• Home
  • About Us
  • ಕರ್ನಾಟಕ
Thursday, June 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಆತಂಕ  ನೋವು ತಲ್ಲಣಗಳ ನಡುವೆ ಅಮ್ಮಂದಿರ ದಿನ

ನಾ ದಿವಾಕರ by ನಾ ದಿವಾಕರ
May 11, 2025
in Top Story, ಜೀವನದ ಶೈಲಿ, ವಿಶೇಷ
0
ಆತಂಕ  ನೋವು ತಲ್ಲಣಗಳ ನಡುವೆ ಅಮ್ಮಂದಿರ ದಿನ
Share on WhatsAppShare on FacebookShare on Telegram

ADVERTISEMENT

—-ನಾ ದಿವಾಕರ—-

ಹೆಣ್ತನದ ಘನತೆಯನ್ನು ನಿರ್ಲಕ್ಷಿಸುತ್ತಲೇ ಇರುವ ಪಿತೃ ವ್ಯವಸ್ಥೆಯಲ್ಲಿ ಮತ್ತೊಂದು ಆಚರಣೆ

ಜಗತ್ತು ಮತ್ತೊಂದು ಅಂತಾರಾಷ್ಟ್ರೀಯ ಅಮ್ಮಂದಿರ ದಿನ (International Mothersʼ Day) ಆಚರಿಸುತ್ತಿದೆ. ಪ್ರತಿವರ್ಷ ಮೇ 11ರಂದು ಅಥವಾ ಎರಡನೆ ಭಾನುವಾರ ಈ ದಿನವನ್ನು ಆಚರಿಸುವ ವಾಡಿಕೆ ಇದೆ. ನೆರೆರಾಷ್ಟ್ರ ಪಾಕಿಸ್ತಾನದ ದುಸ್ಸಾಹಸ ಮತ್ತು ಮನುಕುಲ ವಿರೋಧಿ ಭಯೋತ್ಪಾದನೆಯ ಪರಿಣಾಮ, ಭಾರತ ಮತ್ತು ಪಾಕಿಸ್ತಾನದಲ್ಲಿ ಸಾವಿರಾರು ಅಮ್ಮಂದಿರು ಅನಾಥರಾಗುವ ಸಾಧ್ಯತೆಗಳ ನಡುವೆ, ನವ ಭಾರತದ ಸಮಾಜವು ಹೆಣ್ಣು ಮತ್ತು ಅವಳ ತಾಯ್ತನದ ಘನತೆಯನ್ನು ರಕ್ಷಿಸಲು ವಿಫಲವಾಗುತ್ತಿರುವ ಸನ್ನಿವೇಶದಲ್ಲಿ 2025ರ ಅಮ್ಮಂದಿರ ದಿನ ಆಚರಿಸಬೇಕಿದೆ. ಮಕ್ಕಳನ್ನು ಹೆತ್ತವಳು ಮಾತ್ರ ಅಮ್ಮ ಎಂಬ ಪಾರಂಪರಿಕ ತಿಳುವಳಿಕೆಯನ್ನು ಭಂಜಿಸಿ, ಆಧುನಿಕ ಡಿಜಿಟಲ್‌ ನಾಗರಿಕತೆಯಲ್ಲಿ , ಪ್ರತಿಯೊಂದು ಹೆಣ್ಣು ಜೀವದಲ್ಲೂ ಒಬ್ಬ ತಾಯಿ, ಒಂದು ಮಾತೃ ಹೃದಯ ಇರುವುದನ್ನು ಗುರುತಿಸಿ, ಈ ದಿನದಂದು ಭಾರತ ತನ್ನ ಪಿತೃಪ್ರಧಾನತೆಯನ್ನು ಬದಿಗಿಟ್ಟು, ಸ್ತ್ರೀ ಸಂಕುಲದ ಬಗ್ಗೆ ಗಮನಹರಿಸಬೇಕಿದೆ.

ಎಲ್ಲರ ಬದುಕಿನಲ್ಲಿ ವೈಯುಕ್ತಿಕವಾಗಿ ಕಾಣಬಹುದಾದ ಸಮಾನ ಎಳೆ ಎಂದರೆ, ತಾಯಿ ಎನ್ನುವ ಜೀವ ಭೌತಿಕವಾಗಿ ಇಲ್ಲವಾದರೂ, ಅವಳೊಳಗಿನ ʼಅಮ್ಮʼ ಎಂಬ ಭಾವನಾತ್ಮಕ ತಂತು ಸದಾ ಜೀವಂತವಾಗಿರುತ್ತದೆ. ʼಅಮ್ಮಂದಿರ ದಿನʼ ಆಚರಿಸುವ ಸಂದರ್ಭದಲ್ಲಿ ಜೊತೆಯಿರುವ , ಇಲ್ಲವಾಗಿರುವ ಅಮ್ಮಂದಿರಷ್ಟೇ ಅಲ್ಲದೆ, ಸುತ್ತಲ ಸಮಾಜದಲ್ಲಿ ಮಾನವಕುಲದ ಮರುಉತ್ಪತ್ತಿಗೆ ಕಾರಣವಾಗುವ ಎಲ್ಲ ಹೆಣ್ಣು ಜೀವಗಳೂ ಸಹ ನಮ್ಮ ಸಾಮಾಜಿಕ ಸೂಕ್ಷ್ಮ ಸಂವೇದನೆಗಳನ್ನು ಕಾಡುತ್ತವೆ, ಕಾಡಬೇಕಿದೆ. ಈ ದೃಷ್ಟಿಯಿಂದ ನೋಡಿದಾಗ, ಪೆಹಲ್ಗಾಂನಲ್ಲಿ ನಡೆದ ಅಮಾನುಷ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಬಾಳಸಂಗಾತಿಗಳನ್ನು ಕಳೆದುಕೊಂಡ ಹೆಣ್ಣುಮಕ್ಕಳು, ಸದ್ಭಾವನೆ-ಸೌಹಾರ್ದತೆಯ ಒಂದೆರಡು ಮಾತುಗಳನ್ನಾಡಿದ ಕಾರಣಕ್ಕಾಗಿ, ಸಾಮಾಜಿಕ ತಾಣಗಳಲ್ಲಿ ಎದುರಿಸಬೇಕಾದ ನಿಂದನೆ ಮತ್ತು ಆರೋಪಗಳನ್ನು ಗಮನಿಸಿದಾಗ, ನವ ಭಾರತದ ಒಂದು ಯುವ-ಸಮಾಜ, ʼಅಮ್ಮಂದಿರ ದಿನʼ ಆಚರಿಸುವ ನೈತಿಕತೆಯನ್ನು ಕಳೆದುಕೊಳ್ಳುತ್ತದೆ.

