ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಶಾಂತಿ ಸುವ್ಯವಸ್ಥೆಗೆ ಸರ್ಕಾರದ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಸೆಪ್ಟೆಂಬರ್ 16 ರಂದು ಈದ್ ಮಿಲಾದ್ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಮಾಡಲಾಗಿದೆ. ನೇತಾಜಿ ರಸ್ತೆಯಿಂದ ಟ್ಯಾನರಿ ರಸ್ತೆ ಮಾರ್ಗ, ಮಾಸ್ಕ್ ಜಂಕ್ಷನ್ನಿಂದ ನೇತಾಜಿ ಜಂಕ್ಷನ್ ತನಕ, ನೇತಾಜಿ ಜಂಕ್ಷನ್ನಿಂದ ಹೇನ್ಸ್ ಜಂಕ್ಷನ್ ಹಾಗು ನಾಗವಾರ ಜಂಕ್ಷನ್ನಿಂದ ಪಾಟರಿ ರಸ್ತೆ ಜಂಕ್ಷನ್ವರೆಗೆ ನಿರ್ಬಂಧ ಮಾಡಲಾಗಿದೆ.
ಕೆಲವು ರಸ್ತೆಗಳಲ್ಲಿ ಸಂವಾರವನ್ನೇ ನಿರ್ಬಂಧಿಸಿರುವ ಪೊಲೀಸ್ರು ಪರ್ಯಾಯ ಮಾರ್ಗ ಬಳಸಲು ಸೂಚನೆ ಕೊಟ್ಟಿದ್ದಾರೆ. ಕೆ ಆರ್ ಸರ್ಕಲ್ನಿಂದ ನೃಪತುಂಗ ರಸ್ತೆ, ಕಬ್ಬನ್ ಪಾರ್ಕ್ ರಸ್ತೆ, ಸಿಟಿ ಮಾರ್ಕೆಟ್ ರಸ್ತೆಯಿಂದ ಕೆಂಪೇಗೌಡ ಬಸ್ ನಿಲ್ದಾಣ ಕಡೆ ಹೋಗುವ ರಸ್ತೆ ಹಾಗು ರಿಚ್ಮಂಡ್ ರಸ್ತೆ ಕಡೆಯಿಂದ ಟೌನ್ ಹಾಲ್ ರಸ್ತೆ. ಮೈಸೂರು ರಸ್ತೆ ಕಡೆಯಿಂದ ಸಿಟಿ ಮಾರ್ಕೆಟ್ ಕಡೆ ಬರುವ ಮಾರ್ಗ, ನೇತಾಜಿ ರಸ್ತೆಯಿಂದ ಬಾಣಸವಾಡಿ ಕಡೆ ಹೋಗುವ ರಸ್ತೆ, ಥಣಿಸಂದ್ರ ಕಡೆಯಿಂದ ಶಿವಾಜಿನಗರ ಮಾರ್ಗ, ಶಿವಾಜಿನಗರದಿಂದ ನಾಗವಾರ ಕಡೆ ಸಾಗುವ ಮಾರ್ಗದ ಬದಲಿಗೆ ಪರ್ಯಾಯ ರಸ್ತೆ ಬಳಸಲು ಸೂಚನೆ ಕೊಡಲಾಗಿದೆ.
ಹಲವು ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ಗೂ ನಿಷೇಧ ಹೇರಲಾಗಿದೆ. ನೃಪತುಂಗ ರಸ್ತೆ, ಕೆ.ಜಿ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಎನ್.ಆರ್ ರಸ್ತೆ, ಟೌನ್ ಹಾಲ್, ಶೇಷಾದ್ರಿ ರಸ್ತೆ, ಮಹಾರಾಣಿ ರಸ್ತೆ, ಕ್ವೀನ್ಸ್ ರಸ್ತೆ, ಹಡ್ಸನ್ ಸರ್ಕಲ್, ಕಸ್ತೂರ ಬಾ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ಈದ್ ಮಿಲಾದ್ ಮೆರವಣಿಗೆ ಸಾಗುವ ಮಾರ್ಗ, ಜೆ ಸಿ ನಗರ ದರ್ಗಾದಿಂದ ಶಿವಾಜಿನಗರ ಕಂಟೋನ್ಮೆಂಟ್, ಬೆಳ್ಳಳ್ಳಿ ಕ್ರಾಸ್ನಿಂದ ನಾಗವಾರ ಸಿಗ್ನಲ್, ಸೌತ್ ಎಂಡ್ ಸರ್ಕಲ್ನಿಂದ ಲಾಲ್ ಬಾಗ್ ವೆಸ್ಟ್ ಗೇಟ್, ಮಹಾಲಿಂಗೇಶ್ವರ ಜಂಕ್ಷನ್ನಿಂದ ಆಡುಗೋಡಿ, ಮೆರವಣಿಗೆ ಮೂಲಕ ನೃಪತುಂಗ ರಸ್ತೆ ವೈಎಂಸಿಎ ತಲುಪಲಿದೆ.
ಮೆರವಣಿಗೆಯಲ್ಲಿ ಬಾರಿ ಸಂಖ್ಯೆಯಲ್ಲಿ ಜನ ಆಗಮಿಸೋ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಸಂಚಾರ ಮಾರ್ಪಾಡು ಮಾಡಿದ್ದಾರೆ ಟ್ರಾಫಿಕ್ ಪೊಲೀಸರು. ಮೆರವಣಿಗೆ ಉದ್ದಕ್ಕೂ ಪೊಲೀಸ್ ಬಂದೋಬಸ್ತ್ ಮಾಡಲು ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಗೆ ನಿರ್ಧಾರ ಮಾಡಲಾಗಿದೆ.