ನಾ ದಿವಾಕರ
ಒಂದು ಸುಂದರ ನೆನಪು :
ಆಜೀವ ʼಕೆಲವು ವ್ಯಕ್ತಿಗಳ ಸಾಂಗತ್ಯ ಭಾವ ಅವರ ಅಗಲಿಕೆಯ ಅನಂತರವೂ ಜೊತೆಯಲ್ಲೇ ಇರುತ್ತದೆನಾ ದಿವಾಕರಒಂದು ಸುಂದರ ನೆನಪು :
ಜನವರಿ 1 1993 : ಹೊಸ ವರ್ಷದ ಮೊದಲ ದಿನ. ನನ್ನೂರು ಬಂಗಾರಪೇಟೆಯಲ್ಲಿ ಹೊಸ ಮನೆಯನ್ನು ಪ್ರವೇಶಿಸಿ ಆರು ತಿಂಗಳಾಗಿರಬಹುದು. ಮುಂಜಾನೆ ಎಚ್ಚರವಾಗುವ ಮುನ್ನವೇ ಸುಮಾರು ಆರು ಗಂಟೆಯ ವೇಳೆ ಕಾಲಿಂಗ್ ಬೆಲ್ ಸದ್ದು. ಎದ್ದು ಕಣ್ಣುಜ್ಜಿಕೊಂಡು ಬಾಗಿಲು ತೆಗೆದಾಗ ಕಂಡ ಅಚ್ಚರಿ ಇಂದಿಗೂ ಮನದಾಳದಲ್ಲಿ ಅಚ್ಚೊತ್ತಿದಂತಿದೆ. ಬಾಗಿಲಲ್ಲಿ ಕಂಡಿದ್ದು ನಗುಮೊಗದ ದಂಪತಿಗಳು, ಮುದ್ದಾದ ಮೂವರು ಹೆಣ್ಣು ಮಕ್ಕಳು. ಹೀಗೆ ಅಚ್ಚರಿಯ ಭೇಟಿ ನೀಡಿ ಅವಾಕ್ಕಾಗುವಂತೆ ಮಾಡಿ ಹೊಸ ವರ್ಷವನ್ನು ಸಾರ್ಥಕಗೊಳಿಸಿದ್ದು ನನ್ನ ಸೀತಣ್ಣ ಮತ್ತವರ ಕುಟುಂಬ. ಅತ್ತಿಗೆ ರತ್ನಮ್ಮ, ಮಕ್ಕಳಾದ ರೇಖಾ, ರಷ್ಮಿ ಮತ್ತು ರಜನಿ. ನನಗಷ್ಟೇ ಅಲ್ಲ ನನ್ನೊಡನೆ ಇದ್ದ ಅಣ್ಣ ಮತ್ತು ಮಡದಿಗೂ ಉಂಟಾದ ಹರುಷಕ್ಕೆ ಪಾರವೇ ಇಲ್ಲ. ಎರಡು ಮೂರು ದಿನಗಳ ಕಾಲ ಅವರೊಡನೆ ಕಳೆದ ಮಧುರ ಕ್ಷಣಗಳು ಮೂರು ದಶಕಗಳು ಕಳೆದರೂ ಮಾಸದೆ ಉಳಿದಿದೆ. ಆದರೆ ಕೆಲವೇ ತಿಂಗಳ ಕಳೆದು,,,,,,
ವಿಷಾದದ ಆ ಕ್ಷಣ :
ಈ ಮಧುರ ನೆನಪುಗಳು ಇನ್ನೂ ಹಸಿರಾಗಿರುವಾಗಲೇ ಬರಸಿಡಿಲಿನಂತೆ ಬಂದೆರಗಿದ ಸುದ್ದಿ. ಏಪ್ರಿಲ್ 17 1993 . “ ಸೀತಣ್ಣ ಹೋಗಿಬಿಟ್ಟರಂತೆ ”. ಮರೆಯಲಾಗದ ವ್ಯಕ್ತಿತ್ವವೊಂದು ನಮ್ಮ ನಡುವಿನಿಂದ ಸದ್ದಿಲ್ಲದೆ ಜಾರಿಹೋದಾಗ ಉಂಟಾಗುವ ವೇದನೆ ಶಾಶ್ವತವಾದದ್ದು. ಇಂದಿಗೂ ಸದಾ ಕಾಡುವ ಪ್ರಶ್ನೆ “ಏಕೆ ಹೀಗಾಯ್ತು”. ಮನದಾಳದಲ್ಲಿ ಇಂದಿಗೂ ಮೂಡುವ ಭಾವ “ ಛೇ ಹೀಗಾಗಬಾರದಿತ್ತು !”. ಪದೇ ಪದೇ ಅನ್ನಿಸುವುದು “ ಸೀತಣ್ಣ ಇರಬೇಕಿತ್ತು !”. ಏಕೆಂದರೆ ಆ ವ್ಯಕ್ತಿತ್ವವೇ ಅಂತಹುದು, ಮರೆಯಲಾಗದಂತಹುದು. ಕೆಲ ಕಾಲದ ನಂತರ ಮಕ್ಕಳು ಹೇಳಿದ್ದು : “” ಮಾಮ ನಾವು ಕುಟುಂಬ ಸಮೇತರಾಗಿ ಮೊಟ್ಟಮೊದಲ ಸಲ ಹೊರ ಊರಿಗೆ ಹೋಗಿದ್ದು ಅಂದರೆ ನಿಮ್ಮ ಮನೆಗೆ,,, ಅದೇ ಕಡೆಯೂ ಆಯಿತು,,,,,,” ಈಗಲೂ ಮನಸ್ಸಿಗೆ ಖೇದ ಉಂಟುಮಾಡುವ ಮುಗ್ಧ ಮಾತುಗಳಿವು.
