ಡೀಸಲ್ ಬೆಲೆ ಏರಿಕೆ ಹಾಗೂ ಟೋಲ್ ದರ ಏರಿಕೆ ಖಂಡಿಸಿ ನಿನ್ನೆ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಲಾರಿಗಳ ಮುಷ್ಕರ ಆರಂಭವಾಗಿದ್ದು, ಲಾರಿ ಮುಷ್ಕರಕ್ಕೆ ಏರ್ಪೋರ್ಟ್ ಟ್ಯಾಕ್ಸಿ ಚಾಲಕರ ಸಂಘವೂ ಬೆಂಬಲ ಘೋಷಣೆ ಮಾಡಿದೆ. ಹಾಗೆಯೇ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್, ಸೌತ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್, ಬೆಂಗಳೂರು ಸಿಟಿ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್, ಕರ್ನಾಟಕ ಗೂಡ್ಸ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್, ಬೆಂಗಳೂರು ಸಿಟಿ ಲೋಕಲ್ ಟ್ಯಾಕ್ಸಿ ಅಸೋಸಿಯೇಷನ್, ಎಲ್ಪಿಜಿ ಟ್ಯಾಂಕರ್ ಅಸೊಶಿಯೇಶನ್, ಪೆಟ್ರೋಲ್ ಬಂಕ್ ಅಸೋಸಿಯೇಷನ್, ಬೆಂಗಳೂರು ಟೂರಿಸ್ಟ್ ಟೊಂಪೊ ಓನರ್ಸ್ ಅಸೊಶಿಯೇಶನ್, ಕರ್ನಾಟಕ ಟ್ರಾನ್ಸ್ಪೋರ್ಟ್ ಮೋಟಾರ್ ಓನರ್ಸ್ ವೆಲ್ಫೇರ್ ಅಸೊಶಿಯೇಶನ್, ಆಲ್ ಡಿಸ್ಟ್ರಿಕ್ಟ್ ಲಾರಿ ಅಸೋಸಿಯೇಷನ್ ಬೆಂಬಲ ಘೋಷಣೆ ಮಾಡಿವೆ.

ಎಪಿಎಂಸಿ ಯಾರ್ಡ್ನಲ್ಲಿ ಲಾರಿ ಮುಷ್ಕರಕ್ಕೆ ಬೆಂಬಲ ಸಿಕ್ಕಿದ್ದು, ನಿನ್ನೆ, ಮೊನ್ನೆ ಹೊರಟಿದ್ದ ಲಾರಿಗಳು ಮಾತ್ರ ಇಂದು ಅನ್ ಲೋಡ್ ಮಾಡಲು ಆಗಮಿಸಿವೆ. ನಿನ್ನೆ ರಾತ್ರಿಯಿಂದ ಬರಬೇಕಾದ ಬಹುತೇಕ ಲಾರಿಗಳು ಎಪಿಎಂಸಿ ಯಾರ್ಡ್ಗೆ ಬಂದಿಲ್ಲ. ಇದರಿಂದಾಗಿ ನಾಳೆ ಎಪಿಎಂಸಿ ಯಾರ್ಡ್ನಲ್ಲಿ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ತಡರಾತ್ರಿಯಿಂದಲೇ ಲಾರಿ ಮುಷ್ಕರ ಹಿನ್ನೆಲೆ, ಸರ್ವೀಸ್ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ ಗೂಡ್ಸ್ ಲಾರಿಗಳು, ಟೆಂಪೋ, ಪಿಕಪ್ ವಾಹನಗಳು. ಯಶವಂತಪುರದಿಂದ ಗೋರಗುಂಟೆಪಾಳ್ಯದವರೆಗೆ ಸಾಲುಗಟ್ಟಿ ನಿಂತ ವಾಹನಗಳು. ನಿನ್ನೆ ರಾತ್ರಿಯಿಂದಲೇ ಟ್ರಿಪ್ ಮಾಡದೆ ನಿಂತಿರುವ ಲಾರಿಗಳು, ಗೂಡ್ಸ್ ವಾಹನಗಳು.

