ರಾಜ್ಯಾದ್ಯಂತ ಅನ್ ಲಾಕ್ ಆರಂಭಕ್ಕೆ ನಾಳೆ ಮುಹೂರ್ತ ಫಿಕ್ಸ್?

ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ಜೂ.14ರ ಬಳಿಕ ಹಂತಹಂತವಾಗಿ ಅನ್ ಲಾಕ್ ಜಾರಿಗೆ ತರಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಅದರಲ್ಲೂ ಮುಖ್ಯವಾಗಿ, ಜಿಲ್ಲಾವಾರು ಪ್ರಕರಣಗಳು, ಪಾಸಿಟಿವಿಟಿ ರೇಟ್, ಸಾವಿನ ಪ್ರಮಾಣಗಳಿಗೆ ಅನುಗುಣವಾಗಿ ಅನ್ ಲಾಕ್ ಸ್ವರೂಪವನ್ನು ನಿರ್ಧರಿಸಲು ಆಯಾ ಜಿಲ್ಲಾಡಳಿತಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಆದರೆ, ಕಳೆದ ಒಂದು ವಾರದಲ್ಲಿ ಎರಡನೇ ಹಂತದ ಲಾಕ್ ಡೌನ್ ಜಾರಿಗೆ ಬರುತ್ತಲೇ ಹೊಸ ಪ್ರಕರಣಗಳು, ಪಾಸಿಟಿವಿಟಿ ರೇಟ್ ನಲ್ಲಿ ದಿಢೀರ್ ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ವಾಸ್ತವಿಕವಾಗಿ ಪ್ರಕರಣಗಳು ಇಳಿಕೆಯಾಗಿವೆಯೇ? ಅಥವಾ ಪರೀಕ್ಷೆ ಪ್ರಮಾಣದಲ್ಲಿ ಆಗಿರುವ ಭಾರೀ ಕುಸಿತದ ಪರಿಣಾಮವಾಗಿ ದೈನಂದಿನ ಪ್ರಕರಣಗಳು ಕುಸಿಯುತ್ತಿವೆಯೇ ಎಂಬ ಪ್ರಶ್ನೆ ಕೂಡ ಇದೆ. ಅದರಲ್ಲೂ ಲಾಕ್ ಡೌನ್ ಕುರಿತು ನಿರ್ಧಾರ ಕೈಗೊಳ್ಳಲು ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಲಿರುವ ಹಿನ್ನೆಲೆಯಲ್ಲಿ, ಸಭೆಯ ತೀರ್ಮಾನವನ್ನು ನಿರ್ಧರಿಸುವ ಪ್ರಮುಖ ಸಂಗತಿಯಾದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ, ಪಾಸಿಟಿವಿಟಿ ರೇಟ್ ಮತ್ತು ಮರಣ ಪ್ರಮಾಣಗಳು ಸಾಕಷ್ಟು ಚರ್ಚೆಗೀಡಾಗಿವೆ.

ಸುಮಾರು ಎರಡು ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 10 ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದೆ. ಜೊತೆಗೆ ಪಾಸಿಟಿವಿಟಿ ರೇಟ್ ಕೂಡ ಶೇ.7.53ಕ್ಕೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಂತಹಂತವಾಗಿ ಅನ್ ಲಾಕ್ ಜಾರಿಗೆ ಸರ್ಕಾರ ಚಿಂತನೆ ನಡೆಸಿದ್ದು, ಆ ನಿಟ್ಟಿನಲ್ಲಿ ಅನ್ ಲಾಕ್ ಸ್ವರೂಪ ನಿರ್ಧರಿಸಲು ಸಿಎಂ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.