ಅಪೂರ್ವ ವ್ಯಕ್ತಿತ್ವದ ನೆನಪಿನಲ್ಲಿ
ಜೀವನದ ಪಯಣದಲ್ಲಿ ಹಾದು ಹೋಗುವವರ ಸಂಖ್ಯೆ ಎಷ್ಟೆಂದು ಲೆಕ್ಕ ಇಡಲು ಯಾರಿಂದಲೂ ಸಾಧ್ಯವಿಲ್ಲ. ಬಹುಶಃ ದಿನಚರಿ ಬರೆಯುವ ಹವ್ಯಾಸ ಇದ್ದರೆ ಕೊಂಚ ಮಟ್ಟಿಗೆ ಸಾಧ್ಯವಾಗಬಹುದು. ಒಡಹುಟ್ಟಿದವರು-ಕರುಳ ಸಂಬಂಧಿಗಳು-ಕೌಟುಂಬಿಕ ಸಂಬಂಧಗಳು ಅನಿವಾರ್ಯವಾಗಿ ನಮ್ಮೊಡನೆ ಸದಾ ಕಾಲವೂ ಇರುವುದರಿಂದ ವಿಸ್ಮೃತಿಗೆ ಜಾರುವ ಸಂದರ್ಭಗಳು ಕಡಿಮೆ. ಆದರೆ ಈ ನೈಸರ್ಗಿಕ ಸಂಬಂಧಗಳಿಂದಾಚೆಗೂ, ಬದುಕಿನ ಒಂದು ಘಟ್ಟದಲ್ಲಿ ಕೆಲವು ವ್ಯಕ್ತಿಗಳು ವೈಯುಕ್ತಿಕ ಪಯಣದಲ್ಲಿ ಎದುರಾಗುತ್ತಾರೆ. ಮಾತು-ಕತೆ, ಸ್ನೇಹ, ಒಡನಾಟ, ಆಪ್ತತೆ, ಆತ್ಮೀಯತೆ ಈ ಎಲ್ಲ ಅಂಶಗಳನ್ನೂ ದಾಟಿ ಕೆಲವು ವ್ಯಕ್ತಿಗಳ ಸಾಮೀಪ್ಯ, ನಮಗೇ ಅರಿವಿಲ್ಲದಂತೆ ಸಾಂಗತ್ಯಕ್ಕೆ ಎಡೆಮಾಡಿಕೊಡುತ್ತಾ, ಒಂದು ಅವಿನಾಭಾವ ಸಂಬಂಧವನ್ನು ಕಲ್ಪಿಸಿಬಿಡುತ್ತದೆ.
“ ಅವರು ನಿಮಗೆ ಹೇಗೆ ಸಂಬಂಧ ” ಎಂಬ ಬಾಹ್ಯ ಸಮಾಜದ ಲೋಕಾರೂಢಿಯ ಪ್ರಶ್ನೆಗೆ ಉತ್ತರಿಸುವುದು ಸಾಧ್ಯವೇ ಇಲ್ಲದ ಹಾಗೆ ಕೆಲವು ವ್ಯಕ್ತಿಗಳೊಡನೆ ಸಂಬಂಧಗಳು ಬೆಸೆದುಕೊಳ್ಳುತ್ತವೆ, ಭೌತಿಕವಾಗಿ ಅವರು ಇಲ್ಲವಾದರೂ ಅಂತರ್‌ಪ್ರಜ್ಞೆಯ ಒಂದು ಭಾಗವಾಗಿ ಈ ಬೆಸೆದ ಕೊಂಡಿಗಳು ಜೀವನವಿಡೀ ನಮ್ಮೊಡನೆ ಸಾಗುತ್ತವೆ. ಹಾಗೆ ನನ್ನ ಮನದಾಳದಲ್ಲಿ ಉಳಿದಿರುವ ಹಲವು ವ್ಯಕ್ತಿಗಳಲ್ಲಿ ಸೀತಣ್ಣ ಒಬ್ಬರು. ಅಂದರೆ ಕೆ. ಎನ್. ಸೀತಾರಾಮರಾವ್. 1984ರಲ್ಲಿ ಬ್ಯಾಂಕ್ ನೌಕರಿ ಗಳಿಸಿ ದಾವಣಗೆರೆಗೆ ಹೋದಾಗ ಅಲ್ಲಿ ನನ್ನ ಸಂಬಂಧಿಕರಾಗಿ ಇದ್ದುದು ಒಂದೇ ಕುಟುಂಬ. ಅವರ ಮನೆಯಲ್ಲಿ ನನಗೆ ಕೆಲವು ದಿನಗಳು ತಂಗುವ ಅವಕಾಶ ನೀಡಿದ್ದರು. ಉಳಿದಂತೆ ಯಾರೊಬ್ಬರೂ ಪರಿಚಯವಿಲ್ಲದ ಊರಿನಲ್ಲಿ, ನನ್ನ ಮೊದಲ ಬ್ರಾಂಚಿನ ಮೇನೇಜರ್ ಮತ್ತವರ ಕುಟುಂಬ ನನಗೆ ಹತ್ತಿರವಾದದ್ದು ಒಂದು ರೀತಿಯ ಸೌಭಾಗ್ಯ ಎಂದೇ ಹೇಳಬಹುದು. ಅವರ ಸೋದರ ಸೀತಣ್ಣ.

