ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನಡುವೆ ಮತ್ತೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಈ ಇಬ್ಬರು ನಾಯಕರು ಪಕ್ಷದ ಚೌಕಟ್ಟಿನಲ್ಲಿ ಎಷ್ಟು ಉತ್ತಮ ಸ್ನೇಹಿತರೋ ಈಗ ಅಷ್ಟೇ ರಾಜಕೀಯ ದ್ವೇಷಿಗಳಾಗಿದ್ದಾರೆ. ಪ್ರತಿ ಬಾರಿ ಯಡಿಯೂರಪ್ಪನವರ ವಿರುದ್ಧ ಕೆ.ಎಸ್ ಈಶ್ವರಪ್ಪ ಅವರು ಪರೋಕ್ಷವಾಗಿ ಅಸಮಧಾನ ಹೊರಹಾಕುತ್ತಲೇ ಇದ್ದಾರೆ.
ಬಿಎಸ್ ಯಡಿಯೂರಪ್ಪ ಮತ್ತು ಕೆ.ಎಸ್ ಈಶ್ವರಪ್ಪ ಮುನಿಸು ಇವತ್ತು ನಿನ್ನೆಯದ್ದಲ್ಲ. ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದ್ದಾಗನಿಂದಲೂ ಬಿಎಸ್ವೈ ಮತ್ತು ಈಶ್ವರಪ್ಪ ನಡುವೆ ಅಷ್ಟಕಷ್ಟೇ. ಬಹಿರಂಗವಾಗಿಯೇ ಈಶ್ವರಪ್ಪ ನನ್ನ ಬೆನ್ನಿಗೆ ಚೂರಿ ಹಾಕಿದ್ರು ಎಂದು ಬಿಎಸ್ವೈ ಆಕ್ರೋಶ ಹೊರಹಾಕಿದ್ದು ಎಷ್ಟೋ ಬಾರಿ. ಹೀಗಿದ್ದರೂ ರಾಜಕೀಯಕ್ಕಾಗಿ ಪುನಃ ಬಿಎಸ್ವೈ ರನ್ನ ಮತ್ತೆ ಕಮಲದ ಹಾರ ಹಾಕಿ ಸ್ವಾಗತಿಸಿದ್ದು ಈಶ್ವರಪ್ಪ.
Also Read: ರಾಷ್ಟ್ರ ರಾಜಕಾರಣದಲ್ಲಿ ಹೊಸ ಪರ್ಯಾಯಕ್ಕೆ ದೀದಿ ಬರೆಯುವರೆ ಮುನ್ನುಡಿ?
ವೇದಿಕೆ ಮೇಲೆ ಕಾಲಿಗೆ ಬಿದ್ದು ನನ್ನ ರಾಜಕೀಯ ಗುರು ಯಡಿಯೂರಪ್ಪ ಎಂದಿದ್ದ ಈಶ್ವರಪ್ಪಗೆ ಇಂದು ಬಿಜೆಪಿಯಲ್ಲಿ ಅಳಿವು ಉಳಿವಿನ ಪ್ರಶ್ನೆ. ಪಕ್ಷ ಸಂಘಟನೆಗಾಗಿ ಒಂದೇ ಟ್ರೈನಿನಲ್ಲಿ ಓಡಾಡುತ್ತಿದ್ದ ಈಶ್ವರಪ್ಪ ಹಾಗೂ ಯಡಿಯೂರಪ್ಪರ ನಡುವೆ ಈಗ ಮತ್ತೆ ಗುದ್ದಾಟ ಶುರುವಾಗಿದೆ. ಒಂದು ರೀತಿ ತಾನು ಸಿಎಂ ಸ್ಥಾನದಿಂದ ಕೆಳಗಿಳಿಯಲು ಈಶ್ವರಪ್ಪರೇ ಕಾರಣ ಎಂದು ಯಡಿಯೂರಪ್ಪ ಮುನಿಸಿಕೊಂಡಿದ್ದಾರೆ. ಇದಕ್ಕಾಗಿ ಈಶ್ವರಪ್ಪ ರಾಜಕೀಯ ಜೀವನ ಮುಗಿಸಲು ಹೊರಟಿದ್ದಾರಂತೆ.
