ಬೀದರ್:ಶಾಸಕ ಪ್ರಭು ಚವ್ಹಾಣಕಲ್ಯಾಣ ಕರ್ನಾಟಕ ಭಾಗಕ್ಕೆ ಅತ್ಯಂತ ಮಹತ್ವದ ದಿನವಾಗಿರುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಇತಿಹಾಸ ಮತ್ತು ಮಹತ್ವದ ಕುರಿತು ಮಕ್ಕಳು ಸೇರಿದಂತೆ ಎಲ್ಲರಿಗೂ ತಿಳಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.
ಔರಾದ(ಬಿ) ತಾಲ್ಲೂಕು ಆಡಳಿತದ ವತಿಯಿಂದ ಸೆಪ್ಟೆಂಬರ್ 17ರಂದು ಔರಾದ(ಬಿ) ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1947ರ ಆಗಸ್ಟ್ 15ರಂದು ಇಡೀ ದೇಶ ಸ್ವಾತಂತ್ರö್ಯದ ಸಂಭ್ರದಲ್ಲಿದ್ದರೆ ನಮ್ಮ ಭಾಗ ಹೈದ್ರಾಬಾದ ಕರ್ನಾಟಕ ಮಾತ್ರ ಇನ್ನೂ ನಿಜಾಮರ ಆಳ್ವಿಕೆಯಲ್ಲಿತ್ತು. ಈ ಅವಧಿಯಲ್ಲಿ ರಜಾಕಾರರ ಹಾವಳಿಯಿಂದ ಜನ ನಲುಗಿ ಹೋಗಿದ್ದರು. ಅನ್ಯಾಯ, ಅತ್ಯಾಚಾರಗಳು ವಿಪರೀತವಾಗಿ ನಡೆಯುತ್ತಿದ್ದವು. ನೂರಾರು ಜನರನ್ನು ಕೊಲ್ಲಲಾಗಿದೆ. ಸಾಕಷ್ಟು ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿದ್ದವು. ಇದಕ್ಕೆ ಬಸವಕಲ್ಯಾಣದ ಗೋರ್ಟಾದಲ್ಲಿ ನಡೆದ ಹತ್ಯಾಕಾಂಡವೇ ಉದಾಹರಣೆಯಾಗಿದೆ. ಇದಕ್ಕೆ ಎರಡನೇ ಜಲಿಯನ್ ವಾಲಾಬಾಗ್ ಅಂತಲೂ ಕರೆಯಲಾಗುತ್ತದೆ ಎಂದರು.
ನಿಜಾಮರ ಆಳ್ವಿಕೆಯಿಂದ ವಿಮುಕ್ತಿ ಪಡೆಯಲು ಸಾಕಷ್ಟು ಹೋರಾಟಗಳು ನಡೆದಿವೆ. ಅನೇಕ ಮಹನೀಯರು ತಮ್ಮ ಜೀವವನ್ನು ಪಣಕಿಟ್ಟು ಹೋರಾಟ ಮಾಡಿದ್ದಾರೆ. ಕೊನೆಗೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದಿಟ್ಟತನದಿದಾಗಿ ಪೊಲೀಸ್ ಕಾರ್ಯಾಚರಣೆ ನಡೆದು ಸ್ವಾತಂತ್ರö್ಯ ಹೊಂದಲಾಯಿತು. ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮಾನಂದ ತೀರ್ಥರು ಸೇರಿದಂತೆ ಎಲ್ಲ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಅವಧಿಯಲ್ಲಿ ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಹೆಸರಿಸಲಾಯಿತು. ವಿಮೋಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಮಾರ್ಪಡಿಸಲಾಗಿದೆ ಎಂದು ಸ್ಮರಿಸಿದ ಶಾಸಕರು, ಮುಖ್ಯಮಂತ್ರಿಗಳು ಪ್ರತಿ ವರ್ಷ ಗೋರ್ಟಾದಲ್ಲಿ ನಿರ್ಮಿಸಿರುವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪುತ್ಥಳಿ ಹಾಗೂ ಹುತಾತ್ಮಕರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಬೇಕೆಂದು ತಿಳಿಸಿದರು.
ಔರಾದ(ಬಿ) ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ನಿರಂತರ ಶ್ರಮ ವಹಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿದ್ದು, ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕೋರ್ಟ್ ಕಟ್ಟಡ, ಪಶು ಆಸ್ಪತ್ರೆ, ಟ್ರೀ ಪಾರ್ಕ್, ಕೆರೆ ತುಂಬುವ ಯೋಜನೆ, ಸಿಪೆಟ್ ಕಾಲೇಜು, ಪ್ರತಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ, ಕಾರಂಜಾ ಜಲಾಶಯದಿಂದ ಔರಾದ್ಗೆ ನೀರು ಸರಬರಾಜು ಯೋಜನೆ, ಹೆಡಗಾಪೂರ್ನಲ್ಲಿ ಜಾನುವಾರು ತಳಿ ಸಂರ್ವಧನಾ ಕೇಂದ್ರ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಔರಾದ(ಬಿ) ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ ಅವರು ಧ್ವಜಾರೋಹಣ ನೆರವೇರಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಟಿ.ಎಂ ಮಚ್ಚೆ ಅವರು ಕಲ್ಯಾಣ ಕರ್ನಾಟಕ ಉತ್ಸವ ದಿನ ಹಾಗೂ ವಿಶ್ವಕರ್ಮ ಜಯಂತಿಯ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಔರಾದ(ಬಿ) ಎಪಿಎಂಸಿ ಅಧ್ಯಕ್ಷರಾದ ದೊಂಡಿಬಾ ನರೋಟೆ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸರುಬಾಯಿ ಘೂಳೆ, ಉಪಾಧ್ಯಕ್ಷೆ ರಾಧಾಬಾಯಿ ಕೃಷ್ಣ ನರೋಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾರಾಣಿ ನಾಯಕ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರ ಸಿಂಗ್ ಠಾಕೂರ್, ಆರಕ್ಷಕ ವೃತ್ತ ನಿರೀಕ್ಷಕರಾದ ರಘುವೀರಸಿಂಗ್ ಠಾಕೂರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಾಸಕರು ನಗದು ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು.ಸಂಪನ್ಮೂಲ ಶಿಕ್ಷಕರಾದ ಡಾ.ಶಾಲಿವಾನ ಉದಗೀರೆ ನಿರೂಪಿಸಿದರು.