ದೇಶಾದ್ಯಂತ ಎಸ್ ಡಿಪಿಐ ಹಾಗೂ ಪಿಎಫ್ ಐ ಸಂಘಟನೆಗಳ ಕಚೇರಿಗಳ ಮೇಲೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಪಡೆ (ಎನ್ ಐಎ) ಕಾರ್ಯಾಚರಣೆಗೆ ಆಪರೇಷನ್ ಮಿಡ್ ನೈಟ್ ಎಂದು ಹೆಸರಿಡಲಾಗಿತ್ತು.
ಹೆಚ್ಚು ಓದಿದ ಸ್ಟೋರಿಗಳು
ದೇಶದ 11 ರಾಜ್ಯಗಳ ಹಲವಾರು ಕಡೆ ಗುರುವಾರ ತಡರಾತ್ರಿ ಏಕಕಾಲದಲ್ಲಿ ದಾಳಿ ನಡೆಸಿದ ಎನ್ ಐಎ ಪಡೆಯಲ್ಲಿ 200 ಅಧಿಕಾರಿಗಳು ಪಾಲ್ಗೊಂಡಿದ್ದರು. ಅತ್ಯಂತ ಗೌಪ್ಯವಾಗಿ ಸಿದ್ಧತೆ ನಡೆಸಿದ ಅಧಿಕಾರಿಗಳು ಸುಮಾರು ತಿಂಗಳ ಕಾಲ ಈ ಎರಡೂ ಸಂಘಟನೆಗಳ ಮುಖಂಡರ ಚಲನವಲನಗಳ ಮೇಲೆ ನಿಗಾ ವಹಿಸಿತ್ತು.
ಉಗ್ರ ಸಂಘಟನೆಗಳ ಸಂಪರ್ಕ ಹೊಂದಿದ ಶಂಕೆ ಮೇಲೆ ಈ ದಾಳಿ ನಡೆದಿದ್ದು, ಉತ್ತರ ಪ್ರದೇಶದ ಮಾಜಿ ಖಚಾಂಜಿ ಸೇರಿದಂತೆ ವಿವಿಧ ರಾಜ್ಯಗಳ ಹಲವಾರು ಮುಖಂಡರು ಸೇರಿದಂತೆ ೧೦೬ ಮಂದಿಯನ್ನು ಎನ್ ಐಎ ವಶಕ್ಕೆ ಪಡೆದಿದೆ.

ಆಪರೇಷನ್ ಮಿಡ್ ನೈಟ್ ಹೆಸರಿನಲ್ಲಿ ಎನ್ ಐಎ ರಾತ್ರಿ ಕಾರ್ಯಾಚರಣೆ ಮಾಡಲು ಕಾರಣ ಸಂಘಟನೆಗಳ ಮುಖಂಡರು ಯಾರೂ ತಪ್ಪಿಸಿಕೊಳ್ಳಲು ಅವಕಾಶ ಸಿಗಬಾರದು ಎಂಬುದಾಗಿತ್ತು. ಅಲ್ಲದೇ ಬಂಧನದ ವೇಳೆ ಕಾರ್ಯಕರ್ತರು ಗಲಾಟೆ ಮಾಡಿ ಗೊಂದಲ ಸೃಷ್ಟಿಯಾಗದೇ ಇರಲು ಎಂದು ಮಧ್ಯರಾತ್ರಿ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಗಾಗಿ ಪ್ರತ್ಯೇಕವಾಗಿ 6 ಕಂಟ್ರೋಲ್ ರೂಮ್ ಗಳನ್ನು ಸಿದ್ಧಪಡಿಸಲಾಗಿತ್ತು. ಇಡೀ ಕಾರ್ಯಾಚರಣೆಯ ಮೇಲೆ ಗೃಹ ಸಚಿವಾಲಯ ನಿಗಾ ವಹಿಸಿತ್ತು.
ಕಾರ್ಯಾಚರಣೆಯಲ್ಲಿ ಎನ್ ಐಎನ 200 ಅಧಿಕಾರಿಗಳು ಪಾಲ್ಗೊಂಡಿದ್ದು, ಅದರಲ್ಲಿ ಐಜಿ, ಎಡಿಜಿ. 16 ಎಸ್ ಪಿಗಳು ನೇತೃತ್ವ ವಹಿಸಿದ್ದರು.
ಎಸ್ ಡಿಪಿಐ, ಪಿಎಫ್ ಐ ಸಂಘಟನೆಯ 106 ನಾಯಕರನ್ನು ಬಂಧಿಸಲಾಗಿದ್ದು, 200ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ 150 ಮೊಬೈಲ್ ಫೋನ್, ಲ್ಯಾಪ್ ಟಾಪ್, ಕಚೇರಿ ಹಾಗೂ ಮನೆಗಳಲ್ಲಿ ಇದ್ದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.