ಶುಕ್ರವಾರ ನನ್ನ ನೌಕರಿಯ ಮೊದಲ ದಿನ. ಅಂದು ಮೇನೇಜರ್ ನಾಗರಾಜರಾವ್ ರಜೆಯಲ್ಲಿದ್ದರು. ಮರುದಿನ ಶನಿವಾರ ಅವರ ಮನೆಗೆ ಕರೆದೊಯ್ದರು. ಅವರ ಕರೆಯಲ್ಲಿ ಅದೆಂತಹ ಆತ್ಮೀಯತೆ ಇತ್ತೆಂದರೆ ಎಷ್ಟೋ ವರ್ಷಗಳ ಸ್ನೇಹ ಇದ್ದಂತೆ ಭಾಸವಾಗಿತ್ತು. ಮನೆಯೊಳಗೆ ಹೋದ ಕೂಡಲೇ ಅವರ ಮಡದಿ ಚಂಪಾ, ಇಬ್ಬರು ಮಕ್ಕಳು, ಅರ್ಚನಾ ಮತ್ತು ಅರವಿಂದ ಎದುರಾದರು. ಇಂದಿಗೂ ಸೋಜಿಗ ಮೂಡಿಸುವ ಸಂಗತಿ ಎಂದರೆ ನಾನು ಆಕೆಯನ್ನು ನೋಡಿದ ಕೂಡಲೇ ಅತ್ತಿಗೆ ಎಂದು ಸಂಬೋಧಿಸಿದ್ದು. ಪರಿಚಯದ ಉಭಯಕುಶಲೋಪರಿ ಮುಗಿದ ಮೇಲೆ ಅವರ ಮನೆಗೆ ಹೊಂದಿಕೊಂಡಂತಿದ್ದ ಇನ್ನೊಂದು ಮನೆಗೆ ಕರೆದೊಯ್ದರು. ಅದು ಸೀತಾರಾಮರಾವ್ ಅವರ ಮನೆ. ನನ್ನ ಚಂಪಾ ಅತ್ತಿಗೆಯ ಅಕ್ಕ ರತ್ನಮ್ಮ ಅವರ ಮನೆ. ಸಹಜವೇನೋ ಎಂಬಂತೆ ಅವರನ್ನೂ ಅತ್ತಿಗೆ ಎಂದೇ ಕರೆದೆ. ( ಅಣ್ಣಂದಿರಂತಿದ್ದ ಇಬ್ವರ ಅಗಲಿಕೆಯ ನಂತರವೂ ಈಗಲೂ ಅವರು ಅತ್ತಿಗೆಯರಾಗೇ ಇದ್ದಾರೆ ).
ಆಗ ಪರಿಚಯವಾದವರು ನಲ್ಮೆಯ ಸೀತಣ್ಣ. (ನಾವೆಲ್ಲರೂ ಸೀತಾರಾಮರಾವ್ ಅವರನ್ನು ಕರೆಯುತ್ತಿದ್ದುದೇ ಸೀತಣ್ಣ ಎಂದು) ತರಳಬಾಳು ಕಾಲೇಜಿನಲ್ಲಿ ರೀಡರ್ ಆಗಿದ್ದವರು. ಮನುಜ ಸಂಬಂಧಗಳಿಗೆ ಕರುಳು, ರಕ್ತ , ವಂಶಾವಳಿ ಹೀಗೆ ಯಾವುದೇ ಹಂಗು ಇರುವುದಿಲ್ಲ ಎಂದು ನನಗೆ ಅರ್ಥವಾಗಿದ್ದು ಈ ಎರಡು ಕುಟುಂಬಗಳಿಂದ, ವಿಶೇಷವಾಗಿ ಇಬ್ಬರು ಅತ್ತಿಗೆಯರಿಂದ. ಅಷ್ಟೇ ಆಪ್ತತೆಯನ್ನು ಬೆಳೆಸಿಕೊಂಡ ಸೋದರ ಸಮಾನ ವ್ಯಕ್ತಿಗಳಿಂದ. ಹ್ಞಾಂ ಮತ್ತೊಂದು ವಿಷಯ. ಮನುಷ್ಯ ಸಂಬಂಧಗಳು ಗಾಢವಾಗುವುದು ಚಿಕ್ಕ ಮಕ್ಕಳೊಡನೆ ಬೆಸೆಯುವ ಸಂಬಂಧಗಳಿಂದ. ಏಕೆಂದರೆ ಅಲ್ಲಿ ನಿಷ್ಕಲ್ಮಷ, ನಿಸ್ಪೃಹ, ನಿಸ್ವಾರ್ಥ ಪ್ರೀತಿ ಇರುತ್ತದೆ. ಹೀಗೆ ನನಗೆ ಪ್ರೀತಿಯ ಸವಿ ಕಂಡಿದ್ದು ಆ ಎರಡು ಮನೆಗಳಲ್ಲಿ. ಚಂಪಾ-ನಾಗರಾಜ್ ಅವರ ಮಕ್ಕಳು ಅರವಿಂದ, ಅರ್ಚನಾ. ರತ್ನಮ್ಮ-ಸೀತಣ್ಣ ಅವರ ಹೆಣ್ಣುಮಕ್ಕಳು ರೇಖಾ, ರಷ್ಮಿ, ರಜನಿ. ಈಗಲೂ ಈ ಮಕ್ಕಳು ನನ್ನನ್ನು ಮಾಮ ಎಂದೇ ಕರೆಯುವುದು. ದೆಹಲಿ, ಬಾಂಬೆ, ಕೆನಡಾ, ಬೆಂಗಳೂರು ಹೀಗೆ ಚದುರಿಹೋಗಿದ್ದರೂ ಈ ಮಕ್ಕಳು ಸ್ವಂತ ಕುಡಿಗಳಂತೆಯೇ ಸದಾ ಸ್ಮೃತಿಯಲ್ಲಿದ್ದೇ ಇರುತ್ತಾರೆ.
