ಸಾಂಸ್ಕೃತಿಕ ನಗರಿಯಲ್ಲಿಯೂ ಪ್ರಾರಂಭವಾಗಿದೆ ಬೆಡ್‌ಗಳಿಗಾಗಿ ಹಾಹಾಕಾರ

ರಾಜ್ಯದಲ್ಲಿ ಬೆಂಗಳೂರಿನ ನಂತರ ಮೈಸೂರಿನಲ್ಲಿ ಅತ್ಯಂತ ಹೆಚ್ಚು ಕೊರೋನ ಸೋಂಕು ಪ್ರಕರಣಗಳು ವರದಿ ಆಗುತ್ತಿವೆ. ಜಿಲ್ಲೆಯಲ್ಲಿ ಪ್ರತಿದಿನ 2500 ರಿಂದ 3000 ಸೋಂಕು ಪ್ರಕರಣಗಳು ವರದಿ ಆಗುತ್ತಿವೆ. ಜಿಲ್ಲಾಡಳಿತ ಕೊರೋನ ಸೋಂಕು ಪ್ರಕರಣಗಳಿಗೆ ಕಡಿವಾಣ ಹಾಕಲು ಶತ ಪ್ರಯತ್ನವನ್ನೆ ನಡೆಸುತಿದ್ದರೂ ಸೋಂಕಿತರ ಸಂಕಷ್ಟ ಮಾತ್ರ ಕಡಿಮೆ ಆಗುತ್ತಿಲ್ಲ. ಜಿಲ್ಲೆಯಲ್ಲಿ ಹಾಸಿಗೆಗಳ ಕೊರತೆ ಜತೆಗೇ ಆಕ್ಸಿಜನ್‌ ಕೊರತೆ ತೀವ್ರವಾಗಿದೆ.

ಮೈಸೂರಿನ ಅತ್ಯಂತ ದೊಡ್ಡ ಆಸ್ಪತ್ರೆ ಆಗಿರುವ ಕೆ ಆರ್‌ ಆಸ್ಪತ್ರೆಯಲ್ಲಿ ಬೆಡ್‌ ಗಳು ಸಂಪೂರ್ಣ ಭರ್ತಿಯಾಗಿದ್ದು ಜನರು ಪರದಾಡುವಂತಾಗಿದೆ. ಆಸ್ಪತ್ರೆ ಕೋವಿಡ್ ಕೇರ್‌ನಲ್ಲಿ ಎಲ್ಲಾ 600 ಬೆಡ್ ಗಳು ಭರ್ತಿಯಾಗಿದ್ದು ಈ ಹಿನ್ನೆಲೆಯಲ್ಲಿ ‘ನೋ ಬೆಡ್ಸ್’ ಬೋರ್ಡ್ ಹಾಕಲಾಗಿದೆ. ಇದು ಆತಂಕಕ್ಕೂ ಕಾರಣವಾಗಿದೆ. ಆಸ್ಪತ್ರೆ ಮುಂದೆ ಬೆಡ್ ಗೆ ಜನ ಕಾಯುತ್ತಿದ್ದು, ಇಡೀ ಮೈಸೂರು ಸುತ್ತಿದ್ರೂ ಬೆಡ್ ಸಿಗುತ್ತಿಲ್ಲ. ಯಾರೂ ಕೂಡ ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ ಎಂದು ಆಸ್ಪತ್ರೆ ಮುಂದೆ ರೋಗಿಗಳ ಸಂಬಂಧಿಗಳ ಗೋಳು ಹೇಳತೀರದಾಗಿದೆ. ತಂದೆ ಪ್ರಾಣ ಉಳಿಸಿಕೊಳ್ಳಲು ಮಗ ಹರಸಾಹಸ ಪಡುತ್ತಿದ್ರೆ, ಇನ್ನೊಂದೆಡೆ ತಾಯಿ ಕಾಪಾಡಿಕೊಳ್ಳಲು ಆ್ಯಂಬುಲೆನ್ಸ್ ಮುಂದೆಯೇ ಮಗ ಠಿಕಾಣಿ ಹೂಡಿದ್ದಾನೆ. ಪೋಷಕರನ್ನು ಕಾಪಾಡಿಕೊಳ್ಳಲು ಆಸ್ಪತ್ರೆ ಮುಂದೆ ಮಕ್ಕಳು ಪರದಾಟ ಮನಕಲಕುವಂತಿದ್ದು, ಕಾರುಗಳಲ್ಲಿ ಹಾಗೂ ಆ್ಯಂಬುಲೆನ್ಸ್ ಗಳಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಾಗಿರೋ ಕೊರೋನಾ 2ನೇ ಅಲೆ ಈ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದು ಜನರು ಎಚ್ಚೆತ್ತುಕೊಳ್ಳಬೇಕಿದೆ. ಅಕ್ಸಿಜನ್ ವೆಂಟಿಲಟರ್ ಕೊರತೆಯೂ ಕಾಡುತ್ತಿದೆ. ಪ್ರೈವೇಟ್ ಆಸ್ಪತ್ರೆಗಳು ಸುಲಿಗೆಗೆ ಇಳಿದಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಮಸ್ಯೆ ಹೆಚ್ಚಾಗಿದ್ದು ಜನರ ಕಷ್ಟ ಹೇಳತೀರದಾಗಿದೆ. ಕಳೆದೊಂದು ವಾರದಿಂದ ಸೋಂಕು ಏರುಗತಿಯಲ್ಲಿ ಉಲ್ಬಣಿಸುತ್ತಿದೆ. ಜನ ಎಚ್ಚೆತ್ತುಕೊಳ್ಳದಿದ್ರೆ ಪರಿಸ್ಥಿತಿ ಮತ್ತಷ್ಟು ಹದಗೆಡೋ ಸಾಧ್ಯತೆ ದಟ್ಟವಾಗಿದೆ.

