ಹಾಸನ : ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಇರುವಾಗಲೇ ಹಾಸನ ವಿಧಾನಸಭಾ ಟಿಕೆಟ್ ಯಾರ ಪಾಲಾಗುತ್ತೆ ಎಂಬ ವಿಚಾರವಾಗಿ ಭಾರೀ ಚರ್ಚೆಗಳು ನಡೆಯುತ್ತಿದೆ. ಭವಾನಿ ರೇವಣ್ಣ ಹಾಗೂ ಸ್ವರೂಪ್ ನಡುವೆ ಹಾಸನ ಟಿಕೆಟ್ಗಾಗಿ ರೇಸ್ ನಡೆಯುತ್ತಿರುವ ನಡುವೆಯೇ ಹಾಸನ ಜೆಡಿಎಸ್ ಅಭ್ಯರ್ಥಿಯಾಗಿ ಹಿರಿಯ ಮುಖಂಡ ಕೆ.ಆರ್ ರಾಜೇಗೌಡ ಹೆಸರನ್ನು ಫೂನಲ್ ಮಾಡೋಕೆ ದಳಪತಿಗಳು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಈಗಾಗಲೇ ಈ ವಿಚಾರವಾಗಿ ರಾಜೇಗೌಡರ ಬಳಿ ಸಂವಾದ ನಡೆಸಿದ್ದಾರೆ ಎನ್ನಲಾಗಿದೆ. ಹಾಸನ ಕ್ಷೇತ್ರದ ಪ್ರಬಲ ಅಭ್ಯರ್ಥಿ ಎನಿಸಿರುವ ಭವಾನಿ ರೇವಣ್ಣ ಕೂಡ ರಾಜಣ್ಣ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾದರೆ ನಾನು ಸ್ಪರ್ಧೆಯಿಂದ ಹಿಂದೆ ಸರಿಯೋದಾಗಿ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಭವಾನಿ ರೇವಣ್ಣಗೆ ಟಿಕೆಟ್ ನೀಡದೇ ಇದ್ದರೂ ಅವರು ಸೂಚಿಸಿದ ಅಭ್ಯರ್ಥಿಯನ್ನು ಹಾಸನ ಕ್ಷೇತ್ರಕ್ಕೆ ಫಿಕ್ಸ್ ಮಾಡಿದರೆ ಅವರ ಕೋಪ ತಣ್ಣಗಾಗಬಹುದು ಎಂಬುದು ದಳಪತಿಗಳ ಲೆಕ್ಕಾಚಾರವಾಗಿದೆ.
ಈ ಹಿಂದೆ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ರಾಜೇಗೌಡ ಬಳಿಕ ಜೆಡಿಎಸ್ ಸೇರ್ಪಡೆಯಾಗಿದ್ದರು. 2013 ಹಾಗೂ 2018ರ ಚುನಾವಣೆಯಲ್ಲಿ ರಾಜೇಗೌಡ ಜೆಡಿಎಸ್ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಇನ್ನು ಟಿಕೆಟ್ ವಿಚಾರವಾಗಿ ಮಾತನಾಡಿದ ಕೆ.ಎಂ.ರಾಜೇಗೌಡ, ನಾನು ಹಾಸನದಿಂದ ಸ್ಪರ್ಧಿಸಿದರೆ ಬೆಂಬಲ ನೀಡೋದಾಗಿ ಭವಾನಿ ರೇವಣ್ಣ ಹೇಳದ್ದಾರೆ. ದೇವೇಗೌಡರು ನಮ್ಮಲ್ಲಿಯೇ ಹಾಸನ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಗೊಂದಲವಿದೆ. ಹೀಗಾಗಿ ನೀವೆ ಅಭ್ಯರ್ಥಿಯಾಗಿ ಎಂದಿದ್ದಾರೆ. ನಿಮ್ಮ ಕುಟುಂಬದವರು ಸೂಚನೆ ನೀಡಿದರೆ ಕಣಕ್ಕಿಳಿಯಲು ನಾನು ಸಿದ್ಧ ಎಂದು ಹೇಳಿದ್ದೇನೆ ಎಂಧು ಮಾಹಿತಿ ನೀಡಿದ್ದಾರೆ.