ಭಾರತದ ರಾಜಕೀಯ ಕ್ಷೇತ್ರದಲ್ಲಿ ಗಾಂಧಿˌ ಲೋಹಿಯಾ ನಂತರ ಜಯಪ್ರಕಾಶ್ ನಾರಾಯಣ(ಜೆಪಿ) ಅವರ ಹೆಸರು ಹೆಚ್ಚು ಚರ್ಚೆಯಾಗುತ್ತದೆ. ಸೈದ್ಧಾಂತಿಕ ರಾಜಕಾರಣಿಯೆಂದೆ ಜೆಪಿಯವರನ್ನು ಜನ ಗುರುತಿಸುತ್ತಾರೆ. ಕಾಂಗ್ರೆಸ್ ಮತ್ತು ಇಂದಿರಾ ಗಾಂಧಿಯನ್ನು ವಿರೋಧಿಸುವ ದಾವಂತದಲ್ಲಿ ಈ ದೇಶಕ್ಕೆ ಎಂದೆಂದಿಗೂ ಅಪಾಯಕಾರಿಯಾಗಿರುವ ಕೋಮು ಸಂಘಟನೆಗಳೊಂದಿಗೆ ಕೈಜೋಡಿಸಿದ್ದ ಜೆಪಿ ನಡೆ ಇಂದಿಗೂ ಹಾಗು ಎಂದೆಂದಿಗೂ ಪ್ರರ್ಶಾರ್ಹವಾಗಿದೆ. ಒಬ್ಬ ಕೆಟ್ಟ ರಾಜಕಾರಣಿಯಿಂದ ಆಗಬಹುದಾದ ಅಪಾಯಕ್ಕಿಂತ ಒಂದು ಕೋಮುವಾದಿ/ಜನಾಂಗ ದ್ವೇಷಿ/ಜೀವವಿರೋಧಿ ಸಿದ್ಧಾಂತವು ಹೆಚ್ಚು ಅಪಾಯಕಾರಿ ಎಂದು ಜೆಪಿಯವರಿಗೆ ಹೇಗೆ ತಿಳಿಯಲಿಲ್ಲ ಎನ್ನುವ ಪ್ರಶ್ನೆ ಸದಾ ನಮ್ಮನ್ನು ಕಾಡುತ್ತದೆ. ೧೯೭೪ ರಲ್ಲಿ ಜೆಪಿಯವರು ಆರ್ ಎಸ್ ಎಸ್ ಗೆ ತಮ್ಮ ಚಳುವಳಿಯಲ್ಲಿ ಸ್ಥಾನ ಕಲ್ಪಿಸಿದರು. ಆ ಕಾರಣಕ್ಕೆ ಭಾರತ ಇಂದು ಬಹು ದೊಡ್ಡ ಬೆಲೆ ತೆರುತ್ತಿದೆ.
೨೦೨೧ ರ ಅಕ್ಟೋಬರ್ ೧೧ ರಂದು ಜೆಪಿ ಅವರ ೧೧೯ ನೇ ಜನ್ಮ ದಿನಾಚರಣೆ ಆಚರಿಸಲಾಯಿತು. ಜೆಪಿಯವರ ತವರು ರಾಜ್ಯ ಬಿಹಾರದಲ್ಲಿ ನಡೆದ ಘಟನೆಯೊಂದು ಜ್ಞಾಪಕಕ್ಕೆ ಬರುತ್ತದೆ. ತೊಂಬತ್ತರ ದಶಕˌ ಅದು ರಾಮ ಮಂದಿರ ಚಳುವಳಿಯ ತೀವ್ರತೆಯ ಆತಂಕದ ಕಾಲಘಟ್ಟ. ಅಡ್ವಾಣಿಯವರು ದೇಶಾದ್ಯಂತ ರಥಯಾತ್ರೆಯನ್ನು ಹಮ್ಮಿಕೊಂಡಿದ್ದರು. ಬಹುತೇಕ ಈ ನೆಲದ ಕಾನೂನುˌ ಸಂವಿಧಾನವನ್ನು ಅವಮಾನಿಸಿ/ಉಲ್ಲಂಘಿಸಿ ಆ ವಿವಾದಾಸ್ಪದ ಕಟ್ಟಡವನ್ನು ಕೆಡವಿ ಹಾಕಲು ಫ್ಯಾಸಿಷ್ಟ್ ಶಕ್ತಿಗಳು ತೀರ್ಮಾನಿಸಿದ್ದವು. ಅಡ್ವಾಣಿಯವರು ಜೆಪಿಯವರ ತವರು ರಾಜ್ಯವಾದ ಬಿಹಾರದ ಪಾಟ್ನಾ ನಗರದಲ್ಲಿರುವ ಗಾಂಧಿ ಮೈದಾನದಲ್ಲಿ ಬಹಿರಂಗ ಸಭೆಯೊಂದನ್ನು ಆಯೋಜಿಸಿದ್ದಾಗ ಆ ಮೈದಾನದ ಮೂಲೆಯೊಂದರಲ್ಲಿದ್ದ ಜೆಪಿ ಪ್ರತಿಮೆಯ ನೆರಳಿನಲ್ಲಿ ಕುಳಿತ ಕೆಲವು ಯುವತಿ/ಯುವತಿಯರು