ಲಾರಿ ಮುಷ್ಕರದ ಬಿಸಿ ಸರ್ಕಾರಕ್ಕೂ ತಟ್ಟಿದೆ. ಲಾರಿ ಮುಷ್ಕರದಿಂದ ಸಂಕಷ್ಟಕ್ಕೆ ಸಿಲುಕುವ ಮುನ್ಸೂಚನೆ ಅರಿತ ಸರ್ಕಾರ ಲಾರಿ ಮಾಲೀಕರ ಸಂಘಕ್ಕೆ ಬುಲಾವ್ ಕೊಟ್ಟಿದೆ. ಮಧ್ಯಾಹ್ನ 1 ಗಂಟೆಗೆ ಮಾತುಕತೆಗೆ ಬರುವಂತೆ ಆಹ್ವಾನ ಮಾಡಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಜೊತೆ ಮಾತುಕತೆ ನಡೆಸಲಿದ್ದಾರೆ ಲಾರಿ ಮಾಲೀಕರು. ಈ ಬಗ್ಗೆ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿ, ಮಧ್ಯರಾತ್ರಿಯಿಂದ ಇಡೀ ರಾಜ್ಯದಲ್ಲಿ 40 ಸಾವಿರ ವಾಹನ ಸಂಚರಿಸಬೇಕಿತ್ತು. ಆಲ್ ಇಂಡಿಯಾ ಎಲ್ಲಾ ಕಡೆ ವಾಹನ ಸಂಚಾರ ಮಾಡಬಾರದು ಎಂದು ಸೂಚನೆ ನೀಡಿದ್ದು, ಕೇವಲ ಹತ್ತು ಪರ್ಸೆಂಟ್ ವಾಹನಗಳು, ಸರಕು ಅನ್ ಲೋಡ್ ಮಾಡಿ ಅವುಗಳ ಜಾಗಕ್ಕೆ ಹೋಗುತ್ತಿವೆ ಎಂದಿದ್ದಾರೆ.

ಲಾರಿ ಮುಷ್ಕರದಿಂದ ನಾಲ್ಕು ಸಾವಿರ ಕೋಟಿ ವಹಿವಾಟು ಸ್ಥಗಿತ ಅಗಿದೆ. ಕೂಡಲೇ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಸಾರಿಗೆ ಸಚಿವರು 1 ಗಂಟೆಗೆ ಸಭೆ ಕರೆದಿದ್ದಾರೆ. ಅವರ ಭೇಟಿ ಬಳಿಕ ನಾವು ಮುಷ್ಕರದ ಬಗ್ಗೆ ಚರ್ಚೆ ಮಾಡ್ತಿವಿ. ಕೆಲವು ಅಸೋಸಿಯೇಷನ್ ಬೆಂಬಲ ನೀಡಿಲ್ಲ ನಿಜ, ಹತ್ತಿಪ್ಪತ್ತು ಪರ್ಸೆಂಟ್ ವಾಹನಗಳು ಸಂಚಾರ ಮಾಡುತ್ತಿವೆ. ರಾಗಿ, ಸಜ್ಜೆ ಬಂದಿರುವುದರಿಂದ ಎಪಿಎಂಸಿ ಯಾರ್ಡ್ ಹೊರತುಪಡಿಸಿ, ರಾಜ್ಯದಲ್ಲಿ ಯಾವುದೇ ಲೋಡ್ ಅನ್ಲೋಡ್ ಆಗ್ತಿಲ್ಲ. 9000 ವಾಹನದಲ್ಲಿ ಕೇವಲ 609 ವಾಹನ ಸಂಚಾರ ಮಾಡುತ್ತಿವೆ. ಡಿಸೇಲ್ ಬೆಲೆ ಇಳಿಕೆ, ಹೆದ್ದಾರಿ ಬಾರ್ಡರ್ ಚೆಕ್ ಪೋಸ್ಟ್ ತೆರವು ಸೇರಿದಂತೆ ಅಗತ್ಯ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡುತ್ತೇವೆ ಎಂದಿದ್ದಾರೆ.