ಹೌದು, ಹೀಗೊಂದು ಸುದ್ದಿ ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದರೆ ಮೊದಲು ನನಗೆ ಸಿಎಂ ಸ್ಥಾನ ನೀಡಿ ಎಂದು ಕೆ.ಎಸ್.ಈಶ್ವರಪ್ಪ ಹೈಕಮಾಂಡ್ ಮುಂದೆ ಹೋಗಿದ್ದಾರಂತೆ. ಸಿಎಂ ಸ್ಥಾನ ನೀಡದಿದ್ದರೆ ಹಾಲುಮತ ಮಹಾಸಭಾ ನೇತೃತ್ವದಲ್ಲಿ ಬೆಂಬಲಿಗರು ರಾಜ್ಯವ್ಯಾಪಿ ಹೋರಾಟ ಮಾಡಲಿದ್ದಾರೆ. ಯಡಿಯೂರಪ್ಪರನ್ನು ಕೆಳಗಿಳಿಸಿ ನನ್ನನ್ನು ಸಿಎಂ ಮಾಡಿ ಎಂದು ಒಮ್ಮೆ ಈಶ್ವರಪ್ಪ ಕೇಂದ್ರ ನಾಯಕರಿಗೆ ಮನವಿ ಮಾಡಿದ್ದಾರಂತೆ. ಹೀಗಾಗಿ ಹೇಗಾದರು ಸರಿ ಈಶ್ವರಪ್ಪ ರಾಜಕೀಯಕ್ಕೆ ಫುಲ್ ಸ್ಟಾಪ್ ಇಡಬೇಕೆಂದು ಯಡಿಯೂರಪ್ಪ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
Also Read: ಬಿಜೆಪಿಗೆ ದೊಂಬಿ, ಗೂಂಡಾಗಿರಿಗೆ ಕಾರ್ಯಕರ್ತರು ಬೇಕು, ಆಡಳಿತಕ್ಕೆ ವಲಸಿಗರು ಬೇಕು..!
ಬಿಜೆಪಿ ಹೈಕಮಾಂಡ್ ಬಿ.ಎಸ್ ಯಡಿಯೂರಪ್ಪ ಆದೇಶದ ಮೇರೆಗೆ ಬಸವರಾಜ್ ಬೊಮ್ಮಾಯಿರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ. ಬಸವರಾಜ್ ಬೊಮ್ಮಾಯಿ ಸಂಪುಟದಲ್ಲೂ ಯಾರು ಇರಬೇಕು ಬೇಡ ಎಂದು ಯಡಿಯೂರಪ್ಪ ಅವರೇ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರಂತೆ. ನಾಮಕಾವಾಸ್ಥೆಗೆ ಬಸವರಾಜ್ ಬೊಮ್ಮಾಯಿ ಸಿಎಂ ಆದರೂ ಸಂಪುಟಕ್ಕೆ ಮಾತ್ರ ಬಿಎಸ್ವೈ ಹೇಳಿದವರಿಗೆ ಸ್ಥಾನ ನೀಡೋದಂತೆ. ಹೀಗಾಗಿ ಈ ಬಾರಿ ಸಂಪುಟದಿಂದ ಈಶ್ವರಪ್ಪರನ್ನು ಕೈ ಬಿಡಬೇಕು ಎಂದು ಹೈಕಮಾಂಡ್ಗೆ ಎಚ್ಚರಿಕಾ ಸಂದೇಶ ರವಾನಿಸಿದ್ದಾರೆ ಬಿಎಸ್ವೈ.
ನಾನು 1975-77ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧನವಾಗಿದ್ದೇ. ಶೇಕಡ 55ರಷ್ಟು ಇರುವ ಹಿಂದುಳಿದ ವರ್ಗ ಬಿಜೆಪಿಗೆ ಮತ ಹಾಕಲು ನಾನೇ ಕಾರಣ. ಬಿ.ಎಸ್.ಯಡಿಯೂರಪ್ಪ ಪಕ್ಷ ತ್ಯಜಿಸಿದಾಗ ನಾನೇ ಬಿಜೆಪಿ ಪಕ್ಷವನ್ನು ಉಳಿಸಿದ್ದು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ನನಗೆ ಸಿಎಂ ಸ್ಥಾನ ನೀಡಬೇಕಿತ್ತು. ಆದರೀಗ, ಬಿಎಸ್ವೈ ಮಾತು ಕೇಳಿ ನನಗೆ ಸಚಿವ ಸ್ಥಾನ ನೀಡೋಕು ಹಿಂದೇಟು ಹಾಕುತ್ತಿದೆ ಎಂದು ಕೆ.ಎಸ್ ಈಶ್ವರಪ್ಪ ತನ್ನ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
Also Read: ಸಿಎಂ ಬೊಮ್ಮಾಯಿಗೆ ಸುಲಭವಿಲ್ಲ ಆಡಳಿತದ ಹಾದಿ; ಮುಂದಿವೆ ಸಾಲುಸಾಲು ಸವಾಲು!
ಈ ಹಿಂದೆಯೂ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಪಾಲರಿಗೆ ದೂರು ನೀಡುವ ಮೂಲಕ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಸುದ್ದಿಯ ಕೇಂದ್ರಬಿಂದುವಾಗಿದ್ದರು. ಆಡಳಿತಾತ್ಮಕ ವಿಷಯಗಳಲ್ಲಿ ಬಿಎಸ್ವೈ ಹಸ್ತಕ್ಷೇಪ ಮಾಡುತ್ತಾರೆ, ತಮಗೆ ಸರಿಯಾಗಿ ಕೆಲಸ ಮಾಡಲು ಬಿಡುವುದಿಲ್ಲ ಎಂದು ಈಶ್ವರಪ್ಪ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು.
ನಿಯಮದ ಪ್ರಕಾರ, ಮುಖ್ಯಮಂತ್ರಿ ಬೇರೆ ಸಚಿವರ ಇಲಾಖೆಯ ಕೆಲಸಗಳಲ್ಲಿ ನೇರವಾಗಿ ಭಾಗಿಯಾಗಬಾರದು. ಇದನ್ನು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಮನಕ್ಕೆ ತಂದಿದ್ದೆ. ಯಾರು ಕ್ರಮ ತೆಗೆದುಕೊಳ್ಳಲಿಲ್ಲ. ಹೀಗಾಗಿ ರಾಜ್ಯಪಾಲರಿಗೆ ದೂರು ನೀಡಿದ್ದು ನಿಜ ಎಂದು ಒಪ್ಪಿಕೊಂಡಿದ್ದರು ಈಶ್ವರಪ್ಪ.
Also Read: ʼನಾನು ರಾಜ್ಯದಲ್ಲೇ ಇರುತ್ತೇನೆ, ರಾಜ್ಯಪಾಲ ಹುದ್ದೆ ಬೇಡʼ – ಬಿ.ಎಸ್ ಯಡಿಯೂರಪ್ಪ ಸ್ಪಷ್ಟ ನಿಲುವು!
ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಈಶ್ವರಪ್ಪ ಮತ್ತು ಬಿಎಸ್ವೈ ನಡುವಿನ ಅಸಮಾಧಾನ ರಾಜಧಾನಿಯಲ್ಲಿ ಬುಸುಗುಟ್ಟಿತು. ಗದ್ದೆಗಳಲ್ಲಿ ಹಾಕಿದ ಸುಡುಮಣ್ಣಿನಲ್ಲಿ ಕಾಲಿಟ್ಟಂತೆ ಈಶ್ವರಪ್ಪನವರು ಕೆರಳಿಕೆಂಡವಾಗಿದ್ದರು. ಇದಕ್ಕೆ ಕಾರಣ ತಮ್ಮ ಇಲಾಖೆಯಲ್ಲಿ ನೇರವಾಗಿ ಸಿಎಂ ಯಡಿಯೂರಪ್ಪ ಹಸ್ತಕ್ಷೇಪ ಮಾಡಿದ್ದಾರೆ ಎನ್ನುವುದು.
ಈಶ್ವರಪ್ಪರ ಗಮನಕ್ಕೆ ತಾರದೇ ಆರ್ಡಿಪಿಆರ್ ಇಲಾಖೆಯ ಅನುದಾನವನ್ನು ನೇರವಾಗಿ ಮುಖ್ಯಮಂತ್ರಿ ಹಂಚಿದ್ದರು. ಇದರಿಂದ ಸಿಟ್ಟಾಗಿದ್ದ ಈಶ್ವರಪ್ಪ ತಮ್ಮ ಗಮನಕ್ಕೆ ತಾರದೇ ಸಿಎಂ ಅನುದಾನ ಹಂಚಿರುವುದಕ್ಕೆ ರಾಜ್ಯಪಾಲರಿಗೆ ಲಿಖಿತ ದೂರು ನೀಡಿದ್ದರು. ನನ್ನ ಇಲಾಖೆಯಲ್ಲಿ ಕಾನೂನು ಮೀರಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದರು. ಈ ದೂರು ಯಾವಾಗ ಪ್ರಧಾನಿ ಮೋದಿ, ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ತಲುಪಿತ್ತೋ ಅಂದೇ ಬಿಎಸ್ವೈ ಈಶ್ವರಪ್ಪ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಿದ್ದರು. ಈ ರಾಜಕೀಯ ದ್ವೇಷವೀಗ ಈಶ್ವರಪ್ಪನ ಸಚಿವ ಸ್ಥಾನಕ್ಕೆ ಕುತ್ತು ತರೋದಲ್ಲದೇ ರಾಜಕೀಯ ಜೀವನವನ್ನೇ ಮುಗಿಸಲು ಹೊರಟಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.