ಸ್ಥಳೀಯ ಆಡಳಿತ ತನ್ನ ನೈತಿಕ ಹೊಣೆಗಾರಿಕೆಯನ್ನರಿತು ಕಾರ್ಯನಿರ್ವಹಿಸುವುದು ಅತ್ಯವಶ್ಯ
ನಾ ದಿವಾಕರ
ಇತ್ತೀಚೆಗೆ ನಡೆದ ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಮೈಸೂರಿನ ನಾಗರಿಕರು ಎದುರಿಸುತ್ತಿರುವ “ ಜ್ವಲಂತ ಸಮಸ್ಯೆಗಳ ” ಬಗ್ಗೆ ಬಹಳ ಗಂಭೀರವಾಗಿ ಚರ್ಚೆ ನಡೆಸಿರುವುದು ನಗರದ ಸಮಸ್ತ ನಾಗರಿಕರಿಗೂ ಹೃದಯ ತುಂಬಿ ಬರುವಂತೆ ಮಾಡಿರಬೇಕು !!! ಬಿಸಿಬಿಸಿ ಚರ್ಚೆ, ವಾಗ್ಯುದ್ಧ, ವಾಗ್ದಾಳಿಗಳು ನಡೆದದ್ದು ಎರಡೇ ವಿಷಯದ ಸುತ್ತ. ಮೊದಲನೆಯದು ಕುವೆಂಪುನಗರದ ಉದಯರವಿ ರಸ್ತೆಯ ಮರುನಾಮಕರಣ, ಎರಡನೆಯದು ಪಾಲಿಕೆಯ ಕಟ್ಟಡಕ್ಕೆ ಅಗತ್ಯವಾದ ದಸರಾ ದೀಪಾಲಂಕಾರ. ಈ ಎರಡೂ ವಿಚಾರಗಳು ಚರ್ಚೆಗೆ ಅರ್ಹವೇ ಆದರೂ, ಪಾಲಿಕೆ ಸದಸ್ಯರಲ್ಲಿ ಆತಂಕ ಮೂಡಿಸಬೇಕಾದ ಇತರ ವಿಚಾರಗಳನ್ನು ಮರೆತಿರುವುದು ಅಕ್ಷಮ್ಯ. ಪಾಲಿಕೆ ಕೌನ್ಸಿಲ್ ಸದಸ್ಯರಿಗೆ ತಮ್ಮ ಸುತ್ತಲೂ ನಡೆಯುತ್ತಿರುವ ಅಹಿತಕರ ಘಟನೆಗಳು ಮುಖ್ಯವಾಗಬೇಕೇ ಹೊರತು, ಯಾವುದೇ ಭಾವನಾತ್ಮಕ ವಿಚಾರಗಳಲ್ಲ. ಸಮಾಜದಲ್ಲಿ ಪ್ರಕ್ಷುಬ್ಧತೆ ಉಂಟುಮಾಡುವ ಯಾವುದೇ ಘಟನೆಗಳು ಸ್ಥಳೀಯ ಪ್ರತಿನಿಧಿಗಳಿಗೆ “ ಜ್ವಲಂತ ಸಮಸ್ಯೆ ”ಯಂತೆಯೇ ಕಾಣಬೇಕು. ಇದಕ್ಕೆ ಯಾವುದೇ ಸೈದ್ಧಾಂತಿಕ ಒಳನೋಟಗಳೂ ಬೇಕಿಲ್ಲ. ಇದು ಒಂದು ಚುನಾಯಿತ ಸಂಸ್ಥೆ ಮತ್ತು ಅದರ ಸದಸ್ಯರ ಸಾಂವಿಧಾನಿಕ ಕರ್ತವ್ಯ ಮತ್ತು ನೈತಿಕತೆ.