ಇಡೀ ಮೈಸೂರು ನೆರೆಯ ಮಂಡ್ಯ ಮತ್ತು ಚಾಮರಾಜನಗರ , ಕೊಡಗು ಜಿಲ್ಲೆಯ ಬಡ ವರ್ಗದ ಜನತೆಗೆ ಕೆ ಆರ್‌ ಆಸ್ಪತ್ರೆಯೇ ಸಂಜೀವಿನಿಯಂತಿದೆ. ಏಕೆಂದರೆ ಇಲ್ಲಿ ಎಲ್ಲಾ ಸವಲತ್ತುಗಳೂ ಇದ್ದು ಬಡ ವರ್ಗದವರು ಖಾಸಗೀ ಆಸ್ಪತ್ರೆಗೆ ಹೋಗುವಷ್ಟು ಶಕ್ತಿವಂತರೂ ಆಗಿರುವುದಿಲ್ಲ. ಈಗ ಈ ಆಸ್ಪತ್ರೆಯಲ್ಲೇ ಬೆಡ್‌ ಗಳು ಖಾಲಿ ಇಲ್ಲದಿರುವುದು ದುರ್ಬಲ ವರ್ಗದವರಿಗೇ ಶಾಪವಾದಂತಾಗಿದೆ. ಇದೀಗ ಬೆಡ್‌ ಗಳ ಕೊರತೆಯ ನಡುವೆಯೇ ಆಕ್ಸಿಜನ್‌ ಸಿಲಿಂಡರ್‌ ಗಳು ಮೂರು –ನಾಲ್ಕು ಪಟ್ಟು ಬೆಲೆಗೆ ಮಾರಾಟವಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆಕ್ಸಿಜನ್‌ ಕಾಳ ಸಂತೆಗೆ ಕಡಿವಾಣ ಹಾಕಲು ಆಕ್ಸಿಜನ್ ಏಜೆನ್ಸಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ. ಆಕ್ಸಿಜನ್ ಸರಬರಾಜು ಏಜೆನ್ಸಿ ಮೇಲೆ ಸಿಸಿ ಕ್ಯಾಮೆರಾ ಕಣ್ಗಾವಲಿಡಲು ಒಟ್ಟು 8 ಕ್ಯಾಮೆರಾ ಅಳವಡಿಕೆಗೆ ನಿರ್ಧಾರ ಮಾಡಲಾಗಿದೆ. 4 ಏಜೆನ್ಸಿಗಳಲ್ಲಿ ತಲಾ ಎರಡು ಕ್ಯಾಮೆರಾ. ದಿನದ 24 ಗಂಟೆಯೂ ಮೊಬೈಲ್ ಮೂಲಕ ಮಾನಿಟರ್ ಮಾಡಲಾಗುವುದು. ನಾನು, ಡಿಸಿ, ನೋಡಲ್ ಅಧಿಕಾರಿ ಇದರ ವೀಕ್ಷಣೆ ಮಾಡುತ್ತಿರುತ್ತೇವೆ. ಮೈಸೂರಿನ ಆಸ್ಪತ್ರೆಗಳಿಗೆ ಕೋಟಾ ನಿಗದಿ ಮಾಡಿ ಅದನ್ನು ಹೊರತುಪಡಿಸಿ ಬೇರೆ ಕಡೆ ಸರಬರಾಜು ಮಾಡದಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಬೇರೆ ಆಸ್ಪತ್ರೆಯವರು ನೇರವಾಗಿ ಖರೀದಿ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗುವುದು ಎಂದು ಪ್ರತಾಪಸಿಂಹ ಹೇಳಿದ್ದಾರೆ.

