ಬೆಂಗಳೂರು: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಗುಣಮಟ್ಟದ, ಸ್ವಚ್ಛ ಹಾಗೂ ರುಚಿಕರ ಆಹಾರವನ್ನು ಸ್ಥಳದಲ್ಲೇ ಒದಗಿಸುವ ಮಹತ್ವದ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDS) ‘ಮಯೂರ ರುಚಿ ಆನ್ ವೀಲ್ಸ್’ ವಿನೂತನ ಮೊಬೈಲ್ ಆಹಾರ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ (K.J. George) ತಿಳಿಸಿದ್ದಾರೆ.

ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೊಬೈಲ್ ಫುಡ್ ವ್ಯಾನ್‌ಗಳು
ಕೆಎಸ್‌ಟಿಡಿಸಿ ರಾಜ್ಯಾದ್ಯಂತ ಒಟ್ಟು 24 ಮಯೂರ ಹೋಟೆಲ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಆದರೆ, ಕೆಲವು ಪ್ರವಾಸಿ ಕೇಂದ್ರಗಳಲ್ಲಿ ಈ ಹೋಟೆಲ್‌ಗಳು ಪ್ರಮುಖ ಆಕರ್ಷಣೀಯ ಸ್ಥಳಗಳಿಂದ ತುಸು ದೂರದಲ್ಲಿವೆ. ಈ ಕೊರತೆಯನ್ನು ನೀಗಿಸಲು ಹಾಗೂ ಮಯೂರ ಹೋಟೆಲ್‌ಗಳ ಆಹಾರವನ್ನು ಕೇವಲ ಆವರಣಕ್ಕೆ ಸೀಮಿತಗೊಳಿಸದೆ ನೇರವಾಗಿ ಪ್ರವಾಸಿಗರಿದ್ದಲ್ಲಿಗೇ ತಲುಪಿಸಲು ಈ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಹಂಪಿ, ಮಡಿಕೇರಿ, ಜೋಗ್ ಫಾಲ್ಸ್, ಮೈಸೂರು, ನಂದಿ ಹಿಲ್ಸ್ ಹಾಗೂ ರಾಜಧಾನಿ ಬೆಂಗಳೂರಿನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಹಂತ-ಹಂತವಾಗಿ ಸುಸಜ್ಜಿತ ಫುಡ್ ವ್ಯಾನ್‌ಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ.

ಕರ್ನಾಟಕದ ಸಾಂಪ್ರದಾಯಿಕ ಆಹಾರ ವೈವಿಧ್ಯತೆಯ ಪರಿಚಯ
ಈ ಯೋಜನೆಯ ಮೂಲಕ ಕರ್ನಾಟಕದ ವಿವಿಧ ಭಾಗಗಳ ಪ್ರಸಿದ್ಧ ಉಪಾಹಾರ, ಲಘು ತಿಂಡಿಗಳು, ಸಾಂಪ್ರದಾಯಿಕ ಊಟ ಮತ್ತು ಜನಪ್ರಿಯ ಪ್ರಾದೇಶಿಕ ಖಾದ್ಯಗಳನ್ನು ಪ್ರವಾಸಿಗರಿಗೆ ಉಣಬಡಿಸಲಾಗುತ್ತದೆ. ಹೊರರಾಜ್ಯ ಹಾಗೂ ವಿದೇಶಿ ಪ್ರವಾಸಿಗರಿಗೆ ಕರ್ನಾಟಕದ ಶ್ರೀಮಂತ ಆಹಾರ ಸಂಸ್ಕೃತಿಯನ್ನು ಪರಿಚಯಿಸುವುದು ಮತ್ತು ಸ್ಥಳೀಯ ಮಟ್ಟದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ನಿಗಮದ ಆದಾಯವನ್ನು ಹೆಚ್ಚಿಸುವುದು ಈ ಉಪಕ್ರಮದ ಮುಖ್ಯ ಧ್ಯೇಯವಾಗಿದೆ.
ಪ್ರವಾಸಿ ಅನುಭವ ವೃದ್ಧಿಗೆ ಸರ್ಕಾರದ ಒತ್ತು: ಸಚಿವ ಜಾರ್ಜ್
ಯೋಜನೆಯ ಕುರಿತು ಮಾಹಿತಿ ಹಂಚಿಕೊಂಡ ಸಚಿವ ಕೆ.ಜೆ. ಜಾರ್ಜ್ ಅವರು, ಪ್ರವಾಸಿಗರು ಸುಂದರ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳುವುದರ ಜತೆಗೆ ಉತ್ತಮ, ಶುಚಿ-ರುಚಿಯಾದ ಆಹಾರದ ಸವಿಯನ್ನೂ ಪಡೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದರು. ಮಯೂರ ಬ್ರ್ಯಾಂಡ್‌ನ ವಿಶ್ವಾಸಾರ್ಹತೆ ಹಾಗೂ ಗುಣಮಟ್ಟವನ್ನು ಪ್ರವಾಸಿಗರ ಬಳಿಗೇ ಕೊಂಡೊಯ್ಯುವುದರಿಂದ ಪ್ರವಾಸದ ಅನುಭವ ಇನ್ನಷ್ಟು ಆಹ್ಲಾದಕರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೆಎಸ್‌ಟಿಡಿಸಿ ಇತಿಹಾಸದಲ್ಲೇ ಮೊದಲ ವಿನೂತನ ಹೆಜ್ಜೆ
ಕೆಎಸ್‌ಟಿಡಿಸಿ ಅಧ್ಯಕ್ಷ ಎಂ. ಶ್ರೀನಿವಾಸ್ ಅವರು ಮಾತನಾಡಿ, ನಿಗಮದ ಇತಿಹಾಸದಲ್ಲೇ ಇಂತಹ ಮೊಬೈಲ್ ಫುಡ್ ವ್ಯಾನ್ ಉಪಕ್ರಮವನ್ನು ಮೊದಲ ಬಾರಿಗೆ ಜಾರಿಗೆ ತರಲಾಗುತ್ತಿದ್ದು, ಇದು ಪ್ರವಾಸಿಗರ ದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿ, ಗುಣಮಟ್ಟದ ಸೇವೆ, ಸ್ಥಳೀಯ ಪಾಕಪದ್ಧತಿಯ ಉತ್ತೇಜನ ಹಾಗೂ ಪ್ರವಾಸಿಗರ ಸೌಕರ್ಯ—ಈ ಮೂರೂ ಅಂಶಗಳನ್ನು ಸಮನ್ವಯಗೊಳಿಸಿ ಆತಿಥ್ಯ ಸೇವೆಯನ್ನು ಹೋಟೆಲ್ ಕೊಠಡಿಗಳಿಂದಾಚೆಗೆ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.
GOOD NEWS : ರೈತರಿಗೆ ಶುಭಸುದ್ದಿ : ಸೂರ್ಯಕಾಂತಿ ಉತ್ಪನ್ನ ಖರೀದಿ ಕೇಂದ್ರ ಪ್ರಾರಂಭ