ಪಾಲಿಕೆಯ ಎಲ್ಲ ಸದಸ್ಯರಿಗೂ ಗಮನಕ್ಕೆ ಬಂದಿರಲೇಬೇಕಾದ ಎರಡು ಆಘಾತಕಾರಿ ಘಟನೆಗಳು ಮೈಸೂರಿನಲ್ಲಿ 20 ದಿನಗಳ ಅಂತರದಲ್ಲಿ ಸಂಭವಿಸಿದೆ. ಕೆಲವು ದಿನಗಳ ಹಿಂದೆ ಮೈಸೂರಿನ ಕುವೆಂಪು ನಗರ ಕಾಂಪ್ಲೆಕ್ಸ್ ಬಳಿ ಪೊಲೀಸರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಯುವಕರ ಕಾರಿನಲ್ಲಿದ್ದ ಎರಡು ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಎಂಬಿಎ ಮತ್ತು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಇಬ್ಬರೊಡನೆ ಇತರ ನಾಲ್ವರು ಸೇರಿ ತಮ್ಮ ಸ್ನೇಹಿತನೊಬ್ಬನ ಮೇಲೆ ದಾಳಿ ನಡೆಸಲು ತಮ್ಮ ವಾಹನದಲ್ಲಿ ಆಯುಧಗಳನ್ನು ಸಾಗಿಸುತ್ತಿದ್ದುದಾಗಿ ಬಂಧಿತ ಆರೋಪಿಗಳು ಹೇಳಿರುವುದಾಗಿ ವರದಿಯಾಗಿದೆ. ಗೆಳೆಯರ ನಡುವೆಯೇ ಉಂಟಾದ ವ್ಯಾಜ್ಯದ ಪರಿಣಾಮ ತಮ್ಮ ಜೊತೆಗಾರನೊಬ್ಬನನ್ನು ಬೆದರಿಸುವ ಉದ್ದೇಶದಿಂದ ಈ ಯುವಕರು ಕಾರಿನಲ್ಲಿ ಆಯುಧಗಳನ್ನು ಸಾಗಿಸುತ್ತಿದ್ದರು ಎಂದು ವರದಿಯಾಗಿದೆ. (ವಾರ್ತಾಭಾರತಿ 18-8-2023)
ಈ ಘಟನೆ ನಡೆದ ಕೆಲ ದಿನಗಳ ನಂತರ 20 ಆಗಸ್ಟ್ 2023ರಂದು ಮೈಸೂರಿನ ವಿದ್ಯಾನಗರದಲ್ಲಿ ನಡೆದ ಭೀಕರ ಘಟನೆಯಲ್ಲಿ ಕೆಲವು ಯುವಕರು ತಮ್ಮ ಸ್ನೇಹಿತನನ್ನು ಅವನ ತಾಯಿಯ ಎದುರಿನಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಹತ್ಯೆಗೊಳಗಾದವನನ್ನೂ ಸೇರಿದಂತೆ ಎಲ್ಲರೂ ನಿಕಟ ಗೆಳೆಯರು ಎಂದು ಹೇಳಲಾಗಿದ್ದು, ಕ್ಷುಲ್ಲಕ ವಿಚಾರದಿಂದ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಮೃತ ಬಾಲಕನ ತಾಯಿ ಜಗಳ ಬಿಡಿಸಲು ಯತ್ನಿಸಿದರೂ ಉಳಿದ ಯುವಕರು ಆ ಹುಡುಗನನ್ನು ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿದ್ದಾರೆ. ಬಂಧಿತ ಯುವಕನೊಬ್ಬನ ತಾಯಿ ಅಘಾತ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅದೇ ಯುವಕನ ತಂದೆ ಈ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಕ್ಕಳು ಮಾಡಿದ ತಪ್ಪಿಗೆ ಪೋಷಕರಿಬ್ಬರೂ ಜೀವ ತೆತ್ತಿರುವುದು ನಮ್ಮ ಸಮಾಜದಲ್ಲಿ ಹರಡುತ್ತಿರುವ ಮಾನಸಿಕ ಕ್ಷೋಭೆಯ ಸಂಕೇತ ಎನಿಸುವುದಿಲ್ಲವೇ ?