ಅಡ್ವಾಣಿಯವರ ಕೋಮುವಾದಿ ಪ್ರಚಾರವನ್ನು ಮೌನವಾಗಿ ಪ್ರತಿಭಟಿಸುತ್ತಿದ್ದರಂತೆ. ಮೈದಾನದಲ್ಲಿ ಕೈಗೆˌ ಕೊರಳಿಗೆˌ ಹಣೆಗೆ ಕೇಸರಿ ಬಟ್ಟೆ ಕಟ್ಟಿಕೊಂಡಿದ್ದ ನೂರಾರು ಮತಾಂಧ ಯುವಕರ ನಡುವೆ ನೋಡನೋಡುತ್ತಿದ್ದಂತೆ ಸಭೆಗೆಂದು ಹಾಕಲಾಗಿದ್ದ ಟೆಂಟ್ ಅಲುಗಾಡಿ ನಂತರ ಅದು ಸಂಪೂರ್ಣವಾಗಿ ಸುಟ್ಟುಹೋದ ಸಂಗತಿ ನಾವು ಪತ್ರಿಕೆಗಳಲ್ಲಿ ಓದಿ ತಿಳಿದಿದ್ದೇವೆ.
ಇಲ್ಲಿ ಅಡ್ವಾಣಿಯವರ ಸಭೆಗೆ ಹಾಕಲಾಗಿದ್ದ ಟೆಂಟನ್ನು ಧ್ವಂಸಗೊಳಿಸಿದವರಲ್ಲಿ ಹೆಚ್ಚಿನ ಪ್ರತಿಭಟನಾಕಾರರು ಜೆಪಿ ಆಂದೋಲನದ ದಿನಗಳಲ್ಲಿ ರೂಪುಗೊಂಡ ಛಾತ್ರ ಯುವ ಸಂಘರ್ಷ ವಾಹಿನಿ ಸಂಸ್ಥೆಗೆ ಸೇರಿದವರಾಗಿದ್ದರು ಎನ್ನುತ್ತವೆ ವರದಿಗಳು. ಇದೆಲ್ಲವನ್ನು ಅಲ್ಲೇ ಇದ್ದ ಜೆಪಿಯವರ ಪ್ರತಿಮೆ ಮೌನವಾಗಿ ಗಮನಿಸುತ್ತಿರಬೇಕು. ಜೆಪಿಯವರು ಅದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕಾಂಗ್ರೆಸ್ ಮತ್ತು ಇಂದಿರಾ ವಿರೋಧಿ ಆಂದೋಲನಕ್ಕೆ ಹೆಮ್ಮೆಯಿಂದ ಸ್ವಾಗತಿಸಿದ್ದರು. ಆಗ ಅವರ ಆ ಕ್ರಮವನ್ನು ಪ್ರಶ್ನಿಸಿದ್ದಕ್ಕೆ ಆರೆಸ್ಸೆಸ್ ಫ್ಯಾಸಿಸ್ಟ್ ಆದರೆ ನಾನು ಕೂಡ ಫ್ಯಾಸಿಷ್ಟ್ ಎಂದು ಪ್ರತಿಕ್ರೀಯಿಸಿ ಸಂಘದೊಂದಿಗಿನ ತಮ್ಮ ನಂಟನ್ನು ಯಾವ ಅಳುಕು ಇಲ್ಲದೆ ಸಮರ್ಥಿಸಿಕೊಂಡಿದ್ದನ್ನು ನಾವು ಬಲ್ಲೆವು. ಗಾಂಧಿ ಮೈದಾನದ ಟೆಂಟ್ ಉರಿದು ಹೋದ ತಕ್ಷಣ ಪಾಟ್ನಾ ನಗರದಲ್ಲಿ ಅಡ್ವಾಣಿ ಬೆಂಬಲಿಗರು ಮತೀಯ ಹಿಂಸಾಚಾರಕ್ಕಿಳಿದರು. ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಹಲ್ಲೆ ನಡೆಸಲಾಯಿತು. ದಾರಿಹೋಕರಿಗೆ “ಜೈ ಶ್ರೀ ರಾಮ್” ಘೋಷಣೆ ಕೂಗುವಂತೆ ಒತ್ತಾಯಿಸಲಾಗಿತ್ತು. ಜೆಪಿ ಹಿಂದೊಮ್ಮೆ ಆರ್ಎಸ್ಎಸ್ನೊಂದಿಗಿನ ತಮ್ಮ ಒಡನಾಟದಿಂದ ಸಂಘವನ್ನು ಬದಲಾಯಿಸುವ ಮತ್ತು ಅದನ್ನು ಜಾತ್ಯಾತೀತ ಸಂಸ್ಥೆಯಾಗಿ ಮಾರ್ಪಡಿಸುವ ಭರವಸೆ ನೀಡಿದ್ದರು.
