ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಶರ್ಮಿಳಾ ಮಾಂಡ್ರೆ, ಇದೀಗ ಮದುವೆ ಆಗಲು ಸಜ್ಜಾಗುತ್ತಿದ್ದಾರೆ. ಹೌದು, ಅವರ ಮದುವೆ ನಿಶ್ಚಯವಾಗಿದೆ. ಇದೇ ಜೂನ್ 25 ರಂದು ನಿಶ್ಚಿತಾರ್ಥ ನಡೆಯಲಿದೆ.

ಅಂದಹಾಗೆ, ಈ ಬ್ಯೂಟಿಫುಲ್ ಹುಡುಗಿಯ ಕೈ ಹಿಡಿಯಲಿರುವ ಹುಡುಗ ಬೇರೆ ಯಾರೂ ಅಲ್ಲ, ಅವರು ಕೂಡ ಚಿತ್ರೋದ್ಯಮದಲ್ಲೇ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರು ಸುಧನ್ ಸುಂದರಂ. ತಮಿಳು ಚಿತ್ರರಂಗದ ಯಶಸ್ವಿ ನಿರ್ಮಾಪಕ. ಇಬ್ಬರು ಇಷ್ಟರಲ್ಲೇ ಸಪ್ತಪದಿ ತುಳಿಯಲಿದ್ದಾರೆ.

ಶರ್ಮಿಳಾ ಮಾಂಡ್ರೆ ಅವರ ಕೈ ಹಿಡಿಯಲಿರುವ ಸುಧನ್ ಸುಂದರಂ, ತಮಿಳಿನ ಯಶಸ್ವಿ ನಿರ್ಮಾಪಕಲ್ಲೊಬ್ಬರು. `ಪ್ಯಾಷನ್ ಸ್ಟುಡಿಯೋಸ್’ ನಿರ್ಮಾಣ ಸಂಸ್ಥೆಯ ಸಂಸ್ಥಾಪಕರಾಗಿದ್ದು, ಬ್ಲಾಕ್‌ಬಸ್ಟರ್ `ಮಹಾರಾಜ’, `ತಾಯ್ ಕಿಳವಿ’ ಮತ್ತು `ಅನ್ನಾಬೆಲ್ಲೆ ಸೇತುಪತಿ’ ಸೇರಿದಂತೆ ಇನ್ನಿತರೆ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇನ್ನು ತಮಿಳಿನಲ್ಲಿ ಚಿತ್ರ ನಿರ್ಮಿಸಿರುವ ಶರ್ಮಿಳಾಗೆ ಭಾವೀ ಪತಿ ಅದೇ ಇಂಡಸ್ಟ್ರಿಯಲ್ಲೇ ಪರಿಚಯವಾಗಿರಬಹುದೇನೋ?

`ಸಜನಿ’ ಚಿತ್ರದ ಮೂಲಕ ಚಿತ್ರರಂಗವನ್ನು ಸ್ಪರ್ಶಿಸಿದ ಶರ್ಮಿಳಾ ಇದೀಗ ನಟನೆ ಜೊತೆ ಚಿತ್ರ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಅದೇನೆ ಇರಲಿ, ಶರ್ಮಿಳಾ ಅಂದಾಕ್ಷಣ, ಥಟ್ಟನೆ ನೆನಪಾಗೋದು ಅವರ ಬ್ಯೂಟಿ. ಅಂತಹ ಸೌಂದರ್ಯವತಿ ಇದೀಗ ತಮಿಳುನಾಡಿನ ಸೊಸೆ ಆಗಲು ಸಜ್ಜಾಗುತ್ತಿದ್ದಾರೆ. ಅಂದಹಾಗೆ, ಈ ವರ್ಷವೇ ಅವರು ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ.






