ಕಲಬುರಗಿ: ಮೋದಿ ಬಂದು ಕೇವಲ ʻಭಾಯಿಯೋ, ಬೆಹನೋ ಅಂದ್ರೆ ಸಾಕಾ?ʼ ಜನರ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ವೆಚ್ಚ ಮಾಡುತ್ತಿದ್ದು, `ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’ ಮಾಡ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಫರಹತಾಬಾದ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಕಾರ್ಯಕ್ರಮಕ್ಕೆ ಖರ್ಚು ವೆಚ್ಚ ಯಾರು ಕೊಡ್ತಿದ್ದಾರೆ. ನಾಡಿನ ಜನರ ತೆರಿಗೆ ಹಣವನ್ನು ಗೌರವಿಸಬೇಕು. ಚುನಾವಣಾ ಸಂದರ್ಭದಲ್ಲಿ ಸರ್ಕಾರದ ಹಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದು, ಮೋದಿ ಅವರೇ ತಮ್ಮ ಕಾರ್ಯಕ್ರಮಕ್ಕೆ ಯಾರು ದುಡ್ಡು ಕೊಡ್ತಿದ್ದಾರೆ ಎಂಬುದನ್ನ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಏನು ಸಂದೇಶ ನೀಡ್ತಿದ್ದಾರೆ. ಕೇವಲ ಭಾಯಿಯೋ, ಬೆಹನೋ ಅಂದರೆ ಸಾಕಾ? ಜನರ ಸಮಸ್ಯೆ ಏನಿದೆ? ಎಂಬುದು ತಿಳಿಯುವುದು ಬೇಡ್ವಾ? ರಾಜ್ಯ ಸರ್ಕಾರ ಈಗಾಗಲೇ ಸಾಲದ ಹೊರೆಯಲ್ಲಿದೆ. ಇದೀಗ ಈ ರೀತಿಯಾಗಿ ಕಾರ್ಯಕ್ರಮ ಮಾಡಿ, ಸಾಲದ ಹೊರೆ ಇನ್ನಷ್ಟು ಹೆಚ್ಚು ಮಾಡುತ್ತಿದೆ. ಈ ಬಾರಿ ಜನರು ನಿಮ್ಮನ್ನ ತಿರಸ್ಕಾರ ಮಾಡೋದು ಗ್ಯಾರಂಟಿ ಎಂದು ಹೇಳಿದ್ದಾರೆ
ಕಾಂಗ್ರೆಸ್ ಪಕ್ಷ 200 ಯೂನಿಟ್ ವಿದ್ಯುತ್ ಉಚಿತ ಘೋಷಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, 200 ಯೂನಿಟ್‌ಗೆ 800 ರೂ. ವಿನಾಯತಿ ಸಿಗುತ್ತದೆ. ಅದೇನು ದೊಡ್ಡ ಕಾರ್ಯಕ್ರಮವಲ್ಲ. ನಮ್ಮ ಪಂಚರತ್ನ ಯೋಜನೆಗೆ ಅದು ಸರಿಸಾಟಿಯೇ ಇಲ್ಲ. ಜೆಡಿಎಸ್ ಪಕ್ಷದ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಹೈಜಾಕ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಿನ್ನೆ ಪೊರಕೆ ಹಿಡಿದು ಕಸ ಗುಡಿಸಿದ್ದು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸ್ವಂತಿಕೆಯಲ್ಲ. ಕಸವಿಲ್ಲದ ರಸ್ತೆಯಲ್ಲಿ ಪೊರಕೆ ಹಿಡಿದು ನಿಂತಿದ್ದಾರೆ. ಅವರು ಸರ್ಕಾರದಲ್ಲಿದ್ದಾಗ ಎಷ್ಟು ಹಣ ಲೂಟಿ ಮಾಡಿದ್ದಾರೆ. ಇದೀಗ ಭ್ರಷ್ಟಾಚಾರ ಸ್ವಚ್ಛ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.