ಭೀಕರ ಘಟನೆಗಳ ಸಾಮಾಜಿಕ ಆಯಾಮ
20ರ ಆಸುಪಾಸಿನ ವಯೋಮಾನದವರನ್ನು ಒಳಗೊಂಡಿರುವ ಈ ಎರಡೂ ಘಟನೆಗಳು ಏನನ್ನು ಸೂಚಿಸುತ್ತವೆ ? ಜನನಿಬಿಡ ಪ್ರದೇಶಗಳಾದ, ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಮವರ್ಗಗಳನ್ನೇ ಹೊಂದಿರುವ ಎರಡು ಬಡಾವಣೆಗಳಲ್ಲಿ ಯುವಕರಿಂದ ಈ ರೀತಿಯ ಕೃತ್ಯಗಳು ಕಂಡುಬಂದಿರುವುದು ಮೈಸೂರಿನ ನಾಗರಿಕ ಪ್ರಜ್ಞೆಯನ್ನು ಕದಡಬೇಡವೇ ? ಮೈಸೂರಿನ ಸ್ಥಳೀಯ ಪಾಲಿಕೆ ಸದಸ್ಯರಾಗಲೀ, ಶಾಸಕ ಅಥವಾ ಸಂಸದರಾಗಲೀ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆಯೇ ? ಈ ಬಡಾವಣೆಗಳಲ್ಲಿ ಸಕ್ರಿಯವಾಗಿರುವ ನಾಗರಿಕ ಸಂಘಟನೆಗಳು ಈ ಕುರಿತು ಚಿಂತೆಗೀಡಾಗಿವೆಯೇ ? ಗೆಳೆಯರ ನಡುವಿನ ಜಗಳ ಕದನಗಳು ಹತ್ಯೆಯಲ್ಲಿ ಪರ್ಯವಸಾನ ಹೊಂದುವಷ್ಟು ಮಟ್ಟಿಗೆ ನಮ್ಮ ಸಮಾಜ ಹಾದಿ ತಪ್ಪಿದೆ ಎನಿಸುವುದಿಲ್ಲವೇ ? 20 ವರ್ಷದ ಆಸುಪಾಸಿನ ಯುವಕರು ತಮ್ಮ ಕಾರಿನಲ್ಲಿ ಆಯುಧಗಳನ್ನು ಕೊಂಡೊಯ್ಯುವುದು ಏನನ್ನು ಸೂಚಿಸುತ್ತದೆ ? ಆಕ್ರೋಶಕ್ಕೆ ತುತ್ತಾಗಿ ಗೆಳೆಯನನ್ನೇ ಇರಿದು ಹತ್ಯೆ ಮಾಡುವ ಮನಸ್ಥಿತಿ ಒಂದೆಡೆಯಾದರೆ ಮತ್ತೊಂದೆಡೆ ಈ ಯುವಕರ ಜೇಬಿನಲ್ಲಿ ಚಾಕು ಇಟ್ಟುಕೊಳ್ಳುವ ಮನಸ್ಥಿತಿಯೂ ಇದೆ ಎಂದಾಯಿತಲ್ಲವೇ ?
ಮೈಸೂರಿನಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಹಾಡಹಗಲೇ ಚಿನ್ನಾಭರಣ ಅಂಗಡಿಯ ಮುಂದೆ ಹತ್ಯೆ ನಡೆದಿದ್ದನ್ನು ವಿದ್ಯಾರಣ್ಯಪುರದಲ್ಲಿ ಕಂಡಿದ್ದೇವೆ. ಮಕ್ಕಳು ಪ್ರೌಢಾವಸ್ಥೆಗೆ ಬರುವ ವೇಳೆಗೆ ಅವರಲ್ಲಿ ಅಂತಃಕರಣ, ಸಹಾನುಭೂತಿ, ಪರಾನುಭೂತಿ, ಮಾನವೀಯತೆಯನ್ನು ಬೆಳೆಸಬೇಕಾದ ಸಮಾಜವೊಂದು ತನ್ನ ನಡುವೆ ಇಂತಹ ವಿಕೃತಿಗಳನ್ನು, ಕ್ರೌರ್ಯವನ್ನು, ಪಾಶವೀ ಧೋರಣೆಯನ್ನು ಸಲಹುತ್ತಿದೆಯೇ ಅಥವಾ ಸಲಹಲಾಗಿರುವ ಇಂತಹ ವಿಚ್ಚಿದ್ರಕಾರಕ ಮನಸ್ಥಿತಿಯನ್ನು ಮೌನವಾಗಿ ಸಹಿಸಿಕೊಳ್ಳುತ್ತಿದೆಯೇ ? ಪಕ್ಷ ರಾಜಕಾರಣ, ತತ್ವ, ಸಿದ್ಧಾಂತ ಮತ್ತಿತರ ಅಸ್ಮಿತೆಗಳ ಚೌಕಟ್ಟಿನಿಂದ ಹೊರನಿಂತು ನೋಡಿದಾಗ ಇದು ಇಡೀ ಸಮಾಜವನ್ನು ತಲ್ಲಣಗೊಳಿಸಬೇಕಲ್ಲವೇ ? ಕಾನೂನು ಸುವ್ಯವಸ್ಥೆಯ ಪಾಲಕರನ್ನು, ಆಡಳಿತ ವ್ಯವಸ್ಥೆಯ ಅಧಿಕಾರಿಗಳನ್ನು ಹಾಗೂ ಜನತೆಯ ಯೋಗಕ್ಷೇಮ-ಚಿತ್ತಸ್ವಾಸ್ಥ್ಯವನ್ನು ಕಾಪಾಡುವ ಜವಾಬ್ದಾರಿ ಇರುವ ಜನಪ್ರತಿನಿಧಿಗಳು ಈ ಘಟನೆಗಳು ನಡೆದ ಕೂಡಲೇ ಸ್ಪಂದಿಸುವ ಮೂಲಕ ಸಮಾಜದ ಸದಸ್ಯರಲ್ಲಿ ವಿಶ್ವಾಸ ಮೂಡಿಸಬೇಕಿತ್ತಲ್ಲವೇ ? ಸಾವಿರಾರು ಮೈಲು ದೂರದಲ್ಲಿ ನಡೆಯುವ ಹಿಂಸಾತ್ಮಕ ಘಟನೆಗಳಿಗೆ ಸ್ಪಂದಿಸುವ ಒಂದು ಸಮಾಜ ತನ್ನ ಒಡಲಲ್ಲೇ ಚಿಗುರುತ್ತಿರುವ ಈ ಕ್ರೌರ್ಯದ ಮೊಳಕೆಗಳನ್ನು ಏಕೆ ಗಮನಿಸಲು ಸಾಧ್ಯವಾಗುತ್ತಿಲ್ಲ ? ಒಂದು ಸಮಾಜವಾಗಿ ನಾವು ಈ ರೀತಿಯ ಹಿಂಸಾಕೃತ್ಯಗಳಿಗೆ ಒಗ್ಗಿಹೋಗಿದ್ದೇವೆಯೇ ?
ಬಹುಮುಖ್ಯವಾಗಿ ಯೋಚಿಸಬೇಕಿರುವ ಅಂಶವೆಂದರೆ, ಹದಿಹರೆಯದ ಮಕ್ಕಳ ಬಳಿ ಮಾರಕಾಸ್ತ್ರಗಳು ಹೇಗೆ ಇರಲು ಸಾಧ್ಯ ? ಸಾಧಾರಣ ಚಾಕುವಿನಿಂದ ಇರಿದು ಗೆಳೆಯನನ್ನೇ ಕೊಲೆ ಮಾಡುವ ಕ್ರೂರ ಮನಸ್ಥಿತಿ ಹೇಗೆ ಮೂಡಲು ಸಾಧ್ಯ ? ಅಥವಾ ಇಂತಹ ಘಟನೆಗಳು ನಡೆಯುತ್ತಲೇ ಇದ್ದರೂ ಹಲ್ಲೆಕೋರರ/ಹಲ್ಲೆಗೊಳಗಾದವರ/ಸಂತ್ರಸ್ತರ/ಆರೋಪಿಗಳ ವಿಭಿನ್ನ ಅಸ್ಮಿತೆಗಳು ಮಾತ್ರವೇ ನಮ್ಮ ಪ್ರಜ್ಞೆಯನ್ನು ಕಲಕುತ್ತದೆಯೇ ? ನಿನ್ನೆಯವರೆಗೂ ಸ್ನೇಹದಿಂದವರಲ್ಲಿ ಪರಸ್ಪರ ಕೊಲೆ ಮಾಡುವ ಮನಸ್ಥಿತಿ ಉಂಟಾಗುವುದಕ್ಕೆ ಕಾರಣ ಅವರ ಬಳಿ ಇರಬಹುದಾದ ಆಯುಧಗಳು. ಹೀಗೆ ಯುವ ಸಮೂಹವು ವಿಭಿನ್ನ ಕಾರಣಗಳಿಗಾಗಿ ಆಯುಧಧಾರಿಗಳಾಗುತ್ತಿರುವುದಕ್ಕೆ ಕಾರಣವಾದರೂ ಯಾರು ? ಸಂಘಟನೆಗಳು ಈ ಕುರಿತು ವಸ್ತುನಿಷ್ಠವಾಗಿ ಆಲೋಚನೆ ಮಾಡಿವೆಯೇ ? ಹಲ್ಲೆ, ದಾಳಿ, ಥಳಿತ, ಹತ್ಯೆ, ಅತ್ಯಾಚಾರ ಮತ್ತಿತರ ಕ್ರೂರ ನಡವಳಿಕೆಗಳ ಬಗ್ಗೆ ಹಾಗೂ ಇದರಿಂದ ಸೃಷ್ಟಿಯಾಗುವ ಸಾಮಾಜಿಕ ಕ್ಷೋಭೆಯ ಬಗ್ಗೆ ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಯಾವುದಾದರೂ ಸಂಘ ಸಂಸ್ಥೆಗಳು ನಡೆಸುತ್ತಿವೆಯೇ ? ಅಥವಾ ಪ್ರತಿ ಬಡಾವಣೆಯಲ್ಲೂ ಕಾಣುವ ನಾಗರಿಕ ಸೇವಾ ಸಮಾಜಗಳು ಈ ನಿಟ್ಟಿನಲ್ಲಿ ಯೋಚನೆ ಮಾಡಿವೆಯೇ ?