ದೌರ್ಜನ್ಯಗಳ ನಡುವೆ ʼ ಅಮ್ಮ ʼ

ಲ್ಯಾನ್ಸೆಟ್‌ ಎಂಬ ಜಾಗತಿಕ ಸಂಸ್ಥೆ ಇತ್ತೀಚೆಗೆ ಪ್ರಕಟಿಸಿದ ವರದಿಯ ಅನುಸಾರ ಭಾರತದಲ್ಲಿ 18 ವರ್ಷಕ್ಕೂ ಕೆಳಗಿನ  ಶೇಕಡಾ 30ರಷ್ಟು ಹೆಣ್ಣುಮಕ್ಕಳು (ಶೇಕಡಾ 13ರಷ್ಟು ಗಂಡುಮಕ್ಕಳೂ ಸಹ) ಲೈಂಗಿಕ ಹಿಂಸೆ-ದೌರ್ಜನ್ಯಕ್ಕೆ ತುತ್ತಾಗಿರುತ್ತಾರೆ. ಜಾಗತಿಕ ಮಟ್ಟದಲ್ಲಿ ಐವರಲ್ಲಿ ಒಬ್ಬ ಹೆಣ್ಣು ಮಗಳು 18 ವರ್ಷ ತಲುಪುವ ಮುನ್ನವೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾಳೆ. Georgetown Institute for Women Peace and Security ಎಂಬ ಜಾಗತಿಕ ಸಂಸ್ಥೆಯ ಇತ್ತೀಚಿನ ವರದಿಯ ಅನುಸಾರ, ಮಹಿಳೆಯ ಒಳಗೊಳ್ಳುವಿಕೆ (Inclusiveness) , ರಕ್ಷಣೆ ಮತ್ತು ನ್ಯಾಯ ಲಭ್ಯತೆಯ ಸೂಚ್ಯಂಕದಲ್ಲಿ 177 ರಾಷ್ಟ್ರಗಳ ಪೈಕಿ ಭಾರತ 128ನೇ ಸ್ಥಾನದಲ್ಲಿದೆ. ಭಾರತದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)- 2023ರ ವರದಿಯ ಅನುಸಾರ, 2018 ರಿಂದ 2022ರ ನಡುವೆ ದಾಖಲಾದ ಮಹಿಳಾ ದೌರ್ಜನ್ಯಗಳ ಪ್ರಮಾಣ ಶೇಕಡಾ 12.9ರಷ್ಟು ಹೆಚ್ಚಾಗಿದ್ದು, ಶೇಕಡಾ 66.4ರಷ್ಟು ಮಹಿಳೆಯರು ವಿವಿಧ ರೀತಿಯ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. NCRB ದತ್ತಾಂಶಗಳೇ ಹೇಳುವಂತೆ ಭಾರತದಲ್ಲಿ ಪ್ರತಿವರ್ಷ 30 ಸಾವಿರಕ್ಕೂ ಹೆಚ್ಚು ಮಹಿಳಾ ದೌರ್ಜನ್ಯಗಳು ದಾಖಲಾಗುತ್ತಿವೆ. ಮತ್ತೊಂದೆಡೆ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇಕಡಾ 27-28ರಷ್ಟಿದೆ.

 ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಪ್ರಮಾಣವನ್ನು ರಾಷ್ಟ್ರೀಯ ಮಹಿಳಾ ಆಯೋಗದ ದತ್ತಾಂಶಗಳ ನೆಲೆಯಲ್ಲಿ ನೋಡಿದಾಗ, ತಲೆತಗ್ಗಿಸುವಂತಾಗುತ್ತದೆ. 2025ರ ಮೊದಲ ನಾಲ್ಕು ತಿಂಗಳಲ್ಲಿ ಆಯೋಗದಲ್ಲಿ 7,698 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1,594 ಕೌಟುಂಬಿಕ ದೌರ್ಜನ್ಯಗಳು. ವರ್ತಮಾನ ಭಾರತದ ಮಾದರಿ ರಾಜ್ಯ ಎಂದು ಬಿಂಬಿಸಲ್ಪಡುತ್ತಿರುವ ಉತ್ತರಪ್ರದೇಶ ಶೇಕಡಾ 50ರಷ್ಟು , 3,921 ಪ್ರಕರಣಗಳನ್ನು ದಾಖಲಿಸಿದೆ. 2024ರಲ್ಲಿ ಆಯೋಗ 25,743 ಪ್ರಕರಣಗಳನ್ನು ದಾಖಲಿಸಿತ್ತು. ದುಡಿಯುವ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಿನ ಪ್ರಮಾಣದಲ್ಲಿವೆ. 2023-24ರಲ್ಲಿ ಕರ್ನಾಟಕವು ಅತಿ ಕಡಿಮೆ , 522 ಪ್ರಕರಣಗಳನ್ನು ದಾಖಲಿಸಿ, ಹತ್ತನೇ ಸ್ಥಾನದಲ್ಲಿದೆ. ಇದು ಸಮಾಧಾನಕರ ಎನ್ನುವುದು ಆತ್ಮತೃಪ್ತಿಯ ಮಾತಾಗುತ್ತದೆ. ವರದಕ್ಷಿಣೆ ನಿರ್ಬಂಧ ಕಾಯ್ದೆಯ ಹೊರತಾಗಿಯೂ ಕಳೆದ ಮೂರು ವರ್ಷಗಳಲ್ಲಿ 19,573 ಪ್ರಕರಣಗಳನ್ನು ಆಯೋಗ ದಾಖಲಿಸಿರುವುದು, ಭಾರತದ ಕುಟುಂಬ ವ್ಯವಸ್ಥೆಯ ನೈಜ ಚಿತ್ರಣ ನೀಡುತ್ತದೆ. (ದತ್ತಾಂಶಗಳ ಮೂಲ ಪ್ರಜಾವಾಣಿ ವರದಿ 5 ಮೇ 2025)

ವಾಸ್ತವ ಜಗತ್ತಿನಲ್ಲಿ ʼ ಅಮ್ಮಂದಿರು ʼ

ಈ ಅಂಕಿ ಅಂಶಗಳು ಸೃಷ್ಟಿಸುವ ಆತಂಕ, ತಲ್ಲಣಗಳ ನಡುವೆಯೇ ಮತ್ತೊಂದು ಅಮ್ಮಂದಿರ ದಿನ ಆಚರಿಸುತ್ತಿದ್ದೇವೆ. ಮಹಿಳಾ ದೌರ್ಜನ್ಯಗಳು ಜೈವಿಕವಾಗಿ ಅಮ್ಮ ಎನಿಸಿಕೊಳ್ಳದ ಅವಿವಾಹಿತ ಮತ್ತು ಅಪ್ರಾಪ್ತರ ಮೇಲೆ ನಡೆಯುವಷ್ಟೇ ಪ್ರಮಾಣದಲ್ಲಿ, ತಾಯಂದಿರ ಮೇಲೂ ನಡೆಯುತ್ತಿರುವುದು ನಮ್ಮ ಸಮಾಜ ನಡೆಯುತ್ತಿರುವ ದಾರಿಯನ್ನು ಸೂಚಿಸುತ್ತದೆ. ಇತ್ತೀಚೆಗೆ ಕರ್ನಾಟಕದ ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಗರ್ಭಿಣಿ ಮಹಿಳೆಯರ ಅಕಾಲಿಕ ಮರಣ ಸರ್ಕಾರವನ್ನು ನಿದ್ರಾವಸ್ಥೆಯಿಂದ ಎಚ್ಚರಿಸಿದ್ದರೂ, ಅಮ್ಮ ಎನಿಸಿಕೊಳ್ಳುವ ಭಾಗ್ಯ ಅಥವಾ ಅವಕಾಶವನ್ನೇ ಹೆಣ್ಣು ಮಕ್ಕಳಿಂದ ಕಸಿದುಕೊಳ್ಳುವ ಹೆಣ್ಣು ಭ್ರೂಣ ಹತ್ಯೆಯ ಪ್ರಕರಣಗಳು ಸಮಾಜವೇ ತಲೆತಗ್ಗಿಸುವಂತೆ ಮಾಡಿವೆ. ಹೆಣ್ಣು ಭ್ರೂಣ ಹತ್ಯೆಯ ಮೂಲಕ ಭವಿಷ್ಯದ ಅಮ್ಮಂದಿರನ್ನು ಜೀವತಳೆಯುವ ಮುನ್ನವೇ ಅಂತ್ಯಗೊಳಿಸುವುದು ಒಂದು ಆಯಾಮವಾದರೆ ಮತ್ತೊಂದು ಮಜಲಿನಲ್ಲಿ ತನ್ನ ಸ್ವ-ಇಚ್ಛೆಗೆ ಮಾನ್ಯತೆಯನ್ನೇ ಪಡೆಯದೆ, ಪುರುಷಾಧಿಪತ್ಯದ ಒತ್ತಡಗಳಿಗೆ ಮಣಿದು, ತಾಯಿಯಾಗುವ ಭಾಗ್ಯವನ್ನು ಕಳೆದುಕೊಳ್ಳುವ ಹೆಣ್ಣು ಮಕ್ಕಳನ್ನು ಸಾವಿರ ಸಂಖ್ಯೆಯಲ್ಲಿ ಕಾಣಬಹುದು.