ಆದರೆ ಸಂಘವು ಜೆಪಿಯವರ ಚಳುವಳಿಯನ್ನು ತನ್ನ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಸಂಘವನ್ನು ಬದಲಾಯಿಸುವೆ ಎನ್ನುವ ಜೆಪಿಯವರ ಅತಿ ಆತ್ಮವಿಶ್ವಾಸವು ಸೋತಿತು. ಜೆಪಿ ಮತ್ತು ಅವರ ಅನೇಕ ಸಹವರ್ತಿಗಳು ಇಂದಿರಾ ವಿರುದ್ಧದ ಹೋರಾಟದಿಂದಾಗಿ ಜೈಲಿನಲ್ಲಿರುವಾಗ, ಅಂದಿನ ಆರ್ಎಸ್ಎಸ್ ಮುಖ್ಯಸ್ಥ ಬಾಳಾಸಾಹೇಬ್ ದೇವರಸ್ ಅವರು ಇಂದಿರಾ ಗಾಂಧಿಯೊಂದಿಗೆ ಪತ್ರ ವ್ಯವಹಾರವನ್ನು ಇಟ್ಟುಕೊಂಡಿದ್ದರು. ಇಂದಿರಾ ಹೇರಿದ ತುರ್ತು ಪರಿಸ್ಥಿತಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆಯನ್ನು ಕೂಡ ಸಂಘ ಮುಖ್ಯಸ್ಥರು ಅಂದು ನೀಡಿದ್ದರು. ಆದರೆ ದೇವರಸ್ ಅವರು ಇಂದಿರಾ ಎದುರಿಗೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದರು. ಅವು ಯಾವುವೆಂದರೆ ಸಂಘದ ಮೇಲೆ ಹೇರಿದ ನಿಷೇಧವನ್ನು ಹಿಂಪಡೆಯುವುದು ಮತ್ತು ಬಂಧಿಸಲ್ಪಟ್ಟ ಸಂಘದ ಪ್ರಮುಖ ಕಾರ್ಯಕರ್ತರನ್ನು ಬಿಡುಗಡೆ ಮಾಡುವುದು. ಆದರೆ ಇಂದಿರಾ ಇದನ್ನು ಒಪ್ಪಿರಲಿಲ್ಲ, ದೇವರಸ್ ಮತ್ತು ಅವರ ಸಂಘವನ್ನು ಇಂದಿರಾ ಚೆನ್ನಾಗಿ ಬಲ್ಲವರಾಗಿದ್ದರು.

