ಮಂಡ್ಯ : ಜಿಲ್ಲೆಯಲ್ಲೊಂದು ಮನಕಲಕುವ ಘಟನೆಯೊಂದು ನಡೆದಿದ್ದು, ಇಲ್ಲಿನ ನೆಹರು ನಗರದಲ್ಲಿ ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಪ್ರಭಾಕರ್ ಎನ್ನುವವರ ಪತ್ನಿ ಜ್ಯೋತಿ ಹಾಗೂ ನವವಿವಾಹಿತ ಪುತ್ರ ಸಂತೋಷ್ ಎಂದು ಪತ್ತೆ ಹಚ್ಚಲಾಗಿದೆ. ಜ್ಯೋತಿ ಮತ್ತು ಸಂತೋಷ್ ಕಳೆದ ರಾತ್ರಿ ಮನೆಯಲ್ಲೇ ಅಸುನೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ಪ್ರಭಾಕರ್ ತಮ್ಮದೇ ಬಟ್ಟೆ ಅಂಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾರೆ.
ಪ್ರಭಾಕರ್ ಪತ್ನಿ ಜ್ಯೋತಿ ಅವರನ್ನು ಪಂಚೆಯಿಂದ ಉಸಿರುಗಟ್ಟಿಸಿ ಜೀವ ತೆಗೆಯಲಾಗಿದೆ. ಈ ವೇಳೆ ಅಲ್ಲಿಗೆ ಬಂದ ಪುತ್ರ ಸಂತೋಷ್‌ನನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಮೃತ ಸಂತೋಷ್‌ಗೆ ನವ ವಿವಾಹಿತನಾಗಿದ್ದ ಕಳೆದ ತಿಂಗಳ ಹಿಂದಷ್ಟೇ ಮದುವೆಯಾಗಿತ್ತು.
ಇನ್ನೂ ಘಟನೆ ನಡೆದ ವೇಳೆ ಸೊಸೆ ಗಾಢ ನಿದ್ರೆಯಲ್ಲಿದ್ದ ಕಾರಣ ಮನಯಲ್ಲೇ ಇದ್ದರೂ ಈ ಘಟನೆ ಆಕೆಯ ಗಮನಕ್ಕೆ ಬಂದಿಲ್ಲ. ಬೆಳಿಗ್ಗೆ ಎದ್ದು ತಿಂಡಿ ತಯಾರಿಸಿದ ಬಳಿಕ ಅತ್ತೆಯನ್ನು ಎಬ್ಬಿಸಲು ಕೊಠಡಿಗೆ ಹೋಗಿದ್ದ ವೇಳೆ ಈ ಘಟನೆ ಗಮನಕ್ಕೆ ಬಂದಿದೆ. ಪ್ರಭಾಕರ್ ಆರ್ಥಿಕ ಸಂಕಷ್ಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿರವ ಬಗ್ಗೆ ತಾವು ಬರೆದ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಟಿಎಂಸಿಯಲ್ಲಿ ಬಂಡಾಯದ ಬಿರುಗಾಳಿಯ ನಡುವೆ ದೀದಿ ಬೆನ್ನಿಗೆ ನಿಂತ ಸಂಸದರು : ಭಿನ್ನಮತೀಯರ ತರಾಟೆ
ಪ್ರಮುಖವಾಗಿ ಬಟ್ಟೆಯ ಅಂಗಡಿಯಲ್ಲಿ ವ್ಯಾಪಾರ ಕಡಿಮೆಯಾಗಿದ್ದು, ಈ ಹಿನ್ನೆಲೆ ಸಾಲದ ಒತ್ತಡ ಹೆಚ್ಚಾಗಿತ್ತು. ಅದೇ ಕಾರಣಕ್ಕೆ ಮಗ ಮತ್ತು ಹೆಂಡತಿಯನ್ನು ಸಾಯಿಸಿರುವುದಾಗಿ ಪ್ರಭಾಕರ್ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಮಂಡ್ಯ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂವರ ಸಾವಿಗೆ ನಿಖರ ಕಾರಣ ಏನು ಎಂಬುದು ಈವರೆಗೂ ನಿಖರವಾಗಿ ಪತ್ತೆಯಾಗಿಲ್ಲ. ಆದರೆ ಸಾಲದ ಒತ್ತಡ ಹಾಗೂ ವ್ಯಾಪಾರದಲ್ಲಿ ಉಂಟಾದ ತೀವ್ರ ನಷ್ಟದಿಂದ ಬೇಸತ್ತಿದ್ದರು ಎಂಬುವುದು ಪ್ರಾಥಮಿಕ ಹಂತದ ಮಾಹಿತಿಯಾಗಿದೆ. ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ತಮ್ಮ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ವ್ಯಾಪಾರ ಕಡಿಮೆಯಾದ ಕಾರಣ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಖಾಸಗಿ ಫೈನಾನ್ಸ್ ಸಂಸ್ಥೆಗಳ ಸಾಲದ ಒತ್ತಡ ಮತ್ತು ಕಿರುಕುಳದಿಂದ ಮಾನಸಿಕವಾಗಿ ಕುಗ್ಗಿದ್ದೆ ಎಂದು ಸಹ ಪ್ರಭಾಕರ್ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.
ಮುಖ್ಯವಾಗಿ ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ಯಿಂದಾಗಿ ಸ್ಥಳೀಯ ಗ್ರಾಹಕರು ಬೇರೆ ಪಟ್ಟಣಗಳಿಗೆ ತೆರಳುತ್ತಿರುವುದರಿಂದ ಇಲ್ಲಿನ ಬಟ್ಟೆ ವ್ಯಾಪಾರ ಸಂಪೂರ್ಣ ಕುಸಿದಿದೆ. ವ್ಯಾಪಾರ ಇಲ್ಲದ ಕಾರಣ ಖಾಸಗಿ ಫೈನಾನ್ಸ್‌ಗಳಲ್ಲಿ ಮಾಡಿದ್ದ ಸಾಲಕ್ಕೆ ಸರಿಯಾಗಿ ಬಡ್ಡಿ ಕಟ್ಟಲು ಕಷ್ಟವಾಗುತ್ತಿತ್ತು. ಸಾಲ ಮರುಪಾವತಿ ಮಾಡದಿದ್ದರೆ ಖಾಸಗಿ ಫೈನಾನ್ಸ್ ಕಂಪನಿಗಳ ಏಜೆಂಟರು ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುವ ಭಯವಿತ್ತು. ಮಾನ, ಮರ್ಯಾದೆಗೆ ಹೆದರಿ ಈ ನಿರ್ಧಾರ ಕೈಗೊಂಡಿರುವುದಾಗಿ ಎಂದು ಪ್ರಭಾಕರ್ ಡೆತ್ ನೋಟ್ ಬರೆದಿಟ್ಟು ಬದುಕಿನ ಪಯಣವನ್ನೇ ಮುಗಿಸಿದ್ದಾರೆ.