ಲೌಕಿಕ ಪ್ರಪಂಚಕ್ಕೆ ಪೂರ್ತಿಯಾಗಿ ಕಣ್ತೆರೆಯದ ಯುವ ಸಮೂಹದಲ್ಲಿ ಹಿಂಸೆಯನ್ನು ಪ್ರಚೋದಿಸುವಂತಹ ರಾಜಕೀಯ-ಸೈದ್ಧಾಂತಿಕ ಪ್ರಯತ್ನಗಳು ಎಷ್ಟೇ ನಡೆಯುತ್ತಿದ್ದರೂ, ಈ ಚೌಕಟ್ಟಿನಿಂದ ಹೊರತಾದ ಸಮಾಜವೊಂದು ದೊಡ್ಡ ಸಂಖ್ಯೆಯಲ್ಲಿ ನಮ್ಮ ನಡುವೆ ಇದೆ ಅಲ್ಲವೇ ? ಇಂತಹ ಪ್ರಯತ್ನಗಳ ವಿರುದ್ಧ ಧ್ವನಿ ಎತ್ತುವುದಿರಲಿ, ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ-ಅರಿವು ಮೂಡಿಸುವ ನಿಟ್ಟಿನಲ್ಲಾದರೂ ತಿಳುವಳಿಕೆ ಇರುವವರು ಪ್ರಯತ್ನಿಸಿದ್ದಾರೆಯೇ ? ಒಂದು ಪ್ರಜ್ಞಾವಂತ ಸಮಾಜವಾಗಿ ನಾವು ಯೋಚಿಸಬೇಕಿರುವುದು ಈ ಘಟನೆಗಳು ಅಥವಾ ವ್ಯಕ್ತಿಗಳ ಬಗ್ಗೆ ಅಲ್ಲ, ಈ ಯುವಕರಲ್ಲಿ ಬಿತ್ತಲಾಗಿರುವ ಹಿಂಸಾತ್ಮಕ ಮೌಲ್ಯಗಳ ಬಗ್ಗೆ ಹಾಗೂ ತಣ್ಣನೆಯ ಕ್ರೌರ್ಯದ ಬಗ್ಗೆ. ರಾಜಕೀಯ ಪಕ್ಷ-ಸಂಘಟನೆಗಳಿಗೆ ಈ ಬೆಳವಣಿಗೆಯಲ್ಲಿ ತಮ್ಮ ಲಾಭನಷ್ಟಗಳ ಲೆಕ್ಕಾಚಾರವೇ ಮುಖ್ಯವಾಗುತ್ತದೆ. ಆದರೆ ಒಂದು ನಾಗರಿಕತೆಯುಳ್ಳ ಸಮಾಜ ಹಾಗೆ ಯೋಚಿಸಲಾಗುವುದಿಲ್ಲ. ಸ್ಥಳೀಯ ಮಟ್ಟದಲ್ಲಿ ನಾಗರಿಕರ ಆರೋಗ್ಯ, ಯೋಗಕ್ಷೇಮ ಮತ್ತು ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಪಾಲಿಕೆಯ ಸದಸ್ಯರುಗಳಿಗೆ ಇಷ್ಟಾದರೂ ವ್ಯವಧಾನ ಇರಬೇಕಲ್ಲವೇ ? ಶಾಲಾ ಕಾಲೇಜಿನ ಮಕ್ಕಳಲ್ಲಿ ಬೆಳೆಯುತ್ತಿರುವ ಈ ಅಸಹನೆ ಮುಂದೊಂದು ಇಡೀ ಸಮಾಜವನ್ನೇ ನುಂಗಿಹಾಕುತ್ತದೆ ಎಂಬ ಆತಂಕವಾದರೂ ನಮ್ಮನ್ನು ಕಾಡಬೇಕಿದೆ. ಮುಂದುವರೆಯುತ್ತದೆ,,,,,