
ಚನ್ನಪಟ್ಟಣ/ರಾಮನಗರ:ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಭಾನುವಾರ ಬಿರುಸಿನ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರು, ಮುಖಂಡರನ್ನು ಭೇಟಿಯಾದ ನಿಖಿಲ್ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮುಖಂಡರ ಮನವೊಲಿಸಿದರು. ಮಾಕಳಿ ಗ್ರಾಮದಲ್ಲಿ ಮುಖಂಡರ ಮನವೊಲಿಕೆ ಮಾಡುವಲ್ಲಿ ಅವರು ಯಶಸ್ವಿಯಾದರು. ಬಳಿಕ ಎಲ್ಲಾ ಕಾರ್ಯಕರ್ತರು, ಮುಖಂಡರು ನಿಖಿಲ್ ಅವರ ಜತೆ ಪ್ರಚಾರದಲ್ಲಿ ಹೆಜ್ಜೆ ಹಾಕಿದರು.

ಬೆಳಗ್ಗೆಯಿಂದಲೇ ಪ್ರಚಾರದಲ್ಲಿ ತೊಡಗಿದ ಅವರು; ಚನ್ನಪಟ್ಟಣದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಮನೆಗಳಿಗೆ ಭೇಟಿ ನೀಡಿದ ನಿಖಿಲ್ ಅವರು, ಮೈತ್ರಿಕೂಟವನ್ನು ಗೆಲ್ಲಿಸುವ ನಿಟ್ಟಿನಲ್ಲಿ ನಡೆಸಿದರು. ಬಿಜೆಪಿ ನಗರಸಭೆ ಸದಸ್ಯ ರವೀಶ್ ಅವರ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸವಿದ ನಿಖಿಲ್ ಕುಮಾರಸ್ವಾಮಿ ಅವರು, ವಿವಿಧ ಅಂಶಗಳ ಬಗ್ಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಅವರು; ಚನ್ನಪಟ್ಟಣದಲ್ಲಿ ನನ್ನ ಸ್ಪರ್ಧೆ ಅನಿರೀಕ್ಷಿತ. ಕ್ಷೇತ್ರದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧಿಸಿದ್ದೇನೆ. ನಾಮಪತ್ರ ಸಲ್ಲಿಸಿದ ನಂತರ ಇದೇ ಪ್ರಥಮ ಬಾರಿಗೆ ಇಂದು ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಜೊತೆ ಮತ ಪ್ರಚಾರ ಮಾಡುತ್ತಿದ್ದೇನೆ ಎಂದು ಮಾಕಳಿ ಗ್ರಾಮದಲ್ಲಿ ಹೇಳಿದರು.
ಕ್ಷೇತ್ರದ ಮೂರು ಪಂಚಾಯಿತಿಗಳ 16ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ. ಕುಮಾರಸ್ವಾಮಿಯವರು ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ದೇವೇಗೌಡರು ಇಗ್ಗಲೂರು ಜಲಾಶಯ ನಿರ್ಮಾಣ ಮಾಡಿದ್ದಾರೆ. ತಾಲೂಕಿನ ನೀರಾವರಿ ಯೋಜನೆಗೆ ಅವರ ಕೊಡುಗೆ ಶಾಶ್ವತವಾಗಿದೆ. ನೀರಾ ಚಳುವಳಿ ವೇಳೆ ದೇವೇಗೌಡರು ಚನ್ನಪಟ್ಟಣದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡಿದ್ದರು ಎಂದರು ಅವರು.
ಮಂಡ್ಯ ಹಾಗೂ ರಾಮನಗರದಲ್ಲಿ ಈಗಾಗಲೇ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಒಬ್ಬ ಯುವಕನಾಗಿ, ಯುವಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ.ಅದಕ್ಕೆ ಕ್ಷೇತ್ರದ ಜನ ಅವಕಾಶ ಮಾಡಿಕೊಡಿ ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ನನಗೆ ಸೇಡಿನ ರಾಜಕೀಯ, ಜಿದ್ದಾಜಿದ್ದಿನ ರಾಜಕೀಯದಲ್ಲಿ ನಂಬಿಕೆ ಇಲ್ಲ. ಜನತೆಯ ಸೇವೆ ಮಾಡುವ ಒಂದು ಮಾರ್ಗವಾಗಿ ನಾನು ರಾಜಕೀಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನನ್ನನ್ನು ನೀವೆಲ್ಲರೂ ಆಶೀರ್ವಾದ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಶಾಸಕ ಎ.ಮಂಜು, ಮಾಜಿ ಶಾಸಕ ಸುರೇಶ್ ಗೌಡ, ಜೆಡಿಎಸ್ ಪಕ್ಷದ ರಾಮನಗರ ಜಿಲ್ಲಾಧ್ಯಕ್ಷ ಮಾಗಡಿ ಮಂಜುನಾಥ್, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ಜಯಮುತ್ತು, ಬಿಜೆಪಿ ಜಿಲ್ಲಾಧ್ಯಕ್ಷ ಆನಂದ್ ಸ್ವಾಮಿ ಸೇರಿದಂತೆ ಅನೇಕ ನಾಯಕರು ನಿಖಿಲ್ ಅವರ ಜತೆಯಲ್ಲಿ ಇದ್ದರು.