ಇಂದಿರಾ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಲು ಬಹುಮುಖ್ಯ ಕಾರಣ ಆರ್ಎಸ್ಎಸ್ ದೇಶದಲ್ಲಿ ಹುಟ್ಟುಹಾಕಬಹುದಾಗಿದ್ದ ಕೋಮು ಗಲಭೆ ಮತ್ತು ಅರಾಜಕತೆಯನ್ನು ತಡೆಯುವುದೇ ಆಗಿತ್ತು ಎನ್ನುವ ಸತ್ಯ ಬಹಳಷ್ಟು ಜನರಿಗೆ ತಿಳಿದಿಲ್ಲ. ಜೆಪಿ ಚಳುವಳಿಯ ದುರುಪಯೋಗ ಪಡೆದುಕೊಂಡ ಸಂಘ ಒಂದುಕಡೆ ಜೆಪಿಯೊಂದಿಗೆ ಸೇರಿ ಇಂದಿರಾರನ್ನು ವಿರೋಧಿಸಿದರೆ ಇನ್ಮೊಂದುಕಡೆ ಇಂದಿರಾರೊಂದಿಗೆ ಚೌಕಾಸಿ ಮಾತುಕತೆಯಲ್ಲಿ ತೊಡಗಿತ್ತು. ಇದು ಸಂಘದ ದ್ವಿಮುಖ ನೀತಿಯನ್ನು ತೋರುತ್ತದೆ. ಜೆಪಿಯವರು ಇಂದಿರಾ ಗಾಂಧಿಯನ್ನು ವಿರೋಧಿಸಿದಷ್ಟೇ ಆರೆಸ್ಸೆಸ್ ಅನ್ನೂ ವಿರೋಧಿಸಿದ್ದರು. ಹಾಗಿದ್ದೂ ಅವರು ಒಬ್ಬ ಅರೆಕಾಲಿಕ ಅಥವಾ ಸೀಸನ್ಡ್ ರಾಜಕಾರಣಿ ಹಾಗು ಶ್ರೇಷ್ಟ ರಾಜನೀತಿಜ್ಞರಾಗಿದ್ದೂ ಕೂಡ ೧೯೭೪ ರಲ್ಲಿ ಆರ್ಎಸ್ಎಸ್ನಂತ ಫ್ಯಾಸಿಷ್ಟ್ ಸಂಸ್ಥೆಯೊಂದಿಗೆ ಫೌಸ್ಟಿಯನ್ ಒಪ್ಪಂದ ಮಾಡಿಕೊಂಡಿದ್ದೇಕೆ ಎನ್ನುವ ಪ್ರಶ್ನೆ ಸದಾ ನಮ್ಮನ್ನು ಕಾಡುತ್ತದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಇಂದಿರಾರ ಸಮಯೋಚಿತ ಸರ್ವಾಧಿಕಾರವನ್ನು ಕಿತ್ತಿಯೊಗೆಯಲು ಬೇರೆ ಮತ್ತೊಂದು ಪರ್ಯಾಯವನ್ನು ಹುಡುಕದೆ ಜೆಪಿಯವರು ಈ ದೇಶದ ಸೌಹಾರ್ದತೆˌ ಸಹಿಷ್ಣತೆ ಹಾಗು ಬಹುತ್ವಕ್ಕೆ ಅಪಾಯಕಾರಿಯಾಗಿರುವ ಸಂಘದೊಂದಿಗೆ ಕೈಜೋಡಿಸುವ ಮಟ್ಟಕ್ಕೆ ಹೋಗಬೇಕಿರಲಿಲ್ಲ.
ಅಂದು ಇಂದಿರಾ ಹಾಗು ಕಾಂಗ್ರೆಸ್ ದುರಾಡಳಿತ ವಿರೋಧಿಸಲು ಜೆಪಿ ಆರಂಭಿಸಿದ್ದ ಆಂದೋಲನದ ಪ್ರಾಮಾಣಿಕ ಇತಿಹಾಸವನ್ನು ಇದುವರೆಗೆ ಯಾರೂ ಬರೆಯುವ ಪ್ರಯತ್ನ ಮಾಡಿದಂತಿಲ್ಲ. ಜೆಪಿಯವರ ಅನೇಕ ಸಹಚರರು ಇಂದು ಬದುಕಿ ಉಳಿದಿಲ್ಲ. ಬದುಕಿರುವವರಲ್ಲಿ ಆ ಆಂದೋಲನದ ಸ್ವರೂಪವನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುವುದಿಲ್ಲ. ಅದಾಗ್ಯೂ ಛಾತ್ರ ಯುವ ಸಂಘರ್ಷ ವಾಹಿನಿಯ ಅನೇಕ ಸದಸ್ಯರು ಈಗ ಜೆಪಿ ಆಂದೋಲನವು ಮೂರ್ಖತನದ್ದಾಗಿತ್ತು, ಹಾಗು ಇದು ಆರ್ಎಸ್ಎಸ್ನ ಉನ್ನತಿಗೆ ದಾರಿ ಮಾಡಿಕೊಟ್ಟಿತು ಎಂದು ಒಪ್ಪಿಕೊಂಡಿರುವ ಬಗ್ಗೆ ಸ್ಕ್ರೋಲ್.ಇನ್ ಪತ್ರಿಕೆ ತನ್ನ ವರದಿಯಲ್ಲಿ ಬರೆದುಕೊಂಡಿದೆ.
