ರಾಜ್ಯ ಚುನಾವಣಾ ಆಯೋಗವು 2021ರ ಜೂನ್ ತಿಂಗಳಿನಿಂದ 2022ರ ಮಾರ್ಚ್ ತಿಂಗಳವರೆಗೆ ಅವಧಿ ಮುಕ್ತಾಯವಾಗುವ 44 ಗ್ರಾಮ ಪಂಚಾಯತ್, ನ್ಯಾಯಾಲಯ ಪ್ರಕರಣ, ಇತರೆ ಕಾರಣಗಳಿಂದ ಚುನಾವಣೆ ನಡೆಯದೆ ಬಾಕಿ ಇದ್ದ 13 ಗ್ರಾಮ ಪಂಚಾಯತ್ ಗಳು ಸೇರಿ ಒಟ್ಟು 57 ಗ್ರಾಮ ಪಂಚಾಯತ್ ಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ, ಖಾಲಿ ಉಳಿದಿರುವ 386 ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಿ ಆದೇಶಿಸಿದೆ.
2021ರ ಡಿಸೆಂಬರ್ 17ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಡಿಸೆಂಬರ್ 18ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಡಿಸೆಂಬರ್ 20ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್ 27ರಂದು ಮತದಾನ ಅವಶ್ಯವಿದ್ದರೆ ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 29ರಂದು ಮರು ಮತದಾನ ಅವಶ್ಯವಿದ್ದರೆ, ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಮರುಮತದಾನ ನಡೆಯಲಿದೆ. ಡಿಸೆಂಬರ್ 30ರ ಗುರುವಾರದಂದು ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8:00 ಗಂಟೆಯಿಂದ ಮತಗಳ ಏಣಿಕೆ ಕಾರ್ಯ ನಡೆಯಲಿದ್ದು, ಡಿಸೆಂಬರ್ 30ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕೃತವಾಗಿ ಅಧಿಸೂಚನೆಯನ್ನು ಜಿಲ್ಲಾಡಳಿತ ಡಿಸೆಂಬರ್ 13 ರಂದು ಬಿಡುಗಡೆ ಮಾಡಲಿದ್ದು. ಡಿಸೆಂಬರ್ 13 2021 ರಿಂದ ಡಿಸೆಂಬರ್ 30 2021 ವರೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ ಎಂದು ಚುನಾವಣೆ ಆಯೋಗದ ಆದೇಶದಲ್ಲಿ ತಿಳಿಸಲಾಗಿದೆ.
ಸುಮಾರು 12 ಜಿಲ್ಲೆಯ ಕ್ಷೇತ್ರಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿದ್ದು ಅದರ ಸಂಪೂರ್ಣ ವಿವರ ಈ ಆದೇಶ ಪತ್ರದಲ್ಲಿ ಇದೆ.