ಈ ನಡುವೆಯೇ ಭಾರತದ ರಿಜಿಸ್ಟ್ರಾರ್‌ ಜನರಲ್‌ ಮತ್ತು ಜನಗಣತಿ ಆಯೋಗದ (RGI) ಇತ್ತೀಚಿನ ವರದಿ ಪ್ರಕಟವಾಗಿದ್ದು, ದೇಶದಲ್ಲಿ ತಾಯಂದಿರ ಮರಣ ದರ (Maternal Mortality Rate-MMR) ಕೊಂಚ ಮಟ್ಟಿಗೆ ಕುಸಿತ ಕಂಡಿರುವುದು ಸಮಾಧಾನಕರ ಸಂಗತಿ. 2018-20ರ ಅವಧಿಯಲ್ಲಿ ಒಂದು ಲಕ್ಷ ಮಕ್ಕಳ ಜನನದಲ್ಲಿ 97 ರಷ್ಟು ಮಹಿಳೆಯರು ಜೀವ ಕಳೆದುಕೊಳ್ಳುತ್ತಿದ್ದರು. 2019-21ರಲ್ಲಿ ಈ ದರ 93ಕ್ಕೆ ಕುಸಿದಿದೆ. 2017-19ರ ಅವಧಿಯಲ್ಲಿ ಇದು 103ರಷ್ಟಿತ್ತು. ಈ ಸಕಾರಾತ್ಮಕ ಬೆಳವಣಿಗೆಯ ನಡುವೆಯೂ ರಾಜ್ಯಾವಾರು ದತ್ತಾಂಶಗಳನ್ನು ಗಮನಿಸಿದಾಗ, ಹಲವು ರಾಜ್ಯಗಳಲ್ಲಿ MMR ದರಗಳು ಹೆಚ್ಚಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಮಧ್ಯಪ್ರದೇಶ ಈ ನಿಟ್ಟಿನಲ್ಲಿ ಪ್ರಥಮ ಸ್ಥಾನದಲ್ಲಿದ್ದು MMR ದರ 175/ಪ್ರತಿ ಲಕ್ಷಕ್ಕೆ ದಾಖಲೆಯಾಗಿದೆ.

Lawyer Jagadesh Kumar : ಮುನಿರತ್ನ ಬಗ್ಗೆ, ಸ್ಪೋಟಕ ಹೇಳಿಕೆ ನೀಡಿದ ಲಾಯರ್‌ ಜಗದೀಶ್  #pratidhvani

ದಕ್ಷಿಣದ ರಾಜ್ಯ ಕೇರಳ ಅತಿ ಕಡಿಮೆ, 20/ಪ್ರತಿ ಲಕ್ಷಕ್ಕೆ ದರವನ್ನು ದಾಖಲಿಸಿದ್ದು, ಮಹಾರಾಷ್ಟ್ರದಲ್ಲಿ 38ರಷ್ಟು ದಾಖಲೆಯಾಗಿದೆ. ಕರ್ನಾಟಕದಲ್ಲಿ 2018-20ರಲ್ಲಿ 69ರಷ್ಟಿದ್ದ ತಾಯಂದಿರ ಮರಣ ದರ 2019-21ರ ವೇಳೆಗೆ 63ಕ್ಕೆ ತಲುಪಿರುವುದು ಸಮಾಧಾನಕರ ಅಂಶ. ಆದರೂ ಕಳೆದ ವರ್ಷ ಏಪ್ರಿಲ್-ಡಿಸೆಂಬರ್‌ ಅವಧಿಯಲ್ಲಿ ಬಳ್ಳಾರಿಯಲ್ಲೇ 464ರ ತಾಯಂದಿರ ಮರಣ ಸಂಭವಿಸಿರುವುದು ಗಂಭೀರ ವಿಚಾರ. ಇಂತಹ ಶೇಕಡಾ 70ರಷ್ಟು ಸಾವುಗಳನ್ನು ತಡೆಗಟ್ಟಬಹುದಿತ್ತು ಎಂದು ತಜ್ಞರ ತಂಡವು ಅಭಿಪ್ರಾಯಪಟ್ಟಿದೆ. ಈ ಮರಣಗಳ ಪೈಕಿ ಶೇಕಡಾ 65ರಷ್ಟು ಅಂದರೆ 305 ತಾಯಂದಿರ ಸಾವು ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಸಂಭವಿಸಿರುವುದು ಇನ್ನೂ ಕಳವಳ ಉಂಟುಮಾಡುವ ವಿಚಾರ. ಈ ಘಟನೆಯ ನಂತರ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಅಡಿ ಕ್ರಮಗಳನ್ನು ಕೈಗೊಂಡಿದ್ದರೂ, ಮಂಡ್ಯ ಜಿಲ್ಲೆಯಲ್ಲಿ ಕಳೆದ ವರ್ಷ ವರದಿಯಾದ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳಲ್ಲಿ ಈವರೆಗೂ ಯಾರಿಗೂ ಶಿಕ್ಷೆಯಾಗದಿರುವುದು, ಯಾರೂ ಉತ್ತರದಾಯಿಯಾಗದಿರುವುದು, ಉತ್ತಮ ಬೆಳವಣಿಗೆಯಲ್ಲ.

