ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷ ಶಿವಮೂರ್ತಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಇದರ ಜೊತೆಗೆ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದೆ. ಈ ಕೂಡಲೇ ಅವರನ್ನು ಬಂಧಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಹಾಗೂ ದಸಂಸ ಒಕ್ಕೂಟದ ರಾಜ್ಯ ಸಮಿತಿ ರಾಜ್ಯಪಾಲರಿಗೆ ಪತ್ರ ಬರೆದು ಒತ್ತಾಯಿಸಿದೆ.
ಹೌದು, ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷ ಶಿವಮೂರ್ತಿ ಶರಣರನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ದಸಂಸ ಒಕ್ಕೂಟದ ರಾಜ್ಯ ಸಮಿತಿ ರಾಜ್ಯಪಾಲರಿಗೆ ಪತ್ರ ಬರೆದು ಒತ್ತಾಯಿಸಿದೆ.
ಪೋಕ್ಸೊ ಕಾಯ್ದೆ ಮತ್ತು ದೌರ್ಜನ್ಯ ತಡೆ ಕಾಯ್ದೆ 1989ರ ಅನ್ವಯ ಪ್ರಕರಣ ದಾಖಲಾದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ಮಹಾನಗರ ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರ ಸಮ್ಮುಖದಲ್ಲಿ ಹಾಜರುಪಡಿಸಬೇಕು.164 (5ಎ) ಸಿಆರ್ಪಿಸಿ ಹಾಗೂ ಸರ್ಕಾರಿ ಮಹಿಳಾ ವೈದ್ಯರ ಸಮ್ಮಖದಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಯಾರ ವಿರುದ್ಧ ದೂರು ನೀಡಲಾಗಿದೆಯೋ ಆ ಎಲ್ಲರನ್ನು ಕೂಡಲೇ ವಶಕ್ಕೆ ಪಡೆಯಬೇಕು’ ಎಂದು ಆಗ್ರಹಡಿಸಿದೆ.
ಆದರೆ, ರಾಜ್ಯ ಸರ್ಕಾರ ಬಲಾಢ್ಯರಿಗೆ ಒಂದು ಕಾನೂನು, ಬಡವರಿಗೆ ಒಂದು ಕಾನೂನು ಎಂಬಂತೆ ವರ್ತಿಸುತ್ತಿದೆ. ಪೊಲೀಸ್ ಕೂಡ ಕಾನೂನು ಮತ್ತು ಕರ್ತವ್ಯವನ್ನು ಮರೆತಿದೆ. ಈ ಮಧ್ಯೆ ಮುರುಘಾ ಶರಣರು ಬಹಿರಂಗವಾಗಿ ಹೇಳಿಕೆ ನೀಡಿ, ಈ ನೆಲದ ಕಾನೂನು ಗೌರವಿಸುವುದಾಗಿ ಹೇಳಿದ್ದಾರೆ. ದಲಿತ ಹೆಣ್ಣು ಮಕ್ಕಳು ಬಲಾಢ್ಯರ ಸ್ವತ್ತಲ್ಲ. ಈ ಸಂಬಂಧವಾಗಿ ಸರ್ಕಾರ ನಿರ್ಲಕ್ಷ್ಯ ತೋರಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಒಕ್ಕೂಟದ ರಾಜ್ಯ ಸಮಿತಿ ಅಧ್ಯಕ್ಷ ಡಾ.ಆರ್.ಮೋಹನ್ರಾಜ್, ಎಸ್ಸಿ- ಎಸ್ಟಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ದಲಿತ ಮಾನವ ಹಕ್ಕು ಸಮಿತಿ ರಾಜ್ಯ ಸಂಚಾಲಕರು ಬಸವರಾಜ್ ಕೌತಾಳ್, ಡಿಎಎಸ್ ಗೋಪಾಲಕೃಷ್ಣ ಹರಳಹಳ್ಳಿ, ಡಿಎಸ್ಎಸ್ ರಾಜ್ಯ ಅಧ್ಯಕ್ಷ ವೆಂಕಟಗಿರಿಯಯ್ಯ ಮನವಿಗೆ ಸಹಿ ಮಾಡಿದ್ದಾರೆ.