ನವದೆಹಲಿ : ದೇಶಾದ್ಯಂತ ಕೋಟ್ಯಂತರ ಜನರು ಬಳಸುವ ಯುಪಿಐ ಡಿಜಿಟಲ್ ಪಾವತಿ (New UPI rule) ವ್ಯವಸ್ಥೆಯಲ್ಲಿ 2026ರ ಅಕ್ಟೋಬರ್ 15ರಿಂದ ಮಹತ್ವದ ಬದಲಾವಣೆ ಜಾರಿಗೆ ಬರಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯುಪಿಐ ಪಾವತಿಗೆ ಸಾಮಾನ್ಯ ಜನರಿಂದಲೂ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂಬ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ (Central Government) ಸ್ಪಷ್ಟೀಕರಣ ನೀಡಿದೆ.
ಸಾಮಾನ್ಯ ಗ್ರಾಹಕರ ದೈನಂದಿನ ವಹಿವಾಟುಗಳಿಗೆ ಯಾವುದೇ ರೀತಿಯ ನೇರ ಶುಲ್ಕ ಇರುವುದಿಲ್ಲ. ಈ ಹೊಸ ನಿಯಮಗಳು ಕೇವಲ ದೊಡ್ಡ ಮೊತ್ತದ ವ್ಯಾಪಾರ ವಹಿವಾಟುಗಳಿಗೆ ಅನ್ವಯಿಸುವ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಗೆ ಮಾತ್ರ ಸಂಬಂಧಿಸಿವೆ.

ವ್ಯಕ್ತಿಯಿಂದ ವ್ಯಕ್ತಿಗೆ ವರ್ಗಾವಣೆ ಸಂಪೂರ್ಣ ಉಚಿತ
ಸ್ನೇಹಿತರು, ಕುಟುಂಬಸ್ಥರು ಅಥವಾ ಇತರ ವ್ಯಕ್ತಿಗಳಿಗೆ ಯುಪಿಐ ಮೂಲಕ ಹಣ ಕಳುಹಿಸುವ ಪ್ರಕ್ರಿಯೆಯು ಎಂದಿನಂತೆ ಸಂಪೂರ್ಣ ಉಚಿತವಾಗಿರಲಿದೆ. ಇದಕ್ಕೆ ಯಾವುದೇ ಮೊತ್ತದ ಮಿತಿ ಇರುವುದಿಲ್ಲ. ಇದರೊಂದಿಗೆ ವ್ಯಾಪಾರಿಗಳಿಗೆ ಮಾಡುವ ₹2,000 ವರೆಗಿನ ಸಣ್ಣ ಪಾವತಿಗಳಿಗೂ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ. ಸಣ್ಣ ವ್ಯಾಪಾರಿಗಳು ಮತ್ತು ಸಾಮಾನ್ಯ ಗ್ರಾಹಕರ ಹಿತದೃಷ್ಟಿಯಿಂದ ಜಾರಿಯಲ್ಲಿರುವ ‘ಶೂನ್ಯ ಎಂಡಿಆರ್’ ನೀತಿಯು ಮುಂದುವರಿಯಲಿದೆ.
ದೊಡ್ಡ ವ್ಯಾಪಾರ ವಹಿವಾಟುಗಳ ಮೇಲೆ 0.4% ಎಂಡಿಆರ್ ಅನ್ವಯ
ಹೊಸ ನಿಯಮದ ಪ್ರಕಾರ, ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ₹2,000ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿ ಮಾಡಿದಾಗ ಶೇಕಡಾ 0.4 ರಷ್ಟು ಎಂಡಿಆರ್ ವಿಧಿಸಲಾಗುತ್ತದೆ. ಈ ಮೊತ್ತವನ್ನು ಗ್ರಾಹಕರ ಖಾತೆಯಿಂದ ಕಡಿತಗೊಳಿಸುವುದಿಲ್ಲ, ಬದಲಾಗಿ ವ್ಯಾಪಾರಿಗಳ ಪಾವತಿ ವ್ಯವಸ್ಥೆಯೊಳಗೆ ಹೊಂದಾಣಿಕೆ ಮಾಡಲಾಗುತ್ತದೆ. ಇದು ಯಾವುದೇ ತೆರಿಗೆಯಲ್ಲ ಅಥವಾ ಸರ್ಕಾರ ಮತ್ತು ಎನ್‌ಪಿಸಿಐ ಸಂಗ್ರಹಿಸುವ ಮೊತ್ತವೂ ಅಲ್ಲ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ನಿರ್ವಹಿಸುವ ವಿವಿಧ ಪಾಲುದಾರರ ನಡುವೆ ಈ ಹಣ ಹಂಚಿಕೆಯಾಗುತ್ತದೆ.

