ಬೌಲರ್ ಗಳ ಶಿಸ್ತಿನ ದಾಳಿ ಹಾಗೂ ಆರಂಭಿಕ ವೃದ್ದಿಮಾನ್ ಸಾಹ ಗಳಿಸಿದ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ 7 ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದೆ.
ಮುಂಬೈನಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ಓವರ್ ಗಳಲ್ಲಿ 6 ವಿಕೆಟ್ ಗೆ 133 ರನ್ ಗಳಿಗೆ ನಿಯಂತ್ರಿಸಿದ ಗುಜರಾತ್ ಟೈಟಾನ್ಸ್ 19.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ 13 ಪಂದ್ಯಗಳಿಂದ 10 ಜಯ ಹಾಗೂ 3 ಸೋಲಿನೊಂದಿಗೆ 20 ಅಂಕ ಸಂಪಾದಿಸಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ 13 ಪಂದ್ಯಗಳಿಂದ ಜಯ ಹಾಗೂ 9 ಸೋಲಿನೊಂದಿಗೆ 9ನೇ ಸ್ಥಾನಕ್ಕೆ ಕುಸಿದಿದೆ.
ವೃದ್ಧಿಮಾನ್ ಸಾಹ 57 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 67 ರನ್ ಬಾರಿಸಿ ಔಟಾಗದೇ ಉಳಿದರೆ, ಶುಭಮನ್ ಗಿಲ್ 17 ಎಸೆತಗಳಲ್ಲಿ 18 ರನ್, ಮ್ಯಾಥ್ಯೂ ವೇಡ್ 15 ಎಸೆತಗಳಲ್ಲಿ 20 ರನ್ ಹಾಗೂ ಡೇವಿಡ್ ಮಿಲ್ಲರ್ 20 ಎಸೆತಗಳಲ್ಲಿ 15 ರನ್ ಬಾರಿಸಿ ಉತ್ತಮ ಬೆಂಬಲ ನೀಡಿದರು.