“40 ಸಾವಿರ ವರ್ಷಗಳಿಂದಲೂ ಭಾರತೀಯರ ಡಿಎನ್ಎ ಒಂದೇ ಆಗಿದೆ, ನಾನು ಸುಳ್ಳು ಹೇಳುತ್ತಿಲ್ಲ” ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಈ ಹೇಳಿಕೆಯು ನಮ್ಮ ಶ್ರೇಷ್ಠತಾ ವ್ಯಸನ ಮಾತ್ರ ಸೂಚಿಸುವುದಲ್ಲದೇ ನಮ್ಮ ಯೋಚನೆಗಳಲ್ಲಿ ಅಂತರ್ಗತವಾಗಿರುವ ಭ್ರಮೆಗಳನ್ನೂ ಹೊರಹಾಕುತ್ತದೆ. ಯಾಕೆಂದರೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಎಲ್ಲಿಯೂ 40 ಸಾವಿರ ವರ್ಷಗಳಿಂದ ಮನುಷ್ಯರ ಡಿಎನ್ಎ ಒಂದೇ ಆಗಿರಲು ಸಾಧ್ಯವೇ ಇಲ್ಲ ಎನ್ನುತ್ತದೆ ವಿಜ್ಞಾನ.
ಇಂದು ಅಸ್ತಿತ್ವದಲ್ಲಿರುವ ಎಲ್ಲಾ ಮನುಷ್ಯ ಸಂತತಿ ಹಿಂದಿನ ಹಲವು ತಲೆಮಾರುಗಳ ನಡುವಿನ ಮಿಶ್ರಣದ ಪರಿಣಾಮವಾಗಿಯೇ ಉದಯಿಸಿದೆ. ಇತರ ಗುಂಪುಗಳೊಂದಿಗೆ ಬೆರೆಯದ ‘ಶುದ್ಧ’ ಜನಾಂಗದ ಗುಂಪುಗಳಿವೆ ಎಂಬ ಕಲ್ಪನೆಯೇ ಅಸತ್ಯ. ಈ ಕಲ್ಪನೆಯು ಜನ್ಮ ತಳೆದಾಗೆಲ್ಲಾ ಪ್ರಪಂಚದಲ್ಲಿ ಹಿಂಸೆ ಮತ್ತು ತಾರತಮ್ಯ ಭುಗಿಲೆದ್ದಿವೆ. ಇದಕ್ಕೆ ಉತ್ತಮ ಉದಾಹರಣೆ ತಾವು ಅತ್ಯಂತ ಪರಿಶುದ್ಧರು ಎಂದು ವಾದಿಸುತ್ತಿದ್ದ ಹಿಟ್ಲರನ ನಾಜೀ ಪಡೆ ಮತ್ತದು ಎಸಗಿದ ಕ್ರೌರ್ಯ.
ಲೇಖಕ ಟೋನಿ ಜೋಸೆಫ್ ತನ್ನ ‘Early Indians: The Story of Our Ancestors and Where We Came’ ನಲ್ಲಿ ವಿವರಿಸಿದಂತೆ ಇಂದು ಪ್ರಪಂಚದ ಹೆಚ್ಚಿನ ಜನಸಂಖ್ಯೆಯ ಗುಂಪುಗಳು ಇತಿಹಾಸದಲ್ಲಿ ಸಂಭವಿಸಿದ ನಾಲ್ಕು ವರ್ಗಗಳ ಸಾಮೂಹಿಕ ವಲಸೆಯ ಪರಿಣಾಮವಾಗಿದೆ. ಇವುಗಳು ಶತಮಾನಗಳ ಕಾಲ ನಡೆದ ವಲಸೆಗಳು ಮತ್ತು ಐತಿಹಾಸಿಕ ಶಕ್ತಿಗಳಿಂದ ನಡೆಸಲ್ಪಟ್ಟವಾಗಿವೆ.
ಮೊದಲನೆಯದು, ಸುಮಾರು 70,000 ವರ್ಷಗಳ ಹಿಂದೆ ಆರಂಭವಾದ ‘ಆಫ್ರಿಕಾದಿಂದ ಹೊರಗಿರುವ’ ವಲಸೆಗಳು. ಈ ವಲಸೆಯು ಇಡೀ ಜಗತ್ತನ್ನು ಆವರಿಸಿಕೊಂಡಿತ್ತು. ಇನ್ನು ಆಧುನಿಕ ಮಾನವರ ಕೆಲವು ಗುಂಪುಗಳು ಮೆಸೊಪಟ್ಯಾಮಿಯಾ, ಭಾರತ, ಈಜಿಪ್ಟ್ ಮತ್ತು ಚೀನಾದಂತಹ ಸ್ಥಳಗಳಲ್ಲಿ ಕೃಷಿಯನ್ನು ಕೈಗೊಂಡಾಗ ಎರಡನೇ ವರ್ಗದ ವಲಸೆಗಳು ಪ್ರಾರಂಭವಾದವು, ಇದು ಜನಸಂಖ್ಯಾ ಸ್ಫೋಟಗಳಿಗೆ ಕಾರಣವಾಯಿತು ಮತ್ತು ಪರಿಣಾಮವಾಗಿ, ವಲಸೆಗಳು ಶತಮಾನಗಳ ಕಾಲ ನಡೆಯಿತು.
ಮಧ್ಯ ಏಷ್ಯಾದ ಸ್ಟೆಪ್ಪಿಸ್ನಲ್ಲಿನ ಆಧುನಿಕ ಮಾನವರ ಗುಂಪು ವ್ಯಾಗನ್ ತಯಾರಿಕೆ, ಲೋಹಶಾಸ್ತ್ರ ಮತ್ತು ಕುದುರೆ ಸವಾರಿ ಕಲೆಗಳನ್ನು ಕರಗತ ಮಾಡಿಕೊಂಡಾಗ ಮೂರನೇ ವರ್ಗದ ವಲಸೆಯು ಪ್ರಾರಂಭವಾಯಿತು ಮತ್ತು 3000 ಮತ್ತು 1500 BC ನಡುವೆ ಯುರೇಷಿಯಾದಾದ್ಯಂತ ಈ ವಲಸೆಯು ವಿಸ್ತರಿಸಿತು.
ಪ್ರಪಂಚದ ಜನಸಂಖ್ಯಾಶಾಸ್ತ್ರವನ್ನು ಮರುರೂಪಿಸಿದ ಕೊನೆಯ ಮತ್ತು ನಾಲ್ಕನೇ ವರ್ಗದ ವಲಸೆಗಳು ಇತ್ತೀಚಿನ ಶತಮಾನಗಳಲ್ಲಿ ಪ್ರಾರಂಭವಾದವು. ಯುರೋಪ್ನ ಆಧುನಿಕ ಮಾನವರ ಮತ್ತೊಂದು ಗುಂಪು ಸಮುದ್ರಗಳ ಮೇಲೆ ವಿಶಾಲವಾದ ದೂರವನ್ನು ಹೇಗೆ ಕ್ರಮಿಸುವುದು ಮತ್ತು ಹೊಸ ಪ್ರದೇಶಗಳನ್ನು ವಸಾಹತುವನ್ನಾಗಿ ಮಾಡುವುದು ಹೇಗೆ ಎಂದು ಕಂಡುಹಿಡಿಯುವ ಮೂಲಕ ಈ ವಲಸೆಯು ಪ್ರಾರಂಭವಾಯಿತು.
ಭಾರತದ ವಿಚಾರಕ್ಕೆ ಬಂದರೆ ವಲಸೆಯ ನಾಲ್ಕನೇ ವರ್ಗವು ಇಲ್ಲಿನ ಜನಸಂಖ್ಯೆಯ ಮೇಲೆ ದೊಡ್ಡ ಪರಿಣಾಮ ಬೀರಲಿಲ್ಲ. ಏಕೆಂದರೆ ಭಾರತಕ್ಕೆ ಬಂದ ವಸಾಹತುಶಾಹಿ ವಲಸಿಗರ ಸಂಖ್ಯೆ ಅಸ್ತಿತ್ವದಲ್ಲಿರುವ ಜನಸಂಖ್ಯೆಗೆ ಹೋಲಿಸಿದರೆ ತುಂಬಾ ಕಡಿಮೆಯಿತ್ತು. ಆದರೆ ಭಾರತೀಯ ಜನಸಂಖ್ಯಾಶಾಸ್ತ್ರವವನ್ನು ಸುಮಾರು 65,000 ವರ್ಷಗಳ ಹಿಂದೆ ಉಪಖಂಡವನ್ನು ತಲುಪಿದ ‘ಇತರ ಮೂರು ವಲಸೆಗಳು ರೂಪಿಸಿದ್ದವು.
