ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದ ವಿಜಯಪುರ(Vijayapura), ಕೋಲಾರ ಮತ್ತು ಕಲಬುರಗಿ(Kalaburagi) ಜಿಲ್ಲೆಗಳಲ್ಲಿ ನಿರಂತರ ಭೂಮಿ ಕಂಪಿಸಿದ ಅನುಭವ ಆಗುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಲ್ಲಿ ಕನಿಷ್ಟ 10 ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದ ಅನುಭವ ಈ ಪ್ರದೇಶದಲ್ಲಿ ಆಗಿದೆ.
ಕಳೆದೊಂದು ತಿಂಗಳಿಂದ ಭೂಮಿ ಕಂಪಿಸುತ್ತಿದ್ದರೂ ಈ ಸರಣಿ ಕಂಪನಗಳು ಭೂಕಂಪನವೋ ಅಥವಾ ಕೇವಲ ಭೂಮಿಯ ಸಹಜ ಪ್ರಕ್ರಿಯೆಯಿಂದ ಬರುತ್ತಿರುವ ಸದ್ದೋ ಎಂದು ಸ್ಪಷ್ಟಗೊಳ್ಳದೆ ಜನರು ಗೊಂದಲಕ್ಕೊಳಗಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಗಡಿಕೇಶ್ವಾರದ ಜನರು ಸೋಮವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ತಮ್ಮ ಆತಂಕಕ್ಕೆ ಉತ್ತರ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳಾಗಲಿ ಅಥವಾ ತಜ್ಞರಾಗಲಿ ಇದುವರೆಗೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸೆ.4ರಿಂದ ಇದುವರೆಗೆ ಜಿಲ್ಲೆಯ ವಿಜಯಪುರ, ಸಿಂದಗಿ, ಬಸವನ ಬಾಗೇವಾಡಿ, ಕೊಲ್ಹಾರ, ತಿಕೋಟಾ ಮೊದಲಾದ ತಾಲೂಕುಗಳಲ್ಲಿ ಭೂಮಿ ಕಂಪಿಸಿದ್ದು, ಐದು ಬಾರಿ ಭೂಕಂಪನವು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ.
ಕಲಬುರಗಿಯ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದ ಸುತ್ತಮುತ್ತ ಕಳೆದ 6 ವರ್ಷದಿಂದ ಭೂಮಿಯೊಳಗಿನಿಂದ ಭಾರೀ ಸದ್ದು ಮತ್ತು ಭೂಮಿ ಕಂಪಿಸಿದ ಅನುಭವ ಆಗುತ್ತಿದೆ. ಭಾನುವಾರವೂ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.4 ಕಂಪನ ದಾಖಲಾಗಿದೆ.
ಆತಂಕ ಬೇಡ ಎಂದಿದ್ದ ಭೂವಿಜ್ಞಾನಿಗಳು:
ಈ ಪ್ರದೇಶದಲ್ಲಿ ಈ ಹಿಂದಿನಿಂದಲೂ ಭೂಮಿ ಕಂಪಿಸಿದ ಅನುಭವ ಆಗುತ್ತಿರುವುದರಿಂದ ಕಳೆದ ವರ್ಷದ ಆಗಸ್ಟ್, ಸೆಪ್ಟೆಂಬರ್ನಲ್ಲಿ ರಾಜ್ಯ ಪ್ರಕೃತಿ ವಿಕೋಪ ಕೋಶದ ಹಿರಿಯ ತಜ್ಞರು, ಭೂವಿಜ್ಞಾನಿಗಳು ಇದ್ದ ನಾಲ್ವರ ತಂಡ ಭೇಟಿ ನೀಡಿ ಭೂ ಪದರಿನ ಅಧ್ಯಯನ ಮಾಡಿ ಹೋಗಿತ್ತು.
