ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರವನ್ನು ಪಡೆಯಲು ಬಿಜೆಪಿ ಯಶಸ್ವಿಯಾಗಿದ್ದರೂ, ದಕ್ಷಿಣ ಭಾರತದಲ್ಲಿ ಮಾತ್ರ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಕರ್ನಾಟಕ, ಗೋವಾ ಹೊರತಾಗಿ ಬೇರೆ ಯಾವುದೇ ರಾಜ್ಯದಲ್ಲಿ ಅಧಿಕಾರಿ ಪಡೆಯಲು ಬಿಜೆಪಿ ವಿಫಲವಾಗಿದೆ. ಪ್ರಮುಖವಾಗಿ ಕೇರಳ ಹಾಗೂ ತೆಲಂಗಾಣದಲ್ಲಿ ಬಿಜೆಪಿ ಪ್ರದರ್ಶನ ಅತ್ಯಂತ ಕಳಪೆಯಾಗಿದ್ದು, ಈಗ ಈ ರಾಜ್ಯಗಳಲ್ಲಿ ಬಿಜೆಪಿಗೆ ಜೀವ ತುಂಬುವ ಪ್ರಯತ್ನ ನಡೆಸಲಾಗುತ್ತಿದೆ.
2016ರಲ್ಲಿ ಕೇರಳ ವಿಧಾನಸಭೆಗೆ ಬಿಜೆಪಿ ಮೊತ್ತಮೊದಲು ಪ್ರವೇಶ ಪಡೆದಿತ್ತು.2021ರಲ್ಲಿ ಆ ಸ್ಥಾನವನ್ನೂ ಕಳೆದುಕೊಂಡು ವಿಧಾನಸಭೆಯಲ್ಲಿ ಅಸ್ಥಿತ್ವವೇ ಇಲ್ಲದ ಪರಿಸ್ಥಿಗೆ ಬಿಜೆಪಿ ಇಳಿದಿದೆ. ಇನ್ನು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ತಮ್ಮನ್ನು ತಾವೇ ಮುಂದಿನ ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.
ಇವೆರಡೂ ರಾಜ್ಯಗಳಲ್ಲಿ ಬಿಜೆಪಿಯ ಪ್ರಭಾವ ಅಷ್ಟಕ್ಕಷ್ಟೇ. ಈ ಕಾರಣಕ್ಕೆ, ಕೇರಳ ಹಾಗು ತೆಲಂಗಾಣದಲ್ಲಿ ಬಿಜೆಪಿ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಲು ಹಾಗೂ ಮುಂಬರುವ ಚುನಾವಣೆಗಳಿಗೆ ತಯಾರಿಯಾಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಇಂದು ಮತ್ತು ನಾಳೆ ಭೇಟಿ ನೀಡಲಿದ್ದಾರೆ. ಈ ವೇಳೆ ಸರಣಿ ಸಭೆಗಳನ್ನು ನಡೆಸಿ, ಪಕ್ಷದ ಅಸ್ಥಿತ್ವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚೆ ನಡೆಸಲಿದ್ದಾರೆ.
ತೆಲಂಗಾಣದಲ್ಲಿ ಬಿಜೆಪಿ ಜೊತೆಗಿನ ವೈಮನಸ್ಯವನ್ನು ಟಿಆರ್ಎಸ್ ಮುಂದುವರೆಸಿದೆ. ಈ ಕಾರಣಕ್ಕೆ ಅಲ್ಲಿ ರೈತರ ಸಮಸ್ಯೆಗಳನ್ನು ಚುನಾವಣಾ ಸರಕಾಗಿಸಿ ಪ್ರಚಾರ ಪಡೆಯುವ ಕುರಿತು ಚಿಂತನೆ ನಡೆದಿದೆ. ಕಳೆದ ಚುನಾವಣೆಯಲ್ಲಿ ಕೇವಲ ಮೂರು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಸಫಲವಾಗಿದ್ದ ಬಿಜೆಪಿ, ಮುಂದಿನ ಚುನಾವಣೆಗೆ ಈಗಾಗಲೇ ನೀಲಿ ನಕ್ಷೆ ತಯಾರಿಸಿದೆ.
ಟಿಆರ್ಎಸ್ ಸರ್ಕಾರದ ವೈಫಲ್ಯಗಳು, ರೈತರ ಸಮಸ್ಯೆ ಹಾಗೂ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಕ್ಷೇತ್ರವಾರು ಪ್ರಚಾರಕ್ಕೆ ತಯಾರಿ ನಡೆಸಲಾಗಿದೆ. ಇದರೊಂದಿಗೆ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಸಲುವಾಗಿ ಹಾಗೂ ಅವರಲ್ಲಿ ಆತ್ಮವಿಶ್ವಾಸ ತುಂಬಿಸಲು ಜೆ ಪಿ ನಡ್ಡಾ ಅವರು ಮೆಹಬೂಬ್ ನಗರದಲ್ಲಿ ಬಹಿರಂಗ ಸಮಾವೇಶವನ್ನೂ ಹಮ್ಮಿಕೊಳ್ಳಲಿದ್ದಾರೆ.
ಕೇರಳದ ಕಲ್ಲಿಕೋಟೆಯಲ್ಲಿಯೂ ಬಹಿರಂಗ ಸಮಾವೇಶವನ್ನು ಏರ್ಪಡಿಸಲಾಗಿದೆ. ಇಲ್ಲಿಯೂ ಪಕ್ಷದ ಪ್ರಮುಖರ ಸಭೆ ಕರೆದು, ಮುಂದಿನ ಲೋಕಸಭಾ ಹಾಗೂ ನಾಲ್ಕು ವರ್ಷಗಳ ನಂತರ ಬರುವ ವಿಧಾನಸಭಾ ಚುನಾವಣೆಗೆ ಈಗಿಂದಲೇ ತಯಾರಿ ನಡೆಸುವ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ವರದಿಯಾಗಿದೆ.
“ರಾಜ್ಯದ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ರಾಷ್ಟ್ರ ನಾಯಕರು ಆಗಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳಿಸುವ ಕುರಿತು ಚರ್ಚೆ ನಡೆಸಲಾಗುತ್ತದೆ,” ಎಂದು ಕೇರಳದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಒಟ್ಟಿನಲ್ಲಿ, ನೆಲೆಯಿಲ್ಲದ ಕಡೆಗಳಲ್ಲಿ ಹೊಸತೊಂದು ನೆಲೆ ಕಂಡುಕೊಳ್ಳಲು ಬಿಜೆಪಿ ಶ್ರಮಪಡುತ್ತಿದೆ. ಎಡರಂಗ ಹಾಗು ಪ್ರಾದೇಶಿಕ ಪಕ್ಷದ ಪ್ರಭಾವವನ್ನು ಮೀರಿ ನಿಂತು ಸರ್ಕಾರ ರಚಿಸಲು ಬಿಜೆಪಿಗೆ ಸಾಧ್ಯವಾಗಬಹುದೇ ಎಂದು ಕಾದುನೋಡಬೇಕಿದೆ.