ವಿಶಿಷ್ಟ ವ್ಯಕ್ತಿತ್ವದ ಸೀತಣ್ಣ
ಸೀತಣ್ಣ ನೆನಪಾದಾಗಲೆಲ್ಲಾ ಸ್ಮೃತಿಯಲ್ಲಿ ಹಾದು ಹೋಗುವುದು ಹಾರ್ಮೊನಿಯಂ ನುಡಿಸುತ್ತಾ ಅವರು ಹಾಡುತ್ತಿದ್ದ ದೃಶ್ಯ. ಸುಶ್ರಾವ್ಯ ಹಾಡುಗಾರರು ಎನ್ನುವುದಕ್ಕಿಂತಲೂ ಅವರು ಭಾವಗೀತೆಗಳನ್ನು ಹಾಡುತ್ತಿದ್ದಾಗ ಕಾಣಬಹುದಾಗಿದ್ದ ತನ್ಮಯತೆ ಸ್ಮರಣೀಯ. ಅವರ ಸ್ವರವೇ ಉಚ್ಚಸ್ಥಾಯಿಯಲ್ಲಿದ್ದುದರಿಂದ ಭಾವಗೀತೆಗಳನ್ನು ಅದೇ ಧಾಟಿಯಲ್ಲೇ ಹಾಡುತ್ತಿದ್ದರು. ಹಾಗೆಯೇ ದಾಸರ ಪದಗಳನ್ನೂ ಸಹ. ಮಕ್ಕಳನ್ನೂ ಸುತ್ತ ಕೂಡಿಸಿಕೊಂಡು ಚಾಪೆಯ ಮೇಲೆ ಕುಳಿತು, ಹಾರ್ಮೊನಿಯಂ ವಾದ್ಯ ನುಡಿಸುತ್ತಾ ನಡು ನಡುವೆ ಬಂದವರನ್ನೂ ತಲೆಯಾಡಿಸುವ ಮೂಲಕವೇ “ ಬರ್ರಿ ಬರ್ರಿ ” ಎಂದು ಸಂಜ್ಞೆ ಮಾಡುತ್ತಿದ್ದ ಅವರ ಗಾಯನ ವೈಖರಿ ಕಣ್ಣಿಗೆ ಕಟ್ಟಿದಂತಿದೆ. ಉತ್ತರ ಕರ್ನಾಟಕದ ಶೈಲಿಯಲ್ಲೇ “ ಬರ್ರೀ ಬರ್ರಿ ಕೂರ್ರೀ ” ಎನ್ನುವುದು ಅವರ ವಾಕ್ ಧಾಟಿ. ಒಮ್ಮೆ ಹೀಗೇ ಹಾಡುಗಾರಿಕೆಯ ನಡುವೆ ನನ್ನ ಸೋದರ ನಾಗರಾಜನನ್ನೂ ಅವರಿಗೆ ಪರಿಚಯ ಮಾಡಲೆಂದು ಕರೆದೊಯ್ದಿದ್ದೆ. ಪ್ರತಿ ಮಾತಿನಲ್ಲೂ ನಗಿಸುತ್ತಿದ್ದ ಅವನ ಮಾತುಗಳು ಕೆಲವೊಮ್ಮೆ ಅವರ ಗಾಯನಕ್ಕೂ ಅಡ್ಡಿಯಾಗಿ ನಗೆಯುಕ್ಕಿಸುತ್ತಿದ್ದವು.

