್ದಾರೆ.
ಏಪ್ರಿಲ್ 14 ರಂದು ಭೀಮ್ ಆರ್ಮಿ ಮತ್ತು ಇತರ ಅಂಬೇಡ್ಕರ್ ಗುಂಪುಗಳು ಆಯೋಜಿಸಿದ್ದ ಬೈಕ್ ರ್ಯಾಲಿಗೆ ಭಜರಂಗ ದಳದ ಸದಸ್ಯರು ಅಡ್ಡಿಪಡಿಸಿದರು ಎಂದು ಆರೋಪಿಸಲಾಗಿದೆ. ಮಧುಸೂದನ್ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಬಜರಂಗ ದಳದ ಸುಮಾರು 45 ಸದಸ್ಯರು ದೊಣ್ಣೆ, ಕತ್ತಿ ಝಳಪಿಸುತ್ತಾ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಹಲ್ಲೆ ನಡೆಸಿದರು. ಬಾಬಾಸಾಹೇಬರ ಪೋಸ್ಟರ್ಗಳನ್ನು ಹರಿದು, ಅದರ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಪಮಾನಿಸಿದ್ದಾರೆ ಎಂದು ಮಧುಸೂದನ್ ಆರೋಪಿಸಿದ್ದಾರೆ.
ಲಭ್ಯವಾಗಿರುವ ಘಟನೆಯ ವೀಡಿಯೋಗಳಲ್ಲಿ, ಕೇಸರಿ ಶಾಲುಗಳನ್ನು ಧರಿಸಿರುವ ವ್ಯಕ್ತಿಗಳು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು, ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಬೈಕ್ಗಳ ಮೇಲೆ ದಾಳಿ ಮಾಡುವುದನ್ನು ಕಾಣಬಹುದು. ವಿಧ್ವಂಸಕ ಕೃತ್ಯಗಳ ದೃಶ್ಯಗಳು ಸಹ ಬೆಳಕಿಗೆ ಬಂದಿವೆ.
ಸದ್ಯ ಈ ಪ್ರಕರಣದಲ್ಲಿ ಎರಡು ಎಫ್ಐಆರ್ಗಳು ದಾಖಲಾಗಿವೆ. ಒಂದು ರ್ಯಾಲಿ ನಡೆಸಿದವರ ವಿರುದ್ಧ ಮತ್ತು ಇನ್ನೊಂದು ಬಜರಂಗದಳದ ಸದಸ್ಯರ ವಿರುದ್ಧ. ದಿ ವೈರ್ಗೆ ಲಭ್ಯವಾದ ಪತ್ರದಲ್ಲಿ, ಎಫ್ಐಆರ್ನ ಕುರಿತು ವಿವರಿಸುತ್ತಾ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಜದಾಬ್ ಬ್ಯಾಗ್ ಬರೆಯುತ್ತಾರೆ, “ಭೀಮ್ ಆರ್ಮಿಯ ರ್ಯಾಲಿಯು ಗೋಡ್ಭಾಗ ಚೌಕ್ ಮೂಲಕ ಹಾದು ಹೋಗುತ್ತಿದ್ದಾಗ 40-50 ಬಜರಂಗ ದಳದ ಸದಸ್ಯರು ಕತ್ತಿಗಳು ಮತ್ತು ಕೋಲುಗಳೊಂದಿಗೆ ಕಾನೂನುಬಾಹಿರವಾಗಿ ಸಭೆ ಸೇರಿರುವುದನ್ನು ನಾವು ಗಮನಿಸಿದ್ದೇವೆ. ಇದರ ನೇತೃತ್ವವನ್ನು ಪ್ರಶಾಂತ ಭೋಯ್ ವಹಿಸಿದ್ದರು. ಅವರು ದಳದ ಸದಸ್ಯರಾದ ಪಿ. ಶ್ರೀಹರಿ, ಪ್ರೇಮ್ ರಾಜ್ ಛಂದ ಮತ್ತು ಮಾನಸ್ ಬೆಸನ್ ಅವರನ್ನೂ ಹೆಸರಿಸಿದ್ದಾರೆ. ಎಫ್ಐಆರ್ನಲ್ಲಿ ಹೆಸರಿಸಲಾದ ಮೆರವಣಿಗೆಯ ದಲಿತ ಸದಸ್ಯರಲ್ಲಿ ಬಬ್ಲು ಬೇಶ್ರಾ, ಶಂಕರ್ ನಾಗ್, ಟಿಂಕು ಉಗರ್ ಮತ್ತು ಇತರರು ಸೇರಿದ್ದಾರೆ.