ಸಾಮಾನ್ಯ ಗ್ರಾಹಕರ ಜೇಬಿಗೆ ಬೀಳಲ್ಲ ಕತ್ತರಿ
ಗ್ರಾಹಕರು ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ₹2,500 ಬಿಲ್ ಪಾವತಿಸಿದರೆ, ಅವರ ಖಾತೆಯಿಂದ ಕೇವಲ ₹2,500 ಮಾತ್ರ ಕಡಿತಗೊಳ್ಳುತ್ತದೆ. ಯಾವುದೇ ಹೆಚ್ಚುವರಿ 0.4% ಶುಲ್ಕವನ್ನು ಗ್ರಾಹಕರು ಭರಿಸಬೇಕಾಗಿಲ್ಲ. ಆದರೆ, ವ್ಯಾಪಾರಿಗಳ ಮೇಲೆ ಬೀಳುವ ಈ ಶುಲ್ಕವು ಮಾರುಕಟ್ಟೆಯಲ್ಲಿ ಪರೋಕ್ಷವಾಗಿ ಬೆಲೆ ಏರಿಕೆಗೆ ಕಾರಣವಾಗಲಿದೆಯೇ ಎಂಬ ಚರ್ಚೆಗಳು ವಾಣಿಜ್ಯ ವಲಯದಲ್ಲಿ ನಡೆಯುತ್ತಿವೆ.
ಸಣ್ಣ ವ್ಯಾಪಾರಿಗಳ ರಕ್ಷಣೆಗೆ ಶೇಕಡಾ 96ರಷ್ಟು ವಹಿವಾಟುಗಳಿಗೆ ವಿನಾಯಿತಿ
ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ, ಈ ಹೊಸ ನಿಯಮದಿಂದ ಬಹುಪಾಲು ವಹಿವಾಟುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದೇಶದಲ್ಲಿ ನಡೆಯುವ ಸುಮಾರು ಶೇಕಡಾ 96ರಷ್ಟು ಯುಪಿಐ ವಹಿವಾಟುಗಳು ಮೊದಲಿನಂತೆಯೇ ಶುಲ್ಕರಹಿತವಾಗಿರಲಿವೆ. ವಿಶೇಷವಾಗಿ ತಿಂಗಳಿಗೆ ₹1 ಲಕ್ಷದವರೆಗೆ ಕ್ಯೂಆರ್ ಕೋಡ್ ಮೂಲಕ ಹಣ ಸ್ವೀಕರಿಸುವ ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಎಂಡಿಆರ್ ಸೌಲಭ್ಯ ಮುಂದುವರಿಯಲಿದ್ದು, ಸಣ್ಣ ಪುಟ್ಟ ಅಂಗಡಿಕಾರರಿಗೆ ಯಾವುದೇ ಹೊರೆಯಾಗದಂತೆ ನೋಡಿಕೊಳ್ಳಲಾಗಿದೆ.
ಬೆಂಗಳೂರು ಜೀವನ ಅಷ್ಟು ದುಬಾರಿನಾ? 26 ವರ್ಷದ ಯುವತಿಯ ತಿಂಗಳ ಖರ್ಚು ಕೇಳಿ ನೆಟ್ಟಿಗರು ಶಾಕ್ | Bengaluru