ದೈನಂದಿನ ಹೊಸ ಪ್ರಕರಣಗಳ ವಿಷಯದಲ್ಲಿ ರಾಜ್ಯದಲ್ಲಿ ಆಶಾದಾಯಕ ಬೆಳವಣಿಗೆ ಇದ್ದರೂ, ಒಟ್ಟಾರೆ ಸಕ್ರಿಯ ಪ್ರಕರಣಗಳ ಪ್ರಮಾಣದಲ್ಲಿ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಹಾಗಾಗಿ, ಅನ್ ಲಾಕ್ ನಿರ್ಧಾರ ಕೈಗೊಳ್ಳುವ ವೇಳೆ ಪಾಸಿಟಿವಿಟಿ ರೇಟ್ ಮತ್ತು ಮರಣ ಪ್ರಮಾಣದ ಜೊತೆಗೆ ದೈನಂದಿನ ಪರೀಕ್ಷೆಗಳ ಪ್ರಮಾಣವನ್ನು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳ ಅವಧಿಯಲ್ಲಿ ಕೋವಿಡ್ ಸೋಂಕು ಪತ್ತೆ ಪರೀಕ್ಷೆಗಳ ಮಾಹಿತಿ ನಾಳೆಯ ಸಭೆಯ ಬಹಳ ನಿರ್ಣಾಯಕ ಅಂಶವಾಗಿರಲಿದೆ. ಆದರೆ, ಕಳೆದ ಒಂದು ವಾರದಲ್ಲಿ ರಾಜ್ಯದ ಕೋವಿಡ್ ಪರೀಕ್ಷೆಗಳ ಪ್ರಮಾಣ ಇಳಿಮುಖವಾಗಿದ್ದು, ಜೂನ್ 1,45,923 ಮಂದಿಗೆ ಪರೀಕ್ಷೆ ನಡೆಸಿದ್ದರೆ, ಜೂ.8ರಂದು ಆ ಪ್ರಮಾಣ 1,30,224ಕ್ಕೆ ಕುಸಿದಿದೆ. ಅಂದರೆ, ಒಂದು ವಾರದ ಅಂತರದಲ್ಲಿ ಬರೋಬ್ಬರಿ 15,500ಕ್ಕೂ ಹೆಚ್ಚು ಪರೀಕ್ಷೆಗಳು ಕಡಿಮೆಯಾಗಿವೆ!

ಆದರೆ, ಸದ್ಯದ ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ರಾಜ್ಯದ 137 ತಾಲೂಕುಗಳಲ್ಲಿ ಪಾಸಿಟಿವಿಟಿ ರೇಟ್ ನಿರೀಕ್ಷಿತ ಶೇ.5ಕ್ಕಿಂತ ಅಧಿಕ ಪ್ರಮಾಣದಲ್ಲಿದೆ. ಆ ಪೈಕಿ 9 ತಾಲೂಕುಗಳಲ್ಲಿ ಶಿವಮೊಗ್ಗ, ಭದ್ರಾವತಿ, ಹೊನ್ನಾಳಿ, ಚನ್ನಗಿರಿ, ಹರಿಹರ, ದೊಡ್ಡಬಳ್ಳಾಪುರ, ರಾಯಭಾಗ, ಎನ್ ಆರ್ ಪುರ ಸೇರಿದಂತೆ ಒಂಭತ್ತು ತಾಲೂಕುಗಳಲ್ಲಿ ಪಾಸಿಟಿವಿಟಿ ದರ ಶೇ.30ಕ್ಕಿಂತ ಅಧಿಕವಿದೆ. ಅದೇ ಹೊತ್ತಿಗೆ ಸಿಎಂ ತವರು ಕ್ಷೇತ್ರ ಶಿಕಾರಿಪುರ ಸೇರಿದಂತೆ ಆರು ತಾಲೂಕುಗಳಲ್ಲಿ ಪಾಸಿಟಿವಿಟಿ ದರ  ಶೇ.25ರಿಂದ 30ರ ದರದಲ್ಲಿದೆ. ಒಟ್ಟಾರೆ, ರಾಜ್ಯದ 137 ತಾಲೂಕುಗಳಲ್ಲಿ ಕೇಂದ್ರದ ಮಾರ್ಗಸೂಚಿಯ ಪ್ರಕಾರ, ಲಾಕ್ ಡೌನ್ ತೆರವು ಮಾಡುವ ಪರಿಸ್ಥಿತಿ ಇಲ್ಲ.

ಆ ಹಿನ್ನೆಲೆಯಲ್ಲಿ ನಾಳೆಯ ಸಿಎಂ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ವಾಸ್ತವಾಂಶಗಳು ವ್ಯತಿರಿಕ್ತ ವಾತಾವರಣದ ಚಿತ್ರಣ ನೀಡುತ್ತಿರುವಾಗ, ಗ್ರಾಮೀಣ ಭಾಗದಲ್ಲಿ ಸಾವಿನ ಪ್ರಮಾಣ ಆತಂಕಕಾರಿ ಪ್ರಮಾಣದಲ್ಲೇ ಉಳಿದಿರುವಾಗ, ಅನ್ ಲಾಕ್ ವಿಷಯದಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...