ಎರಡೂ ಎಫ್ಐಆರ್ಗಳು ಐಪಿಸಿಯ ಸೆಕ್ಷನ್ 147,148, 341, 294, 336, 427, 353 ಮತ್ತು 149 ಅಡಿಯಲ್ಲಿ ದಾಖಲಿಸಲಾಗಿದೆ. ಇದು ಸಾರ್ವಜನಿಕ ಸೇವಕರ ಕೆಲಸಕ್ಕೆ ಅಡ್ಡಿಪಡಿಸುವ ಗಲಭೆ, ಹಾನಿ ಮತ್ತು ಕಾನೂನುಬಾಹಿರ ಸಭೆ ಮಾಡುವ ಉದ್ದೇಶವನ್ನು ಹೊಂದಿದೆ. ಬಜರಂಗ ದಳದ ಸದಸ್ಯರ ವಿರುದ್ಧದ ಎಫ್ಐಆರ್ನಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಗ್ಗೆ ಸೆಕ್ಷನ್ 25 ಅನ್ನು ಸಹ ಉಲ್ಲೇಖಿಸಲಾಗಿದೆ.
ಬೈಕ್ ರ್ಯಾಲಿಯಲ್ಲಿ ಗಾಯಗೊಂಡಿದ್ದ ಸದಸ್ಯರಲ್ಲಿ ಒಬ್ಬರಾದ ಸಂಜಯ್ ಕುಮಾರ್, “ಅಂಬೇಡ್ಕರ ವಾದಿಗಳ ರ್ಯಾಲಿ ನಂತರ ಭಜರಂಗದಳ ರ್ಯಾಲಿ ನಡೆಯಲಿದೆ ಎಂದು ರ್ಯಾಲಿಗೆ ಒಂದು ದಿನ ಮುಂಚಿತವಾಗಿ ಪೊಲೀಸರು ಹೇಳಿದ್ದರು. ಆದರೆ, ಬಜರಂಗದಳದ ಸದಸ್ಯರು ರ್ಯಾಲಿಗೆ ಅಡ್ಡಿಪಡಿಸಿದರು. ದಲಿತರನ್ನು ಗುರಿಯಾಗಿಸಿ ಅವರ ಬೈಕ್ಗಳನ್ನು ಒಡೆದು ಹಾಕಲಾಯಿತು” ಎಂದು ಹೇಳಿದ್ದಾರೆ.
ಬಜರಂಗದಳದ ಸದಸ್ಯರು ದಾಳಿ ನಡೆಸಲು ಮುಂದಾಗಿರುವುದು ಪೊಲೀಸರಿಗೆ ಗೊತ್ತಿತ್ತು ಎಂದು ಅಂಬೇಡ್ಕರ್ವಾದಿ ಗುಂಪಿನ ಸದಸ್ಯರು ಆರೋಪಿಸಿದ್ದಾರೆ. ಜನಸಮೂಹ ಚದುರಿದಾಗ, ಹತ್ತು-ಹನ್ನೆರಡು ಜನರ ಮೇಲೆ ಚಾಕುಗಳು ಮತ್ತು ಖಾಲಿ ಗಾಜಿನ ಬಾಟಲಿಗಳಿಂದ ದಾಳಿ ಮಾಡಲಾಯಿತು ಎಂದು ಆರೋಪಿಸಿದ್ದಾರೆ.
ದಿ ವೈರ್ ಜೊತೆ ಮಾತನಾಡಿದ ಬಬ್ಲು ಬೇಶರ, “ಇದು ಪೂರ್ವ ಯೋಜಿತ ದಾಳಿ. ನಮಗೆ ಯಾವುದೇ ನ್ಯಾಯ ನೀಡಿಲ್ಲ, ಬದಲಾಗಿ ಇಂತಹ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಪರಿಹಾರ ನೀಡುವುದಾಗಿ ಭರವಸೆ ನೀಡಿದರೂ ಪೊಲೀಸರು ಈಗ ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ. ಅವರು ಚಳುವಳಿಯನ್ನು ಹತ್ತಿಕ್ಕಲು ಮತ್ತು ನಮ್ಮ ಧ್ವನಿಯನ್ನು ಮೌನಗೊಳಿಸಲು ಬಯಸುತ್ತಾರೆ.” ಎಂದು ಹೇಳಿದ್ದಾರೆ.





