ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗತೊಡಗಿದೆ. ಅಲ್ಲಿನ ಉಪಕುಲಪತಿ ಎಂ.ಜಗದೀಶ್ ಕುಮಾರ್ ವಿರುದ್ಧ ಉಪನ್ಯಾಸಕರು, ಪ್ರೊಫೆಸರ್ ಗಳು, ಆಡಳಿತ ಸಿಬ್ಬಂದಿ, ವಿದ್ಯಾರ್ಥಿ ಸಮೂಹ ಬಂಡೆದ್ದಿದೆ. ಅವರ ಏಕಪಕ್ಷೀಯ ನಿರ್ಧಾರಗಳು, ಕೇಂದ್ರದ ಬಿಜೆಪಿ ಸರ್ಕಾರದ ಪರವಾದ ನಿಲುವು, ವಿದ್ಯಾರ್ಥಿ ವಿರೋಧಿ ನಿರ್ಣಯಗಳು, ವಿದ್ಯಾರ್ಥಿ ಸಮೂಹವನ್ನು ಒಡೆದಾಳುವ ನೀತಿ ಸೇರಿದಂತೆ ಹಲವು ನಿರ್ಧಾರಗಳ ವಿರುದ್ಧ ಧ್ವನಿ ಎತ್ತಿದ್ದಾರೆ.
ಇದಕ್ಕೆ ಇಂಬು ಕೊಟ್ಟಂತೆ ಪ್ರೊಫೆಸರ್ ಗಳ ಗುಂಪೊಂದು ಜೆಎನ್ ಯುನಲ್ಲಿ ಆಗುತ್ತಿರುವ ಅಹಿತಕರ ಬೆಳವಣಿಗೆಳು, ಎಡೆಬಿಡದೆ ನಡೆಯುತ್ತಿರುವ ಪ್ರತಿಭಟನೆಗಳು, ಹಿಂಸಾಚಾರದಿಂದಾಗಿ ಬೇಸತ್ತು ವಿಶ್ವವಿದ್ಯಾಲಯವನ್ನೇ ತೊರೆಯಲು ನಿರ್ಧರಿಸಿದ್ದಾರೆ. ಕೆಲವರು ಐಐಟಿ ದೆಹಲಿಯ ಮೊರೆ ಹೋಗಿದ್ದು, ತಮಗೊಂದು ಉದ್ಯೋಗ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಜೆಎನ್ ಯು ಸಂಬಂಧವನ್ನೇ ಕಳೆದುಕೊಳ್ಳಲಾರಂಭಿಸಿದ್ದಾರೆ.
ಜಗದೀಶ್ ಕುಮಾರ್ ಅವರ ದುರಾಡಳಿತವನ್ನು ಖಂಡಿಸಿ ದೇಶದ ಖ್ಯಾತ ಆರ್ಥಿಕ ತಜ್ಞರೂ ಆಗಿರುವ ಜೆಎನ್ ಯುದ ಗೌರವ ಪ್ರೊಫೆಸರ್ ಅಮಿತ್ ಭಂಡೂರಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ನಾನು 1973 ರಿಂದಲೂ ಜೆಎನ್ ಯು ಜತೆಗೆ ಒಡನಾಟ ಇಟ್ಟುಕೊಂಡಿದ್ದವನು. ಇಷ್ಟೊಂದು ದೀರ್ಘಾವಧಿಯಲ್ಲಿ ನನಗೆ ಒಮ್ಮೆಯೂ ವಿವಿಯ ಆಡಳಿತದ ವಿಚಾರದಲ್ಲಿ ಬೇಸರವೇ ಆಗಿರಲಿಲ್ಲ. ಆದರೆ, ಈಗ ವಿವಿಯಲ್ಲಿ ಉಸಿರುಗಟ್ಟಿದ ವಾತಾವರಣ ಇದೆ. ಸದಾ ಒಂದಿಲ್ಲೊಂದು ವಿವಾದದ ಕೇಂದ್ರ ಬಿಂದುವಾಗಿದ್ದು, ಅಪಖ್ಯಾತಿಯನ್ನು ಪಡೆಯುತ್ತಿರುವುದನ್ನು ನೋಡಿ ದುಃಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ ಭಂಡೂರಿ ಅವರು.
ಉಪಕುಲಪತಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಭಂಡೂರಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ರಾಜೀನಾಮೆ ನೀಡುತ್ತಿರುವುದು ನನಗೆ ದುಃಖದ ವಿಚಾರವಾಗಿದೆ. ಆದರೆ, ನಾನು ಇಲ್ಲಿನ ವ್ಯವಸ್ಥೆಯನ್ನು ಕಂಡೂ ಕಾಣದಂತೆ ಕುಳಿತಿರಲು ಸಾಧ್ಯ. ನಾನು ಮೂಕಪ್ರೇಕ್ಷಕನಂತೆ ಇದ್ದು ಪ್ರತಿಭಟಿಸದಿದ್ದರೆ ನನ್ನ ನೈತಿಕತೆಯೇ ಉಳಿಯುವುದಿಲ್ಲ. ವಿಶ್ವವಿದ್ಯಾಲಯದಲ್ಲಿ ಉಸಿರುಗಟ್ಟುವ ವಾತಾವರಣ ಮತ್ತು ಗದ್ದಲದ ವಾತಾವರಣ ನಿರ್ಮಾಣವಾಗಿರುವುದು ನನ್ನ ಮನಸಿಗೆ ಬೇಸರ ತಂದಿದೆ ಎಂದಿದ್ದಾರೆ.
ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಯನ್ನು ನೀವು ನಿಭಾಯಿಸುತ್ತಿರುವ ರೀತಿಯನ್ನು ಗಮನಿಸಿದರೆ ವಿವಿಯ ವಾತಾವರಣ ಕಲುಷಿತವಾಗುತ್ತಿರುವುದು ಗೊತ್ತಾಗುತ್ತದೆ. ಇಲ್ಲಿನ ಬೋಧಕ ಸಿಬ್ಬಂದಿಯನ್ನು ನೀವು ಕಾಣುತ್ತಿರುವ ರೀತಿ ಸರಿಯಿಲ್ಲ. ಈ ಎಲ್ಲಾ ಬೆಳವಣಿಗೆಗಳು ವಿಶ್ವವಿದ್ಯಾಲಯ ಶ್ರೇಯಸ್ಸಿಗೆ ಧಕ್ಕೆ ತರುವಂತಿವೆ ಎಂಬ ಮಾತುಗಳು ಸಮಾಜದ ವಿವಿಧ ವರ್ಗಗಳಿಂದ ಕೇಳಿ ಬರುತ್ತಿವೆ ಮತ್ತು ಇದೊಂದು ಎಚ್ಚರಿಕೆ ಗಂಟೆಯಾಗಿದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಇದು ಹೌದೂ ಸಹ.
Also Read: JNU ತೊರೆಯಲು ಮುಂದಾಗುತ್ತಿರುವ ಪ್ರೊಫೆಸರ್ ಗಳು!
ನಾನು 1973 ರಲ್ಲಿ ಯುವ ಪ್ರೊಫೆಸರ್ ಆಗಿ ವಿಶ್ವವಿದ್ಯಾಲಯವನ್ನು ಸೇರಿಕೊಂಡಿದ್ದೆ. ನನ್ನ ಈ ಸುದೀರ್ಘ ಅವಧಿಯಲ್ಲಿ ನಾನು ಕೆಲವು ಪ್ರತಿಭಟನೆಗಳನ್ನೂ ನೋಡಿದ್ದೇನೆ. ಆಗಿನ ಆಡಳಿತ ಮಂಡಳಿ ಉತ್ತಮವಾಗಿ ನಿಭಾಯಿಸಿದ್ದನ್ನು ಕಂಡಿದ್ದೇನೆ. ಆದರೆ, ಎಂದಿಗೂ ಸಹ ತರಗತಿಗಳನ್ನು ತಾತ್ಕಾಲಿಕವಾಗಿಯೂ ಸ್ಥಗಿತಗೊಳಿಸಿರಲಿಲ್ಲ. ಆದರೆ, ಈಗಿನ ಪರಿಸ್ಥಿತಿಯೇ ಬೇರೆ ಇದೆ. ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಈಗ ಜೆಎನ್ ಯು ವಿವಾದದ ಕೇಂದ್ರ ಬಿಂದುವಾಗಿದ್ದು, ದೇಶದೆಲ್ಲೆಡೆ ಚರ್ಚೆಯ ವಿಚಾರವಾಗಿದೆ. ಹಿಂದೆಲ್ಲಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು, ಬೋಧಕ ವರ್ಗದವರು ಒಟ್ಟಾಗಿ ಕಲೆತು ಆರೋಗ್ಯಪೂರ್ಣವಾದ ಚರ್ಚೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿವಿಗೊಂದು ಹೆಸರು ತಂದುಕೊಟ್ಟಿದ್ದರು. ಆದರೆ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಆ ಖ್ಯಾತಿಯೆಲ್ಲಾ ಕಣ್ಮರೆಯಾಗಿ ಅಪಖ್ಯಾತಿ ಬರತೊಡಗಿದೆ. ಇಂತಹ ಪರಿಸ್ಥಿತಿ ದೇಶದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಕಂಡುಬರುತ್ತಿಲ್ಲ. ದೇಶದಲ್ಲಷ್ಟೇ ಅಲ್ಲ, ನನ್ನ ಅನುಭವದಲ್ಲಿ ಇಂತಹ ಪರಿಸ್ಥಿತಿಯನ್ನು ವಿಶ್ವದ ಯಾವುದೇ ಮೂಲೆಯ ವಿಶ್ವವಿದ್ಯಾಲಯಗಳಲ್ಲಿ ನಾನು ನೋಡಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ್ದ ನಮ್ಮ ವಿಶ್ವವಿದ್ಯಾಲಯಕ್ಕೆ ಇಂತಹದ್ದೊಂದು ಅಪಖ್ಯಾತಿ ಬಂದಿರುವುದನ್ನು ಕಂಡು ನನಗೆ ಅತೀವ ನೋವುಂಟಾಗುತ್ತಿದೆ ಎಂದು ಭಂಡೂರಿ ಆತಂಕ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಈಗ ಆಡಳಿತ ಮಂಡಳಿಯು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿರುವಂತೆ ಕಾಣುತ್ತಿದೆ. ಪ್ರಸ್ತುತ ಇಲ್ಲಿ ನಡೆಯುತ್ತಿರುವ ವ್ಯವಸ್ಥೆ ಬಗ್ಗೆ ಧ್ವನಿ ಎತ್ತಿದವರ ಧ್ವನಿಯನ್ನು ಮೊಟಕುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ನಿಮ್ಮ ಆಡಳಿತ ವ್ಯವಸ್ಥೆ ನಿಮ್ಮ ಮೂಗಿನ ನೇರಕ್ಕಿರುವಂತೆ ಕಾಣುತ್ತಿದೆ. ವಿದ್ಯಾರ್ಥಿಗಳ ನಿಲುವುಗಳಿಗೆ, ಅವರ ಹಿತಾಸಕ್ತಿಗೆ ನೀವು ಬೆಲೆ ಕೊಡುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಅವರ ಅಹವಾಲುಗಳನ್ನು ಕೇಳುವ ಎಲ್ಲಾ ದ್ವಾರಗಳನ್ನು ನೀವು ಮುಚ್ಚಿದ್ದೀರಿ ಮತ್ತು ಏಕಪಕ್ಷೀಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವಂತೆ ಕಂಡುಬರುತ್ತಿದೆ ಎಂದು ಭಂಡೂರಿ ಖಾರವಾಗಿ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ಕಂಡು ನಾನು ಮೂಕ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ. ಇಂತಹ ಬೆಳವಣಿಗೆಗಳ ವಿರುದ್ಧ ನಾನು ನನ್ನ ಪ್ರತಿಭಟನೆಯನ್ನು ಪ್ರದರ್ಶಿಸಬೇಕಾಗಿದೆ. ಈ ಪ್ರತಿಭಟನಾರ್ಥಕವಾಗಿ ನಾನು ನನ್ನ ಗೌರವ ಪ್ರೊಫೆಸರ್ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಇನ್ನೂ ಹಲವಾರು ಗೌರವ ಪ್ರೊಫೆಸರ್ ಗಳೂ ಇದೇ ಹಾದಿಯನ್ನು ತುಳಿಯುತ್ತಿದ್ದಾರೆ. ನನಗೆಂದು ಅಲಾಟ್ ಆಗಿದ್ದ ಕೊಠಡಿಗೆ ಹಲವು ತಿಂಗಳ ಹಿಂದೆಯೇ ಬೀಗ ಹಾಕಿದ್ದೇನೆ. ಅದರಲ್ಲಿ ಪುಸ್ತಕಗಳು ಮತ್ತು ನನ್ನ ವೈಯಕ್ತಿಕ ವಸ್ತುಗಳೂ ಇವೆ. ನನ್ನ ಅಭಿಪ್ರಾಯಗಳನ್ನು ನಿಮ್ಮ ಗಮನಕ್ಕೆ ತಂದಿದ್ದೇನೆ ಮತ್ತು ನನ್ನ ಈ ರಾಜೀನಾಮೆ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಸಾರ್ವಜನಿಕ ಡೊಮೇನ್ ಗಳಿಗೆ ಬಿಡುಗಡೆ ಮಾಡುತ್ತಿದ್ದೇನೆ. ಇದು ನನ್ನ ಕರ್ತವ್ಯವೂ ಆಗಿದೆ ಎಂದು ಭಂಡೂರಿ ಹೇಳಿಕೊಂಡಿದ್ದಾರೆ.
ಕೃಪೆ: ದಿ ವೈರ್
ಈ ಸುದ್ದಿಯ ಇಂಗ್ಲೀಷ್ ಅವತರಣಿಕೆಯನ್ನು ಇಲ್ಲಿ ಓದಿ:- https://thewire.in/education/economist-amit-bhaduri-resigns-as-jnu-emeritus-prof-to-protest-vcs-actions