ಕನ್ನಡದಲ್ಲಿ ಲಾಕ್ ಡೌನ್ ಚಿತ್ರದಲ್ಲಿ ನಟಿಸಿದ್ದ ಕಾಸರಗೋಡು ಮೂಲದ ನಟಿ ಶಹನಾ ಅನುಮಾನಸ್ಪದ ರೀತಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಲಾಕ್ ಡೌನ್’ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದ ಕಾಸರಗೋಡು ಮೂಲದ ನಟಿ ಹಾಗೂ ರೂಪದರ್ಶಿ ಶಹಾನಾ (20) ಕೋಝಿಕ್ಕೋಡ್ ನಗರದಿಂದ ಸುಮಾರು 14 ಕಿಮೀ ದೂರದಲ್ಲಿರುವ ಪರಂಬಿಲ್ ಬಜಾರ್ನಲ್ಲಿರುವ ತಮ್ಮ ನಿವಾಸದ ಕಿಟಕಿ ಗ್ರಿಲ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಶುಕ್ರವಾರ ಬೆಳಗಿನ ಜಾವ 1 ಗಂಟೆಗೆ ನೆರೆಹೊರೆಯವರಿಂದ ಶಹಾನಾ ಸಾವಿನ ಸುದ್ದಿ ತಿಳಿದುಬಂದಿದೆ. ಈ ಹಿನ್ನೆಲೆ ನೆರೆಮನೆಯವರೆ ಕಾಸರಗೋಡಿನ ಆಕೆಯ ಸಂಬಂಧಿಕರಿಗೂ ಮಾಹಿತಿ ತಿಳಿಸಿದ್ದಾರೆ. ಶಹಾನಾ ಮೃತದೇಹವನ್ನು ನೋಡಿದ ಸಂಬಂಧಿಕರು ಇದು ಕೊಲೆ ಎಂದು ಶಂಕಿಸಿದ್ದಾರೆ.
ಶಹಾನಾ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯ ಸಾವು ನಿಗೂಢವಾಗಿದೆ. ಶಹಾನಾಳನ್ನು ಆಕೆಯ ಪತಿ ಸಾಜದ್ ಹಣಕ್ಕಾಗಿ ಹಲ್ಲೆ ಮಾಡುತ್ತಿದ್ದ. ಇದರ ಬಗ್ಗೆ ಶಹಾನಾ ಯಾವಾಗಲೂ ಹೇಳಿಕೊಳ್ಳುತ್ತಿದ್ದಳು. ಅವಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಶಹಾನಾ ತನ್ನ 20ನೇ ವರ್ಷದ ಹುಟ್ಟುಹಬ್ಬದ ಸಂತೋಷಕೂಟಕ್ಕೆ ನಮ್ಮೆಲ್ಲರನ್ನು ಆಹ್ವಾನಿಸಿದ್ದಳು ಎಂದು ತಿಳಿಸಿದ್ದಾರೆ.
ಶಹಾನಾ ಸಾವಿನ ತನಿಖೆಯು ಕಂದಾಯ ವಿಭಾಗೀಯ ಅಧಿಕಾರಿ ಉಪಸ್ಥಿತಿಯಲ್ಲಿ ನಡೆಯಲಿದೆ. ಕನ್ನಡದಲ್ಲಿ ಶಹಾನಾ ‘ಲಾಕ್ ಡೌನ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದು, ಅದಿನ್ನೂ ರಿಲೀಸ್ ಆಗಬೇಕಿದೆ. ಅಲ್ಲದೇ, ಮಲಯಾಳಂನಲ್ಲೂ ಅವರು ಒಂದಷ್ಟು ಚಿತ್ರಗಳನ್ನು ಮಾಡಿದ್ದಾರೆ.