ಒಮ್ಮೆ ಹೀಗೇ ಹಾಡುತ್ತಿದ್ದಾಗ ಸೀತಣ್ಣ “ ನಾಗರಾಜ್ ನನ್ನ ಹಾಡು ಹೇಗಿರುತ್ತೆ ರೀ,,,,,” ಎಂದು ನನ್ನ ಅಣ್ಣನನ್ನು ಕೇಳಿದರು. ಥಟ್ಟನೆ ಅವನಿತ್ತ ಉತ್ತರ “ ಸರ್ ರಾಕ್ಷಸರ ಹಾಡಿಗೆ ನಿಮ್ಮ ಧ್ವನಿ ಸೂಕ್ತವಾಗಿರುತ್ತದೆ ಸರ್,,,,” ಎಂದು. ನನಗೆ ಬಹಳ ಮುಜುಗರವಾಯಿತು. ಆದರೆ ಸೀತಣ್ಣ ಜೋರಾಗಿ ನಗಲಾಂಭಿಸಿದರು. ಕೂಡಲೇ ಕಂದಪದ್ಯವೊಂದನ್ನು ಹಾಡಿ ತೋರಿಸಿಯೇ ಬಿಟ್ಟರು. ಅಷ್ಟು ಹಿರಿಯರಾದರೂ ಅವರಲ್ಲಿ ಜಂಬ-ಮೇಲರಿಮೆ ಕಾಣಲು ಸಾಧ್ಯವೇ ಇರಲಿಲ್ಲ. ಅಷ್ಟೊಂದು ನಿಸ್ಪೃಹತೆಯಿದ್ದ ವ್ಯಕ್ತಿ ನಮ್ಮ ಸೀತಣ್ಣ. ಪೌರಾಣಿಕ ನಾಟಕಗಳಲ್ಲಿ ಬರುವ ಕಂದಪದ್ಯ, ಹಾಡುಗಳನ್ನು ಮನಮುಟ್ಟುವಂತೆ ಹಾಡುತ್ತಿದ್ದುದು ಅವರ ವೈಶಿಷ್ಟ್ಯ. ಹಾಗಾಗಿ ನನ್ನ ಸೋದರನ ಮಾತಿಗೆ ಸ್ವತಃ ತಲೆದೂಗಿದ್ದರು.
ನನ್ನ ಅತ್ತಿಗೆ ಜೋಳದ ರೊಟ್ಟಿ expert . ಮತ್ತೊಬ್ಬ ಅತ್ತಿಗೆ ಚಂಪಾ ಪುಲಾವ್ expert . ನಾನು ಒಬ್ಬನೇ ಲೋಕಿಕೆರೆ ಎನ್ನುವ ಕುಗ್ರಾಮದಲ್ಲಿ ರೂಮ್ ಮಾಡಿಕೊಂಡಿದ್ದಾಗ, ವಾರದ ರಜೆ ಕಳೆಯುತ್ತಿದ್ದುದು ಈ ರುಚಿಕರ ಖಾದ್ಯಗಳ ನಡುವೆ. ಖಾದ್ಯಸವಿಗಿಂತಲೂ ಹೆಚ್ಚು ಸಿಹಿಯಾಗಿದ್ದುದು ರೇಖಾ, ರಷ್ಮಿ, ರಜನಿ, ಅರವಿಂದ, ಅರ್ಚನ ಈ ಮಕ್ಕಳೊಡಗಿನ ಆಟಪಾಟಗಳು, ಒಡನಾಟ, ಹರಟೆ. ಒಂದು ವರ್ಷದ ನಂತರ ನನ್ನ ತಾಯಿ, ಸೋದರ, ಸೋದರಿಯರೊಡನೆ ಅವರ ಮನೆಯ ಸಮೀಪದಲ್ಲೇ ಮನೆ ಮಾಡಿದೆ. ನನ್ನ ಅಮ್ಮನ ಬಗ್ಗೆ ಸೀತಣ್ಣ ಎಷ್ಟು ಗೌರವ ತೋರುತ್ತಿದ್ದರೆಂದರೆ ಅದು ವರ್ಣಿಸಲು ಸಾಧ್ಯವಿಲ್ಲ. ಸೀತಣ್ಣನ ಮತ್ತೊಂದು ವೈಶಿಷ್ಟ್ಯ ಎಂದರೆ ಅವರ ಪ್ರೀತ್ಯಾದರಗಳು ಅಂತರ್ ಸ್ವರೂಪಿಯಾಗಿರುತ್ತಿದ್ದವು. ಹೊರನೋಟಕ್ಕೆ ಕಾಣುವಂತಹ ಮಾತುಗಳಾಗಲೀ, ವರ್ತನೆಯಾಗಲೀ ಗುರುತಿಸಲಾಗುತ್ತಿರಲಿಲ್ಲ.
ನನ್ನ ಅಮ್ಮನೊಡನೆ ಇದ್ದಾಗಲೂ ಅವರ ಮನೆಯಲ್ಲಿ ಜೋಳದ ರೊಟ್ಟಿ ಮಾಡಿದಾಗ ನಮಗೆಂದೇ ಎತ್ತಿಡುತ್ತಿದ್ದುದು ರತ್ನ ಅತ್ತಿಗೆಯ ಪ್ರೀತಿಗೆ ಸಾಕ್ಷಿ. ಚಂಪಾ ಅತ್ತಿಗೆ ಹಾಗೆಯೇ ಪುಲಾವ್ ಮಾಡಿದರೆ ನನಗಾಗಿ ತೆಗೆದಿಡುತ್ತಿದ್ದರು. ಅಲ್ಲಿ ತಿಂದು ನಂತರ ಮನೆಗೆ ಹೋಗಿ ಊಟ ಮಾಡುವುದು ಬಹುಮಟ್ಟಿಗೆ ಕಡ್ಡಾಯವೇ ಆಗಿತ್ತು. ಈ ರುಚಿಕರ ಖಾದ್ಯದ ಹಿಂದಿದ್ದ ಅಪಾರ ಪ್ರೀತಿ ಮತ್ತು ಆತ್ಮೀಯತೆ ಅವರ ಮಾತುಕತೆಗಳಲ್ಲಿ, ಒಡನಾಟದಲ್ಲಿ ಕಾಣಬಹುದಿತ್ತು. ನೋಡಲು ಮುಂಗೋಪಿಯಂತೆ ಕಾಣುತ್ತಿದ್ದ ಸೀತಣ್ಣ, ಕೆಲವೊಮ್ಮೆ ಹುಬ್ಬು ಗಂಟಿಕ್ಕಿಕೊಳ್ಳುವುದೂ ಇರುತ್ತಿತ್ತು. ಮೌನಕ್ಕೆ ಶರಣಾಗಿಬಿಡುತ್ತಿದ್ದರು. ಆದರೆ ಅವರ ನಗುಮೊಗ ಮತ್ತು ಯಾವುದಾದರೂ ಜೋಕ್ ಮಾಡಿದಾಗ ತುಂಬು ನಗೆ ಎಂದಿಗೂ ಸ್ಮರಣೀಯ. ನನ್ನ ಅಣ್ಣ ಅದನ್ನು ರಾಕ್ಷಸ ನಗೆ ಎಂದಾಗಲೆಲ್ಲಾ ಇನ್ನೂ ಜೋರಾಗಿ ನಗುತ್ತಿದ್ದರು ಸೀತಣ್ಣ. ಅವರ ಆತ್ಮೀಯತೆಯನ್ನು ಸಾಕ್ಷೀಕರಿಸುವ ಪ್ರಸಂಗಗಳು ಅವು. ಕೆಲವೊಮ್ಮೆ ಅತ್ತಿಗೆ ಅವರ ಮನೆಯಲ್ಲೇ ಊಟ ಮಾಡಲು ಒತ್ತಾಯಿಸುತ್ತಿದ್ದುದೂ ಉಂಟು. ವಿಶೇಷವಾಗಿ ಜೋಳದ ರೊಟ್ಟಿ ಮಾಡಿದಾಗ. ಆಗೆಲ್ಲಾ ಸೀತಣ್ಣ “ ಅವನ ಅಮ್ಮ ಕಾಯ್ತಿರ್ತಾರೆ ಅಲ್ವಾ ಬಲವಂತ ಮಾಡ್ಬೇಡ ” ಎಂದು ಹೇಳುತಿದ್ದುದು ಅವರೊಳಗಿನ ಸೂಕ್ಷ್ಮತೆಯನ್ನು ತೋರುತ್ತಿತ್ತು.
ಸಾಹಿತ್ಯ, ರಂಗಭೂಮಿ, ಕಾವ್ಯ, ಸಂಗೀತ, ರಾಜಕೀಯ ಹೀಗೆ ಸೀತಣ್ಣನೊಡನೆ ಮಾತಿಗೆ ಕುಳಿತರೆ ಅವರ ಅನುಭವದ ಬುಟ್ಟಿಯಿಂದ ಅನೇಕ ಸಂಗತಿಗಳು ಹೊರಬರುತ್ತಿದ್ದವು. ಆಗೆಲ್ಲಾ ರಾಜಕೀಯ ಚರ್ಚೆ ಮುಕ್ತವಾಗಿರುತ್ತಿತ್ತು. ಸಿದ್ದಾಂತಗಳು ಮೈದಾನವಾಗಿರುತ್ತಿದ್ದವು ಈಗಿನಂತೆ ಗೋಡೆಗಳಲ್ಲ ಪರ ವಿರೋಧಗಳಿರುತ್ತಿದ್ದರೂ, ವ್ಯಕ್ತಿಗತ ನೆಲೆಯಲ್ಲಿ ತಾತ್ವಿಕ ಗೋಡೆಗಳು ಅಡ್ಡಿಯಾಗುತ್ತಿರಲಿಲ್ಲ. ಬಹುಶಃ ಹಿಂದುತ್ವದ ಆಗಮನಕ್ಕೂ ಮುನ್ನ ಇದೇ ಪರಿಸ್ಥಿತಿ ಎಲ್ಲೆಡೆಯೂ ಇತ್ತೆನಿಸುತ್ತದೆ. ಸಂಪ್ರದಾಯನಿಷ್ಠರಾಗಿದ್ದ ಸೀತಣ್ಣನಲ್ಲಿ ದೈವಭಕ್ತಿ ಇದ್ದರೂ ಆಡಂಬರ ಇರಲಿಲ್ಲ. ನನ್ನ ವೈಯುಕ್ತಿಕ ನಂಬಿಕೆಗಳನ್ನು ಎಂದೂ ಸಹ ಟೀಕಿಸುತ್ತಿರಲಿಲ್ಲ. ಅವರ ಇಡೀ ಕುಟುಂಬವೇ ಹಾಗಿತ್ತು. ಮಠಾಧೀಶರು, ಸ್ವಾಮೀಜಿಗಳು ಇವುಗಳ ಬಗ್ಗೆ ಅಪಾರ ಶ್ರದ್ಧೆ ಇರುತ್ತಿದ್ದರೂ, ಅವರ ಮನೆಯಲ್ಲಿ ಎಂದಿಗೂ ಮಡಿವಂತಿಕೆ, ಭಿನ್ನ ಭೇದಗಳು ಮಾತಿನಲ್ಲಾಗಲೀ, ಕೃತಿಯಲ್ಲಾಗಲೀ ಕಾಣಲಾಗುತ್ತಿರಲಿಲ್ಲ.
ಧೃವ ಎಂಬ ವಿಮಾ ಏಜೆಂಟ್ ಒಬ್ಬರು ನಮಗೆಲ್ಲರಿಗೂ ಒಳ್ಳೆಯ ಗೆಳೆಯರೂ ಆಗಿದ್ದರು. ಅವರು ಮನೆಗೆ ಬಂದರೆ ಅಂದು ಸಂಗೀತ ಕಛೇರಿಯೇ ನಡೆಯುತ್ತಿತ್ತು. ಧೃವ ಸುಶ್ರಾವ್ಯ ಹಾಡುಗಾರ. “ನಮ್ಮಮ್ಮ ಶಾರದೆ,,,,” ಬಹಳ ಚೆನ್ನಾಗಿ ಹಾಡುತ್ತಿದ್ದರು. ಅವರಿಗೆ ಪಕ್ಕವಾದ್ಯ ಹಾರ್ಮೋನಿಯಂ ಸೀತಣ್ಣ, ತಬಲದೊಂದಿಗೆ ಅವರ ಸೋದರ ನಾಗರಾಜರಾವ್. ನಡುನಡುವೆ ಸೀತಣ್ಣ ಸಹ ಕೆಲವು ಭಾವ-ಭಕ್ತಿಗೀತೆಗಳನ್ನು ಹಾಡುತ್ತಿದ್ದುದುಂಟು. ಇಡೀ ವಾತಾವರಣವೇ ಸಂಗೀತಮಯವಾಗಿರುತ್ತಿತ್ತು. ನಮ್ಮ ಕೇರಂ ಬೋರ್ಡ್ ಗಲಾಟೆಗೆ ವಿರಾಮ ಸಿಗುತ್ತಿದ್ದುದು ಈ ಸಂದರ್ಭಗಳಲ್ಲೇ. ಒಂದೆರಡು ಬಾರಿ ಅವರ ಸ್ವಂತ ಗ್ರಾಮಕ್ಕೂ ಕುಟುಂಬ ಸಮೇತ ಭೇಟಿ ನೀಡಿದ್ದೆವು. ನನ್ನ ಅಕ್ಕನ ಮದುವೆ ಮನೆಯಲ್ಲೇ ಮಾಡಿದಾಗ ಈ ಅಣ್ಣ ಅತ್ತಿಗೆಯರೇ ನನಗೆ ಎಲ್ಲವೂ ಆಗಿದ್ದರು. ಇದು ಮರೆಯಲಾಗದಂತಹ ಒಂದು ಸನ್ನಿವೇಶ.
ಅಗಲಿದ ನಿಸ್ಪೃಹ ಜೀವದ ನೆನಪು
ಒಬ್ಬ ವ್ಯಕ್ತಿ ಶಾಶ್ವತವಾಗಿ ಮನದಲ್ಲಿ ಉಳಿಯುವುದು ಅವರಿತ್ತ ಭೌತಿಕ ವಸ್ತುಗಳಿಂದಲ್ಲ. ಬದಲಾಗಿ ಅವರ ಒಡನಾಟದಲ್ಲಿ ನಾವು ಕಂಡುಕೊಂಡಂತಹ ಜೀವನ ಪ್ರೀತಿಯಲ್ಲಿ. ಸೀತಾರಾಮರಾವ್ ಅಂತಹ ಒಂದು ಪ್ರೀತಿಯ ಭಂಡಾರವನ್ನು ನನ್ನೊಳಗೆ ತುಂಬಿ, ಹಠಾತ್ತನೆ ನಿರ್ಗಮಿಸಿಬಿಟ್ಟರು. ವಿಧಿಯಾಟ, ಮೂರು ಮುದ್ದಾದ ಹೆಣ್ಣುಮಕ್ಕಳಿದ್ದರೂ ಒಬ್ಬರ ಮದುವೆಯನ್ನೂ ಅವರು ನೋಡಲಿಲ್ಲ. ಈಗಲೂ ನನ್ನನ್ನು ಪ್ರೀತಿಯಂದ ಮಾಮ ಎಂದೇ ಕರೆಯುವ , ಮುಂಬೈನಲ್ಲಿರುವ ರೇಖಾ, ಬೆಂಗಳೂರಿನಲ್ಲಿರುವ ರಷ್ಮಿ, ದೆಹಲಿಯಲ್ಲಿರುವ ರಜನಿ, ಈ ಮೂವರಲ್ಲಿ ಸೀತಣ್ಣನನ್ನು ಕಾಣುತ್ತೇನೆ. ನನ್ನ ಅತ್ತಿಗೆ ರತ್ನಮ್ಮನವರಲ್ಲಿ ಅವರ ಆತ್ಮೀಯತೆಯನ್ನು ದೂರದಿಂದಲೇ ಕಾಣುತ್ತೇನೆ.