ಜೆಪಿಯವರ ಅಭಿಪ್ರಾಯದಂತೆ ಕಾಂಗ್ರೆಸ್ ಪಕ್ಷವು ತನ್ನ ೨೭ ವರ್ಷಗಳ ಆಡಳಿತದಲ್ಲಿ ಈ ದೇಶದ ಜನರು ಮತ್ತು ದೇಶವನ್ನು ಸಂಪೂರ್ಣವಾಗಿ ಎಲ್ಲ ರಂಗಗಳಲ್ಲಿ ವಿಫಲಗೊಳಿಸಿದೆ ಎನ್ನುವುದಾಗಿತ್ತು. ಜೆಪಿಯವರು ಈ ಅಭಿಪ್ರಾಯಕ್ಕೆ ಬರಲು ಸಮಂಜಸ ಕಾರಣಗಳನ್ನು ನೀಡಿರಲಿಲ್ಲ. ತಮ್ಮ ಸ್ನೇಹಿತರಾಗಿದ್ದ ಜವಾಹರಲಾಲ್ ನೆಹರು ಅವರ ಅನೇಕ ಅಭಿವೃದ್ಧಿ ಕಾರ್ಯಗಳು ಗುರುತಿಸಲು ಜೆಪಿಯವರು ವಿಫರಾಗಿದ್ದರು. ತಮ್ಮ ಹೋರಾಟವನ್ನು ಅವರು ಅತಿ ಮಹತ್ವಾಕಾಂಕ್ಷೆಯಿಂದ “ಎರಡನೇ ಸ್ವಾತಂತ್ರ್ಯ ಹೋರಾಟ” ಎಂದು ಕರೆದುಕೊಂಡರು. ತಮ್ಮ ಆಂದೋಲನದಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅಳವಡಿಸಿಕೊಂಡ ವಿಧಾನಗಳನ್ನೇ ನಕಲು ಮಾಡಿದರು. ವಿದ್ಯಾರ್ಥಿಗಳಿಗೆ ಒಂದು ವರ್ಷ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳು ಬಹಿಷ್ಕರಿಸಲು ಕರೆ ನೀಡಿದ್ದರು. ಇಂದಿರಾ ಸರಕಾರಕ್ಕೆ ಸಹಕಾರ ನೀಡದಂತೆ ಜನರಿಗೆ ಮತ್ತು ಸರಕಾರದ ಆದೇಶ ಪಾಲಿಸದಂತೆ ಪೋಲಿಸ್ ಮತ್ತು ಭದ್ರತಾ ಪಡೆಗಳಿಗೆ ಕರೆ ನೀಡುವ ಮಟ್ಟಕ್ಕೆ ಅವರು ಹೋಗಿದ್ದರು. ಅಂದರೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸುವ ನೆಪದಲ್ಲಿ ಅದೇ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೆಪಿಯವರು ಗಾಳಿಗೆ ತೂರಿದ್ದರು.
ಅಂದಿನ ಜನತಾ ಪಕ್ಷದ ಪ್ರಾದೇಶಿಕ ಸರಕಾರಗಳಿಗೆ ವಿಚಿತ್ರವಾದ ಕರೆಗಳನ್ನು ನೀಡುತ್ತಿದ್ದ ಜೆಪಿಯವರು ಒಂದು ರೀತಿಯಲ್ಲಿ ಸಮಾನಾಂತರ ಸರ್ಕಾರವನ್ನು ಸ್ಥಾಪಿಸಲು ಹವಣಿಸಿದ್ದರು. ಇದು ಜೆಪಿಯವರ ತುಂಬಾ ಅಪಾಯಕಾರಿ ರಾಜಕೀಯ ಆಟವಾಗಿತ್ತು. ಆರ್ಎಸ್ಎಸ್ ಇದನ್ನೇ ಕಾಯುತ್ತಿತ್ತು. ಆರೆಸ್ಸೆಸ್ ಅಧಿಕಾರವನ್ನು ಹಿಡಿಯಲು ಬಹಳ ಹಿಂದಿನಿಂದ ಹೊಂಚು ಹಾಕುತ್ತಿತ್ತು. ೧೯೪೭-೪೮ ರಲ್ಲಿ ಸಂಘ ಅಧಿಕಾರ ಹಿಡಿಯಲು ವಿಫಲವಾಗಿತ್ತು. ಗಾಂಧಿ ಹತ್ಯೆಯಿಂದ ನಿಷೇಧಕ್ಕೆ ಒಳಪಟ್ಟಿದ್ದು ಮತ್ತು ದೇಶಾದ್ಯಂತ ನಡೆದ ಮತೀಯ ದಂಗೆಯಿಂದ ಸಂಘವನ್ನು ಮುಖ್ಯವಾಹಿನಿ ರಾಜಕೀಯ ಪಕ್ಷಗಳು ದೂರವಿಟ್ಟಿದ್ದವು. ಆದರೆ ರಾಮ್ ಮನೋಹರ್ ಲೋಹಿಯಾ ಅವರಂತಹ ನಾಯಕರು ಕಾಂಗ್ರೆಸ್ ಆಡಳಿತವನ್ನು ಹೇಗಾದರೂ ಕೊನೆಗೊಳಿಸಬೇಕೆಂಬ ಹತಾಶೆ ಹೊಂದಿದ್ದರು. ಲೋಹಿಯಾ ಅವರು ವೈರಿಗಳನ್ನು ಸೋಲಿಸಲು ದೆವ್ವದ ಜೊತೆಗಾದರೂ ಕೈಜೋಡಿಸಬೇಕೆಂದು ಪ್ರತಿಪಾದಿಸಿದ್ದರು. ೧೯೬೭ ರ ವಿಧಾನಸಭಾ ಚುನಾವಣೆಯ ನಂತರ ಉತ್ತರದ ಹಲವಾರು ರಾಜ್ಯಗಳಲ್ಲಿ ಸಂಯುಕ್ತ ವಿಧಾಯಕ ದಳದ ಸರ್ಕಾರಗಳ ರಚನೆಯು ಆರೆಸ್ಸೆಸ್ ಗೆ ರಾಜಕೀಯ ಕದವನ್ನು ತೆರೆಯಿತು. ಅದರ ಪರಿಣಾಮವಾಗಿ ಸಂಘದ ರಾಜಕೀಯ ಘಟಕವಾದ ಜನಸಂಘವು ಅಂದಿನ ಆಳುವ ಒಕ್ಕೂಟದ ಭಾಗವಾಯಿತು.

ಅಂದಿನ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಕೂಡ ಆರ್ಎಸ್ಎಸ್ನೊಂದಿಗೆ ಕೈ ಜೋಡಿಸಲು ಹಿಂಜರಿಯಲಿಲ್ಲ. ಪ್ರಜಾಪ್ರಭುತ್ವದ ವಾದವು ಅವರನ್ನು ಯಾರೊಂದಿಗೆ ಬೇಕಾದರೂ ಕೈಜೋಡಿಸಲು ಸಹಕಾರಿಯಾಯಿತು. ಹಾಗೆ ಮಾಡುವ ಮೂಲಕ ಅವರು ಜಾತ್ಯತೀತತೆಗೆ ಮತ್ತು ಜನತಂತ್ರಗಳಿಗೆ ಬಂದೊದಗುವ ಅಪಾಯವನ್ನು ನಿರಿಕ್ಷಿಸುವಲ್ಲಿ ಸಂಪೂರ್ಣ ಸೋತರು. ಈ ಅಘಾತಕಾರಿ ನಡೆಯು ಮತ್ತೊಮ್ಮೆ ೨೦೧೧ ರಲ್ಲಿ ಪುನರಾವರ್ತನೆಯಾಯಿತು. ಇಂಡಿಯಾ ಅಗೇನಸ್ಟ್ ಕರಪ್ಷನ್ ಘೋಷಣೆಯಡಿಯಲ್ಲಿ ನಕಲಿ ಹೋರಾಟಗಾರರು ತೆರೆಮರೆಯ ಕೋಮುವಾದಿಗಳು ಮತ್ತು ಅಪಾಯಕಾರಿ ಬಂಡವಾಳಶಾಹಿ ಶಕ್ತಿಗಳ ಕೈಗೊಂಬೆಯಾದರು. ಪ್ರಜಾಪ್ರಭುತ್ವದ ವಾದವು ಮತ್ತೊಮ್ಮೆ ದೇಶದಲ್ಲಿ ಜನತಂತ್ರ, ಸಂವಿಧಾನ ಮತ್ತು ಜಾತ್ಯಾತೀತ ತತ್ವಗಳಿಗೆ ಬಹುದೊಡ್ಡ ಅಪಾಯವನ್ನು ತಂದೊಡ್ಡಿತು.
೧೯೬೦ ರ ಮಧ್ಯದಲ್ಲಿ, ಆರ್ಎಸ್ಎಸ್ ಮತ್ತೆ ಹಿನ್ನೆಡೆಯನ್ನು ಕಂಡ ಬಗ್ಗೆ ನಾವು ಓದಿ ತಿಳಿದಿದ್ದೇವೆ. ಆದಾಗ್ಯೂ, ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಅನೇಕ ವಿಧಗಳಲ್ಲಿ ಬಹುಸಂಖ್ಯಾತರಾದ ಹಿಂದೂಪರ ಪಕ್ಷಗಳೆಂದೇ ಹೇಳುವುದು ಒಂದರ್ಥದಲ್ಲಿ ಹೆಚ್ಚು ಸೂಕ್ತ ಎನ್ನಿಸುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷವೂ ಹೊರತಾಗಿರಲಿಲ್ಲ. ಅಂದಿನ ಕಾಂಗ್ರೆಸ್ ಪಕ್ಷದಲ್ಲಿ ಬಹುತೇಕ ಮೇಲ್ವರ್ಗದ ನಾಯಕರು ಸಂಘ ಪರಿವಾರದ ಹಿನ್ನೆಲೆ ಹಾಗು ಮನಸ್ಥಿತಿಯುಳ್ಳವರೇ ಆಗಿದ್ದರು. ವಾಸ್ತವವಾಗಿ, ೧೯೪೭ ರಲ್ಲಿ ಲಕ್ನೋದಿಂದ ತನ್ನ ತಂದೆಗೆ ಬರೆದ ಪತ್ರದಲ್ಲಿ, ಇಂದಿರಾ ಗಾಂಧಿ ಸ್ವತಃ ಕಾಂಗ್ರೆಸ್ ಪಕ್ಷದಲ್ಲಿ, ಪೋಲಿಸ್ ಮತ್ತು ಆಡಳಿತದಲ್ಲಿ ಆರೆಸ್ಸೆಸ್ನ ಮನಸ್ಥಿತಿಯನ್ನು ನೋಡಿ ತನ್ನ ಸಂಕಟವನ್ನು ವ್ಯಕ್ತಪಡಿಸಿದ್ದರು ಎನ್ನುವ ಮಾತು ಸ್ಕ್ರೋಲ್ ಪತ್ರಿಕಾ ವರದಿಯಲ್ಲಿ ವ್ಯಕ್ತವಾಗಿದೆ. ೧೯೬೭ ರಲ್ಲಿ ಭಾರತದಲ್ಲಿ ಜಾತ್ಯತೀತ ಮಾದರಿಯ ಆಡಳಿತದ ಪ್ರಯೋಗವು ಆಗಿನ್ನೂ ಶೈಶಾವಸ್ಥೆಯಲ್ಲಿತ್ತು. ೧೫ ವರ್ಷಗಳ ವಿರಾಮದ ನಂತರ ಆರ್ಎಸ್ಎಸ್ ದೇಶದಲ್ಲಿ ದೊಡ್ಡ ಮತ್ತು ಸಣ್ಣ ಮಟ್ಟದ ಕೋಮು ಗಲಭೆಗಳನ್ನು ಎಬ್ಬಿಸುವ ಮೂಲಕ ದೇಶದ ಜಾತ್ಯಾತೀತ ಕಟ್ಟಡದ ಅಡಿಪಾಯವನ್ನು ಶಿಥಿಲಗೊಳಿಸಲು ಪ್ರಾರಂಭಿಸಿತ್ತು. ೧೯೬೧ ರಲ್ಲಿ ಘಟಿಸಿದ ಜಬಲ್ಪುರ್ ಗಲಭೆಯು ಭಾರತವು ಸುರಕ್ಷಿತವಾಗಿಲ್ಲ ಎಂಬ ಎಚ್ಚರಿಕೆಯಾಗಿತ್ತು ಎನ್ನುವ ಸಂಗತಿ ಸ್ಕ್ರೋಲ್ ಪತ್ರಿಕಾ ವರದಿಯಲ್ಲಿ ಹೇಳಲಾಗಿದೆ. ಆದರೆ ಇದೆಲ್ಲವನ್ನು ಅವಲೋಕಿಸಿಯೂ ಲೋಹಿಯಾ ಅವರಂತಹ ನಾಯಕರು ಬಹಳಷ್ಟು ಅವಸರದ ನಡೆ ಪ್ರದರ್ಶಿಸಿದರು ಎನ್ನುವುದು ರಾಜಕೀಯ ತಜ್ಞರ ಅಂಬೋಣವಾಗಿದೆ.
ಲೋಹಿಯಾ ಮತ್ತು ಜೆಪಿ ಅನೇಕ ವಿಷಯಗಳಲ್ಲಿ ಸಹಮತ ಹೊಂದಿದ್ದರೂ ಅವರ ನಡುವೆ ಅನೇಕ ಕಾರಣಗಳಿಂದ ಅಂತರ ಹೆಚ್ಚಾಗಿತ್ತಂತೆ. ನೆಹರುರವರು ಸ್ವತಃ ಜೆಪಿಯವರನ್ನು ಬೆಂಬಲಿಸಲು ಇಚ್ಚಿಸಿದರೂ ಕೂಡ ಜೆಪಿ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದರೆನ್ನತಾಗುತ್ತದೆ. ಲೋಹಿಯಾ ಮತ್ತು ಜೆಪಿಯವರನ್ನು ಪ್ರಧಾನಿಯಾಗಿ ಗಾಂಧಿ ಪರಿಗಣಿಸದಿರುವುದು ಮತ್ತು ಸರಿಯಾಗಿ ೨೭ ವರ್ಷಗಳ ನಂತರ ಇವರಿಬ್ಬರೂ ಅಪಾಯಕಾರಿ ಕೋಮುವಾದಿ ಶಕ್ತಿಗಳೊಡನೆ ಕೈಜೋಡಿಸಿ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ದ ಆಂದೋಲನ ಹಮ್ಮಿಕೊಂಡಿದ್ದು ಕಾಕತಾಳಿಯಗಿತ್ತೆ ಇಲ್ಲವೆ ನೈಸರ್ಗಿಕವಾಗಿತ್ತೆ ಎನ್ನುವ ಸಂದೇಹ ಸಹಜವಾಗಿ ಏಳುವಂತದ್ದು. ಅಂದು ಜೆಪಿ ಆರಂಭಿಸಿದ ಆಂದೋಲನದ ಬಗ್ಗೆ ನಮಗೆ ಇಂದು ಪ್ರಾಮಾಣಿಕ ವಿಮರ್ಶೆಯ ಅಗತ್ಯವಿದೆ. ಜೆಪಿ ಆಂದೋಲನದ ಮುಖ್ಯ ಫಲಶೃತಿ ಎಂದರೆ ಆರ್ಎಸ್ಎಸ್ ಅನ್ನು ಮುಖ್ಯವಾಹಿನಿಗೆ ತಂದಿರುವುದು ಎಂದು ಅನೇಕರು ವಾದಿಸುತ್ತಾರೆ. ಜೆಪಿ ತಾವು ಹಮ್ಮಿಕೊಂಡ ಚಳುವಳಿಯ ತೆಕ್ಕೆಗೆ ಕಾಲಾಳುಗಳ ಮತ್ತು ಸಂಪನ್ಮೂಲಗಳ ಅಗತ್ಯವಿತ್ತು. ಅದನ್ನು ಆರೆಸ್ಸೆಸ್ ಮಾತ್ರ ಒದಗಿಸಬಲ್ಲದೆಂದು ಜೆಪಿ ನಂಬಿದ್ದರು.
ಜೆಪಿ ಅವರು ಕೊನೆಗೂ ತಾವು ನಂಬಿದ್ದ ಮೂಲ ಗಾಂಧಿ ತತ್ವದೊಂದಿಗೆ ರಾಜಿ ಮಾಡಿಕೊಂಡರು. ನಾವು ನಮ್ಮ ಸಾಧನೆಗಳಿಗೆ ಬಳಸುವ ಸಾಧನಗಳು ಅಶುದ್ಧವಾಗಿದ್ದರೆ, ನಾವು ಸಾಧಿಸುವ ಸಾಧನೆ ಕೂಡ ಯಾವಾಗಲೂ ಕಳಂಕಿತ ಮತ್ತು ಅಶುದ್ಧವಾಗಿರುತ್ತದೆ. ಜೆಪಿ ಅವರು ತಮ್ಮ ಕೊನೆಯ ಯಾತನಾಮಯ ದಿನಗಳಲ್ಲಿ ಇದನ್ನೇ ಯೋಚಿಸಿರಬೇಕು. ಒಂದು ಕಾಲದ ಅವರ ಆದರ್ಶಗಳ ಅನುಯಾಯಿಗಳಾಗಿದ್ದ ಹಾಗು ಈಗ ಅವರಲ್ಲಿ ಅನೇಕರು ತಮ್ಮ ಅರವತ್ತರ ಹರೆಯದಲ್ಲಿರುವವರು ಇಂದಿನ ಸಂಘದ ಅಟ್ಚಹಾಸˌ ಸಂಘ ಪ್ರಾಯೋಜಿತ ಬಿಜೆಪಿ ಸರಕಾರದ ಅಪಾಯಕಾರಿ/ವಿಧ್ವಂಸಕ ಆಡಳಿತ ನೋಡಿ ಅವರಿಗೂ ಹಾಗೆ ಅನ್ನಿಸಿರಲೇಬೇಕು. ಜೆಪಿಯವರ ಅಂದಿನ ಆತುರದ ಹಾಗು ವಾಮಮಾರ್ಗದ ನಡೆಯಿಂದಾಗಿ ಇಂದು ಭಾರತ ಅಪಾರವಾಗಿ ಬೆಲೆ ತೆರುತ್ತಿದೆ ಎಂದರೆ ತಪ್ಪಾಗಲಾರದು.