ಡಿ.ಕೆ ಶಿವಕುಮಾರ್ ಭೇಟಿ ಆದವರೆಲ್ಲರೂ ಸಿಎಂ ಆಗಬೇಕು ಎಂದು ಹೇಳುತ್ತಿರುವುದು ಉದ್ದೇಶ ಪೂರ್ವಕವಾಗಿ ಮಾಡಿಸುತ್ತಿದ್ದಾರಾ..? ಅನ್ನೋ ಅನುಮಾನ ಮೂಡುವಂತೆ ಮಾಡಿದೆ. ಒಕ್ಕಲಿಗ ಸಂಘದ ಅಧ್ಯಕ್ಷರು ಭೇಟಿ ನೀಡಿದ್ದ ವೇಳೆ ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಒತ್ತಾಯ ಮಾಡಿದ್ದರು. ಆ ಬಳಿಕ ಚಿಕ್ಕಮಗಳೂರಿನ ಅವಧೂತ ವಿನಯ್ ಗುರೂಜಿ ಕೂಡ ಹೇಳಿದ್ದರು. ಆ ನಂತರ ನಾನು ಸಿಎಂ ಆಗಬೇಕು ಎಂದು ಯಾರು ಹೇಳಬೇಡಿ.. ನನ್ನ ಪರವಾಗಿಯೂ ಯಾರೂ ಮಾತನಾಡುವುದು ಬೇಡ ಎಂದು ಬಹಿರಂಗವಾಗಿ ಹೇಳಿದ್ದರು. ಆದರೂ ಇಂದು ಜೈನ ಮುನಿಗಳು ಡಿ.ಕೆ ಶಿವಕುಮಾರ್ ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮದ ವೇದಿಕೆ ಮೇಲೆಯೇ ಮುಖ್ಯಮಂತ್ರಿ ಬದಲಾವಣೆ ಮಾತು ಕೇಳಿ ಬಂದಿದೆ. ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂದು ಗುಣಧರನಂದಿ ಮಹಾರಾಜರು ಹೇಳಿದ್ದಾರೆ. ಜೊತೆಗೆ ಜೈನ ಸಮುದಾಯಕ್ಕೆ ನಿಗಮ ಮಂಡಳಿ ಆಗಬೇಕು ಎಂದು ಇದೇ ವೇಳೆ ಸರ್ಕಾರಕ್ಕೆ ಮನವಿಯೊಂದನ್ನು ಇಟ್ಟಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂದಿರುವ ಜೈನ ಮುನಿಗಳು, ವೇದಿಕೆ ಮೇಲಿನ ಆಚಾರ್ಯರು ಮತ್ತು ಜೈನ ಮುನಿಗಳಿಂದ ಡಿಕೆಶಿವಕುಮಾರ್ಗೆ ಆಶೀರ್ವಾದ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ತೀರುತ್ತಾರೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಕಷ್ಟಪಟ್ಟಷ್ಟು ಬೇರೆ ಯಾರು ಕಷ್ಟಪಟ್ಟಿಲ್ಲ. ನಮ್ಮ ಆಸೆ ಇರೋದು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಅಂತ ಎಂದಿದ್ದಾರೆ. ನಿಗಮ ಮಂಡಳಿ ಫೈಲ್ ಸತ್ತಿಲ್ಲ, ಜೀವಂತ ಇದೆ. ಜೈನರಿಗೆ ಕೊಟ್ಟು ಗೊತ್ತು, ಬೇಡಿ ಗೊತ್ತಿಲ್ಲ. ಆದರೂ ಈಗ ಸರ್ಕಾರದ ಎದುರು ನಿಗಮ ಮಂಡಳಿ ಬೇಡುತ್ತಿದ್ದೇವೆ. ನಮಗೆ ನಿಗಮ ಮಂಡಳಿ ಕೊಡಿ ಎಂದಿದ್ದಾರೆ ಜೈನ ಮುನಿ ಗುಣಧರನಂದಿ ಮಹಾರಾಜರು.

ಆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ನೀವು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾ ಇರ್ತಾರೆ ಎಂದಿದ್ದಾರೆ. ವಿನಯ್ ಗುರೂಜಿ ಈ ಹಿಂದೆ ಈ ಮಾತನ್ನು ಹೇಳಿದ್ರು. ಅಹಿಂಸೆ, ತ್ಯಾಗಕ್ಕೆ ಮತ್ತೊಂದು ಹೆಸರು ಜೈನ ಧರ್ಮ, ಈ ಡಿಕೆಶಿ ನಿಮ್ಮ ಧರ್ಮದ ಜೊತೆಗೆ ಇರ್ತಾನೆ. ನನ್ನ ಮೇಲೆ ನಂಬಿಕೆ ಇಡಿ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಬಳಿ ನಿಗಮ ಮಂಡಳಿ ಬಗ್ಗೆ ಮಾತನಾಡಿ, ಈ ಬಜೆಟ್ನಲ್ಲೇ ನಿಗಮ ಮಂಡಳಿ ರಚನೆಗೆ ಮನವಿ ಮಾಡುತ್ತೇನೆ. ನಮ್ಮ ಸರ್ಕಾರ ನಿಮ್ಮ ಜೊತೆಗೆ ಇರುತ್ತೆ ಎಂದು ಭರವಸೆ ನೀಡಿದ್ದಾರೆ.