ಚಾಮರಾಜನಗರ (Chamarajnagara): ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶಿವರಾತ್ರಿ ಜಾತ್ರೆ ಹಾಗೂ ಮಾದಪ್ಪನ ಮಹಾ ರಥೋತ್ಸವಕ್ಕೆ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಗತ್ಯ ಸಿದ್ಧತೆ ಕೈಗೊಂಡಿದ್ದು, ವಿಶೇಷ ಪೂಜಾ ಕಾರ್ಯಗಳು ಆರಂಭಗೊಂಡಿವೆ.
ಇಂದಿನಿಂದ ಮಾರ್ಚ್ 11 ರವರೇ ಶಿವರಾತ್ರಿ ಜಾತ್ರೆ ನಡೆಯಲಿದ್ದು, ಕಾಲ್ನಡಿಗೆ ಹಾಗೂ ವಾಹನಗಳ ಮೂಲಕ ಭಕ್ತಸಾಗರವೇ ಹರಿದು ಬರುತ್ತಿದೆ.
ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಪ್ರಾಧಿಕಾರ ನಿರಂತರ ದಾಸೋಹಕ್ಕೆ ಮುಂದಾಗಿದ್ದು, ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಅಲ್ಲಲ್ಲಿ ಕುಡಿಯುವ ನೀರು, ಶೌಚಗೃಹದ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ, ಭಕ್ತರಿಗೆ ಪ್ರಸಾದ ನೀಡುವ ಸಲುವಾಗಿ ನಾಲ್ಕರಿಂದ ಐದು ಲಕ್ಷ ಲಾಡು ಸಿದ್ಧಪಡಿಸಿಕೊಂಡಿದೆ.
ಶಿವರಾತ್ರಿ ಜಾತ್ರೆ ನಿಮಿತ್ತ ದೇವಾಲಯದ ರಾಜಗೋಪುರ, ಮುಖ್ಯದ್ವಾರ ಹಾಗೂ ಇತರ ದ್ವಾರಗಳನ್ನು ತಳಿರು ತೋರಣ, ಹೂಗಳಿಂದ ಅಲಂಕರಿಸಲಾಗಿದೆ. ಅಲ್ಲದೆ, ದೇವಾಲಯ ಹಾಗೂ ಸಾಲೂರು ಮಠಕ್ಕೆ ತೆರಳುವ ಮಾರ್ಗ ಹಾಗೂ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಮಾದಪ್ಪನ ದೇಗುಲಕ್ಕೆ ಮಾಡಲಾಗಿರುವ ಆಕರ್ಷಕ ವಿದ್ಯುತ್ ದೀಪಾಲಂಕಾರ ನೋಡುಗರನ್ನು ಆಕರ್ಷಿಸುತ್ತಿದೆ. ವಿದ್ಯುತ್ ದೀಪಾಲಂಕಾರದಿಂದ ಮಾದಪ್ಪನ ಸನ್ನಿಧಿ ಕೈಲಾಸದ ರಾಜಧಾನಿಯಂತೆ ಕಂಗೊಳಿಸುತ್ತಿದೆ.
ದ್ವಿಚಕ್ರ, ತ್ರಿಚಕ್ರ ವಾಹನಗಳ ಪ್ರವೇಶ ಬಂದ್ :
ಮಾ.7 ರಿಂದ 11ರ ವರೆಗೆ ಮಹದೇಶ್ವರಬೆಟ್ಟದಲ್ಲಿ ನಡೆಯುವ ಮಾದಪ್ಪನ ಶಿವರಾತ್ರಿ ಜಾತ್ರೆಗೆ ಬರುವ ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ವಾಹನ ನಿಲುಗಡೆ ಹಾಗೂ ರಸ್ತೆ ಕಿರಿದಾಗಿರುವ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗದಿರಲೆಂದು ಜಿಲ್ಲಾಧಿಕಾರಿ 5 ದಿನಗಳ ಕಾಲ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ಹಾಗೂ ತ್ರಿ ಚಕ್ರ ವಾಹನಗಳ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದಾರೆ.
ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಚಾಮರಾಜನಗರ ಜಿಲ್ಲೆಯೂ ಸೇರಿದಂತೆ ಮೈಸೂರು, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಯ ಡಿಪೋಗಳಿಂದ 600ಕ್ಕೂ ಹೆಚ್ಚು ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಶಿವರಾತ್ರಿ ಹಬ್ಬದ ಸಂದರ್ಭವಾಗಿರುವುದರಿಂದ ಮೈಸೂರು, ಮಂಡ್ಯ, ರಾಮನಗರ, ಕನಕಪುರ, ತುಮಕೂರು, ಬೆಂಗಳೂರು ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವರು. ಜತೆಗೆ, ಜಿಲ್ಲೆಯ ವಿವಿಧೆಡೆಯಿಂದಲೂ ಬರುವ ಭಕ್ತರಿಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಹೆಚ್ಚಿನ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುತ್ತಾರೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್.
ಮಹದೇಶ್ವರಬೆಟ್ಟದಲ್ಲಿ ನಡೆಯುವ ಶಿವರಾತ್ರಿ ಜಾತ್ರೆ ಅಂಗವಾಗಿ ರಾಜಗೋಪುರವನ್ನು ಆಕರ್ಷಕ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ.
ಮಲೆ ಮಹದೇಶ್ವರಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯುವ ಶಿವರಾತ್ರಿ ಜಾತ್ರೆಗೆ ವಿವಿಧೆಡೆಯಿಂದ ಆಗಮಿಸಿರುವ ಭಕ್ತಸಾಗರ.
#karnataka #chamarajnagar #shivaratri #shivaratrijatre #malemahadeshvarahill