ಕಳೆದ ಕೆಲ ದಿನಗಳಿಂದ ಎಡಬಿಡದೆ ಮಳೆ ನಿರಂತರವಾಗಿ ಸುರಿಯುತ್ತಿದ್ದು ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ನಷ್ಟ ಅನುಭವಿಸಿರುವ ವಿಜಯಪುರ ಜಿಲ್ಲೆಗೆ ರಾಜ್ಯ ಸರ್ಕಾರ ತುರ್ತು ಪರಿಹಾರ ಮೊತ್ತ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ನಾವು ಸಂತ್ರಸ್ತರೊಂದಿಗೆ ನಾನು ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಶಾಸಕ ಎಂ.ಬಿ.ಪಾಟೀಲ್ ಎಚ್ಚರಿಸಿದ್ದಾರೆ.
ನೆರೆ, ಹಾವಳಿ, ಮಳೆಯಿಂದ ಜನ ಜೀವನ ಜಾನುವಾರು, ಬೆಳೆ, ಮನೆ ಮತ್ತು ಮೂಲಭೂತ ಸೌಕರ್ಯಕ್ಕೆ ಹಾನಿಯಾಗಿರುವ ಕುರಿತು ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ತುರ್ತಾಗಿ 200 ಕೋಟಿ ರೂಪಾಯಿಗಳನ್ನು ಬೇರೆ ಬೇರೆ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ ಆದರೆ, ವಿಜಯಪುರ ಜಿಲ್ಲೆಯನ್ನು ಕೈಬಿಡಲಾಗಿದೆ ಎಂದು ಕಿಡಿಕಾರಿದ್ದಾರೆ.

ಹಾಲಿ ಬಿಜೆಪಿ ಸರ್ಕಾರವು ಅಭಿವೃದ್ದಿ ಕಾರ್ಯಗಳ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಇದೀಗ ನೆರೆ ಹಾವಳಿಯಂತಹ ಗಂಭೀರ ವಿಚಾರಗಳಲ್ಲಿಯೂ ಸರ್ಕಾರ ತಾರತಮ್ಯ ಮಾಡುವ ಮೂಲಕ ಬಿಜೆಪಿಯವರು ಲಜ್ಜೆಗೆಟ್ಟವರು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಹಾಗೂ ಈ ಭಾಗದ ಸಚಿವರಿಗೆ ಕಿಂಚಿತ್ತೂ ಈ ಭಾಗದ ಬಗ್ಗೆ ಕಾಳಜಿ ಇದ್ದರೆ ಕೂಡಲ್ಲೇ ಹಾನಿಯಾಗಿರುವ ಪ್ರದೇಶಗಳ ಮಾಹಿತಿ ಪಡೆದು ಪರಿಹಾರ ಮೊತ್ತವನ್ನ ಬಿಡುಗಡೆ ಮಾಡಬೇಕು ತಮ್ಮ ಗೌರವ ಉಳಿಸಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.