ಅತಿಯಾದ ಮಳೆಯಾದಾಗ ಅಲ್ಲಲ್ಲಿ ಮಡುಗಟ್ಟಿನಿಂತ ಮಳೆ ನೀರು ಭೂಮಿಯೊಳಗೆ ಸಾಗುವಾಗ ಭೂಮಿಯ ಕೆಳಗಡೆ ಇರುವ ಶಿಲಾ ಪದರಗಳಲ್ಲಿ ನಡೆಯುವ ಪ್ರಕ್ರಿಯೆ ಇಂತಹ ಸದ್ದಿಗೆ ಹಾಗೂ ಸಣ್ಣ ಕಂಪನಗಳಿಗೆ ಮೂಲ ಕಾರಣ. ಇದು ಸಹಜ ಪ್ರಕ್ರಿಯೆಯಾಗಿದ್ದು ಯಾವುದೇ ಅನಾಹುತ ಆಗುವುದಿಲ್ಲ. ಹಾಗಾಗಿ ನಾಗರಿಕರು ಆತಂಕ ಪಡಬೇಕಿಲ್ಲ ಎಂದು ತಜ್ಞರ ತಂಡ ಹೇಳಿ ಹೋಗಿತ್ತು. ಅದಾಗ್ಯೂ, ನಿರಂತರ ಕಂಪನದ ಹಾಗೂ ಭೂಮಿಯೊಳಗಿನ ಭಾರಿ ಶಬ್ದ ಕೇಳಿಬರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ವಿಜಯಪುರ ಜಿಲ್ಲೆಯು ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಬೃಹತ್ ಆಲಮಟ್ಟಿಅಣೆಕಟ್ಟನ್ನು ಹೊಂದಿದೆ. ಅಣೆಕಟ್ಟಿನ ನೀರು ಭೂಮಿಯಲ್ಲಿ ಇಂಗಿ ಆಳವನ್ನು ಸೇರುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಕೆರೆ ನೀರು ಸಂಗ್ರಹ ಕೂಡ ಹೆಚ್ಚಾಗಿದ್ದರಿಂದ ಅಂತರ್ಜಲಮಟ್ಟ ಹೆಚ್ಚಳವಾಗಿದೆ.
ಇವೆಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಕಪ್ಪು ಮಣ್ಣು ಹೆಚ್ಚಾಗಿದ್ದು, ಕಪ್ಪು ಮಣ್ಣಿನಲ್ಲಿ ನೀರು ವೇಗವಾಗಿ ಇಂಗುತ್ತವೆ. ಅದೂ ಅಲ್ಲದೆ ಕಪ್ಪು ಮಣ್ಣು ಭೂಮಿಯೊಳಗೆ ಶಿಲಾಪದರಗಳು ಘರ್ಷಣೆಗೆ ಒಳಗಾಗುತ್ತವೆ. ಹಾಗಾಗಿ, ಈ ಭಾಗದಲ್ಲಿ ಕಂಪನದ ಅನುಭವ ಹಾಗೂ ಭೂಮಿಯೊಳಗಿನಿಂದ ಭಾರಿ ಸದ್ದು ಕೇಳಿಬರುತ್ತದೆ ಎಂದು ಈ ಹಿಂದೆ ಬಸವನಬಾಗೇವಾಡಿ ತಾಲೂಕಿನ ಗ್ರಾಮಗಳಲ್ಲಿ ಭೂಮಿ ಕಂಪಿಸಿದಾಗ ವಿಜಯಪುರದಿಂದ ಬಂದಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ತಂಡ ಹೇಳಿತ್ತು.