ಹೆಣ್ತನದ ಘನತೆಯ ನಡುವೆ ʼ ಅಮ್ಮ ʼ

ಈ ಅಧಿಕೃತ ದತ್ತಾಂಶಗಳಿಂದಾಚೆ ನೋಡಿದಾಗ ಅಮ್ಮಂದಿರ ದಿನ ಎನ್ನುವುದು ಭಾರತದ ಹೆಣ್ಣು ಮಕ್ಕಳಿಗಿಂತಲೂ ಹೆಚ್ಚಾಗಿ, ದೇಶದ ಸಾಂಸ್ಕೃತಿಕ-ರಾಜಕೀಯ-ಧಾರ್ಮಿಕ-ಸಾಮಾಜಿಕ ಪರಿಸರವನ್ನು ನಿಯಂತ್ರಿಸಿ ನಿರ್ದೇಶಿಸುತ್ತಿರುವ ಪುರುಷಾಧಿಪತ್ಯದ ನೆಲೆಗಳಲ್ಲಿ ಆತ್ಮಾವಲೋಕನದ ಪ್ರಶ್ನೆಯಾಗಿ ಮೂಡಬೇಕಿದೆ. ದೇಶವನ್ನು ಆವರಿಸುತ್ತಿರುವ ಯುದ್ಧದ ಕಾರ್ಮೋಡ ಇಂದಲ್ಲ ನಾಳೆ ಕರಗಿಹೋದರೂ ಸಹ, ತಮ್ಮ ವೃತ್ತಿಧರ್ಮ-ಜವಾಬ್ದಾರಿಯನ್ನು ಮರೆತು ಜನಸಾಮಾನ್ಯರ ನಡುವೆ ಯುದ್ಧೋನ್ಮಾದ, ಭೀತಿಯನ್ನು ಸೃಷ್ಟಿಸುತ್ತಿರುವ ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು ಸಮಾಜದಲ್ಲಿ ಉತ್ಪಾದಿಸುತ್ತಿರುವ ಆತಂಕಗಳು ಎಲ್ಲ ಅಮ್ಮಂದಿರನ್ನೂ ಕಾಡುವುದು ಖಚಿತ. ಏಕೆಂದರೆ ಯುದ್ಧದಲ್ಲಿ ಅಥವಾ ಆಂತರಿಕ ಯುದ್ಧೋನ್ಮಾದದಿಂದ ನಡೆಯಬಹುದಾದ ಮತೀಯ ದಾಳಿಗಳಲ್ಲಿ ತಮ್ಮ ಮಕ್ಕಳನ್ನು, ಬಾಳ ಸಂಗಾತಿಗಳನ್ನು, ಆತ್ಮೀಯರನ್ನು ಕಳೆದುಕೊಳ್ಳಬಹುದಾದ ಸಾವಿರಾರು ಅಮ್ಮಂದಿರು ವಿಶಾಲ ಸಮಾಜದ ಗಮನಕ್ಕೇ ಬರುವುದಿಲ್ಲ.

ಸಾಮಾನ್ಯವಾಗಿ ಯಾವುದೇ ಕೋಮು ಗಲಭೆಯಾಗಲೀ, ಮತೀಯ ಹತ್ಯಾಕಾಂಡ-ನರಮೇಧವಾಗಲೀ ಅಲ್ಲಿ ಮಡಿದವರನ್ನು, ಬದುಕುಳಿದ ಸಂತ್ರಸ್ತರನ್ನು ಲೆಕ್ಕ ಹಾಕುತ್ತಾ ಮುನ್ನಡೆಯುವ ಸಮಾಜಕ್ಕೆ, ಈ ಸಂಘರ್ಷದಲ್ಲಿ ಅಸಹಾಯಕ ಮೌನ ಪ್ರೇಕ್ಷಕರಾಗಿ ಕೊನೆಯಲ್ಲಿ ಎಲ್ಲವನ್ನೂ/ಎಲ್ಲರನ್ನೂ ಕಳೆದುಕೊಳ್ಳುವ ಹೆಣ್ಣುಮಕ್ಕಳು ಮತ್ತು ಅವರೊಳಗಿನ ಅಮ್ಮಂದಿರು ಕಾಣುವುದು ಅಪರೂಪ. ತನ್ನ ಕಣ್ಣೆದುರಿನಲ್ಲೇ ಮೊದಲ ಮಗುವನ್ನು ಗೋಡೆಗೆ ಅಪ್ಪಳಿಸಿ ಕೊಂದ ಪಾತಕ ಕೃತ್ಯವನ್ನು ನೋಡಿದ ಬಿಲ್ಲಿಸ್‌ ಬಾನೋ ನಮ್ಮ ನಡುವೆ ಇನ್ನೂ ಇದ್ದಾರೆ. ಇಂತಹ ತಾಯಿ ಹೃದಯಗಳು ನಮಗೆ ಎದುರಾಗುತ್ತಲೇ ಇರುತ್ತವೆ. ಪ್ರತ್ಯಕ್ಷವಾಗಿ ಕಣ್ಣೀರಿನಲ್ಲೇ ಮುಳುಗಿ ಬಾಳುತ್ತಿರುವ ಸೌಜನ್ಯಳ ತಾಯಿ ನಮ್ಮ ನಡುವೆ ಇದ್ದಾರೆ. ಆಕೆಯ ಚಾಚಿದ ಮಡಿಲಲ್ಲಿ ನ್ಯಾಯ ಎಂಬ ಅಮೂರ್ತ ವಸ್ತುವನ್ನು ಹಾಕುವಷ್ಟು ಸಂವೇದನೆಯೂ ನಮ್ಮ ಸಮಾಜದಲ್ಲಿ ಇಲ್ಲವಾಗಿದೆ.

