
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆಯಡಿ ಮಂಜೂರಾದ ವಾಹನಗಳನ್ನು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸೋಮವಾರ ಔರಾದ(ಬಿ) ಹಾಗೂ ಕಮಲನಗರ ಪೊಲೀಸ್ ಠಾಣೆಗಳಿಗೆ ಹಸ್ತಾಂತರಿಸಿದರು.

ಔರಾದ(ಬಿ) ಪಟ್ಟಣದ ಶಾಸಕರ ಕಛೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ವಾಹನಗಳಿಗೆ ಪೂಜೆ ನೆರವೇರಿಸಿ, ಹಸಿರು ನಿಶಾನೆ ತೋರಿಸುವ ಮೂಲಕ ಶಾಸಕರು ವಾಹಗಳನ್ನು ಪೊಲೀಸ್ ಠಾಣೆಗಳಿಗೆ ಹಸ್ತಾಂತರಿಸಿದರು.ಈ ವೇಳೆ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅಮೂಲ್ಯವಾಗಿದೆ.ಪೊಲೀಸರು ಹಗಲಿರುಳೆನ್ನದೇ ಜನತೆಯ ಸೇವೆ ಮಾಡುತ್ತಿದ್ಧಾರೆ.ಅವರ ಹಿತ ಬಯಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಆದ್ದರಿಂದಲೇ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿರುವ ಪೊಲೀಸ್ ಠಾಣೆಗಳಿಗೆ ಹೊಸ ವಾಹನಗಳನ್ನು ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು.ಹಿಂದೊಮ್ಮೆ ಪ್ರವಾಸದಲ್ಲಿದ್ದಾಗ ಪೊಲೀಸ್ ಅಧಿಕಾರಿಯೊಬ್ಬರು ಹಳೆಯ ವಾಹನದಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ್ದೆ ವಾಹನವು ಸಂಪೂರ್ಣ ಹಳೆಯದಾಗಿತ್ತು.ಸರಿಯಾಗಿ ಓಡಿಸಲಾಗದೇ ಸಮಸ್ಯೆ ಎದುರಿಸುತ್ತಿದ್ದರು.

ಕಾರ್ಯ ನಿಮಿತ್ತ ಪೊಲೀಸ್ ಠಾಣೆಗೆ ಬರುವ ಜನರೊಂದಿಗೆ ಸರಿಯಾಗಿ ಮಾತನಾಡಿಸಿ ಸಮಸ್ಯೆ ಪರಿಹರಿಸುವ ಕಾರ್ಯವಾಗಬೇಕು ಎಂದು ಹೇಳಿದರು.ಔರಾದ(ಬಿ) ವೃತ್ತ ನಿರೀಕ್ಷಕರಾದ ರಘುವೀರಸಿಂಗ್ ಠಾಕೂರ್ ಮಾತನಾಡಿ, ಪೊಲೀಸ್ ಇಲಾಖೆ ದಿನದ 24 ಗಂಟೆ ಸೇವೆ ಸಲ್ಲಿಸುವ ಅಪರೂಪದ ಇಲಾಖೆ, ಒಂದು ಪೊಲೀಸ್ ಠಾಣೆ ಆರಂಭವಾದ ನಂತರ ಎಂದಿಗೂ ಬೀಗ ಹಾಕುವುದಿಲ್ಲ. ಇಂತಹ ಇಲಾಖೆಯ ಬಗ್ಗೆ ಕಾಳಜಿ ವಹಿಸುವವರು ಬಹಳ ಅಪರೂಪ. ಶಾಸಕರಾದ ಪ್ರಭು ಚವ್ಹಾಣ ಅವರು ಇಲಾಖೆಯ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದು, ಇಲಾಖೆಯ ವಾಹನಗಳನ್ನು ಸ್ವಂತ ವಾಹನಗಳಂತೆ ಪೂಜೆ ಮಾಡಿ ಹಸ್ತಾಂತರ ಮಾಡಿರುವುದು ಮತ್ತು ವಿಶೇಷ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷರಾದ ಧೋಂಡಿಬಾ ನರೋಟೆ, ಕಮಲನಗರ ವೃತ್ತ ನಿರೀಕ್ಷಕರಾದ ಅಮರಪ್ಪ, ಪೊಲೀಸ್ ಆರಕ್ಷಕ ಉಪ ನಿರೀಕ್ಷಕರಾದ ವಸೀಮ್ ಪಟೇಲ್, ಶೇಖ್‌ಶಾ ಪಟೇಲ್, ಸಿದ್ದಲಿಂಗೇಶ, ಸುದರ್ಶನ್ ರೆಡ್ಡಿ, ಬಸವರಾಜ ಕೋಟೆ, ಆರ್‌ಎಸ್‌ಐ ಜಾವೀದ್ ಸೇರಿದಂತೆ ಔರಾದ(ಬಿ) ಹಾಗೂ ಕಮನಗರ ತಾಲ್ಲೂಕಿನ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.