ಹೆಚ್ಚು ಮಳೆಯಾದ ಕಡೆಗೆ ಭೂಮಿಯೊಳಗಿನ ಸ್ತರಗಳು ಚಲಿಸುತ್ತವೆ. ಇಂತಹ ಸಂದರ್ಭದಲ್ಲಿ ಭೂಕಂಪನದಂತಹ ಅನುಭವವಾಗುತ್ತದೆ. ಆದರೆ, ಅದು ಭೂಕಂಪನವಲ್ಲ ಎಂದು ಈ ತಂಡ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಭಾಗಗಳಲ್ಲಿ ಸಂಭವಿಸುತ್ತಿರುವ ಭೂಕಂಪನದ ಅನುಭವಕ್ಕೂ ಇದೆ ಕಾರಣವಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್ ವರಗೆ ವಾಡಿಕೆ ಮಳೆ 552 ಮಿಲಿ ಮೀಟರ್ ಮಳೆಯಾಗುತ್ತಿತ್ತು. ಆದರೆ ಈ ಬಾರಿ 742 ಮಿಲಿ ಮೀಟರ್ ಮಳೆಯಾಗಿದೆ. ಅದರಲ್ಲೂ ಭೂಕಂಪ ಅನುಭವವಾಗುತ್ತಿರುವ ಕಾಳಗಿ, ಚಿಂಚೋಳಿ ತಾಲೂಕಿನಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗಿದೆ. ಹೆಚ್ಚು ಮಳೆಯಾಗುತ್ತಿರುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚಾಗುತ್ತಿದೆ. ಈ ಭಾಗದಲ್ಲಿ ಸುಣ್ಣದ ಕಲ್ಲು ಹೆಚ್ಚಾಗಿದ್ದು, ಇದು ಭೂಮಿಯೊಳಗಿನ ನೀರು ಹೆಚ್ಚಾದಂತೆ ಸುಣ್ಣದ ಕಲ್ಲಿನ ಜೊತೆ ನೀರು ಮಿಶ್ರಣಗೊಂಡಾಗ, ಕೆಮಿಕಲ್ ರಿಯಾಕ್ಷನ್ ಆಗಿ ಭೂಮಿಯಿಂದ ಸದ್ದು ಬರುತ್ತದೆ. ಹೆಚ್ಚಿನ ಮಳೆಯಿಂದ ಭೂಕಂಪನ ಸಂಭವಿಸುತ್ತಿವೆ ಎಂದು ಭೂ ವಿಜ್ಞಾನಿಗಳು ಹೇಳಿದ್ದಾರೆ.
ಗ್ರಾಮಗಳನ್ನು ತೊರೆಯುತ್ತಿರುವ ಜನರು
ಗಡಿಕೇಶ್ವರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಲಘು ಭೂಕಂಪನದಿಂದ ಅನೇಕ ಮನೆಗಳು ಬಿರಕು ಬಿಟ್ಟಿದ್ದರೆ, ಇನ್ನು ಅನೇಕರ ಮನೆಗಳ ಗೋಡೆಗಳು ನೆಲಕ್ಕುರುಳಿವೆ. ಗಡಿಕೇಶ್ವರ ಗ್ರಾಮದಲ್ಲಿಯೇ ಹತ್ತಕ್ಕೂ ಹೆಚ್ಚು ಜನರ ಮನೆಗಳು ಗೋಡೆಗಳು ಬಿದ್ದಿವೆ. ನೂರಾರು ಜನರ ಮನೆಗಳು ಬಿರಕು ಬಿಡುತ್ತಿವೆ. ಇನ್ನು ಗಡಿಕೇಶ್ವರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರು ತಮ್ಮ ಮನೆಗಳ ಮೇಲ್ಛಾವಣಿಗೆ ಕಲ್ಲಿನ ಹೊದಿಕೆ ಹಾಕಿದ್ದಾರೆ. ಅನೇಕರು ಮನೆಗಳು ತುಂಬಾ ಹಳೆಯ ಮನೆಗಳಾಗಿವೆ. ಹೀಗಾಗಿ ಮನೆಯೊಳಗೆ ಮಲಗಿದ್ದಾಗ, ಭೂಕಂಪನವಾದರೆ ನಮ್ಮ ಗತಿಯೇನು ಎನ್ನುವ ಚಿಂತೆಯಲ್ಲಿ ಗ್ರಾಮಗಳ ಜನರು ಇದ್ದಾರೆ.
ಭೂ ಕಂಪನದ ಅನುಭವದಿಂದ ಜನರು ರಾತ್ರಿಯಿಡಿ ಬೀದಿ ಬೀದಿಗಳಲ್ಲಿ ಕಾಲ ಕಳೆಯುವಂತಾಗಿದೆ. ಇನ್ನು ಕೆಲವರು ತಮ್ಮ ಸಂಬಂಧಿಕರ ಮನೆಗಳಿಗೆ ಸಾಮಾನು ಸರಂಜಾಮುಗಳೊಂದಿಗೆ ಗುಳೆ ಹೋಗುತ್ತಿದ್ದಾರೆ.