 ಈ ಕುರಿತು ಮಾತನಾಡಿದ ಜೆಡಿಎಸ್‌ ಶಾಸಕ ಜಿ ಟಿ ದೇವೇ ಗೌಡ ಅವರು ರಾಜ್ಯ ಸರ್ಕಾರದ ಕೋವಿಡ್‌ ನಿಯಂತ್ರಣಾ ಕ್ರಮಗಳನ್ನು ಕಟುವಾಗಿ ಟೀಕಿಸಿದ್ದಾರೆ. ಆಮ್ಲಜನಕದ ಕೊರತೆಯಿಂದ ಚಾಮರಾಜನಗರದಲ್ಲಿ ದುರಂತ ನಡೆದರೂ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಯಾವ್ಯಾವ ಜಿಲ್ಲೆಗೆ ಎಷ್ಟು ಪೂರೈಕೆಯಾಗಬೇಕು ಎಂಬುದನ್ನು ನಿಗದಿಪಡಿಸಿಲ್ಲ. ಇದರಿಂದಾಗಿ ಆಮ್ಲಜನಕಕ್ಕಾಗಿ ಜಿಲ್ಲೆಗಳ ನಡುವೆ ಜಿದ್ದಾಜಿದ್ದಿಯೇ ನಡೆದಿದೆ’ ಎಂದು ಅವರು ಆರೋಪಿಸಿದರು.‘ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ನಡುವೆ ನಿತ್ಯವೂ ಆಮ್ಲಜನಕ ಪಡೆಯಲಿಕ್ಕಾಗಿ ಪೈಪೋಟಿಯೇ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ಬೆಂಗಾವಲು ವಾಹನದೊಂದಿಗೆ ಮೈಸೂರಿಗೆ ಬಂದು ಆಮ್ಲಜನಕದ ಸಿಲಿಂಡರ್ ಕೊಂಡೊಯ್ಯುತ್ತಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೇ ಭಾರಿ ಅನಾಹುತವೇ ಘಟಿಸಲಿದೆ. ರಾಜೀನಾಮೆ ಸಲ್ಲಿಸಲೇಬೇಕಾಗುತ್ತದೆ’ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಮೈಸೂರಿಗರಷ್ಟೇ ಅಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಯ ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳು ಇಲ್ಲಿದ್ದಾರೆ. ನಿತ್ಯವೂ 70 ಮೆಟ್ರಿಕ್ ಟನ್ ಆಮ್ಲಜನಕ ಬೇಕಿದೆ. ಆದರೆ ಇದೀಗ ಸಿಗುತ್ತಿರುವುದು 30 ಮೆಟ್ರಿಕ್ ಟನ್ ಮಾತ್ರ. ತುರ್ತಾಗಿ ಸಮಸ್ಯೆ ಬಗೆಹರಿಸದಿದ್ದರೇ; ಅಪಾಯ ತಪ್ಪಿದ್ದಲ್ಲ’ ಎಂದು ಜಿ.ಟಿ.ದೇವೇಗೌಡ ಹೇಳಿದರು.

ಈಗ ಕೊರೊನಾ ವೈರಸ್ನ ಎರಡನೇ ಅಲೆ ಗ್ರಾಮಗಳಿಗೂ ದಾಂಗುಡಿಯಿಟ್ಟಿದೆ. ಸೋಂಕಿನ ಲಕ್ಷಣವಿರುವವರು ತಪಾಸಣೆಗೆ ಪರದಾಡುವ ಪರಿಸ್ಥಿತಿ, ಇದೀಗ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಕೋವಿಡ್ನಿಂದ ಹಳ್ಳಿಗಳಲ್ಲೂ ಜನರು ಮೃತಪಡುತ್ತಿದ್ದಾರೆ. ಸೋಂಕು ಹಲವರನ್ನು ತೀವ್ರವಾಗಿ ಬಾಧಿಸುತ್ತಿದೆ. ತಮ್ಮ ನೆರೆ–ಹೊರೆಯಲ್ಲೇ ಸಂಭವಿಸುತ್ತಿರುವ ಸಾವು, ಕೆಲವರನ್ನು ತೀವ್ರ ಆತಂಕಕ್ಕೆ ದೂಡಿದೆ. ಸೋಂಕಿನ ಲಕ್ಷಣ ಗೋಚರಿಸಿದವರು ಇದೀಗ ಸ್ವಯಂಪ್ರೇರಿತರಾಗಿ ಪರೀಕ್ಷಾ ಕೇಂದ್ರಗಳತ್ತ ದಾಪುಗಾಲಾಕುತ್ತಿದ್ದಾರೆ. ಆದರೆ ತಪಾಸಣೆ ಮಾಡಿಸಿಕೊಳ್ಳಲು ಪರದಾಡುವಂತಾಗಿದೆ. ಬಹುತೇಕ ಕಡೆ ತಪಾಸಣಾ ಕೇಂದ್ರಗಳೇ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತಿಲ್ಲ. ತಾಲ್ಲೂಕು ಕೇಂದ್ರಕ್ಕೆ ಎಡತಾಕಿದರೂ ತಪಾಸಣೆ ಮಾಡಿಸಿಕೊಳ್ಳಲಾಗುತ್ತಿಲ್ಲ ಎಂಬ ಅಳಲು ಗ್ರಾಮೀಣರದ್ದಾಗಿದೆ. ‘ನಮ್ಮೂರಲ್ಲೇ ಪರೀಕ್ಷೆ ಮಾಡಲ್ಲ. ವಿಧಿಯಿಲ್ಲದೇ ಮೈಸೂರಿಗೆ ಬಂದೆ. ಜಾಕಿ ಕ್ವಾಟ್ರಸ್, ಮಕ್ಕಳ ಕೂಟ, ಟೌನ್ಹಾಲ್, ಚಿಕ್ಕ ಗಡಿಯಾರ, ಚಾಮುಂಡಿಪುರಂನ ರಾಮಾನುಜ ರಸ್ತೆ ಸೇರಿದಂತೆ ಎಲ್ಲೆಡೆ ಸುತ್ತಾಡಿದೆ. ಎಲ್ಲ ತಪಾಸಣಾ ಕೇಂದ್ರಗಳಲ್ಲೂ ನನ್ನ ಪರೀಕ್ಷೆಯನ್ನೇ ಮಾಡಲಿಲ್ಲ. ನಾನೇನು ಮಾಡಬೇಕು? ಎಂಬುದೇ ತೋಚದಂತಾಗಿದೆ’ ಎಂದು ರೈತರೊಬ್ಬರು ಅಳಲು ತೋಡಿಕೊಂಡರು.

ಈ ನಡುವೆ ಮೂರು ದಿನಗಳ ಹಿಂದೆ ಮೈಸೂರು ಡಿಹೆಚ್‌ಒ ಅಮರ್‌ ನಾಥ್ ರೋಗಿಯೊಬ್ಬರ ಸಂಬಂಧಿಕರ ಜೊತೆ ಫೋನ್ ಸಂಭಾಷಣೆ ಯ ಆಡಿಯೋ ಇದೀಗ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಅಮರನಾಥ್ ಅವರಿಗೆ ವೆಂಟಿಲೇಟರ್ ಕೊಡಿಸಿ ಎಂದು ಫೋನ್ ಮಾಡಿದ್ದ. ಈ ವೇಳೆ ಡಿಹೆಚ್ಒ, ವಾರ್ ರೂಂ ಗೆ ಕರೆ ಮಾಡಿ ಅಲ್ಲಿ ಅರೆಂಜ್ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ.ಆಗ ವ್ಯಕ್ತಿ, ಅವರು ರೆಸ್ಪಾಂಡ್ ಮಾಡುತ್ತಿಲ್ಲ ಎಂದರು. ಬೆಡ್ ಗು ನನಗೂ ಸಂಬಂಧ ಇಲ್ಲ. ನನಗೆ ಬೆಡ್ ಕೊಡಿಸಲು ಆಗಲ್ಲ, ನನ್ನ ಹೆಂಡತಿಗೂ ಬೆಡ್ ಕೊಡಿಸಲು ಯೋಗ್ಯತೆ ಇಲ್ಲ. ನನ್ನ ಕೈ ಸೋತೋಗಿದೆ ಎಂದು ಗದ್ಗದಿತರಾಗಿದ್ದಾರೆ. ಆಗ ವ್ಯಕ್ತಿ ನಿಮಗೆ ಜವಾಬ್ದಾರಿ ಏಕೆ ಕೆಲಸ ಬಿಟ್ಟು ಹೋಗಿ ಅಂದಿದ್ದಾರೆ. ಕೆಲಸದಿಂದ ಕಳುಹಿಸಿ ಬಿಟ್ಟು ಹೋಗಲು ರೆಡಿ ಇದ್ದೇನೆ ಎಂದಿರುವ ಡಿ.ಎಚ್.ಓ, ನನ್ನ ಮೇಲೆ ಯಾವುದೇ ಆಕ್ಷನ್ ತೆಗೆದುಕೊಳ್ಳಲಿ. ನಾನು ಮನೆಗೆ ಹೋಗಲು ರೆಡಿ ಇದ್ದೇನೆ. ನನ್ನ ಕೈಯಲ್ಲಿ ಬೆಡ್ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಪರಿಸ್ಥಿತಿಯ ಗಂಭೀರತೆಯನ್ನು ಸಂಪೂರ್ಣ ತೆರೆದಿಟ್ಟಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...