ಅದರಲ್ಲೂ ಬಹು ಮುಖ್ಯವಾಗಿ ಕೃಷಿ-ಸಂಬಂಧಿತ ವಲಸೆಗಳು ಪೂರ್ವ ಮತ್ತು ಪಶ್ಚಿಮ ಎರಡೂ ಕಡೆಗಳಿಂದಲೂ ಭಾರತೀಯ ಜನಸಂಖ್ಯಾಶಾಸ್ತ್ರದ ಮೇಲೆ ಹೆಚ್ಚಿನ ಪ್ರಭಾವ ಬೀರಿದವು. ಮೊದಲ ಭಾರತೀಯರು ಮತ್ತು ಆರಂಭಿಕ ಇರಾನಿನ ರೈತರ ಮಿಶ್ರ ಡಿಎನ್ಎ ಯ ಮೇಲೆ ಸುಮಾರು 9,000 ವರ್ಷಗಳ ಹಿಂದೆ ಪಶ್ಚಿಮದ ವಲಸೆಗಳು ಭಾರತದ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿದವು. ಇದು ಜನಸಂಖ್ಯೆಯ ಸ್ಫೋಟಕ್ಕೂ ಕಾರಣವಾಯಿತು. ಪೂರ್ವದ ವಲಸೆಯು ಸುಮಾರು 4,000 ವರ್ಷಗಳ ಹಿಂದೆಯಷ್ಟೇ ಸಂಭವಿಸಿದ್ದು ಚೀನಾವು ಕೃಷಿಗೆ ತೆರೆದುಕೊಂಡ ಪರಿಣಾಮವಾಗಿ ಪ್ರಾರಂಭವಾದ ಜನಸಂಖ್ಯಾ ಸ್ಪೋಟದ ಅಂತ್ಯವು ಭಾರತವನ್ನು ತಲುಪಿದಾಗ ಆಸ್ಟ್ರೋಯಾಸಿಯಾಟಿಕ್ ಭಾಷೆಗಳನ್ನೂ ತನ್ನೊಂದಿಗೆ ತಂದಿತು.
ಭಾರತಕ್ಕೆ ಇಂಡೋ-ಯುರೋಪಿಯನ್ ಭಾಷೆಗಳನ್ನು ತಂದ ಯುರೇಷಿಯನ್ ಸ್ಟೆಪ್ಪಿ ವಲಸೆಗಳು 2000 BCE ಮತ್ತು 1500 BCE ನಡುವೆ ಸಂಭವಿಸಿದವು ಎಂದು 2019 ರಲ್ಲಿ ಪ್ರಕಟವಾದ ‘ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಮಾನವ ಜನಸಂಖ್ಯೆಯ ರಚನೆ’ ಎಂಬ ಅಧ್ಯಯನವು ವಿವರಿಸಿದೆ. ಸುಮಾರು 1,500 BC ಯ ಹೊತ್ತಿಗೆ, ಭಾರತೀಯ ಜನಸಂಖ್ಯಾಶಾಸ್ತ್ರದ ಬಹುತೇಕ ಎಲ್ಲಾ ನಾಲ್ಕು ಪ್ರಮುಖ ಘಟಕಗಳು ಬಂದವು ಮತ್ತು ಆನುವಂಶಿಕ ಅಧ್ಯಯನಗಳು ಸುಮಾರು 100 AD ವರೆಗೆ ಅಪರೂಪವಾಗಿ ಜನಸಂಖ್ಯೆಯ ಮಿಶ್ರಣವಾಗಿದೆ ಎಂದು ಹೇಳುತ್ತದೆ. ಮತ್ತು ಕ್ರಿ.ಶ 100ರ ಸುಮಾರಿಗೆ ಈ ವಲಸೆಯು ಕೊನೆಗೊಂಡಿತು ಎಂದು ಅಧ್ಯಯನಗಳು ಹೇಳುತ್ತವೆ. ಸರಿಸುಮಾರು ಅದೇ ಹೊತ್ತಿಗೆ ಜಾತಿ ವ್ಯವಸ್ಥೆಯ ವಿಶಿಷ್ಟ ಲಕ್ಷಣವಾದ ಎಂಡೋಗಮಿ ಅಂದರೆ ಸಮುದಾಯದೊಳಗಿಂದಲೇ ಮದುವೆಯಾಗುವ ಸಂಪ್ರದಾಯ ಪ್ರಾರಂಭವಾಯಿತು ಎಂದೂ ಆ ಅಧ್ಯಯನ ಸೂಚಿಸುತ್ತದೆ.