ಕೌಟುಂಬಿಕ ಹಾಗೂ ವೈಯುಕ್ತಿಕ ನೆಲೆಯಲ್ಲಿ, ವ್ಯಕ್ತಿಗತವಾಗಿ ಪ್ರತಿ ವ್ಯಕ್ತಿಯೂ ಕಾಣುವ ತಾಯ್ಮಮತೆ, ತಾಯಿಯ ಅಂತಃಕರಣ ಮತ್ತು ಪ್ರೀತಿ ವಾತ್ಸಲ್ಯಗಳನ್ನು ಸುಖವಾಗಿ ಆನಂದಿಸುವ ಹಕ್ಕು ಪ್ರತಿ ವ್ಯಕ್ತಿಗೂ ಇದೆ. ಆದರೆ ಅಂತಾರಾಷ್ಟ್ರೀಯ ಅಮ್ಮಂದಿರ ದಿನವನ್ನು ಆಚರಿಸುವ ಸಂದರ್ಭದಲ್ಲಿ ನಮ್ಮ ದೃಷ್ಟಿಗೆ ಸೌಜನ್ಯಾ ತಾಯಿಯಂತಹ, ಬಿಲ್ಕಿಸ್‌ ಬಾನೋ ಅವರಂತಹ  ಅಮ್ಮಂದಿರು ಬೀಳದೆ ಹೋದರೆ, ನಾವು ಮನುಜ ಸೂಕ್ಷ್ಮತೆಯನ್ನೇ ಕಳೆದುಕೊಂಡಿದ್ದೇವೆ ಎಂದೇ ಅರ್ಥ. ʼಅಮ್ಮʼ ಎಂಬ ಶಕ್ತಿಯನ್ನು ವೈಭವೀಕರಿಸುವುದು ಅಥವಾ ದೈವೀಕ ಹಂತಕ್ಕೇರಿಸಿ ಪೂಜನೀಯವಾಗಿ ಗೌರವಿಸುವುದು ವ್ಯಕ್ತಿನಿಷ್ಠ ಲಕ್ಷಣ. ಆದರೆ ನಮ್ಮ ಸುತ್ತಲಿನ ಸಮಾಜದಲ್ಲಿ ಅಪೌಷ್ಟಿಕತೆ, ಹಸಿವು, ಬಡತನ, ಜಾತಿ ತಾರತಮ್ಯ, ಅಸ್ಪೃಶ್ಯತೆ, ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ಮತಾಂಧರ ದಾಳಿಗಳಿಂದ ನೋವು ಅನುಭವಿಸುವ ಅನೇಕಾನೇಕ ಅಮ್ಮಂದಿರು ನಮ್ಮ ಅಂತರಾತ್ಮವನ್ನು ಕದಡದೆ ಹೋದರೆ, ನಾವು ಮನುಜ ಸೂಕ್ಷ್ಮಸಂವೇದನೆಯನ್ನು ಕಳೆದುಕೊಂಡಿದ್ದೇವೆ ಎಂದೇ ಅರ್ಥ.

ಈ ಸನ್ನಿವೇಶದಲ್ಲಿ ನೆನಪಾಗುವುದು ಮಹಾಶ್ವೇತಾದೇವಿ ಅವರ ಒಂದು ಕತೆ “ ಸ್ತನದಾಯಿನಿ ”. ತಾನೇ ಹೆತ್ತ 20ಕ್ಕೂ ಹೆಚ್ಚು ಮಕ್ಕಳಿಗೆ ಮಾತ್ರವಲ್ಲದೆ, ತನ್ನ ಸೋದರರ, ಸಂಗಾತಿಯ ಕುಟುಂಬದ ಇತರರ ಮಕ್ಕಳಿಗೂ ಮೊಲೆಯೂಡಿಸುತ್ತಾ, ತನ್ನ ದೇಹದೊಳಗೆ ಶಕ್ತಿ ಇರುವವರೆಗೂ ಸಲಹುವ ಒಂದು ಹೆಣ್ಣು, ಕೊನೆಯಲ್ಲಿ ಸ್ತನ ಕ್ಯಾನ್ಸರ್‌ಗೆ ತುತ್ತಾಗಿ ಅಸುನೀಗುವಾಗ, ಅನಾಥಳಾಗಿಬಿಡುತ್ತಾಳೆ. ಮೊಲೆಯೂಡಿಸುವ ದೈಹಿಕ-ಜೈವಿಕ ಶಕ್ತಿ ಇರುವವರೆಗೂ ಮಹಾತಾಯಿ ಎನಿಸಿಕೊಳ್ಳುವ ಒಂದು ಹೆಣ್ಣು, ಕ್ಯಾನ್ಸರ್‌ ಪೀಡಿತಳಾಗಿ, ಹಾಸಿಗೆ ಹಿಡಿದು, ಕೊನೆಯ ದಿನಗಳನ್ನು ತಲುಪಿದಾಗ, ಆಕೆಯೊಳಗಿನ ಅಮ್ಮನ ಅಂತಃಕರಣ, ತಾಯ್ಮಮತೆ, ತಾಯಿ ಹೃದಯ ಮತ್ತು ಮಾತೃತ್ವದ ಭಾವನೆಗಳು ಪುರುಷ ಸಮಾಜಕ್ಕೆ ವರ್ಜ್ಯವೆನಿಸಿಬಿಡುತ್ತದೆ. ಯಾರಿಗೂ ಬೇಡದವಳಾಗಿ ಅಂತ್ಯ ಕಾಣುತ್ತಾಳೆ. ಮಹಾಶ್ವೇತಾದೇವಿ ಹಲವು ದಶಕಗಳ ಹಿಂದೆ ಬರೆದಿರುವ ಈ ಕತೆ ವರ್ತಮಾನ ಭಾರತಕ್ಕೂ ಅನ್ವಯಿಸುತ್ತದೆ. ಇಲ್ಲ ಎನ್ನುವ ದಾರ್ಷ್ಟ್ಯ ನಮ್ಮಲ್ಲಿರಲು ಸಾಧ್ಯವೇ ಇಲ್ಲ.

