ಕೊನೆಯ ಕ್ಷಣದಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಖಾಡಕ್ಕೆ ಇಳಿಯುವ ಮೂಲಕ ಕಾಂಗ್ರೆಸ್ ಪಕ್ಷದ ಆಂತರಿಕ ಚುನಾವಣೆ ರಂಗೇರಿದೆ.
ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಶುಕ್ರವಾರ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಆಪ್ತ ವಲಯ ತಿಳಿಸಿದೆ. ಈ ಮೂಲಕ ಸ್ಪರ್ಧೆಗೆ ಮೂವರು ಇಳಿದಂತಾಗಿದೆ.
ಈಗಾಗಲೇ ದಿಗ್ವಿಜಯ್ ಸಿಂಗ್ ಮತ್ತು ಶಶಿತರೂರ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ತಿಳಿಸಿದ್ದು, ಇಂದು ನಾಮಪತ್ರ ಸಲ್ಲಿಕೆಯಾಗಲಿದೆ. ಇದೀಗ ಮಲ್ಲಿಕಾರ್ಜುನ ಖರ್ಗೆ ಅಖಾಡಕ್ಕೆ ಇಳಿದಿದ್ದು, ಗಾಂಧಿ ಕುಟುಂಬದ ಅಧಿಕೃತ ಅಭ್ಯರ್ಥಿಯೇ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.
ದಿಗ್ವಿಜಯ್ ಸಿಂಗ್ ಬಹುತೇಕ ಹಿಂದೆ ಸರಿಯುವ ಸಾಧ್ಯತೆ ಇದ್ದು, ಶಶಿತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.