ದಕ್ಷಿಣ ಭಾರತದಲ್ಲಿ ಸ್ಟೆಪ್ಪಿ ವಂಶಾವಳಿಯನ್ನು ಹೊಂದಿರದ ಬೆರಳೆಣಿಕೆಯಷ್ಟು ಜನಸಂಖ್ಯೆಯ ಗುಂಪುಗಳು ಇದ್ದರೂ, ಭಾರತದಲ್ಲಿನ ಬಹುತೇಕ ಎಲ್ಲಾ ಜನಸಂಖ್ಯೆಯ ಗುಂಪುಗಳು ಈ ನಾಲ್ಕು ದೊಡ್ಡ ವಲಸೆಗಳ ಪ್ರಭಾವವನ್ನು ವಿವಿಧ ಹಂತಗಳಲ್ಲಿ ಹೊಂದಿವೆ ಎಂದೇ ಹೇಳಬಹುದು.
ಒಟ್ಟಾರೆಯಾಗಿ, ಈ ಎಲ್ಲಾ ಅಧ್ಯಯನಗಳ ಆಧಾರದ ಮೇಲೆ, ಮೊದಲನೆಯದಾಗಿ ಭಾರತೀಯರು,ಜಾತಿ ಶ್ರೇಣಿಯಲ್ಲಿ ಎಲ್ಲಿ ನಿಂತಿದ್ದಾರೆ, ಯಾವ ಭಾಷೆಯನ್ನು ಮಾತನಾಡುತ್ತಾರೆ, ಯಾವ ಪ್ರದೇಶದಲ್ಲಿ ವಾಸಿಸುತ್ತಾರೆ ಅಥವಾ ಅವರು ಯಾವ ಧರ್ಮವನ್ನು ಅನುಸರಿಸುತ್ತಾರೆ ಎಂಬ ಯಾವ ಬೇಧವೂ ಇಲ್ಲದೆ ತಮ್ಮ ಪೂರ್ವಜರಿಂದ ಡಿಎನ್ಎಯ ಹೆಚ್ಚಿನ ಭಾಗವನ್ನು ಪಡೆದುಕೊಂಡಿದ್ದಾರೆ. ಎರಡನೆಯದಾಗಿ, ಉತ್ತರ ಮತ್ತು ಪಶ್ಚಿಮ ಭಾರತೀಯರು ಹೆಚ್ಚು ಪಶ್ಚಿಮ ಯುರೇಷಿಯನ್ ಪೂರ್ವಜರ ಡಿಎನ್ಎ ಯನ್ನೇ ವಂಶವಾಹಿಯಾಗಿ ಪಡೆದಿರುವ ಸಾಧ್ಯತೆ ಇದೆ. ಮೂರನೆಯದಾಗಿ ಪೂರ್ವ ಭಾರತೀಯರು ಹೆಚ್ಚು ಪೂರ್ವ ಏಷ್ಯಾದ ಪೂರ್ವಜರನ್ನು ಡಿಎನ್ಎ ಹೊಂದಿರುವ ಸಾಧ್ಯತೆ ಇದೆ ಮತ್ತು ಕೊನೆಯದಾಗಿ ದಕ್ಷಿಣ ಭಾರತೀಯರು ಹೆಚ್ಚು ಮೂಲ ಭಾರತೀಯ ಸಂತತಿಯನ್ನು ಸಾಗಿಸುವ ಸಾಧ್ಯತೆಯಿದೆ ಎಂದು ಹೇಳಬಹುದು. ಒಟ್ಟಾರೆ ಮಿಶ್ರವಾಗದ ಯಾವುದೇ ಭಾರತೀಯ ಜನಸಂಖ್ಯೆಯ ಗುಂಪು ಇಲ್ಲ ಹಾಗೆಯೇ ವಿಶ್ವದ ಯಾವುದೇ ಆಧುನಿಕ ಮಾನವ ಮಿಶ್ರಣಗೊಳ್ಳದೇ ರೂಪುಗೊಂಡಿಲ್ಲ.
ಆದ್ದರಿಂದ, 40,000 ವರ್ಷಗಳಿಂದ ಭಾರತದಲ್ಲಿನ ಎಲ್ಲಾ ಜನರ ಡಿಎನ್ಎ ಒಂದೇ ಆಗಿರುತ್ತದೆ ಎಂದು ಹೇಳುವುದು ಅತ್ಯಂತ ಪ್ರಜ್ಞಾಪೂರ್ವಕ ಸುಳ್ಳು ಮತ್ತು ಶ್ರೇಷ್ಠತಾ ವ್ಯಸನದ ಪರಾಕಾಷ್ಠೆ ಎನ್ನಬಹುದು.