ಸುಡು ವಾಸ್ತವಗಳ ನಡುವೆ ʼ ಅಮ್ಮ ʼ

ಅಮ್ಮಂದಿರ ದಿನದಂದು ಈ ವಾಸ್ತವ ಸ್ಥಿತಿಗತಿಗಳನ್ನು ಪರಾಮರ್ಶಿಸಿದಾಗ, ನಮ್ಮ ಸಮಾಜವನ್ನು ನಿರ್ದೇಶಿಸಿ-ನಿಯಂತ್ರಿಸಿ-ನಿರ್ವಹಿಸುತ್ತಿರುವ ಪಿತೃಪ್ರಧಾನ ಮೌಲ್ಯಗಳು ದೇಶದ ರಾಜಕೀಯ-ಆಡಳಿತ-ಸಾಂಸ್ಕೃತಿಕ-ಸಾಮಾಜಿಕ ಹಾಗೂ ಬೌದ್ಧಿಕ ವಲಯಗಳಲ್ಲೂ ಸಹ ತನ್ನ ಬೇರುಗಳನ್ನು ಗಟ್ಟಿಯಾಗಿ ಉಳಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಈ ಸಂದಿಗ್ಧ ಸಿಕ್ಕುಗಳ ನಡುವೆ ನಾವು “ ಅಂತಾರಾಷ್ಟ್ರೀಯ ಅಮ್ಮಂದಿರ ದಿನ ” ಆಚರಿಸುತ್ತಿದ್ದೇವೆ. ಮಹಿಳಾ ಸಮೂಹದ ಮಟ್ಟಿಗೆ ನ್ಯಾಯ ಮತ್ತು ಸಮಾನ ಅವಕಾಶ ಎನ್ನುವುದು ಅಮೂರ್ತ ಸ್ವರೂಪ ಪಡೆಯುತ್ತಿರುವಂತೆಯೇ, ಪ್ರಗತಿಪರ ವೇದಿಕೆಗಳೂ ಸಹ, ಹಿಂಬದಿಯಲ್ಲಿ ಅಂಬೇಡ್ಕರ್‌, ಮಾರ್ಕ್ಸ್‌, ಫುಲೆ ಅವರನ್ನು ಬಿಂಬಿಸುತ್ತಲೇ, ಪುರುಷಮಯವಾಗಿರುವ ಒಂದು ವಿದ್ಯಮಾನಕ್ಕೂ ನಾವು ಸಾಕ್ಷಿಯಾಗುತ್ತಿದ್ದೇವೆ. ಇದು ಪ್ರಾತಿನಿಧ್ಯ ಅಥವಾ ಅವಕಾಶದ ಪ್ರಶ್ನೆ ಎನ್ನುವುದಕ್ಕಿಂತಲೂ, ಪ್ರತಿಯೊಬ್ಬ ಮಹಿಳೆಯೊಳಗಿನ ʼ ಅಮ್ಮ ʼ ಮತ್ತು ಎಲ್ಲ ʼ ಅಮ್ಮಂದಿರೊಳಗೆ ʼ ಇರುವ ಹೆಣ್ತನದ ಘನತೆಯನ್ನು ಸಮಾನವಾಗಿ ನೋಡುವ ಪ್ರಶ್ನೆಯಾಗಿ ನಮ್ಮನ್ನು ಕಾಡಬೇಕಿದೆ.

ಭಾರತೀಯ ಸಮಾಜ ತನ್ನೆಲ್ಲಾ ಆಧುನಿಕತೆಯ ನಡುವೆಯೂ, ಮಹಿಳಾ ಸಂವೇದನೆ ಮತ್ತು ಲಿಂಗ ಸೂಕ್ಷ್ಮತೆಯನ್ನು ರೂಢಿಸಿಕೊಳ್ಳದೆ ಇರುವುದು ಶೋಚನೀಯವಷ್ಟೇ ಅಲ್ಲ, ವ್ಯಾಪಕ ಚರ್ಚೆಗೊಳಗಾಗಬೇಕಾದ ವಿಚಾರವಾಗಿದೆ. ಹೆತ್ತ ತಾಯಿಯನ್ನು ಗೌರವಿಸುವ ಅಥವಾ ಪೂಜಿಸುವ ಮನಸ್ಸುಗಳಿಗೆ, ನೆರೆಮನೆಯ ಅಥವಾ ಆಚೆಬದಿ ರಸ್ತೆಯ ಅಥವಾ ಪಕ್ಕದೂರಿನ/ದೂರದೂರಿನ                         ʼ ಅಮ್ಮಂದಿರುʼ  ಮತಾಂಧರ, ಜಾತಿಗ್ರಸ್ತರ ಮತ್ತು ಪುರುಷಾಧಿಪತ್ಯದ ದೌರ್ಜನ್ಯಗಳ ಕಾರಣ ತಮ್ಮ ಮಡಿಲ ಕುಡಿಗಳನ್ನು ಕಳೆದುಕೊಳ್ಳುತ್ತಿರುವುದು, ಸ್ವತಃ ಈ ದೌರ್ಜನ್ಯಗಳಿಗೆ ತುತ್ತಾಗುತ್ತಿರುವುದು ನಮ್ಮ ಅಂತರ್‌ ಪ್ರಜ್ಞೆಯನ್ನು ಬಡಿದೆಬ್ಬಿಸಬೇಕಲ್ಲವೇ ? ನತದೃಷ್ಟ ಹೆಣ್ಣು ಮಗಳು ಸೌಜನ್ಯಳ  ʼ ಅಮ್ಮ ʼ ನೆನಪಾದರೆ ಒಂದೆರಡು ಕಂಬನಿ ಮಿಡಿಯೋಣ.