ಜೀವನ ಶಿಸ್ತು, ಸಮಯ ಪ್ರಜ್ಞೆ, ಸಾಮಾಜಿಕ ಕಾಳಜಿ ಮತ್ತು ಬದುಕಿನ ಪ್ರೀತಿ ಇವೆಲ್ಲವನ್ನೂ ಮೈಗೂಡಿಸಿಕೊಂಡಿದ್ದ ಸೀತಣ್ಣ ಏಕ್‌ದಂ ಇಲ್ಲವಾದಾಗ, ಬಂಗಾರಪೇಟೆಯಿಂದ ದಾವಣಗೆರೆಯವರೆಗೂ ಹಲವು ಗಂಟೆಗಳ ಕಾಲ ತಪ್ತ ಕಂಗಳೊಂದಿಗೇ ಪ್ರಯಾಣ ಮಾಡಿದ್ದೆ. ಒಡಹುಟ್ಟಿದ ಅಣ್ಣನನ್ನೇ ಕಳೆದುಕೊಂಡಷ್ಟು ದುಃಖವಾಗಿತ್ತು. ಕಾರಣ ಇಷ್ಟೇ, ಸೀತಣ್ಣನಂತಹ ವ್ಯಕ್ತಿಗಳು ಅಪರೂಪ. ಅವರ ಸಾಮೀಪ್ಯದಲ್ಲಿ ಕಳೆದದ್ದು ಕೇವಲ ಐದಾರು ವರ್ಷ. ಆದರೆ ಆ ಸಾಂಗತ್ಯದ ಹರಹು ಇಂದಿಗೂ ಇದೆ. ಕಳೆದುಹೋದ ಕ್ಷಣಗಳನ್ನು ಎಷ್ಟೇ ನೆನೆದರೂ, ಅಗಲಿದ ವ್ಯಕ್ತಿ ಮರಳಿ ಬರುವುದಿಲ್ಲ. ಆದರೂ ಆ ನೆನಪುಗಳೊಂದಿಗೆ ಬದುಕುವುದಿದೆಯಲ್ಲಾ ಅದರಲ್ಲಿ ಜೀವನ ಸಂತೋಷವಿದೆ. ದೂರದೂರ ಇರುವ ಮೂವರು ಮಕ್ಕಳೊಡನೆ, ಅತ್ತಿಗೆಯೊಡನೆ, ಅಪರೂಪಕ್ಕೆ ಮಾತನಾಡಿದಾಗ, ವಾಟ್ಸಾಪ್ ಸಂದೇಶದ ಮೂಲಕ ಸಂವಹಿಸಿದಾಗ ಅವರ ಧ್ವನಿಯಲ್ಲಿ ಸೀತಣ್ಣ ಧ್ವನಿಸಿದಂತಾಗುತ್ತದೆ.

ಆ ಇಬ್ಬರು ಅತ್ತಿಗೆಯರ ಪ್ರೀತಿ ವಾತ್ಸಲ್ಯಗಳೇ ಇಬ್ಬರು ಅಣ್ಣಂದಿರನ್ನು ನನಗೆ ನೀಡಿದ್ದವು ಎಂದರೆ ತಪ್ಪೇನಾಗಲಾರದು. “ ಅವರು ನಿಮಗೆ ಹೇಗೆ ಸಂಬಂಧ,,,,,” ಎಂಬ ಪ್ರಶ್ನೆಗೆ ಏನು ಉತ್ತರಿಸುವುದು. ಗುಲ್ಜಾರ್ ಅವರ ಕವಿತೆ “ ಪ್ಯಾರ್ ಕೋ ಪ್ಯಾರ್ ಹಿ ರೆಹನೇ ದೋ ಕೊಯೀ ನಾಮ್ ನ ದೋ ,,,,” ನೆನಪಾಗುತ್ತದೆ. ಅದು ಪ್ರೀತಿ, ವಾತ್ಸಲ್ಯ, ಬಾಂಧವ್ಯ, ಯಾವುದೇ ಹಂಗಿಲ್ಲದ ಮನುಷ್ಯಸಂಬಂಧ. ಸೀತಣ್ಣ ಹೋಗಿ 31 ವರ್ಷಗಳಾದರೂ ಸ್ವಂತ ಮಕ್ಕಳಂತೆಯೇ ಪ್ರೀತಿ ಹಂಚುವ ಮಕ್ಕಳು, ಒಲುಮೆಯ ಅತ್ತಿಗೆ ಅವರನ್ನು ನನ್ನೊಳಗೆ ಉಳಿಸಿದ್ದಾರೆ. ಮನುಷ್ಯ ಸಂಬಂಧಕ್ಕೆ ಇದಕ್ಕಿಂತಲೂ ಹೆಚ್ಚಿನದು ಏನು ಬೇಕು ? ಆ ಅಪೂರ್ವ ಜೀವಕ್ಕೆ ನಮನಗಳು.