ಮಂಡ್ಯ: ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚುತ್ತಲಿದ್ದು, ಕೆ.ಆರ್.ಪೇಟೆ ತಾಲ್ಲೂಕು ಮೂಡನಹಳ್ಳಿ ಗ್ರಾಮದ ತೋಟದ ಮನೆಯೊಂದಕ್ಕೆ ಬುಧವಾರ ರಾತ್ರಿ ಚಿರತೆ ನುಗ್ಗಿದೆ.
ಗ್ರಾಮದ ರೈತ ನಿಂಗೇಗೌಡರು ಜಾನುವಾರು ಕಟ್ಟುವ ಸಲುವಾಗಿ ತೋಟದ ಮನೆ ಮಾಡಿಕೊಂಡಿದ್ದರು. ಆದರೆ, ಬುಧವಾರ ರಾತ್ರಿ ಮನೆಯಲ್ಲಿ ಯಾವುದೇ ಜಾನುವಾರು ಇರಲಿಲ್ಲ.

ಗುರುವಾರ ಬೆಳಿಗ್ಗೆ ಮನೆಗೆ ಬಂದ ನಿಂಗೇಗೌಡರು ಮನೆಯೊಳಗೆ ಶಬ್ದವಾಗುತ್ತಿರುವುದನ್ನು ಆಲಿಸಿ, ಕಿಟಕಿ ತೆರೆದು ನೋಡಿದಾಗ ಚಿರತೆ ಇರುವುದು ಪತ್ತೆಯಾಗಿದೆ.
ಗ್ರಾಮಸ್ಥರ ನೆರವು ಪಡೆದು ಅವರು ಮನೆಯ ಎರಡೂ ಬಾಗಿಲು ಮುಚ್ಚಿಸಿ ಚಿರತೆಯನ್ನು ಕೂಡಿಹಾಕಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳ ಬರುವಿಕೆಗಾಗಿ ಗ್ರಾಮಸ್ಥರು ಕಾಯುತ್ತಿದ್ದಾರೆ.
ಚಿರತೆ ಒಳಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.