ಆದರೆ ಈ ಹನಿಗಳಿಂದಾಚೆ ಸಮಾಜದಲ್ಲಿ ಹರಡಿರುವ ಪಿತೃಪ್ರಧಾನ ಮೌಲ್ಯಗಳ ಕಡಲನ್ನು ಭೇದಿಸುವುದು ವರ್ತಮಾನದ ತುರ್ತು. ಅಮ್ಮಂದಿರ ದಿನದ ಸಾರ್ಥಕತೆ ಇಲ್ಲಿ ಅಡಗಿದೆ.

ಸಮಸ್ತ ಮಹಿಳೆಯರಿಗೂ ಅಮ್ಮಂದಿರದ ದಿನದ ಶುಭಾಶಯಗಳು

-೦-೦-೦-

Tags: 2025 mother's daycelebrate mothers daygift for mother's dayhappy mother's dayhappy mothers day songmother's day 2025mother's day churchmother's day giftmother's day historymother's day songsmother's day videomothersmothers daymothers day datemothers day gift ideasmothers day giftsmothers day songwhat is mother's day
Previous Post

ಭಾರತ – ಪಾಕ್​ ಕದನ ವಿರಾಮ ಸ್ವಾಗತಿಸಿದ ಸಿಎಂ.. ಆದರೂ ಕಟ್ಟೆಚ್ಚರ..

Next Post

ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಕೋರಿದ ಹಿರಿಯ ನಟ ಮಂಡ್ಯ ರಮೇಶ್ .

Related Posts

ಅಂಕಣ

“ಬಾಲ ಕಾರ್ಮಿಕ ಪದ್ಧತಿ ಬಗೆಗಿನ ಅರಿವು ಮನೆಗಳಿಂದಲೇ ಮೂಡಲಿʼ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
June 12, 2025
0

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಜಾಥಾ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್‌ ಲಾಡ್‌.ಜಿಲ್ಲಾ ಮಟ್ಟದ ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಿಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಾರ್ಮಿಕ‌ ಇಲಾಖೆಯ...

Read moreDetails

ಡಿಸಿಎಂ DK ಬೆಂಗಳೂರು, ರಾಮನಗರ, ಕನಕಪುರಕ್ಕೆ ಬೇಲಿ ಹಾಕ್ಕೊಂಡವ್ರೆ!

June 12, 2025
ಹುಚ್ಚು ರೀಲ್ಸ್ ರಾಣಿಯರ ಜಮಾನದಲ್ಲಿ,ಒಳ್ಳೆಯವರು ಕಾಣುವುದು ಕೆಲವರು

ಹುಚ್ಚು ರೀಲ್ಸ್ ರಾಣಿಯರ ಜಮಾನದಲ್ಲಿ,ಒಳ್ಳೆಯವರು ಕಾಣುವುದು ಕೆಲವರು

June 12, 2025

ವರ್ಗಾವಣೆಗೊಂಡಿದ್ದ ಐಪಿಎಸ್ ಹೇಮಂತ್ ನಿಂಬಾಳ್ಕರ್ 16ದಿನಗಳ ವಿದೇಶ ಪ್ರವಾಸಕ್ಕೆ ರಜೆ.

June 11, 2025

ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಸಾವುಗಳಾಗಿಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

June 11, 2025
Next Post

ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಕೋರಿದ ಹಿರಿಯ ನಟ ಮಂಡ್ಯ ರಮೇಶ್ .

Recent News

Top Story

ಡಿಸಿಎಂ DK ಬೆಂಗಳೂರು, ರಾಮನಗರ, ಕನಕಪುರಕ್ಕೆ ಬೇಲಿ ಹಾಕ್ಕೊಂಡವ್ರೆ!

by ಪ್ರತಿಧ್ವನಿ
June 12, 2025
ಹುಚ್ಚು ರೀಲ್ಸ್ ರಾಣಿಯರ ಜಮಾನದಲ್ಲಿ,ಒಳ್ಳೆಯವರು ಕಾಣುವುದು ಕೆಲವರು
Top Story

ಹುಚ್ಚು ರೀಲ್ಸ್ ರಾಣಿಯರ ಜಮಾನದಲ್ಲಿ,ಒಳ್ಳೆಯವರು ಕಾಣುವುದು ಕೆಲವರು

by ಪ್ರತಿಧ್ವನಿ
June 12, 2025
Top Story

ವರ್ಗಾವಣೆಗೊಂಡಿದ್ದ ಐಪಿಎಸ್ ಹೇಮಂತ್ ನಿಂಬಾಳ್ಕರ್ 16ದಿನಗಳ ವಿದೇಶ ಪ್ರವಾಸಕ್ಕೆ ರಜೆ.

by ಪ್ರತಿಧ್ವನಿ
June 11, 2025
Top Story

ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಸಾವುಗಳಾಗಿಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

by ಪ್ರತಿಧ್ವನಿ
June 11, 2025
ಕುಸುಮ್‌ ಸಿಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ವಿದ್ಯುತ್: ಸಿಎಂ ಸಿದ್ದರಾಮಯ್ಯ
Top Story

ಕುಸುಮ್‌ ಸಿಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ವಿದ್ಯುತ್: ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
June 11, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಬಾಲ ಕಾರ್ಮಿಕ ಪದ್ಧತಿ ಬಗೆಗಿನ ಅರಿವು ಮನೆಗಳಿಂದಲೇ ಮೂಡಲಿʼ: ಸಚಿವ ಸಂತೋಷ್‌ ಲಾಡ್‌

June 12, 2025

ಡಿಸಿಎಂ DK ಬೆಂಗಳೂರು, ರಾಮನಗರ, ಕನಕಪುರಕ್ಕೆ ಬೇಲಿ ಹಾಕ್ಕೊಂಡವ್ರೆ!

June 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada