ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಜ್ಯೋತಿಷಿ ಬ್ರಹ್ಮಾಂಡ ಗುರೂಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಚೆನ್ನಮ್ಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚೆನ್ನಮ್ಮ ಅವರ ವ್ಯಕ್ತಿತ್ವ ಮತ್ತು ಕುಟುಂಬಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

“ಚೆನ್ನಮ್ಮ ಅವರು ದೇವೇಗೌಡರ ಮನೆಗೆ ಸಾಕ್ಷಾತ್ ಮಹಾಲಕ್ಷ್ಮಿಯಾಗಿದ್ದರು. ದೇವೇಗೌಡರಿಗಿಂತ ಐದು ವರ್ಷ ಕಿರಿಯವರಾಗಿದ್ದ ಅವರು, ದೀರ್ಘ ಸುಮಂಗಲಿಯಾಗಿ ಹಾಗೂ ಮುತ್ತೈದೆಯಾಗಿಯೇ ಇಹಲೋಕ ತ್ಯಜಿಸಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ 89ನೇ ವಯಸ್ಸಿನಲ್ಲಿ ಗಂಡಾಂತರ ಎದುರಾದರೂ, ಅವರು ಆದರ್ಶ ಜೀವನ ನಡೆಸಿದರು. ತಮ್ಮ ಬದುಕಿನಲ್ಲಿ ದೇವೇಗೌಡರನ್ನು ಹಲವು ಸಂಕಷ್ಟಗಳಿಂದ ರಕ್ಷಿಸಿದ ಶಕ್ತಿಯಾಗಿದ್ದರು” ಎಂದು ಬ್ರಹ್ಮಾಂಡ ಗುರೂಜಿ ಹೇಳಿದರು.

ದೇವೇಗೌಡರು ಮತ್ತು ಚೆನ್ನಮ್ಮ ಅವರ 72 ವರ್ಷಗಳ ದಾಂಪತ್ಯ ಜೀವನ ಇಂದಿನ ಯುವಜನತೆಗೆ ಆದರ್ಶವಾಗಬೇಕು ಎಂದ ಅವರು, “ಅವರ ಸಂಸ್ಕಾರ, ಕುಟುಂಬದ ಮೇಲಿನ ಬದ್ಧತೆ ಹಾಗೂ ಪರಸ್ಪರ ಗೌರವ ಎಲ್ಲರಿಗೂ ಮಾದರಿಯಾಗಿದೆ. ರಾಜರಾಜೇಶ್ವರಿ ದೇವಿಯ ಪರಮ ಭಕ್ತೆಯಾಗಿದ್ದ ಚೆನ್ನಮ್ಮ ಅವರ ಮನೆಗೆ ಬಂದ ಯಾರನ್ನೂ ಊಟ ಮಾಡಿಸದೆ ಕಳುಹಿಸುವ ಪದ್ಧತಿ ಇರಲಿಲ್ಲ. ಅವರ ಆಶೀರ್ವಾದ ಮತ್ತು ತ್ಯಾಗದಿಂದಲೇ ಗೌಡರ ಕುಟುಂಬ ಒಗ್ಗಟ್ಟಿನಿಂದ ಬೆಳೆದಿದೆ” ಎಂದು ಹೇಳಿದರು.

ಕುಟುಂಬದ ಎಲ್ಲ ಸದಸ್ಯರು ಮುಂದೆಯೂ ಒಗ್ಗಟ್ಟಿನಿಂದ, ಪ್ರೀತಿ ಮತ್ತು ಸೌಹಾರ್ದದಿಂದ ಬದುಕಬೇಕು ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಚೆನ್ನಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಿಧನರಾದರು. ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸೋಮವಾರ ಹಾಸನ ಜಿಲ್ಲೆಯ ದೇವೇಗೌಡರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.






