ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋ, ಬಿಎಂಟಿಸಿ ಸೇರಿದಂತೆ ನಗರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ಪೋಸ್ಟ್ ಮಾಡುವ ಅವರು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಗರ ಜನರ ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದು ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ.

ಇದೀಗ ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಕೊರತೆ ಹಾಗೂ ಪ್ರಯಾಣಿಕರ ನಿತ್ಯದ ಪರದಾಟದ ಕುರಿತು ತಿಳಿಯಲು ಸ್ವತಃ ರಸ್ತೆಗಳಿದಿರುವ ಸಂಸದರು ನಿನ್ನೆ ಜೂನ್ 29 ಸೋಮವಾರ ಬಿಎಂಟಿಸಿ ಬಸ್ಸಿನಲ್ಲಿ ಕತ್ರಿಗುಪ್ಪೆಯಿಂದ ಬನಶಂಕರಿವರೆಗೆ ಪ್ರಯಾಣಿಸಿ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಬಿಎಂಟಿಸಿ ಬಸ್ ಗಾಗಿ ಕಾಯುವುದೇ ಒಂದು ದೊಡ್ಡ ತಪಸ್ಸು !
ಪ್ರಯಾಣಿಕರಿಗೆ ಪ್ರತಿನಿತ್ಯ ಇದೇ ಗೋಳಾದರೆ, ಜನ ಕೆಲಸ- ಕಾರ್ಯ ಮಾಡಬೇಕಾ ಅಥವಾ ರಸ್ತೆಯಲ್ಲೇ ಕಾಲ ಕಳೆಯಬೇಕಾ ಮಾನ್ಯ ಮುಖ್ಯಮಂತ್ರಿಗಳೇ ?
ಉತ್ತರಿಸಿ ! pic.twitter.com/ddZJrnmbnf
— Tejasvi Surya (@Tejasvi_Surya) June 29, 2026
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ, ಬಿಎಂಟಿಸಿ ಬಸ್‌ಗಾಗಿ ಕಾಯುವುದೇ ಒಂದು ದೊಡ್ಡ ತಪಸ್ಸು. ಪ್ರಯಾಣಿಕರಿಗೆ ಪ್ರತಿನಿತ್ಯ ಇದೇ ಗೋಳಾದರೆ, ಜನ ಕೆಲಸ- ಕಾರ್ಯ ಮಾಡಬೇಕಾ ಅಥವಾ ರಸ್ತೆಯಲ್ಲೇ ಕಾಲ ಕಳೆಯಬೇಕಾ ಮಾನ್ಯ ಮುಖ್ಯಮಂತ್ರಿಗಳೇ ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿನಿತ್ಯ 45 ಲಕ್ಷ ಜನರು ಬಿಎಂಟಿಸಿ ಬಸ್ ನಲ್ಲಿ ಓಡಾಡುತ್ತಾರೆ. 45 ಲಕ್ಷ ಜನರ ಪ್ರತಿನಿತ್ಯದ ಬವಣೆ ಇದು. ಶ್ರೀಮಂತರಿಗಾಗಿ ಸಾವಿರಾರು ಕೋಟಿಯ ಟನಲ್ ರೋಡ್ ಕಟ್ಟಲು ದುಡ್ಡಿದೆ. ಬಿಎಂಟಿಸಿ ಬಸ್‌ನಿಂದ ಜನಸಾಮಾನ್ಯರು ಪಡುತ್ತಿರುವ ಕಷ್ಟ ಕೇಳಲು ಮನಸ್ಸಿಲ್ಲವಾ. ಒಮ್ಮೆಯಾದರೂ ಬಿಎಂಟಿಸಿ ಬಸ್ ನಲ್ಲಿ ಓಡಾಡಿ ಜನಸಾಮಾನ್ಯರ ಕಷ್ಟ ಕೇಳಿ ಮಾನ್ಯ ಮುಖ್ಯಮಂತ್ರಿಗಳೇ . ಬಿಎಂಟಿಸಿ ಬಸ್‌ಗಳಲ್ಲಿ ದಿನಬೆಳಗಾದರೆ ಜನಸಾಮಾನ್ಯರ ಸಂಕಟ, ರಾಜ್ಯ ಸರಕಾರಕ್ಕೆ ಮತ್ತು ಅಧಿಕಾರಿಗಳಿಗೆ ಜನರ ಪ್ರಾಣದ ಜೊತೆ ಚೆಲ್ಲಾಟ. ಬೆಂಗಳೂರಿಗರ ದಿನನಿತ್ಯದ ಬವಣೆ ತಪ್ಪಿಸಿ, ಸಾರ್ವಜನಿಕ ಸಾರಿಗೆ ಬಲಪಡಿಸಿ ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.







